‘ಬಂಡವಾಳ’ ಮಾರ್ಕ್ಸ್‌ವಾದಿ ಸಿದ್ಧಾಂತದ ಬ್ರಹ್ಮಾಸ್ತ್ರ

ಬೆಂಗಳೂರು : ‘ಬಂಡವಾಳ’ ಮಾರ್ಕ್ಸ್‌ವಾದಿ ಸಿದ್ಧಾಂತದ ಬ್ರಹ್ಮಾಸ್ತ್ರ ಎಂದು ಮಾರ್ಕ್ಸ್‌ವಾದಿ ಚಿಂತಕ ಡಾ. ಜಿ.ರಾಮಕೃಷ್ಣ ಹೇಳಿದರು.

‘‘ಬಂಡವಾಳ ಸಂಪುಟ-2’ ಪುಸ್ತಕದ ಕನ್ನಡ ಅನುವಾದವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಬಂಡವಾಳ’ ಮಾರ್ಕ್ಸ್ ವಾದಿ ಸಿದ್ಧಾಂತದ ಬ್ರಹ್ಮಾಸ್ತ್ರ,  ಮಾರ್ಕ್ಸ್ ವಾದದ ಸಾರ ಕಟ್ಟಿಕೊಡುವ ‘ಮಾನವನ ಐಹಿಕಾಭ್ಯುದಯ’ (Mans Worldly Goods) ದಂತಹ ಹಲವು ಪುಸ್ತಕಗಳಿವೆ. ಆದರೆ ಹಲವು ವಿಷಯಗಳ ಕುರಿತು ಮಾರ್ಕ್ಸ್ ನ ಮೂಲಗ್ರಂಥಗಳಿಗೆ ಹೋಗಬೇಕಾಗುತ್ತದೆ ಎಂದರು.

‘ಬಂಡವಾಳ’ ಗ್ರಂಥ ಮಾರ್ಕ್ಸ್ ವಾದಿ ಸಿದ್ಧಾಂತದ ಬ್ರಹ್ಮಾಸ್ತ್ರವಿದ್ದಂತೆ. ಅದು ಕನ್ನಡಕ್ಕೆ ಅನುವಾದವಾಗಿ ಲಭ್ಯವಾಗುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು. ಸಿದ್ಧಾಂತ ನಮಗೆ ಯಾವುದೇ ಮಾದರಿಯಲ್ಲಿ ದಕ್ಕಿದ್ದರೂ, ಸಿದ್ಧಾಂತದ ಹಿಂದೆ ಇರುವ ಗ್ರಹಿಕೆಯನ್ನು ಆಯಾ ಕಾಲಕ್ಕೆ ಅನ್ವಯ ಮಾಡಿ ಪ್ರಜ್ಞಾಪೂರ್ವಕವಾಗಿ ಸಾಮುದಾಯಿಕವಾಗಿ ಇವತ್ತಿನ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಆ ಸನ್ನಿವೇಶದಲ್ಲಿ ಮಧ್ಯಪ್ರವೇಶ ಮಾಡಿದಾಗ ಅರ್ಥಪೂರ್ಣವಾಗುತ್ತದೆ. ‘ಬಂಡವಾಳ’ ಗ್ರಂಥದ ಓದು ಹೀಗೆ ಅರ್ಥಪೂರ್ಣವಾಗಲಿ ಎಂದು ಹಾರೈಸಿದರು. ಈ ಪುಸ್ತಕದ ಅನುವಾದಕರು ಪಿ.ಎ. ಕುಮಾರ್ ಮತ್ತು ವಿ.ಎನ್.ಲಕ್ಷ್ಮೀನಾರಾಯಣ.

‘ಆರ್ಥಿಕ ಬೆಳವಣಿಗೆಯಲ್ಲಿ ಸಮಾಜದಲ್ಲಿ ದುಡಿಮೆಯ ಮಹತ್ವವನ್ನು ಈ ಪುಸ್ತಕಗಳು ತಿಳಿಸಿಕೊಡುತ್ತದೆ’ ಎಂದು ನಾಡಿನ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಪ್ರೊ.ಟಿ.ಆರ್.ಚಂದ್ರಶೇಖರ್ ಅದೇ ಸಂದರ್ಭದಲ್ಲಿ “ಬಂಡವಾಳ ಸಂಪುಟ-1 ಪ್ರವೇಶಿಕೆ ಮತ್ತು ಗೈಡ್ ಪುಸ್ತಕದ ಬಗ್ಗೆ ಮಾತನಾಡುತ್ತಾ ಹೇಳಿದರು. ಬಂಡವಾಳ ಸಂಪುಟ-1ರ ಹಿನ್ನೆಲೆ, ಪ್ರಸ್ತುತತೆ, ಸಾರಾಂಶವನ್ನು ಸರಳ ಭಾಷೆಯಲ್ಲಿ ಕೊಡುವ ‘ಪ್ರವೇಶಿಕೆ’ ಮತ್ತು ಅಧ್ಯಾಯವಾರು ಸಾರಾಂಶ ಬಂಡವಾಳಶಾಹಿ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಅದನ್ನು ಓದಲು ಪ್ರೇರೇಪಿಸುತ್ತದೆ ಎಂದರು. ಈ ಪುಸ್ತಕದ ಲೇಖಕರು ವಸಂತರಾಜ ಎನ್.ಕೆ. ವೇದರಾಜ ಎನ್.ಕೆ ಮತ್ತು ವಿ.ಎನ್.ಲಕ್ಷ್ಮೀನಾರಾಯಣ.

ಇದನ್ನು ಓದಿ : ಬಂಡವಾಳ ಸಂಪುಟ-2 ಬಿಡುಗಡೆಗೆ ಬನ್ನಿ!

ಆ ಸಂದರ್ಭದಲ್ಲಿ ನಡೆದ “ಇಂದಿನ ಬಂಡವಾಳಶಾಹಿಯನ್ನು ಅರ್ಥೈಸಲು ‘ಬಂಡವಾಳ’ದ ಓದು” ಎಂಬ ವಿಚಾರಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಬೇಕಿದ್ದ ದೇಶದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಪ್ರೊ.ವೆಂಕಟೇಶ ಆತ್ರೇಯ ತಾನು ಅದರ ಬದಲು “ಸಂಭ್ರಮಿಸುವ ಭಾಷಣ’ ಮಾಡುತ್ತೇನೆಂದರು. ಬಂಡವಾಳ ಗ್ರಂಥದ ಸಂಪುಟ-2 ದ ಕನ್ನಡ ಅನುವಾದವನ್ನು ಇಂದಿನ ಸನ್ನಿವೇಶಧಲ್ಲಿ ಪ್ರಕಟಿಸುತ್ತಿರುವುದು ಸಂಭ್ರಮದ ವಿಷಯವೆಂದರು. ನಮ್ಮ ದೇಶದಲ್ಲೂ ಜಾಗತಿಕವಾಗಿಯೂ ಮಾರ್ಕ್ಸ್ ವಾದ ಮತ್ತು ಅದರ ಆಧಾರಿತ ಚಳುವಳಿಗಳ “ಕೊಲೆಗೆ ನಿರಂತರವಾಗಿ ಹಲವು ಪ್ರಯತ್ನಗಳು” ನಡೆದಿವೆ. ಆದರೆ ಅದು ಯಶಸ್ವಿಯಾಗಿಲ್ಲವೆಂದು ಈ ಸಮಾರಂಭವೇ ಸಾಕ್ಷಿಯೆಂದರು. ಐಐಟಿ ಮದ್ರಾಸ್ ನಲ್ಲಿ ಕೆಮಿಕಲ್ ಇಂಜಿನೀಯರಿಂಗ್ ನಂತರ ಅರ್ಥಶಾಸ್ತ್ರದ ಸ್ನಾತಕೋತ್ತರ ಮತ್ತು ಪಿ.ಎಚ್.ಡಿ ಗೆ ಅಮೆರಿಕಕ್ಕೆ ಹೋದಾಗ ತಾವು ಮಾರ್ಕ್ಸ್ ವಾದಕ್ಕೆ ತೆರೆದುಕೊಂಡ ಬಗೆಯನ್ನು ಬಣ್ಣಿಸಿದರು. ವಿಯೇಟ್ನಾಂ ಯುದ್ಧ-ವಿರೋಧಿ ಚಳುವಳಿ ಮತ್ತು ವಿವಿ ಪಠ್ಯದ ಹೊರಗೆ ನಡೆದ ‘ಬಂಡವಾಳ ಓದು’ ಗುಂಪಿನಲ್ಲಿ ಅಕಾಸ್ಮಾತ್ತಾಗಿ ಭಾಗವಹಿಸುವ ಮೂಲಕ ಮಾರ್ಕ್ಸ್ ವಾದಕ್ಕೆ ಪ್ರವೇಶ ಪಡೆದೆಯೆಂದರು. ತಥಾಕಥಿತ ಮುಖ್ಯಧಾರೆಯ ಅರ್ಥಶಾಸ್ತ್ರ ಬಂಡವಾಳಶಾಹಿ ಪದೇ ಪದೇ ಬರುವ ಬಿಕ್ಕಟ್ಟು ಯಾಕೆ ಬರುತ್ತದೆ ಎಂದು ವಿವರಿಸಲು ವಿಫಲವಾಗಿದೆ. ಆದರೆ ಇದನ್ನು ವಿವರಿಸಬಲ್ಲ ಮಾರ್ಕ್ಸ್ ವಾದಿ ಅರ್ಥಶಾಸ್ತ್ರವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ. ನಾನಂತೂ ಇಂದಿನ ಅರ್ಥವಾಗದ ಬಂಡವಾಳಶಾಹಿ ವಿದ್ಯಮಾನ ಜರುಗಿದಾಗ ಬಂಡವಾಳದ ಮೂರು ಸಂಫುಟಗಳಿಗೆ ಹಿಂತಿರುಗುತ್ತೇನೆ. ಇಂದು ಬಂಡವಾಳ ಓದುವಾಗ ಅದು ಇಂದಿನ ಜಾಗತೀಕರಣ ಹೊಂದಿದ ಬಂಡವಾಳಶಾಹಿಗೆ ಹೆಚ್ಚು ಅನ್ವಯಿಸುತ್ತದೆಯೆಂದರು.

ಮಾರ್ಕ್ಸ್ ನಿರೂಪಿಸುವ ಬಂಡವಾಳಶಾಹಿ ಸಮಾಜದ ಪರಿಚಯ ನನಗೆ ಸಾಮಾಜಿಕ ಚಿತ್ರಣ ಇರುವ ಸಾಹಿತ್ಯದ ಮೂಲಕ ಆಯಿತು. ಚಾರ್ಲ್ಸ್ ಡಿಕನ್ಸ್ ಅವರ ‘ಹಾರ್ಡ್ ಟೈಮ್ಸ್’ ಬಂಡವಾಳಶಾಹಿ ಕೈಗಾರಿಕೀಕರಣ ಯಾವ ರೀತಿ ಒಂದು ಮನುಷ್ಯ ಸಮುದಾಯವನ್ನು ಅಮಾನವೀಯಗೊಳಿಸುತ್ತದೆ ಎಂದು ಖ್ಯಾತ ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಇದೇ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಾ ಹೇಳಿದರು. ಕರಾಳ ವಾಸ್ತವ ಮುಂದಿಡುತ್ತಲೇ ಇಂತಹ ವ್ಯವಸ್ಥೆ ಬರಬೇಕಾದರೆ ಹಿಂದೆ ಇದಕ್ಕೆ ಸಮ್ಮತಿ ಹೇಗೆ ದೊರಕಿರಬೇಕು, ಏನೇನು ಸೈಧ್ಧಾಂತಿಕ ತಯಾರಿ ನಡೆದಿರಬೇಕು. ಬಂಡವಾಳಶಾಹಿ ವ್ಯವಸ್ಥೆ ಎಷ್ಟು ಅಸಂಗತವಾಗಿದೆ ಎಂದು ಚಾರ್ಲ್ಸ್ ಡಿಕನ್ಸ್ ಅವರ ಕಾದಂಭರಿಗಳು ತೋರಿಸುತ್ತವೆ ಎಂದರು. ಬಂಡವಾಳಶಾಹಿಯ ಮೂಲ ತರ್ಕವೇ ಸತತವಾಗಿ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಅದರ ಪರಿಹಾರದ ಹೆಸರಲ್ಲಿ ಕೈಗೊಳ್ಳುವ ಕ್ರಮ ಇನ್ನೊಂದು ಬಿಕ್ಕಟ್ಟು ಸೃಷ್ಟಿಸುತ್ತದೆ. ಇದನ್ನು ನಾವು ಯು,ಕೆಯ 1970ರ ಬಿಕ್ಕಟ್ಟನ್ನು ಥ್ಯಾಚರ್ ಹಾಗೂ ಇತ್ತೀಚಿನ 2008 ಮಹಾ ಬಿಕ್ಕಟ್ಟು ಮತ್ತು ಕೊರೊನಾ ಬಿಕ್ಕಟ್ಟು ಗಳನ್ನು ನಿರ್ವಹಿಸಿದ ರೀತಿಯ ಸಮಾನತೆ ಕಾಣಬಹುದು. ಪ್ರತಿ ಬಿಕ್ಕಟ್ಟಿನಲ್ಲಿ ದುಡಿಯುವ ಜನರ ಮೇಲೆ ಪ್ರಭುತ್ವ ‘ಮಿತವ್ಯಯ’ ದ ಹೆಸರಲ್ಲಿ ಹೊರಿಸುವ ‘ಅರ್ಧ ರೊಟ್ಟಿ ಬದಲು ಕಾಲು ರೊಟ್ಟಿ’ ತರ್ಕ, ಸಾಮಾಜಿಕ ಕಲ್ಯಾಣ ಪ್ರಭುತ್ವ ಕಿತ್ತು ಹಾಕುವುದು, ಬಿಕ್ಕಟ್ಟು ಪರಿಹರಿಸಲು ಆಳುವ ವರ್ಗದ ಪರ ಕ್ರಮಕೈಗೊಳ್ಳುವುದು ಇವನ್ನು ಈ ಎಲ್ಲದರಲ್ಲೂ ಕಾಣಭಹುದು. ಇಂದಿನ ಬಂಡವಾಳಶಾಹಿ ಎಲ್ಲೆಲ್ಲೂ ಪ್ರಗತಿ, ಸೆಕ್ಯುಲರಿಸಂ ಮುಖವಾಡಗಳನ್ನು ಕಳಚಿ, ಎಲ್ಲ ಆದಿಮ ಪ್ರತಿಗಾಮಿ, ಬರ್ಬರತನ, ಅತಾರ್ಕಿಕಕತೆಗಳಿಗೆ ತೆರೆದುಕೊಂಡು ಬೆತ್ತಲಾಗಿದೆ. ಇದಕ್ಕೆ ಕಾರ್ಮಿಕರ ಾರ್ಥಿಕ ಹೋಋಆಠಗಳ ಜತೆ ಮಹಿಳಾವಾದಿ, ಆದಿವಾಸಿ ಮುಂತಾದ ಹಲವು ಚಳುವಳಿಗಳ ಒಟ್ಟು ಬಹು-ಪ್ರತಿರೋಧದೊಂದಿಗೆ ಎದುರಿಸಬೇಕು ಎಂದು ಪ್ರೊ. ಚೆನ್ನಿ ಹೇಳಿದರು.

ಕಾರ್ಮಿಕರಿಗೆ ‘ಬಂಡವಾಳ’ದ ಪರಿಕಲ್ಪನೆಗಳು, ಪ್ರಕ್ರಿಯೆಗಳು ಹೇಗೆ ಬೇರೆಯವರಿಗಿಂತ ಸುಲಭವಾಗಿ ಅರ್ಥವಾಗುತ್ತದೆ ಎಂದು ಅಟೊಮೊಬೈಲ್ ಉದ್ಯಮದ ಉದಾಹರಣೆಗಳೊಂದಿಗೆ ಕಾರ್ಮಿಕ ನಾಯಕ ಕೆ.ಎನ್.ಉಮೇಶ್ ಮನಮುಟ್ಟುವಂತೆ ವಿವರಿಸಿದರು. ಡಾ. ರತಿ ರಾವ್ ಬಂಡವಾಳಶಾಹಿ-ವಿರೋಧಿ ಹೋರಾಟದಲ್ಲಿ ಮಹಿಳಾ ಮತ್ತು ನಾಗರಿಕ ಹಕ್ಕುಗಳಿಗಾಗಿ ಹೋರಾಟದ ಮಹತ್ವದ ಕುರಿತು ಮಾತನಾಡಿದರು.

ಈ ಮೂರು ಪುಸ್ತಕಗಳನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದ್ದು, ನವಕರ್ನಾಟಕ ಪ್ರಕಾಶನದೊಂದಿಗೆ ಜಂಟಿಯಾಗಿ ನಿರ್ವಹಿಸಿದ ಏಂಗೆಲ್ಸ-200’ ಮಾಲಿಕೆಯ ಕೊನೆಯ ಪುಸ್ತಕವಾಗಿತ್ತು. ಹಾಗಾಗಿ ಇದರ ಜತೆ ಏಂಗೆಲ್ಸ-200’ ಮಾಲಿಕೆಯ ಸಮಾರೋಪ ಸಹ ನಡೆದು ಮಾಲಿಕೆಯ ಎಲ್ಲ ಲೇಖಕರನ್ನು ಸನ್ಮಾನಿಸಲಾಯಿತು. ವಸಂತರಾಜ್ ಎನ್,ಕೆ ಮೊದಲಿಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಕೆ,ಎಸ್ ವಿಮಲಾ ಉಪಸ್ಥಿತರಿದ್ದರು. ಜಿ.ಚಂದ್ರಶೇಖರ್ ಧನ್ಯವಾದ ಸಮರ್ಪಿಸಿದರು.

ಇದನ್ನು ನೋಡಿ : ಇಂದಿನ ಬಂಡವಾಳಶಾಹಿಯನ್ನು ಅರ್ಥಮಾಡಿಕೊಳ್ಳಲು ಬಂಡವಾಳ ಪುಸ್ತಕವನ್ನು ಓದಲೇಬೇಕು -ಡಾ. ಜಿ.ರಾಮಕೃಷ್ಣ Janashakthi Media

 

Donate Janashakthi Media

Leave a Reply

Your email address will not be published. Required fields are marked *