ಬಹು ಸಂಸ್ಕೃತಿಯ ಭಾರತದಲ್ಲಿ ತಕ್ಷಣದ ಬದಲಾವಣೆ ಅಸಾಧ್ಯ: ಕಾಗೋಡು ತಿಮ್ಮಪ್ಪ

ಶಿವಮೊಗ್ಗ: ವೈವಿಧ್ಯತೆಯಲ್ಲಿ ಏಕತೆ ಇರುವ ಈ ದೇಶದಲ್ಲಿ ಬದಲಾವಣೆ ತರುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಪ್ರೆಸ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ದೇವರಾಜ ಅರಸು ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಲ್ಲಿ ಬಹು ಸಂಸ್ಕೃತಿ ಇರುವುದರಿಂದ ತಕ್ಷಣದ ಬದಲಾವಣೆ ಸಾಧ್ಯವಿಲ್ಲ. ಬದಲಾವಣೆಯಾಗಬೇಕೆಂದರೆ ಶಿಕ್ಷಣ ಮುಖ್ಯವಾಗಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಬದಲಾವಣೆ ತರಬೇಕಿದೆ. ಸಾಮಾಜಿಕ ನ್ಯಾಯ ಕೊಡುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.

ಭೂಮಿ ವಿಚಾರಕ್ಕೆ ಮಾತ್ರವಲ್ಲ ಎಲ್ಲ ಕ್ಷೇತ್ರಗಳ ಬಗ್ಗೆಯೂ ಹೋರಾಟ ಮಾಡಬೇಕಾಗಿದೆ. ನಾನು ಗೇಣಿದಾರನ ಮಗ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ ನಮಗೆ ಗುಲಾಮಗಿರಿ ತಪ್ಪಿರಲಿಲ್ಲ. ಭೂಮಿ ಹಕ್ಕಿಗಾಗಿ 1950ರಿಂದಲೇ ಹೋರಾಟ ಆರಂಭವಾಯಿತು. 1962ರಲ್ಲಿ ಭೂ ಸುಧಾರಣೆ ಕಾನೂನು ಬಂದರೂ ಸಹ, 1979ರವರೆಗೂ ಅದು ಜಾರಿಗೆ ಬರಲಿಲ್ಲ. 1972ರಲ್ಲಿ ನಾನು ವಿಧಾನ ಸಭೆ ಸದಸ್ಯನಾಗಿ ಹೋದೆ. ಆಗ ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದರು. ಗೇಣಿದಾರರ ಸಮಸ್ಯೆ ಪರಿಹಾರಕ್ಕೆ ದೇವರಾಜ ಅರಸು ಮುಖ್ಯಮಂತ್ರಿ ಆಗಿ ಬರಬೇಕಾಯಿತು. ಇದರ ಬಗ್ಗೆ ಅರಸು ಮತ್ತು ದೇವೇಗೌಡರ ಬಳಿ ಮಾತನಾಡಿದೆ. ಕಾನೂನು ಜಾರಿಗೆ ಬಂದಿಲ್ಲವೆಂದರೆ ಜನರಿಗೆ ಮಾಡಿದ ಅನ್ಯಾಯವೆಂದು ಹೇಳಿದ್ದೆ’ ಎಂದು ಹಿಂದಿನ ಘಟನೆಯನ್ನು ನೆನಪು ಮಾಡಿಕೊಂಡರು.

ಅಂದು ದೇವರಾಜ ಅರಸು 15 ಜನರ ಸಮಿತಿ‌ಯೊಂದನ್ನು ರಚನೆ ಮಾಡಿದರು. ಅದರಲ್ಲಿ ನನ್ನನೂ ಸೇರಿಸಿದರು. ಸಮಿತಿ ನೀಡಿದ ವರದಿ ಆಧರಿಸಿ ಕಾನೂನು ಜಾರಿಯಾಗಿ ಅನೇಕರಿಗೆ ಭೂ ಒಡೆತನ ಸಿಕ್ಕಿತು. 1951ರಲ್ಲಿ ‌ಚಳವಳಿ ಆರಂಭವಾದರೂ ಸಂಪೂರ್ಣ ಜಾರಿಗೆ ಬರಲು 22 ವರ್ಷ ಕಾಯಬೇಕಾಯಿತು. ನನ್ನ ಜೀವನದ ಅತ್ಯಂತ ಸೌಭಾಗ್ಯದ ಕ್ಷಣವೆಂದರೆ ಭೂ ರಹಿತರಿಗೆ ಭೂಮಿ ಕೊಡಿಸಿದ್ದು. ಭೂಮಿ ಕಳೆದುಕೊಂಡ ಭೂ ಮಾಲೀಕರು ಇಂದಿಗೂ ಕೂಡ ಕಾಗೋಡು ಕಾಲು ಮುರೀಬೇಕು ಎಂದು ಕಾಯುತ್ತಿದ್ದಾರೆ. ಆದರೆ ಹೋರಾಟದಿಂದ ಫಲ ಕಂಡವರು ನೆನಪಿಟ್ಟುಕೊಂಡರೆ ಸಾಕು ಎಂದರು.

ಸಮಾಜವಾದಿ ನೆಲೆಯಾಗಿದ್ದ ಶಿವಮೊಗ್ಗ ಜಿಲ್ಲೆ ಈಗ ಕೋಮುವಾದದತ್ತ ಮುಖ ಮಾಡಿರುವುದು ಅತ್ಯಂತ ದುರಾದೃಷ್ಟಕರ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ನಾಗರಾಜ್ ನೇರಿಗೆ ಇದ್ದರು.

Donate Janashakthi Media

Leave a Reply

Your email address will not be published. Required fields are marked *