ಮಂಗಳೂರು: ವೈದ್ಯಕೀಯ ವಿದ್ಯಾರ್ಥಿನಿಯರ ಮೇಲೆ ಅನೈತಿಕ ಗೂಂಡಾಗಿರಿ ನಡೆಸಿದ ಭಜರಂಗ ದಳದ ಕಾರ್ಯಕರ್ತರ ವರ್ತನೆಯನ್ನು ಖಂಡಿಸಿರುವ ಡಿವೈಎಫ್‌ಐ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ʻಘಟನೆಗಿಂತ ಮತ್ತೊಂದು ಆಘಾತಕಾರಿ ಸುದ್ದಿ ಏನೆಂದರೆ ಪೊಲೀಸ್ ಇಲಾಖೆಗೇ ಸವಾಲಾಗುವಂತೆ ಗೂಂಡಾಗಿರಿ ಎಸಗಿದವರ ಮೇಲೆ ಗಂಭೀರ ಆರೋಪವಲ್ಲದ ಮೊಕದ್ದಮೆಗಳನ್ನು ಹಾಕಿ ಠಾಣೆಯಲ್ಲೇ ಜಾಮೀನು ನೀಡಿ ಬಿಡುಗಡೆಗೊಳಿಸಿರುವುದು ಖಂಡನೀಯʼʼ ಎಂದಿದ್ದಾರೆ.
ಇದನ್ನು ಓದಿ: ಮುಖ್ಯಮಂತ್ರಿಯವರೇ, ಮಂಗಳೂರಿನಲ್ಲಿರುವುದು ಬಿಜೆಪಿ ಸರಕಾರನಾ? ತಾಲಿಬಾನಿಗಳದ್ದಾ?: ಸಿದ್ದರಾಮಯ್ಯ
ಮುಂದುವರೆದು ಕರಾವಳಿ ಭಾಗದಲ್ಲಿ ಮೊದಲೇ ಮತೀಯಶಕ್ತಿಗಳ ಆಡಳಿತ ಎಂಬುದು ಜನಜನಿತ ಮಾತು. ಸುರತ್ಕಲ್ ಘಟನೆಗೆ ಪೊಲೀಸ್ ಇಲಾಖೆಯ ಪ್ರತಿಕ್ರಿಯೆ ಈ ಮಾತು ನಿಜ ಎಂಬುದನ್ನು ಸಾಬೀತುಪಡಿಸುವಂತಿದೆ. ಇದು ನಾಚಿಕೆಗೇಡು. ಪೊಲೀಸ್ ಇಲಾಖೆ ಇಷ್ಟು ದುರ್ಬಲ ಆಗಬಾರದು. ಪೊಲೀಸರು ಲೆಕ್ಕಕ್ಕಿಲ್ಲ ಎಂಬಂತೆ ಸಾರ್ವಜನಿಕವಾಗಿ ಗೂಂಡಾ ಕೃತ್ಯ ಎಸಗಿದ ಕ್ರಿಮಿನಲ್ ಕಾರ್ಯಕರ್ತರಿಗೆ ರಾಜಕೀಯ ಬೆಂಬಲ ಇರುವುದು ಬಹಿರಂಗ ಸತ್ಯ ಎಂದರು.
ಗೂಂಡಾಧಾರಿಗಳ ಹಿಂದೆ ಸುರತ್ಕಲ್ ಶಾಸಕ ಭರತ್ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲ್ ಬೆಂಬಲವಾಗಿದ್ದಾರೆ ಎಂಬುದು ಸುಳ್ಳಲ್ಲ. ಪೊಲೀಸರ ಕೈ ಕಟ್ಟಿ ಹಾಕಿ, ಮತೀಯ ಕ್ರಿಮಿನಲ್ ಗಳನ್ನು ವಿಜೃಂಭಿಸಲು ಅವಕಾಶ ಮಾಡಿಕೊಡುವುದು ಕರಾವಳಿ ಜಿಲ್ಲೆಯ ದುರಂತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿ ಬಿಡುಗಡೆಗೊಂಡಿರುವ ಅಪಾದಿತರ ಮೇಲೆ ಕಠಿಣ ಸೆಕ್ಷನ್‌ಗಳ ಅಡಿ ಬಂಧಿಸುವಂತೆ ಸೂಚಿಸಬೇಕು. ಬೆಂಗಳೂರಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಯುವಕರು ಅನೈತಿಕ ಗೂಂಡಾಗಿರಿ ಎಸಗಿದಾಗ ಮುಂದೆ ನಿಂತು ಕಠಿಣ ಕ್ರಮ ಕೈಗೊಂಡ ಮುಖ್ಯಮಂತ್ರಿಗಳು ಈಗ ಮೌನವಹಿಸಿರುವುದು ಅವರಿಗೆ ರಾಜಧರ್ಮ ಪಾಲನೆಯಲ್ಲಿ ಆಸಕ್ತಿ ಇಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಕಿಡಿಕಾರಿದರು.
ಇಂತಹ ನಾಚಿಕೆಗೇಡಿನ ಕೃತ್ಯ ಎಸಗಿದವರಿಗೆ ಬೆಂಬಲವಾಗಿ ನಿಂತ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಸಾರ್ವಜನಿಕರ ಕ್ಷಮೆಯಾಚಿಸಬೇಕು ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಪೊಲೀಸರ ಆಡಳಿತ ಕೈಯಲ್ಲಿ ಇರುವಂತೆ ನೋಡಿಕೊಳ್ಳಬೇಕೆಂದು ಮುನೀರ್ ಪಾಟಿಪಳ್ಳ ಸೂಚಿಸಿದ್ದಾರೆ.