ಬೈಂದೂರು: ಅಖಿಲ ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ್(ಸಿಡಬ್ಲ್ಯೂಎಫ್‌ಐ)ಗೆ ಸಂಯೋಜಿಸಲ್ಪಟ್ಟ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ರಿ), ಸಿಐಟಿಯು ಇದರ ನೇತೃತ್ವದಲ್ಲಿ ಬೈಂದೂರು ತಾಲೂಕು ಕಟ್ಟಡ ಕಾರ್ಮಿಕ ಪಿಂಚಣಿದಾರರ ಬೃಹತ್ ಸಮಾವೇಶವು ಬೈಂದೂರು ಸಿಐಟಿಯು ಕಚೇರಿ ಸಭಾಂಗಣದಲ್ಲಿ ಜರಗಿತು.
ಕಟ್ಟಡ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸೆಸ್ ರೂಪದಲ್ಲಿ ಸಹಸ್ರಾರು ಕೋಟಿ ಹಣ ಸಂಗ್ರಹಿಸಲಾಗಿದೆ. ಕಾರ್ಮಿಕರ ಹಕ್ಕಿನ ಈ ಹಣದ ನೆರವಿನಿಂದ ಕಾಯಕ ಜೀವಿ ಕಟ್ಟಡ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ನಿವೃತ್ತಿ ವೇತನವನ್ನು ಕನಿಷ್ಟ ಮಾಸಿಕ ರೂ. 5 ಸಾವಿರಕ್ಕೆ ಹೆಚ್ಚಿಸಲು ಕ್ರಮವಹಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಕಟ್ಟಡ ಕಾರ್ಮಿಕ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ ತೊಂಡೆಮಕ್ಕಿ ಸಭೆಯನ್ನುದ್ದೇಶಿಸಿ ಮಾತನಾಡಿ ಕಟ್ಟಡ ಕಾರ್ಮಿಕರು ನಿವೃತ್ತಿ ವೇತನ ಕೋರಿ ಸಲ್ಲಿಸಿದ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು, ಜೀವಿತ ಪ್ರಮಾಣಪತ್ರ ಇತ್ಯಾದಿ ನೆಪ ಹೇಳಿ ಮಂಜೂರಾತಿ ಆದೇಶಕ್ಕೆ ತಡೆ ಮಾಡುವುದು ಸಲ್ಲದು ಎಂದು ಹೇಳಿದರು.
ಬೈಂದೂರು ತಾಲೂಕು ಕಟ್ಟಡ ಕಾರ್ಮಿಕ ಪಿಂಚಣಿದಾರರ ಸಂಘ ರಚನೆ ಮಾಡಲಾಗಿದೆ. ಹೆರಿಯ ಪೂಜಾರಿ ಕಂಭದಕೋಣೆ (ಅಧ್ಯಕ್ಷ), ಮುಡೂರ ಪೂಜಾರಿ ಬಿಜೂರು (ಕಾರ್ಯದರ್ಶಿ)ಯವರನ್ನೊಳಗೊಂಡ 16 ಮಂದಿಯ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನಾಗರತ್ನ ಪಡುವರಿ ಸ್ವಾಗತಿಸಿದರು. ರೊನಾಲ್ಡ್ ರಾಜೇಶ್ ಕ್ವಾಡ್ರಸ್ ವಂದಿಸಿದರು.
ವರದಿ: ವೆಂಕಟೇಶ್ ಕೋಣಿ