ಬೆಂಗಳೂರು: ರಾಜ್ಯ ಸರ್ಕಾರ ಬಕ್ರೀದ್ ಹಬ್ಬ ಆಚರಣೆ ಬಗ್ಗೆ ಮಾರ್ಗಸೂಚಿ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಅದರಂತೆ ಹಬ್ಬದ ದಿನ ಕೋವಿಡ್ -19 ಮಾರ್ಗಸೂಚಿ ಪಾಲಿಸಬೇಕು. ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಕಾಯ್ದೆ ನಿಯಮ ಉಲ್ಲಂಘನೆಯಾಗದಂತೆ ಖುರ್ಬಾನಿ (ಪ್ರಾಣಿ ಬಲಿದಾನ) ಮಾಡಬೇಕು. ಖುರ್ಬಾನಿ ಮಾಡುವಾಗ ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ ಕಾಲೇಜು, ಆಸ್ಪತ್ರೆ ಆವರಣ, ಉದ್ಯಾನ ನಿಷೇಧಿಸಲಾಗಿದೆ. ಜಿಲ್ಲಾಡಳಿತ, ಸ್ಥಳೀಯ ಆಡಳಿತ ಸಂಸ್ಥೆಯ ನಿಗಧಿಪಡಿಸಿದ ಸ್ಥಳಗಳಲ್ಲಿ ಮಾತ್ರ ಖುರ್ಬಾನಿ ಮಾಡುವಂತೆ ತಿಳಿಸಲಾಗಿದೆ.
ಪೊಲೀಸ್ ಇಲಾಖೆ, ಪಶು ಪಾಲನಾ, ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ಪಾಲಿಸುವುದು ಕಡ್ಡಾಯವಾಗಿದೆ. ಅಧಿಕಾರಿಗಳು ನಿಗದಿಪಡಿಸಿದ ಜಾಗದಲ್ಲೇ ಪ್ರಾರ್ಥನೆ ಮಾಡಬೇಕು. ಪ್ರಾಣಿ ತ್ಯಾಜ್ಯ ಸಾರ್ವಜನಿಕ ಸ್ಥಳದಲ್ಲಿ ವಿಲೇವಾರಿ ಮಾಡಬಾರದು ಎಂದು ಸರ್ಕಾರದ ಉಪ ಕಾರ್ಯದರ್ಶಿ ಮೆಹಬೂಬ್ ಸಾಬ್ ಆದೇಶ ಹೊರಡಿಸಿದ್ದಾರೆ.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಎಲ್ಲೆಡೆ ಗಸ್ತು ತಿರುಗಿ ಅರಿವು ಮೂಡಿಸುತ್ತಿದ್ದಾರೆ. ಎಲ್ಲೆಲ್ಲಿ ಹಬ್ಬದ ಸಂದರ್ಭದಲ್ಲಿ ಜನಸಂದಣಿ ಉಂಟಾಗಲಿದೆಯೋ ಮತ್ತು ವ್ಯಾಪಾರ ವಹಿವಾಟುಗಳು ಜೋರು ಇರಲಿದ್ದೇಯೇ ಅಲ್ಲೆಲ್ಲಾ ಪೊಲೀಸರು ತೆರಳಿ ಸಾರ್ವಜನಿಕರಿಗೆ ಸರ್ಕಾರಿ ಆದೇಶದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಬಕ್ರೀದ್ ಆಚರಣೆ ವೇಳೆ ಬಲಿ ನೀಡುವ ಸಂಪ್ರದಾಯಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಅದನ್ನು ಮೀರಿ ಯಾವುದೇ ದನ, ಕರುಗಳು, ಆಕಳು, ಎತ್ತುಗಳನ್ನು ಬಲಿಕೊಡುವಂತಿಲ್ಲ. ಜೊತೆಗೆ ಬಲಿಗಾಗಿ ಅವುಗಳನ್ನು ಸಾಗಾಣೆ ಮಾಡುವಂತೆಯೂ ಇಲ್ಲ ಎಂದು ಎಚ್ಚರಿಕೆ ನೀಡಿದೆ.
ಬಕ್ರೀದ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ರಸ್ತೆಗಳನ್ನು ಬಂದ್ ಮಾಡಿ ಪ್ರಾರ್ಥನೆ ಮಾಡುವಂತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಹಬ್ಬದ ಪ್ರಾರ್ಥನೆಗೆ ರಸ್ತೆ ಬಂದ್ ಮಾಡುವುದು. ಟ್ರಾಫಿಕ್ ಸಿಗ್ನಲ್ನಲ್ಲಿ ಚಾಪೆ ಹಾಸುವುದಕ್ಕೆ ಅವಕಾಶ ಇಲ್ಲ. ಸಂಚಾರ ದಟ್ಟಣೆಯಾಗದಂತೆ ತಡೆಯುವುದು ಪೊಲೀಸರ ಇಲಾಖೆ ಕರ್ತವ್ಯವಾಗಿದೆ. ಅವರು ಬಿಬಿಎಂಪಿಯಿಂದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಹಕಾರ ಕೇಳಿದರೂ ಸ್ಪಂದಿಸುತ್ತೇವೆ ಎಂದಿದ್ದಾರೆ.