ಮಂಗಳೂರು: ಕರಾವಳಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಆತ್ಮಾಹುತಿ ದಾಳಿಕೋರ ಶಾರೀಕ್ ಹತ್ಯೆಗೆ ಸಂಚು ನಡೆಯುತ್ತಿದೆ ಎಂಬ ಅನುಮಾನಗಳು ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಸ್ಪೋಟದಿಂದಾಗಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಶಾರೀಕ್ ಸದ್ಯ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಸ್ಪತ್ರೆ ಮತ್ತು ವಾರ್ಡ್ ಬಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹ್ಯಾಂಡ್ಲರ್ಸ್, ಸ್ಲೀಪರ್ ಸೆಲ್‌ಗಳನ್ನು ಆಕ್ಟಿವ್ ಮಾಡಿ ದಾಳಿ ನಡೆಸುವ ಶಂಕೆ ಹಿನ್ನೆಲೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಶಾರೀಕ್‍ನೊಂದಿಗೆ ಬಂದವನೂ ನಾಪತ್ತೆ ಆಗಿರುವುದರಿಂದ ಆತಂಕ ಹೆಚ್ಚಿದೆ. ಹೀಗಾಗಿ ಶಾರೀಕ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಕೊಠಡಿ ಪ್ರವೇಶದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಸಿದ್ದು, ಉಗ್ರ ಶಾರೀಕ್ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಒಬ್ಬ ಇನ್ಸ್‌ಪೆಕ್ಟರ್, ಓರ್ವ ಪಿಎಸ್‌ಐ, ಎಎಸ್‌ಐ ಸೇರಿದಂತೆ ಹಲವು ಮಂದಿಗೆ ಭದ್ರತೆಯ ಉಸ್ತುವಾರಿ ವಹಿಸಲಾಗಿದೆ. ಆಸ್ಪತ್ರೆಯ ಹೊರಗೂ ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ.
ಇವಿಷ್ಟೇ ಅಲ್ಲದೇ ಶಾರಿಕ್ ಮೊಬೈಲಿನಲ್ಲಿ ಪತ್ತೆಯಾದ 1200 ವೀಡಿಯೋಗಳು, ಬಾಂಬ್ ತಯಾರಿಕೆ, ಪ್ರಚೋದನೆ, ಐಸಿಸ್, ಅಲ್‍ಖೈದಾ ವಿಡಿಯೋ ಬಗ್ಗೆ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಹಣಕಾಸಿನ ವ್ಯವಹಾರದಲ್ಲಿ ಸಾಕಷ್ಟು ಬುದ್ದಿವಂತಿಕೆ ಉಪಯೋಗಿಸಿದ್ದ ಶಾರೀಕ್ ಬಹುತೇಕ ನಗದು ವ್ಯವಹಾರವನ್ನೇ ಮಾಡುತ್ತಿದ್ದನು. ಅಲ್ಲದೆ, ದಿನವಿಡೀ ಮೊಬೈಲ್‍ನಲ್ಲೇ ವೀಡಿಯೋಗಳನ್ನು ನೋಡುತ್ತಿದ್ದನು. ಶಾರೀಕ್ ತೀರ್ಥಹಳ್ಳಿಯ ಮನೆಯಲ್ಲಿದ್ದಾಗ ಮನೆಯವರಿಗೆ ಟಿವಿ ನೋಡಲೂ ಬಿಡುತ್ತಿರಲಿಲ್ಲ. 4 ವರ್ಷಗಳಿಂದ ಈ ರೀತಿ ವಿಚಿತ್ರವಾಗಿ ವರ್ತಿಸುತ್ತಿದ್ದನೆಂದು ಶಾರೀಕ್ ಕುಟುಂಬಸ್ಥರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಭಯೋತ್ಪಾದನೆ ದಾಳಿಗೆ ಸಂಬಂಧಿಸಿದಂತೆ ಐಸಿಆರ್ ಮಾಡಿದ ಪೋಸ್ಟ್ ನಲ್ಲೇ ಉಗ್ರರು ಹತ್ಯೆಯ ಸುಳಿವು ನೀಡಿದ್ದಾರೆ. ಇದೇ ಕಾರಣಕ್ಕೆ ಶಾರೀಕ್ ಚಿಕಿತ್ಸೆ ಪಡೆಯಿತ್ತಿರುವ ಆಸ್ಪತ್ರೆಗೆ ಪೊಲೀಸರು ಭಾರೀ ಬಂದೋಬಸ್ತ್ ನೀಡಿದ್ದಾರೆ. ಒಂದೊಂದೇ ಉಗ್ರ ಸತ್ಯಗಳು ಬಯಲಾಗುತ್ತಿವೆ. ಒಟ್ಟಿನಲ್ಲಿ ಕುಕ್ಕರ್ ಬಾಂಬು ಸ್ಪೋಟ ಪ್ರಕರಣದ ಅತೀ ಮುಖ್ಯ ಸಾಕ್ಷಿ ಶಾರೀಕ್‍ನನ್ನು ಜೀವಂತವಾಗಿ ಉಳಿಸಲು ಪೊಲೀಸರು ಮತ್ತು ವೈದ್ಯರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.