ಬೆಳಗಾವಿ : ಕಬ್ಬಿನ ಬಾಕಿ ಬಿಲ್ ಸಿಗದೇ ರೈತನೊಬ್ಬ ಶವ ಸಂಸ್ಕಾರಕ್ಕೆ ಅಗೆದ ಸಮಾಧಿಯಲ್ಲಿ ಕುಳಿತು ಪ್ರತಿಭಟನೆ ಮಾಡಿದ ಘಟನೆಯೊಂದು ಬೆಳಗಾವಿ ಜಿಲ್ಲೆಯ ಕಿತ್ತೂರೂ ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಶಿವಾನಂದ ಬೋಗಾರ (50) ಎಂಬ ರೈತನೊಬ್ಬ ಕಬ್ಬು ಬೆಳೆದು ಕಾರ್ಖಾನೆಗೆ 114 ಟನ್ ಕಬ್ಬನ್ನು ಸರಬರಾಜು ಮಾಡಿದ್ದಾನೆ. ಅದಕ್ಕೆ ನನಗೆ ರೂ.85 ಸಾವಿರ ಬಾಕಿ ಬಿಲ್ ಬರಬೇಕು. ಕಾರ್ಖಾನೆಗಳಿಗೆ ಅಲೆದು ಅಲೆದು ಸಾಕಾಗಿದೆ. ವರ್ಷೆಗಳೆ ಕಳೆದರೂ ಹಣ ಪಾವತಿಸುತ್ತಿಲ್ಲ. ಬದುಕು ನಡೆಸೋದು ಹೇಗೆ ಎಂದು ಸಮಾಧಿಯಲ್ಲಿ ಕುಳಿತು ನೋವನ್ನು ವ್ಯಕ್ತಪಡಿಸಿದ್ದಾನೆ.
ಹಗಲು ರಾತ್ರಿ ಎನ್ನದೇ ಹೊಲದಲ್ಲಿ ದುಡಿದು ಬಂದ ಬೆಳೆಯನ್ನು ಬೆಳೆದಿದ್ದೇನೆ, ಮಾರಾಟವಾದರೂ ಬಾಕಿ ಹಣ ನಮ್ಮ ಕೈ ಸೇರಿಲ್ಲ, ಜೀವನ ಸಾಕಾಗಿ ಹೋಗಿದೆ ಮಣ್ಣಾಗುವುದೊಂದೇ ಬಾಕಿ ಇದೆ ಅದಕ್ಕೆ ಸಮಾಧಿಯಲ್ಲೆ ಕುಳಿತಿರುವೇ. ಕಾರ್ಖಾನೆ ಅಧ್ಯಕ್ಷಕರು,ನಿರ್ದೇಶಕರು ಇಲ್ಲಿಗೆ ಬಂದು ಮಣ್ಣಾದರು ಹಾಕಿಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಕಾರ್ಖಾನೆ ನಿರ್ದೇಶಕರಾಗಿದ್ದು ಅವರ ಹೆಸರು ಪ್ರಸ್ತಾಪಿಸಿ ಬಿಲ್ ಕೊಡಿ ಎಂದು ರೈತ ಆಗ್ರಹಿಸಿದ್ದಾನೆ. ಇವರು ನಡೆಸಿದ ವಿನೂತನ ಪ್ರತಿಭಟನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದ್ದು, ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ರೈತನಿಗೆ ನ್ಯಾಯ ಕೊಡುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.