ಬಾಲ ಕಲಾವಿದರ ಸುರಕ್ಷತೆಗೆ ಹೊಸ ಮಾರ್ಗಸೂಚಿ ಪ್ರಕಟ: ಉಲ್ಲಂಘನೆಯಾದಲ್ಲಿ 2 ವರ್ಷ ಜೈಲು

ನವದೆಹಲಿ: ಮನರಂಜನಾ ಕ್ಷೇತ್ರದಲ್ಲಿ ಮಕ್ಕಳನ್ನು ಸತತ 27 ದಿನಗಳಿಗಿಂತ ಹೆಚ್ಚು ದಿನ ದುಡಿಸುವಂತಿಲ್ಲ, ಪ್ರತಿ 3 ಗಂಟೆಗಳಿಗೊಮ್ಮೆ ಬಾಲಕಲಾವಿದರಿಗೆ ವಿರಾಮ ನೀಡಬೇಕು ಹಾಗೂ ಅವರ ಆದಾಯದ ಶೇ.20ರಷ್ಟ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿಯಲ್ಲಿ ಜಮೆ ಮಾಡಬೇಕು ಎಂದು ಹೊಸ ನಿಯಮಾವಳಿಗಳು ಪ್ರಕಟಗೊಂಡಿವೆ.

ಬಾಲ ಕಲಾವಿದರನ್ನು ಬಾಲಕಾರ್ಮಿಕರೆಂದು ಪರಿಗಣಿಸಬೇಕು. ಬಾಲ ಕಾರ್ಮಿಕ ನಿಯಮಗಳು ಉಲ್ಲಂಘನೆ ಮಾಡಿದಲ್ಲಿ ಅಂಥವರಿಗೆ ದಂಡದೊಂದಿಗೆ ಶಿಕ್ಷೆಯೂ ವಿಧಿಸಲಾಗುವುದು ಎಂದು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ(ಎನ್‌ಸಿಪಿಸಿಆರ್) ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.

‘ಎನ್‌ಸಿಪಿಸಿಆರ್’ ಹೊಸ ಕರಡು ಮಾರ್ಗಸೂಚಿಯಂತೆ, ಬಾಲ ಕಲಾವಿದರ ಬಗ್ಗೆ ಜಿಲ್ಲಾ ನ್ಯಾಯಾಲಯಗಳಿಗೆ ಮಾಹಿತಿ ನೀಡುವುದು, ಚಿತ್ರೀಕರಣದ ವೇಳೆ ಮಕ್ಕಳ ಮೇಲೆ ದೌರ್ಜನ್ಯವಾಗದಂತೆ ಗಮನಿಸುವುದು, ಮಕ್ಕಳ ವೇತನ ಸಮಯಕ್ಕೆ ಸರಿಯಾಗಿ ನೀಡುವುದು, ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಕಾರ್ಯನಿರ್ವಹಿಸುವುದು ಸೇರಿದಂತೆ ಚಿತ್ರೀಕರಣದ ವೇಳೆ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಸೂಚಿಸಲಾಗಿದೆ.

ಮನರಂಜನಾ ರಂಗಗಳಲ್ಲಿ ಕಾರ್ಯನಿರ್ವಹಿಸುವ ಮಕ್ಕಳು ಗಂಭೀರ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಮೇಲ್ವಿಚಾರಣಾ ಕಾರ್ಯವಿಧಾನಗಳಿಂದ ತಿಳಿದುಬಂದಿದೆ. ಈ ಉದ್ಯಮದಲ್ಲಿ ಕಾನೂನುಬದ್ಧ ಹಕ್ಕುಗಳು ಇರುವುದಿಲ್ಲ. ಜೊತೆಗೆ ಭದ್ರತೆ ಇಲ್ಲದಿರುವುದು ಮತ್ತು ಕಾರ್ಮಿಕ ಕಾನೂನು ಅಳವಡಿಸಿಕೊಳ್ಳದೇ ಇರುವುದು ಶೋಷಣೆಗೆ ಮುಖ್ಯ ಕಾರಣವಾಗಿದೆ. ವಯಸ್ಕರೊಂದಿಗೆ ಮಕ್ಕಳು ಭಾಗವಹಿಸಿದಾಗ ಕೆಲವು ಅಪಾಯಕಾರಿ ಸಂಗತಿಗಳಿಂದ ಸಾಮಾನ್ಯವಾಗಿ ಮಕ್ಕಳು ಆತಂಕಕ್ಕೆ ಒಳಗಾಗುತ್ತಾರೆಂದು ಹೊಸ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

“ನಿರ್ಮಾಪಕರು, ಪೋಷಕರು ಹಾಗೂ ಕಾನೂನು ಪಾಲಕರು ಬಾಲಕಾರ್ಮಿಕ ಮಾರ್ಗಸೂಚಿಗಳು ಉಲ್ಲಂಘಿಸುವುದು ಕಂಡುಬಂದಲ್ಲಿ ‘ಬಾಲಕಾರ್ಮಿಕ ಕಾರ್ಮಿಕ ಕಾಯ್ದೆ-1986’ರ ಸೆಕ್ಷನ್ 14 ಮತ್ತು 14ಎ ಅಡಿ ಪ್ರಕರಣ ದಾಖಲಾಗುವುದು. ಅಪರಾಧಿಗಳಿಗೆ ಆರು ತಿಂಗಳಿಂದ ಎರಡು ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಅಥವಾ 20,000 ದಿಂದ 50,000 ರೂಪಾಯಿ ದಂಡವನ್ನೂ ವಿಧಿಸಲಾಗುತ್ತದೆ ಅಥವಾ ಎರಡನ್ನೂ ವಿಧಿಸಬಹುದು ದಂಡದ ಜೊತೆಗೆ ಜೈಲು ಶಿಕ್ಷೆ ಸಹ ವಿಧಿಸಬಹುದು” ಎಂದು ಎನ್‌ಸಿಪಿಸಿಆರ್ ಹೇಳಿದೆ.

“ವಾಣಿಜ್ಯ ಕಾರ್ಯಕ್ರಮ, ಚಲನಚಿತ್ರ, ಟಿವಿ ಕಾರ್ಯಕ್ರಮ, ಜಾಹೀರಾತು, ರಿಯಾಲಿಟಿ ಶೋ, ಒಟಿಟಿ ವೇದಿಕೆ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳ ಪ್ರದರ್ಶನಗಳಲ್ಲಿ ಯಾವುದೇ ಬಾಲ ಕಲಾವಿದರನ್ನು ತೊಡಗಿಸಿಕೊಂಡಿದ್ದರೆ, ಅಲ್ಲಿ ಹಕ್ಕು ನಿರಾಕರಣೆ ನಿರ್ದಿಷ್ಟಪಡಿಸಬೇಕು. ಜೊತೆಗೆ ಚಿತ್ರೀಕರಣದ ವೇಳೆಯಲ್ಲಿ ಮಗುವಿನ ಮೇಲೆ ಯಾವುದೇ ದೌರ್ಜನ್ಯ, ನಿರ್ಲಕ್ಷ್ಯ ಹಾಗೂ ಶೋಷಣೆಗಳು ನಡೆಯದ ರೀತಿಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಎನ್‌ಸಿಪಿಸಿಆರ್ ವಿವರಿಸಿದೆ.

ಮಕ್ಕಳು ಮುಜುಗರ ಮತ್ತು ಸಂಕಟ ಅನುಭವಿಸುವುದನ್ನು ತಡೆಗಟ್ಟಲು ಈ ನಿಯಮಗಳನ್ನು ತರಲಾಗಿದೆ ಎಂದು ಎನ್‌ಸಿಪಿಸಿಆರ್ ಉಲ್ಲೇಖಿಸಿದೆ. ಮಗು ಮದ್ಯಪಾನ, ಧೂಮಪಾನ ಅಥವಾ ಯಾವುದೇ ಇತರ ಮಾದಕ ವಸ್ತುಗಳನ್ನು ಬಳಸುವುದನ್ನು ತೋರಿಸಬಾರದು. ಜೊತೆಗೆ ನಗ್ನತೆಯ ದೃಶ್ಯಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಬಾರದು ಎಂದು ನಿಬಂಧನೆಗಳು ಹೇಳುತ್ತವೆ.

ಶಿಕ್ಷಣಕ್ಕೆ ಅಡ್ಡಿಯಾಗಬಾರದು

ಚಿತ್ರೀಕರಣದಲ್ಲಿ ಭಾಗಿಯಾಗಿರುವ ಮಕ್ಕಳ ಶಾಲಾ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ನಿರ್ಮಾಪಕರೇ ನೋಡಿಕೊಳ್ಳಬೇಕು. ಮನರಂಜನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಕಾರಣ ಶಾಲೆಗೆ ಮಕ್ಕಳು ಗೈರಾಗಿದ್ದರೆ, ಅಂಥ ಮಕ್ಕಳಿಗಾಗಿ ನಿರ್ಮಾಪಕರೇ ಒಬ್ಬ ಖಾಸಗಿ ಟ್ಯೂಟರ್‌ ಅನ್ನು ನೇಮಕ ಮಾಡಬೇಕು. ಬಾಲಕಲಾವಿದರು ಕೆಲಸ ಮಾಡುವ ಪರಿಸರವು ಸುರಕ್ಷಿತವಾಗಿದ್ದು, ಅವರ ಮೇಲೆ ಯಾವುದೇ ದೌರ್ಜನ್ಯಗಳು ಆಗದಂತೆ ನೋಡಿಕೊಳ್ಳಬೇಕು ಎಂದೂ ಸೂಚಿಸಲಾಗಿದೆ.

ಮಾರ್ಗಸೂಚಿಯಲ್ಲಿರುವ ಕಡ್ಡಾಯ ನಿಯಮಗಳು

  • ಆಯಾ ಜಿಲ್ಲಾಡಳಿತದಲ್ಲಿ ಬಾಲ ಕಲಾವಿದರ ನೋಂದಣಿ ಕಡ್ಡಾಯ
  • ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ನಿರ್ಮಾಪಕರು ನೋಡಿಕೊಳ್ಳಬೇಕು
  • ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕು, ಶೇ.20ರಷ್ಟನ್ನು ಮಕ್ಕಳ ಹೆಸರಲ್ಲೇ ಠೇವಣಿ ಇಡಬೇಕು
  • ಮಕ್ಕಳೊಂದಿಗೆ ಡ್ರೆಸ್ಸಿಂಗ್‌ ರೂಂ ಹಂಚಿಕೊಳ್ಳಲು ವಯಸ್ಕರಿಗೆ ಅವಕಾಶ ನೀಡಬಾರದು
  • ಅಪಾಯಕಾರಿ ಬೆಳಕು, ಕಿರಿಕಿರಿ ಉಂಟುಮಾಡುವ ಅಥವಾ ಕಲುಷಿತ ಕಾಸ್ಮೆಟಿಕ್‌ಗಳಿಂದ ಮಕ್ಕಳನ್ನು ದೂರವಿಡಬೇಕು
  • ನಿರ್ಮಾಣ ಹಂತದಲ್ಲಿ ಮಕ್ಕಳ ಹಕ್ಕುಗಳ ನಿಯಮ ಪಾಲಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಬೇಕು
  • ಮಕ್ಕಳ ವೈದ್ಯಕೀಯ ದೃಢಕಾಯ ಪ್ರಮಾಣಪತ್ರ, ಪೊಲೀಸ್‌ ದೃಢೀಕರಣ ಪತ್ರವನ್ನು ನಿರ್ವಾಹಕ ತಂಡ ಒದಗಿಸಬೇಕು
  • 6 ವರ್ಷದೊಳಗಿನ ಮಕ್ಕಳನ್ನು ಬಳಸುವುದಿದ್ದರೆ ನೋಂದಾಯಿತ ದಾದಿಯರು ಎಲ್ಲ ಸಮಯದಲ್ಲೂ ಅಲ್ಲಿರಬೇಕು
  • ಹೆತ್ತವರು ಅಥವಾ ಪೋಷಕರು ಉಪಸ್ಥಿತಿಯಿರುವಂತೆ ನೋಡಿಕೊಳ್ಳಬೇಕು
Donate Janashakthi Media

Leave a Reply

Your email address will not be published. Required fields are marked *