ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ: ಚೀಲದಲ್ಲಿ ಹಳೆವಸ್ತು ತುಂಬಿಕೊಂಡು ಸಂಸದ ಪ್ರತಾಪ್‌ಸಿಂಹ ಮನೆಗೆ ಮುತ್ತಿಗೆ

ಮೈಸೂರು: ಹಳೆ ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡು ಸಂಸದ ಪ್ರತಾಪ್‌ ಸಿಂಹ ಮನೆಯೆದುರು ದಲಿತ ಸಂಘರ್ಷ ಸಮಿತಿ ಇಂದು ಪ್ರತಿಭಟನೆ ನಡೆಸಿದೆ.

ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸಂಘ ಪರಿವಾರ ಮತ್ತು ಬಿಜೆಪಿ ನಾಯಕರು ಮುಸ್ಲಿಮ್‍ ವರ್ತಕರುಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಹಳ್ಳಿಗಳಿಗೆ ಮುಸ್ಲಿಮ್ ಬಂಧುಗಳು ಯಾವುದೇ ವ್ಯಾಪಾರಕ್ಕೆ ಬರುತ್ತಿಲ್ಲ ಆದ್ದರಿಂದ ಪ್ರತಾಪ್ ಸಿಂಹ ನಮ್ಮಲ್ಲಿರುವ ಹಳೆ ನಿರುಪಯುಕ್ತ ವಸ್ತುಗಳನ್ನು ಕೊಂಡುಕೊಂಡು ಹಣ ನೀಡಬೇಕು ಎಂದು ಒತ್ತಾಯಿಸಿ ಹಳೆ ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡು ಸಂಸದರ ಮನೆಯೆದುರು ಪ್ರತಿಭಟನೆಗೆ ಮುಂದಾದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ನೇತೃತ್ವದಲ್ಲಿ ಗುರುವಾರ ದಸಂಸ ಕಾರ್ಯಕರ್ತರು ಮಹಿಳೆಯರು ಮತ್ತು ಗ್ರಾಮಾಂತರ ಭಾಗದ ಜನರುಗಳು ಚೀಲದಲ್ಲಿ ಹಳೆ ಸಾಮಾನು, ಖಾಲಿ ಬಾಟಲ್, ಹುಣಸೇ ಪಿಚ್ಚಿ, ಟಯರ್ ಟ್ಯೂಬ್, ಹಳೆ ಕಬ್ಬಿಣಗಳನ್ನು ಆಟೋದಲ್ಲಿ ತೆಗೆದುಕೊಂಡು ನಗರದ ವಿಜಯ ನಗರದ ನಾಲ್ಕನೆ ಹಂತದಲ್ಲಿರುವ ಸಂಸದ ಪ್ರತಾಪ್ ಸಿಂಹರ ಮನೆಗೆ ಆಗಮಿಸಿ ಅವರಿಗೆ ಮಾರಾಟ ಮಾಡಲು ಆಗಮಿಸಿದ್ದರು.

ಈ ವೇಳೆ ಪೊಲೀಸರು ಸಂಸದ ಪ್ರತಾಪ್ ಸಿಂಹ ಅವರ ಮನೆಯ ಮುಂಭಾಗಕ್ಕೆ ತೆರಳದಂತೆ ಮನೆಯ 500 ಮೀಟರ್ ಹಿಂಭಾಗದ ರಿಂಗ್ ರಸ್ತೆಯ ಕನ್ನಡ ವೃತ್ತದಲ್ಲೇ ಬ್ಯಾರಿಕೇಡ್ ಗಳನ್ನು ಅಡ್ಡಹಾಕಿ ತಡೆದರು.

ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಆಕ್ರೋಶ ವ್ಯಕ್ತಪಡಿಸಿ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸಂಘಪರಿವಾರ ಮತ್ತು ಬಿಜೆಪಿ ನಾಯಕರುಗಳು ಮುಸ್ಲಿಮ್‍ ವರ್ತಕರುಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ ನಮ್ಮ ಹಳ್ಳಿಗಳು ಬಡಾವಣೆಗಳಿಗೆ ವ್ಯಾಪಾರಕ್ಕಾಗಿ ಬರುತ್ತಿದ್ದ ಮುಸ್ಲಿಮ್ ಬಂಧುಗಳ ಭಯದಿಂದ ಬರುತ್ತಿಲ್ಲ, ಇದರಿಂದ ನಮ್ಮ ಬಳಿ ಹಳೆ ಬಾಟಲ್, ಕಾಲಿ ಸೀಸ, ಹುಣಸೆ ಪಿಚ್ಚಿ, ಹಳೆ ಟಯರ್ ಟ್ಯೂಬ್ ಗಳು ಸಾಕಷ್ಟು ಉಳಿದುಕೊಂಡಿವೆ. ಅವುಗಳನ್ನು ಸಂಸದ ಪ್ರತಾಪ್ ಸಿಂಹ ಕೊಂಡುಕೊಂಡು ನಮಗೆ ಹಣ ನೀಡಬೇಕು. ನಾವು ಅವರ ವಿರುದ್ಧ ಯಾವುದೇ ಪ್ರತಿಭಟನೆ ಮಾಡಲು ಬಂದಿಲ್ಲ. ಇದಕ್ಕೆ ಅವಕಾಶ ಮಾಡಿಕೊಡಿ ಅವರು ನಮ್ಮ ಜನಪ್ರತಿನಿಧಿ ಅವರು ಕೊಂಡುಕೊಳ್ಳಲಿ ಎಂದು ಪೊಲೀಸರಲ್ಲಿ ಮನವಿ ಮಾಡಿದರು.

ಪ್ರತಿಭಟನೆ ಜೋರಾಗುತ್ತಿದ್ದಂತೆ ಪ್ರತಿಭಟನೆಕಾರರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು. ಸರ್ವಜನಾಂಗದ ಶಾಂತಿಯ ತೋಟದಂತಿದ್ದ ರಾಜ್ಯವನ್ನು ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರುಗಳು ಕೋಮುದ್ವೇಷ ಹರಡುವಂತೆ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಇಂತವರ ಮೇಲೆ ಉಗ್ರ ಕಾನೂನು ಕ್ರಮ ಕೈಗೊಂಡು ಶಾಂತಿ ವಾತಾವರಣ ನಿರ್ಮಾಣ ಮಾಡಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.

Donate Janashakthi Media

Leave a Reply

Your email address will not be published. Required fields are marked *