- ಬಂಡವಾಳ ಹೂಡಿಕೆದಾರರ ಸಮಾವೇಶ ನಿಲ್ಲಿಸುವಂತೆ ರೈತರ ಆಗ್ರಹ
- ಹೂಡಿಕೆದಾರರಿಗೆ ಉಚಿತ ಭೂಮಿ, ವಿದ್ಯುತ್ ನೀಡುವ ಮೊದಲು ರೈತರ ಸಮಸ್ಯೆಗಳನ್ನ ಬಗೆಹರಿಸಲಿ ಎಂದು ಮನವಿ
- ಈ ತನಕ ಯಾವೆಲ್ಲಾ ಹೂಡಿಕೆ ಸಮಾವೇಶಗಳಾಗಿವೆಯೋ ಅವುಗಳಿಂದ ಯಾವುದೇ ಉದ್ಯೋಗ ಭದ್ರತೆ ಸಿಕ್ಕಿಲ್ಲ
ಬೆಂಗಳೂರು : ಇಂದಿನಿಂದ ಬೆಂಗಳೂರಿನಲ್ಲಿ ಆರಂಭವಾಗಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನ ನಿಲ್ಲಿಸುವಂತೆ ಜನಪರ ಸಂಘಟನೆಗಳು ಆಗ್ರಹಿಸಿವೆ. ಬೆಂಗಳೂರು ಸೇರಿದಂತೆ ಇಂದು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆದಿದೆ.
ಬೆಂಗಳೂರಿನ ಪ್ರೀಡಂಪಾರ್ಕ್ ಬಳಿ ಪ್ರತಿಭಟನೆ ನಡೆಸಿದ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರು ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಹೂಡಿಕೆದಾರರಿಗೆ ಉಚಿತ ಭೂಮಿ, ವಿದ್ಯುತ್ ನೀಡುವ ಮೊದಲು ರೈತರ ಸಮಸ್ಯೆಗಳನ್ನ ಬಗೆಹರಿಸಲಿ ಎಂದು ಆಗ್ರಹಿಸಿದರು. ಇಂತಹ ಸಮಾವೇಶದಿಂದ ಬೆಂಗಳೂರು ಸುತ್ತಲ ಭೂಮಿಯನ್ನ ಅಗ್ಗದ ಬೆಲೆಗೆ ಮಾರಿದ್ದೇ ಈ ಸಮಾವೇಶಗಳಿಂದ ಸಿಕ್ಕ ಲಾಭ. ರೈತರ ಭೂಮಿಯನ್ನ ಕಸಿದುಕೊಂಡು ಅವರನ್ನ ಭೂರಹಿತರನ್ನಾಗಿ ಮಾಡಿದ್ದಾರೆ. ರೈತರು ಇಂತಹ ಸಮಾವೇಶಗಳಿಂದ ಬೀದಿಗೆ ಬಂದಿದ್ದಾರೆ. ಕಾರ್ಮಿಕರ ಕಾನೂನುಗಳನ್ನ ಮೊಟಕುಗೊಳಿಸಿ ಹೂಡಿಕೆದಾರರಿಗೆ ಉಚಿತ ವಿದ್ಯುತ್, ಭೂಮಿ ನೀಡಲಾಗಿದೆ. ಅತೀ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್‌ಗಳು ಸಾಲ ನೀಡುತ್ತವೆ. ಈ ಸವಲತ್ತುಗಳನ್ನ ನೀಡಿದ ಮೇಲೆ ಏನು ಲಾಭ..? ಬಂಡವಾಳದಾರರನ್ನ ಶ್ರೀಮಂತರನ್ನಾಗಿಸುವುದಷ್ಟೇ ಇದರ ಉದ್ದೇಶ. ಇದು ಜನರ ಒಳಿತಿಗಾಗಿ ನಡೆಯುತ್ತಿಲ್ಲ ಹಾಗಾಗಿ ಈ ಸಮಾವೇಶವನ್ನ ರದ್ದು ಮಾಡಬೇಕು ಎಂದರು.
ಇದನ್ನೂ ಓದಿ : ಜಿಎಂ ಸಾಸಿವೆ ವಾಣಿಜ್ಯ ಬಳಕೆಗೆ ಆತುರ ಬೇಡ: ಕೆಪಿಆರ್‌ಎಸ್ ಆಗ್ರಹ
ಉದ್ಯೋಗ ಸೃಷ್ಟಿ ನೆಪದಲ್ಲಿ ರಾಜ್ಯದ ಫಲವತ್ತಾದ ಕೃಷಿ ಭೂಮಿ, ನೀರು, ವಿದ್ಯುತ್ತನ್ನು ಖಾಸಗಿ ಕಂಪನಿಗಳಿಗೆ ನೀಡಲು ರಾಜ್ಯ ಸರಕಾರ ಮುಂದಾಗುತ್ತಿದೆ’ ಸಾಮಾನ್ಯವಾಗಿ ಚುನಾವಣೆಗಳು ಸಮೀಪಿಸುತ್ತಿರುವ ಸಮಯದಲ್ಲಿ ಇಂತಹ ಸಮಾವೇಶ ಸಂಘಟಿಸಿ, ಕೋಟಿ ಬಂಡವಾಳ ಹೂಡಿಕೆ ಪಡೆಯಲಾಗುತ್ತದೆ. ಇದರ ಫಲವಾಗಿ ಇಷ್ಟು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಇದರಿಂದ ನಮ್ಮ ರಾಜ್ಯದ ಯುವಜನರಿಗೆ ಉದ್ಯೋಗ ಸಿಗುತ್ತದೆ ಎಂದು ಪ್ರಚಾರ ಮಾಡಲಾಗುತ್ತದೆ. ಈ ರೀತಿ ಭ್ರಮೆ ಸೃಷ್ಟಿಸಲಾಗುತ್ತದೆ. ಇದು ಸುಳ್ಳಿನ ಪ್ರಚಾರವಷ್ಟೇ,” ಎಂದು ಪ್ರತಿಭಟನೆಕಾರರು ಆರೋಪಿಸಿದರು.
“ವಾಸ್ತವದಲ್ಲಿ ಇಂತಹ ಹೂಡಿಕೆದಾರರ ಸಮಾವೇಶಗಳಿಂದ ರಾಜ್ಯದ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಅನುಕೂಲವಾಗುವ ಬದಲು ಕಾರ್ಪೊರೇಟ್ ಕಂಪನಿಗಳು, ಏಜೆಂಟರಿಗೆ ಲಾಭವಾಗುತ್ತದೆ. ರೈತರು ತಮ್ಮ ಭೂಮಿ ಕಳೆದುಕೊಳ್ಳುತ್ತಾರೆ. ಕಾರ್ಮಿಕರ ಶೋಷಣೆ ಮತ್ತಷ್ಟು ಹೆಚ್ಚಾಗಲಿದೆ. ಅಲ್ಲದೇ, ಯುವ ಸಮೂಹಕ್ಕೆ ಉದ್ಯೋಗ ಗಗನಕುಸುಮವಾಗುತ್ತದೆ ಎಂದು ಪ್ರತಿಭಟನೆಕಾರರು ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಸಂಚಾಲಕ ಜಿ.ಸಿ.ಬಯ್ಯಾರೆಡ್ಡಿ, ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಚಾಮರಸ ಮಾಲೀಪಾಟೀಲ್, ವೀರ ಸಂಗಯ್ಯ, ಭುವನೇಶ್ವರಿ ಅಕ್ಕಮಹಾದೇವಿ, ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ್, ಡಿಎಸ್‌ಎಸ್‌ನ ಕಾರಳ್ಳಿ ಶ್ರೀನಿವಾಸ, ಕರ್ನಾಕಟ ರೈತ ಸಂಘದ ಡಿಎಚ್ ಪೂಜಾರ್ , ಎಐಕೆಕೆಎಂಎಸ್‌ನ ಶಿವಪ್ರಸಾದ್, ಕಾರ್ಮಿಕ ಮುಖಂಡ ಕೆ.ವಿ.ಭಟ್ ಸೇರಿದಂತೆ ಅನೇಕರಿದ್ದರು.