ಬೆಂಗಳೂರು: ನ್ಯಾಯಾಲಯವು, ರೌಡಿಶೀಟರ್ ಬಿಕ್ಲು ಶಿವಕುಮಾರ್ ಕೊಲೆ ಪ್ರಕರಣದಲ್ಲಿ ಕೆ.ಆರ್. ಪುರದ ಬಿಜೆಪಿ ಶಾಸಕ, ಮಾಜಿ ಸಚಿವ ಬೈರತಿ ಬಸವರಾಜ್ ಪ್ರಕರಣ ಸಂಬಂಧ ಕೋರಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಹಾಗೆಯೇ ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಬೈರತಿ ಬಸವರಾಜ್ ಹಿಂಪಡೆದುಕೊಂಡಿದ್ದಾರೆ.
ಬೈರತಿ ಬಸವರಾಜು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಅವರಿದ್ದ ನ್ಯಾಯಪೀಠ, ಬೈರತಿ ಬಸವರಾಜ್ ವಿರುದ್ದದ ಕೋಕಾ ಕಾಯಿದೆ ಜಾರಿ ಮಾಡುವಲ್ಲಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಲಾಗಿಲ್ಲ ಎಂದು ಅಭಿಪ್ರಾಯ ಪಟ್ಟು ಕಾಯ್ದೆಯನ್ನು ರದ್ದುಮಾಡಿದೆ.
ಹೈಕೋರ್ಟ್‌ನ ಶುಕ್ರವಾರದ ಆದೇಶದಿಂದ ಬೈರತಿ ಬಸವರಾಜ್ ಅವರಿಗೆ ಈ ಹಿಂದೆ ಮಂಜೂರಾಗಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದಾಗಿದೆ. ಘಟನೆ ಅತ್ಯಂತ ಹೀನಾಯ ಕೃತ್ಯವಾಗಿದ್ದು, ಹೀಗಾಗಿ ನಿರೀಕ್ಷಣಾ ಜಾಮೀನು ಕುರಿತಂತೆ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದ ಪೀಠ, ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿರುವುದಾಗಿ ಎಂದು ಪೀಠ ಹೇಳಿದೆ. ಆದರೆ ಬೈರತಿ ಅವರಿಗೆ ಸೂಕ್ತ ನ್ಯಾಯಾಲಯದ ಮುಂದೆ ಕಾನೂನು ಪ್ರಕಾರ ಜಾಮೀನು ಅರ್ಜಿ ಸಲ್ಲಿಸುವ ಅವಕಾಶ ಇದೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಅಸ್ಸಾಂ| ರೈಲು ಡಿಕ್ಕಿಯಾಗಿ 8 ಆನೆಗಳು ಸಾವು
ಪ್ರಕರಣಕ್ಕೆ ಸಂಬಂಧಿಸಿದಂತೆ ಬೈರತಿ ಬಸವರಾಜ್ ಅವರನ್ನು ಕಸ್ಟಡಿಗೆ ತೆಗೆದುಕೊಂಡು ತನಿಖೆ ಮಾಡಬೇಕು ಎಂದು ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ವಾದಿಸಿದ್ದು ಇದೀಗ ಬೈರತಿ ಅವರಿಗೆ ಬಂಧನ ಭೀತಿ ಎದುರಾಗಿದೆ. ಅರ್ಜಿದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಾದ ಅಗತ್ಯವಿದೆ ಎಂದು ಸಿಐಡಿ ತನಿಖಾಧಿಕಾರಿಗಳ ಪರ ಸರ್ಕಾರಿ ಅಭಿಯೋಜಕರು ಬಲವಾಗಿ ವಾದಿಸಿದ್ದಾರೆ. ಅವರ ವಾದವನ್ನು ತಿರಸ್ಕೃರಿಸಲ ಸಕಾರಣಗಳಿಲ್ಲ. ಅರ್ಜಿದಾರರ ಸಹಾಯಕರಿಂದ ತನಗೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಬಿಕ್ಲು ಶಿವ ಪ್ರತ್ಯೇಕ ಲಿಖಿತ ದೂರು ನೀಡಿದ್ದರು. ಹೀಗಾಗಿ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಿದ್ದಲ್ಲಿ ಅತ್ಯಂತ ಕ್ರೂರ ಅಪರಾಧ ಪ್ರಕರಣದ ತನಿಖೆಗೆ ಅಡ್ಡಿಪಡಿಸಿದಂತಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.
ಅರ್ಜಿಯ ಸಂಬಂಧ ಈ ಹಿಂದೆ ನಡೆದ ವಿಚಾರಣೆ ವೇಳೆ ಸಿಐಡಿ ತನಿಖಾಧಿಕಾರಿಗಳ ಪರ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ತನಿಖೆಗೆ ಹಾಜರಾದ ವೇಳೆ ಅರ್ಜಿದಾರಾದ ಬೈರತಿ ಬಸವರಾಜ್ ಸುಳ್ಳು ಮಾಹಿತಿ ನೀಡಿದ್ದಾರೆ. ಅವರ ವಿರುದ್ಧ ಹಲವು ಸಾಕ್ಷ್ಯ ಸಂಗ್ರಹಿಸಲಾಗಿದೆ. ಗಂಭೀರ ಸಾಕ್ಷ್ಯಗಳು ಇರುವುದರಿಂದ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕಿದೆ. ಹಾಗಾಗಿ ಅರ್ಜಿದಾರರನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ಸೂಚಿಸಿ ಹೊರಡಿಸಿರುವ ಮಧ್ಯಂತರ ರಕ್ಷಣಾ ಆದೇಶ ತೆರವುಗೊಳಿಸಬೇಕು. ಒಂದೊಮ್ಮೆ ತನಿಖಾಧಿಕಾರಿಗಳ ಸಾಕ್ಷ್ಯಾಧಾರ ನ್ಯಾಯಾಲಯಕ್ಕೆ ತೃಪ್ತಿ ತರದಿದ್ದರೆ ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಬಹುದು ಎಂದು ವಾದಿಸಿದ್ದರು.
ಕೋಕಾ ಕಾಯ್ದೆ ಬಳಕೆ ರದ್ದು ಪಡಿಸಿದ ಹೈಕೋರ್ಟ್
ಬೈರತಿ ಬಸವರಾಜ್ ಪರ ವಕೀಲರು ವಾದ ಮಂಡಿಸಿ, ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ (ಕೋಕಾ) ಹಾಕಿದ್ದಾರೆ. ಸಂಘಟಿತ ಅಪರಾಧಕ್ಕೆ ಮಾತ್ರ ಕೋಕಾ ಕಾಯ್ದೆ ಹಾಕಬಹುದಾಗಿದೆ. ಕೋಕಾ ಕಾಯ್ದೆಯಡಿ ನಿರೀಕ್ಷಣಾ ಜಾಮೀನಿಗೆ ಅವಕಾಶವಿಲ್ಲ. ಹಾಗೊಂದು ವೇಳೆ ಮಧ್ಯಂತರ ರಕ್ಷಣೆ ತೆರವುಗೊಳಿಸಿದರೆ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಕೋರುವ ಅವಕಾಶ ಇಲ್ಲದಂತಾಗುತ್ತದೆ.
ರಾಜಕೀಯ ದ್ವೇಷದಿಂದ ತನಿಖಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಆದ ಕಾರಣ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸುವಂತೆ ಕೋರಲು ಚಿಂತನೆ ನಡೆಸಲಾಗಿದ್ದು, ಮಧ್ಯಂತರ ರಕ್ಷಣೆ ಆದೇಶ ತೆರವುಗೊಳಿಸಬಾರದು ಎಂದು ಕೋರಿದ್ದರು. ನ್ಯಾಯಪೀಠವು, ಕರ್ನಾಟಕ ಸಂಘಟಿತ ಅಪರಾಧ ತಡೆ (ಕೋಕಾ) ಕಾಯ್ದೆ ವಿಧಿಸಿದ್ದ ಸರ್ಕಾರದ ಕ್ರಮವನ್ನು ರದ್ದು ಪಡಿಸಿದೆ.
ಇದನ್ನೂ ನೋಡಿ: ಏನಿದು ದ್ವೇಷ ಅಪರಾಧಗಳ ಮಸೂದೆ? ದ್ವೇಷಾಪರಾಧಕ್ಕೆ ಶಿಕ್ಷೆಯೇನು? Janashakthi Media
