ಹಾವೇರಿ: ಒಕ್ಕೂಟ ಮತ್ತು ರಾಜ್ಯ ಸರಕಾರಗಳು ಅನುಸರಿಸುತ್ತಿರುವ ಬಡವರ, ರೈತ ವಿರೋಧಿ ನೀತಿಗಳ ಪರಿಣಾಮವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಒಕ್ಕೂಟ ಸರಕಾರವು ಕೇವಲ ಒಂದು ನೂರು ಕಂಪನಿಗಳ 11 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡಿರುವಾಗ, ರೈತರ ಸಾಲವನ್ನು ಕೂಡ ಮನ್ನಾ ಮಾಡಲು ಪ್ರಧಾನಿ ನರೇಂದ್ರ ಮೋದಿ ಸರಕಾರ ಕೂಡಲೇ ಕ್ರಮವಹಿಸಬೇಕು ಹಾಗೂ ಹೊಸ ಸಾಲ ನೀಡಿಕೆಗೆ ಕ್ರಮ ವಹಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಸರ್ಕಾರವನ್ನು ಒತ್ತಾಯಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಜನತೆ ಎರಡು ವರ್ಷಗಳ ಕಾಲ ಕೋವಿಡ್ ಸಂಕಷ್ಠಕ್ಕೊಳಗಾದರಲ್ಲದೇ, ಮತ್ತೆರಡು ವರ್ಷ ಕಾಲ ಅತೀವೃಷ್ಠಿ ಹಾಗೂ ಪ್ರವಾಹಗಳಿಗೆ ಬಲಿಯಾದರು. ಇಂತಹ ಸಂಕಷ್ಟದ ಅವಧಿಯಲ್ಲಿಯೇ ಸರಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ರಸಾಯನಿಕ ಗೊಬ್ಬರ, ಕ್ರಿಮಿನಾಶಕ, ಬೀಜಗಳ ಮತ್ತು ಔಷಧಿ ಮತ್ತಿತರೆ ಅಗತ್ಯ ವಸ್ತುಗಳ ಬೆಲೆಗಳನ್ನು ದುಪ್ಪಟ್ಟು ಹೆಚ್ಚಳ ಮಾಡಿ ಬಂಡವಾಳಿಗರಿಗೆ ಲೂಟಿಗೈಯಲು ಅವಕಾಶ ಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕೃತಿ ವಿಕೋಪ, ಬೆಲೆ ಏರಿಕೆಗಳಿಂದ ಮತ್ತು ಲೂಟಿಕೋರತನದಿಂದ ದುಡಿಯುವ ಜನತೆ ಹಾಗೂ ರೈತರನ್ನು ರಕ್ಷಿಸುವ ಬದಲು ಬಿಜೆಪಿ ಸರಕಾರ ಜನತೆಯನ್ನು ತೀವ್ರ ಸಂಕಷ್ಠಕ್ಕೀಡು ಮಾಡಿ, ಅವರ ಸಣ್ಣ ಪುಟ್ಟ ಆಸ್ತಿಗಳನ್ನು ಶ್ರೀಮಂತರ ಕೈಗೆ ವರ್ಗಾಯಿಸಲು ಕ್ರಮವಹಿಸುವ ದುಷ್ಟತನವನ್ನು ಮೆರೆಯಿತು. ಇದರಿಂದಾಗಿ ರೈತರು, ಕೂಲಿಕಾರರು, ಕಾರ್ಮಿಕರು ಹಾಗೂ ಮಹಿಳೆಯರು ತೀವ್ರ ರೀತಿಯ ಸಾಲ ಬಾಧೆಗೊಳಗಾಗಿದ್ದಾರೆ. ರೈತರ ಹಾಗೂ ಬಡವರ ಆತ್ಮಹತ್ಯೆಗಳು ಮುಂದುವರೆದಿರುವುದಕ್ಕೆ ಸರಕಾರವೇ ನೇರ ಕಾರಣವೆಂದು ಆರೋಪಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯ ಸರಕಾರ ಸಂಘಟಿಸಿದ “ಜಗತ್ತಿಗಾಗಿ ನಿರ್ಮಿಸಿ” ಎಂಬ ಘೋಷಣೆಯಡಿಯಲ್ಲಿ ಕೈ ಬೆರಳೆಣಿಕೆಯ ಕೆಲ ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ ಸುಮಾರು 3 ಲಕ್ಷ ಕೋಟಿ ರೂಪಾಯಿಗಳ ಸಹಾಯಧನವನ್ನು ಮತ್ತು ಐದು ವರ್ಷಗಳ ಲಕ್ಷಾಂತರ ಕೋಟಿ ರೂ.ಗಳ ಬಡ್ಡಿ ರಹಿತ ಸಾಲ ನೀಡಲು ರಾಜ್ಯ ಸರಕಾರವೇ ನಿರ್ಧರಿಸಿದೆ. ರೈತರು ಹಾಗೂ ದುಡಿಯುವ ಜನರ ಸಾಲ ಮನ್ನಾ ಯಾಕೆ ಮಾಡುತ್ತಿಲ್ಲ? ಮತ್ತು ಈ ಜನತೆಗೇಕೆ ಬಡ್ಡಿ ರಹಿತ ಸಾಲ ನೀಡುತ್ತಿಲ್ಲವೆಂದು ಪ್ರಶ್ನಿಸಿದರು.
ಬಲವಂತದ ಭೂ ಸ್ವಾಧೀನಕ್ಕೆ ವಿರೋಧ
ಜಿಲ್ಲೆಯ ಬ್ಯಾಡಗಿ ತಾಲೂಕಿಗೆ ಸೇರಿದ ಮೋಟೆಬೆನ್ನೂರು, ಅಳಲಗೇರಿ ಹಾಗೂ ಅರಬಗೊಂಡ ಗ್ರಾಮಗಳ ರೈತರ 1017 ಎಕರ ಕೃಷಿ ಜಮೀನುಗಳನ್ನು ಕೈಗಾರಿಕೆ ಕಾರಿಡಾರ್ ಗೆ ಬಲವಂತವಾಗಿ ಭೂ ಸ್ವಾಧೀನಕ್ಕೆ ಕ್ರಮವಹಿಸಿದ ರಾಜ್ಯ ಸರಕಾರ ಹಾಗೂ ಕೆಐಎಡಿಬಿಯ ಕ್ರಮವನ್ನು ಯು. ಬಸವರಾಜ ತೀವ್ರವಾಗಿ ಖಂಡಿಸಿದರು.
ಫಲವತ್ತಾದ ಜಮೀನುಗಳನ್ನು ಕೊಡಲು ರೈತರು ಒಪ್ಪದಿರುವಾಗ ಬಲವಂತವಾಗಿ ಭೂ ಸ್ವಾಧೀನ ಮಾಡಬಾರದು. ಕೂಡಲೇ ಭೂ ಸ್ವಾಧೀನಕ್ಕೆ ಕ್ರಮವಹಿಸಿದ ಎಲ್ಲ ಕ್ರಮಗಳನ್ನು ಕೈ ಬಿಡುವಂತೆ ಸಿಪಿಐ(ಎಂ) ಒತ್ತಾಯಿಸುತ್ತದೆ. ಈ ಕುರಿತು ರೈತರ ಹೋರಾಟವನ್ನು ಸಿಪಿಐ(ಎಂ) ಬೆಂಬಲಿಸುತ್ತದೆ ಮಾತ್ರವಲ್ಲಾ ರೈತರು ನಡೆಸುತ್ತಿರುವ ಹೋರಾಟದಲ್ಲಿ ಪಕ್ಷ ಭಾಗವಹಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಬಸವರಾಜ ಪೂಜಾರ, ವಿನಾಯಕ ಕುರಬರ, ಅಂದಾನೆಪ್ಪ ಹೆಬಸೂರು ಉಪಸ್ಥಿತರಿದ್ದರು.