ಗೋಗರೆದ್ರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲಿಲ್ಲ : ನೋವಿಂದ ನರಳಿದ ಗರ್ಭಿಣಿ ಸಾವು! ಜನಿಸಿದ ಅವಳಿ ಮಕ್ಕಳೂ ಬದುಕಲಿಲ್ಲ

ತುಮಕೂರು: ಪ್ರಸವ ವೇಳೆ ಅನಾಥ ಬಾಣಂತಿ ಹಾಗೂ ಅವಳಿ ಶಿಶುಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ. ಬಾಣಂತಿ ಹಾಗೂ ಅವಳಿ ಮಕ್ಕಳ ಸಾವಿಗೆ ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.

ಭಾರತೀನಗರದ ಅಭಯ ಆಂಜನೇಯ ದೇವಸ್ಥಾನದ ಬಳಿ ವಾಸವಿದ್ದ ತುಂಬು ಗರ್ಭಿಣಿ ಕಸ್ತೂರಿ (30) ಬುಧವಾರ ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ತೆರಳಿದ್ದರು. ಆದರೆ ತಾಯಿಗೆ ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಕಸ್ತೂರಿಯವರನ್ನು ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿಕೊಳ್ಳದೇ, ವಾಪಸ್ ಕಳುಹಿಸಿದ್ದಾರೆ.

ಗುರುವಾರ ಬೆಳಗ್ಗೆ ಕಸ್ತೂರಿಗೆ ಮನೆಯಲ್ಲಿಯೇ ಹೆರಿಗೆ ಆಗಿದೆ. ಆದರೆ ಸೂಕ್ತ ಚಿಕಿತ್ಸೆ ಸಿಗದೇ ಅವಳಿ ಶಿಶುಗಳ ಜೊತೆಗೆ ಬಾಣಂತಿಯೂ ಮೃತಪಟ್ಟಿದ್ದಾರೆ. ಕಸ್ತೂರಿ ಮೂಲತಃ ತಮಿಳುನಾಡಿನವರಾಗಿದ್ದು, ಕಳೆದ 1 ತಿಂಗಳಿನಿಂದ ಭಾರತಿ ನಗರದಲ್ಲಿ ವಾಸವಿದ್ದರು ಎನ್ನಲಾಗಿದೆ.

ಇದೀಗ ಬಾಣಂತಿ ಹಾಗೂ ಅವಳಿ ಮಕ್ಕಳ ಸಾವಿಗೆ ಕಾರಣವಾಗಿರುವ ಆರೋಗ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ತಪ್ಪಿತಸ್ಥರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಡಿ.ಹೆಚ್.ಒ ಡಾ. ಮಂಜುನಾಥ್ ಹಾಗೂ ಡಾ. ವೀಣಾ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಮಂಜುನಾಥ್, ಜಿಲ್ಲಾ ಆಸ್ಪತ್ರೆ ಸಿಬ್ಬಂದಿಯಿಂದ ಕರ್ತವ್ಯ ಲೋಪ ಆಗಿರುವುದು ಕಂಡುಬಂದಿರುವುದರಿಂದ ಆ ವೇಳೆ ಕರ್ತವ್ಯದಲ್ಲಿದ್ದ ಡಾ.ಉಷಾ ಸೇರಿ ನರ್ಸ್ ಗಳನ್ನು ಅಮಾನತುಗೊಳಿಸಲಾಗುವುದು. ತುರ್ತು ಸಂದರ್ಭದಲ್ಲಿ ದಾಖಲಾತಿ ಕೇಳುವ ಅಗತ್ಯ ಇಲ್ಲ. ಯಾವುದೇ ಮುಲಾಜಿಲ್ಲದೆ ಅವರನ್ನು ಅಮಾನತುಗೊಳಿಸಲಾಗುವುದು ಎಂದಿದ್ದಾರೆ.

ವ್ಯಾಪಕ ಆಕ್ರೋಶ: ಬಾಣಂತಿ ಮತ್ತು ಇಬ್ಬರು ಮಕ್ಕಳ ಸಾವಿಗೆ ತುಮಕೂರು ಜಿಲ್ಲಾಸ್ಪತ್ರೆ ವೈದ್ಯರೇ ಕಾರಣ. ಹೆರಿಗೆ ನೋವೆಂದು ಬಂದಾಗ ದಾಖಲಿಸಿಕೊಂಡಿದ್ದರೆ ತಾಯಿ ಮತ್ತು ಮಕ್ಕಳಿಬ್ಬರು ಬದುಕುತ್ತಿದ್ದರು. ವೈದ್ಯರ ನಿರ್ಲಕ್ಷ್ಯವೇ ಮೂವರ ಸಾವಿಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಗಳು ಮತ್ತು ವೈದ್ಯರು ಇರುವುದು ಜನರ ಜೀವ ಕಾಪಾಡಲು. ಆದರೆ ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರು ತಾಯಿ ಕಾರ್ಡ್ ಇಲ್ಲ ಎಂಬ ನೆಪವೊಡ್ಡಿ ಹೆರಿಗೆಗೆ ಬಂದ ಗರ್ಭಿಣಿ ಮಹಿಳೆಯನ್ನು ವಾಪಸ್ ಕಳುಹಿಸಿ ಆಕೆಯ ಸಾವಿಗೆ ಕಾರಣವಾಗಿದ್ದಾರೆ ಎಂದು ಸ್ಥಳೀಯ ಜನತೆ ಆರೋಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ 22ನೇ ವಾರ್ಡಿನ ಸದಸ್ಯ ಶ್ರೀನಿವಾಸ್,ಮೇಯರ್ ಪ್ರಭಾವತಿ,ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಸದಸ್ಯರಾದ ನಯಾಜ್ ಅಹಮದ್ ಅವರುಗಳು ಮೃತರು ವಾಸವಿದ್ದ ಭಾರತಿ ನಗರ ಪ್ರದೇಶಕ್ಕೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ ನಂತರ,ಜಿಲ್ಲಾಸ್ಪತ್ರೆಯ ಸರ್ಜನ್ ಹಾಗೂ ಡಿ.ಹೆಚ್.ಓ ಸ್ಥಳಕ್ಕೆ ಭೇಟಿ ನೀಡುವವರೆಗೂ ಮೃತದೇಹದ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ. ಜಿಲ್ಲಾಸ್ಪತ್ರೆ ಭ್ರಷ್ಟಾಚಾರದ ಕೂಪವಾಗಿದ್ದು, ಹೆರಿಗೆಗೆ ಬರುವ ಬಡವರ ಬಳಿ, ಅಸ್ಪತ್ರೆಯಲ್ಲಿ ಕೆಲಸ ಮಾಡುವ ಆಯಾಗಳ ಮೂಲಕ ವೈದ್ಯರು ಲಂಚಕ್ಕೆ ಬೇಡಿಕೆ ಇಡುವುದು ಸಾಮಾನ್ಯವಾಗಿದೆ. ಇಂದಿನ ಈ ದುರ್ಘಟನೆಗೂ ಲಂಚ ನೀಡದಿರುವುದೇ ಕಾರಣ ಎಂದು ಆರೋಪಿಸಿದರು.

ಸಚಿವರ ರಾಜೀನಾಮೆಗೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ : ತುಮಕೂರು ಜಿಲ್ಲಾಸ್ಪತ್ರೆ ಮತ್ತು ಅಲ್ಲಿನ ವೈದ್ಯೆಯ ನಿರ್ಲಕ್ಷ್ಯದಿಂದ ಬಾಣಂತಿ ಹಾಗೂ ಆಕೆಯ ಇಬ್ಬರು ನವಜಾತ ಶಿಶುಗಳು ಸಾವನ್ನಪ್ಪಿರುವ ಬಗ್ಗೆ ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ದುರಂತಕ್ಕೆ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದು ಇಡೀ ರಾಜ್ಯವೇ ತಲೆ ತಗ್ಗಿಸುವ ಘಟನೆ. ಕೂಡಲೇ ಸಚಿವ ಸುಧಾಕರ್ ರಾಜೀನಾಮೆ ನೀಡಬೇಕು, ಇಲ್ಲವೇ ಸ್ವತಃ ಮುಖ್ಯಮಂತ್ರಿಗಳೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೇವಲ ರಾಜಕೀಯ, ಚುನಾವಣೆ, ಪ್ರಚಾರದಲ್ಲಿ ಮುಳುಗೇಳುತ್ತಿರುವ ರಾಜ್ಯ ಬಿಜೆಪಿ ಸರಕಾರದ ಆಡಳಿತದ ಕರಾಳ ಮುಖದ ಬಗ್ಗೆ (ಮಂಡ್ಯದ ಘಟನೆ) ಸ್ವಲ್ಪ ಹೊತ್ತಿನ ಹಿಂದೆ ನಾನು ಟ್ವೀಟ್ ಮಾಡಿದ್ದೆ. ಆದರೆ, ಅದಕ್ಕಿಂತ ಭಯಾನಕ ಹಾಗೂ ಕರುಳು ಹಿಂಡುವ, ಇಡೀ ಕರ್ನಾಟಕವೇ ತಲೆ ತಗ್ಗಿಸುವ ದುರ್ಘಟನೆ ತುಮಕೂರಿನಲ್ಲಿ ನಡೆದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಇಲಾಖೆ ಅದೆಷ್ಟು ಹಾಳಾಗಿ ಹೋಗಿದೆ ಎನ್ನುವುದಕ್ಕೆ ಇದಕ್ಕಿಂತ ದುರಂತ ಸಾಕ್ಷಿ ಇನ್ನೊಂದಿಲ್ಲ. ಈ ಹದಗೆಟ್ಟ ಆರೋಗ್ಯ ವ್ಯವಸ್ಥೆ ತುಮಕೂರಿನಲ್ಲಿ ಅನಾಥ ಬಾಣಂತಿಯ ಜತೆಗೇ ಹುಟ್ಟಿದೊಡನೆ ಎರಡು ಹಸುಗೂಸುಗಳನ್ನು ಬಲಿ ತೆಗೆದುಕೊಂಡಿದೆ. ಅಭಿವೃದ್ಧಿ, ಆವಿಷ್ಕಾರ ಎಂದೆಲ್ಲ ಬೀಗುವ ಈ ಸರಕಾರ ನಾಚಿಕೆಯಿಂದ ತಲೆ ತಗ್ಗಿಸಬೇಕಿದೆ ಎಂದು ಅವರು ಟೀಕಿಸಿದ್ದಾರೆ.

ಒಂದೇ ಲಿಂಕ್‌ನಲ್ಲಿ ಜನಶಕ್ತಿ ಮೀಡಿಯಾದ ಸೋಶಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ನ್ನು ನೋಡಬಹುದು

Donate Janashakthi Media

Leave a Reply

Your email address will not be published. Required fields are marked *