ಪಶ್ಚಿಮ ಬಂಗಾಳ ರಾಜ್ಯದ ಬ್ಯಾಲಿಗುಂಜ್ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 12ರಂದು ನಡೆಯಲಿರುವ ಉಪಚುನಾವಣೆಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಎಡರಂಗ ಅಭ್ಯರ್ಥಿಯಾಗಿ ಶಿಕ್ಷಣ ತಜ್ಷೆ, ಜನರ ಹಕ್ಕುಗಳ ಹೋರಾಟಗಾರ್ತಿ ಸಾಯಿರಾ ಶಾ ಹಲೀಮ್ ಅವರನ್ನು ಕಣಕ್ಕೆ ಇಳಿಸಿದೆ.
ಇಂಡಿಯಾ ಟುಡೇ ಟಿವಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಮ್ಮನ್ನು ಸಿಪಿಐ(ಎಂ) ಪಕ್ಷವು ಅಭ್ಯರ್ಥಿಯಾಗಿ ಘೋಷಣೆ ಮಾಡಿರುವ ಬಗ್ಗೆ ಸಂತಸ ಹಂಚಿಕೊಂಡ ಸಾಯಿರಾ ಶಾ ಹಲೀಮ್ ʻಕ್ಷೇತ್ರದಲ್ಲಿ ನಿರುದ್ಯೋಗದ ಸಮಸ್ಯೆ ಗಂಭೀರವಾಗಿ ಪರಿಣಮಿಸಿದ್ದು, ಅವರ ಹಕ್ಕುಗಳಿಗಾಗಿ ನಾನು ಹೋರಾಡುತ್ತೇನೆ. ನಾನು ಅತಿಯಾದ ಆತ್ಮವಿಶ್ವಾಸ ಹೊಂದಿಲ್ಲ. ಆದರೆ, ಶಕ್ತಿಮೀರಿ ಹೋರಾಟವನ್ನು ಮಾಡೇ ಮಾಡುವೆʼ ಎಂದು ಹೇಳಿದರು.
ಕ್ಷೇತ್ರದಲ್ಲಿ ಚುನಾವಣಾ ಪ್ರಚಾರವನ್ನು ಕೈಗೊಂಡ ಸಾಯಿರಾ ಶಾ ಹಲೀಮ್ ʻʻಚುನಾವಣಾ ಅಭ್ಯರ್ಥಿಯಾಗಿ ಪಕ್ಷವು ನನ್ನ ಮೇಲೆ ಇಟ್ಟಿರುವ ನಂಬಿಕೆಯು, ನಾನು ಸಾಕಷ್ಟು ಹೆಚ್ಚಿನ ಭರವಸೆಯೊಂದಿಗೆ ಹೋರಾಟ ನಡೆಸಲಿದ್ದೇನೆ. ಈ ಹಿಂದೆ ಸ್ಪರ್ಧಿಸಿದ ಅಭ್ಯರ್ಥಿ ಸಾಕಷ್ಟು ಶ್ರಮವಹಿಸಿ ಹೋರಾಟವನ್ನು ನಡೆಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಹಳೆಯ ಅನುಭವಗಳು ಮತ್ತು ಹೊಸ ಆಲೋಚನೆಗಳ ಮಿಶ್ರಣವಾಗಿರಲಿದೆ. ಮುಕ್ತ ಹಾಗೂ ನ್ಯಾಯ ಸಮ್ಮತವಾದ ಚುನಾವಣೆ ನಡೆಯುವುದೇ ಇಲ್ಲಿ ಮುಖ್ಯವಾಗಿದೆʼʼ ಎಂದು ಹೇಳಿದರು.
ಬಾಲಿವುಡ್ ನಟ ನಾಸಿರುದ್ದೀನ್ ಶಾ ಅವರ ಸೋದರ ಸೊಸೆ ಸಾಯಿರಾ ಶಾ ಹಲೀಮ್ ಅವರ ಪತಿ ಡಾ ಫುವಾದ್ ಹಲೀಮ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಡಾ. ಫುವಾದ್ ಹಲೀಮ್ ಅವರ ತಂದೆ ದಿವಂಗತ ಹಾಶಿಮ್ ಅಬ್ದುಲ್ ಹಲೀಮ್ ರಾಜ್ಯ ವಿಧಾನಸಭೆಯಲ್ಲಿ ಅತ್ಯಂತ ದೀರ್ಘಕಾಲ ವಿಧಾನಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ವಿಧಾನಸಭೆ ಕ್ಷೇತ್ರದ ಶಾಸಕ ಸುಬ್ರತಾ ಮುಖರ್ಜಿ ಕಳೆದ ವರ್ಷ ನಿಧನ ಹೊಂದಿರುವುದರಿಂದ ಬ್ಯಾಲಿಗುಂಜ್ ಕ್ಷೇತ್ರ ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಏಪ್ರಿಲ್ 12ರಂದು ನಡೆಯಲಿದ್ದು, ಏಪ್ರಿಲ್ 16ರಂದು ಮತ ಎಣಿಕೆಯಾಗಲಿದೆ. ಈ ಕ್ಷೇತ್ರಕ್ಕೆ ಟಿಎಂಸಿ ಪಕ್ಷದ ಅಭ್ಯರ್ಥಿ ನಟ ಬಾಬುಲ್ ಸುಪ್ರಿಯೊ ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ.
ಅಸನ್ನೋಲ್ ವಿಧಾನಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಯಲಿದ್ದು, ಟಿಎಂಸಿ ಪಕ್ಷದಿಂದ ಪಾರ್ಥ ಮುಖರ್ಜಿ ಹಾಗೂ ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ, ನಟ ಶತ್ರುಘ್ನ ಸಿನ್ಹಾ ಸ್ಪರ್ಧಿಸಿದ್ದಾರೆ.