ಬಗರ್ ಹುಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ದೌರ್ಜನ್ಯ

ಮಾರ್ಚ್ 31ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ

ಗುಬ್ಬಿ : ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಗಂಗನಪಾಳ್ಯದ ಸುತ್ತಮುತ್ತಲಿನ ಗ್ರಾಮಗಳ ಬಗುರ್ ಹುಕುಂ ಸಾಗುವಳಿ ರೈತರ ಮೇಲೆ ಗುರುವಾರ (ಮಾರ್ಚ್ 30ರಂದು) ಅರಣ್ಯ ಇಲಾಖೆಯವರು ಗಂಭೀರವಾದ ದೌರ್ಜನ್ಯವನ್ನು ಎಸಿಗಿದ್ದಾರೆ. ಇದನ್ನು ಖಂಡಿಸಿ ಮಾರ್ಚ್ 31ರಂದು ರಾಜ್ಯಾದ್ಯಂತ ತಾಲ್ಲೂಕು ಕಛೇರಿಗಳ ಎದುರು ಕರ್ನಾಟಕ ಪ್ರಾಂತ ರೈತ ಸಂಘ ಕರೆ ನೀಡಿದೆ.

ವಾರದ ಹಿಂದೆ ಬಗರ್ ಹುಕುಂ ರೈತರ ಜೊತೆ ಆಗಿದ್ದ ತೀರ್ಮಾನವನ್ನು ಉಲ್ಲಂಘಿಸಿ, ಅರಣ್ಯ ಇಲಾಖೆಯ ನೂರಕ್ಕೂ ಹೆಚ್ಚು ಸಿಬ್ಬಂದಿ ಬಗರ್ ಹುಕುಂ ಸಾಗುವಳಿ ಭೂಮಿಯಲ್ಲಿ ಗುಂಡಿ ತೋಡುವುದಕ್ಕೆ ಮುಂದಾಗಿದ್ದಾರೆ. ಇದನ್ನು ವಿರೋಧಿಸಿ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬಗರ್ ಹುಕುಂ ಸಾಗುವಳಿದಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಮೂಲಕ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

ರೈತ ಹೋರಾಟಕ್ಕೆ ನೇತೃತ್ವ ಕೊಡುತ್ತಿದ್ದ ಗುಬ್ಬಿ ತಾಲ್ಲೂಕು ಕೆಪಿಆರ್ ಎಸ್ ಅಧ್ಯಕ್ಷ ದೊಡ್ಡನಂಜಯ್ಯ ರವರನ್ನು ಗುರಿಯಾಗಿಸಿ, ಅವರನ್ನು ಕಾಲಲ್ಲಿ ತುಳಿದು ಅಪಹರಿಸಿ ತಮ್ಮ ಜೀಪಿನಲ್ಲಿ ತೆಗೆದುಕೊಂಡು ಹೋದರು. ದೊಡ್ಡನಂಜಯ್ಯನವರಿಗೆ ಲಾಠಿ ಏಟಿನಿಂದ ತಲೆಗೆ ತೀವ್ರತರವಾದ ಪೆಟ್ಟು ಬಿದ್ದಿದ್ದು, ತಲೆಗೆ 31 ಹೊಲಿಗೆ ಹಾಕಲಾಗಿದೆ. ಇನ್ನು ಹತ್ತಾರು ಜನರನ್ನು ವಿಪರೀತವಾಗಿ ಹೊಡೆದಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳ ಲಾಠಿ ಪ್ರಹಾರದಲ್ಲಿ ನಾಲ್ಕು ರೈತರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ಮಹಿಳೆಯರು ಸೇರಿದಂತೆ ಹತ್ತಾರು ರೈತರಿಗೆ ಪೆಟ್ಟಾಗಿದೆ ಎಂದು ಸಾಗುವಳಿದಾರರು ಆರೋಪಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಲಾಠಿ ಚಾರ್ಜ್ ಮಾಡುವ ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿರುವ ರೈತರು, ರೈತರ ಜೊತೆ ಅಪಹರಿಸಿಕೊಂಡು ಹೋಗಿರುವ ತೀವ್ರ ಗಾಯಗೊಂಡ ದೊಡ್ಡ ನಂಜಯ್ಯ ಅವರನ್ನು ವಾಪಸ್ಸು ಕರೆತರಲು ಆಗ್ರಹಿಸಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.

ದೌರ್ಜನ್ಯಕ್ಕೆ ಕಾರಣರಾದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಬೇಕು. ಬಗುರ್ ಹುಕುಂ ಸಾಗುವಳಿ ರೈತರಿಗೆ ನ್ಯಾಯ ಸಿಗಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಒತ್ತಾಯಿಸಿದೆ. ಅರಣ್ಯ ಇಲಾಖೆಯವರ ದೌರ್ಜನ್ಯವನ್ನು ಖಂಡಿಸಿ ಶುಕ್ರವಾರ (ಮಾರ್ಚ್ 31) ಎಲ್ಲಾ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆಗಳನ್ನು ನಡೆಸಲು ಕರೆನೀಡಿದೆ. ಚುನಾವಣೆಯ ಸಂಹಿತೆ ಜಾರಿಯಲ್ಲಿದ್ದರೂ ಅನುಮತಿಗಳನ್ನು ಪಡೆದು ಪ್ರತಿಭಟನೆಗಳನ್ನು ಮಾಡಬೇಕೆಂದು ರಾಜ್ಯ ಸಮಿತಿ ವಿನಂತಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *