ಬಾಗಲಕೋಟೆ: ಮಗಳನ್ನು ಪ್ರೀತಿಸಿ ಮದುವೆಯಾದ ಎಂಬ ಸಿಟ್ಟಿನಿಂದ ಮಗಳನ್ನು ಮದುವೆಯಾದ ಯುವಕನನ್ನು ಯುವತಿಯ ತಂದೆ ಹಾಗೂ ಮೂವರು ಸೇರಿಕೊಂಡು ಶನಿವಾರ ತಡರಾತ್ರಿ ಜಮಖಂಡಿ ತಾಲ್ಲೂಕಿನ ಟಕ್ಕೋಡದಲ್ಲಿ ಕೊಲೆ ಮಾಡಿದ್ದಾರೆ. ಜೈನ ಸಮುದಾಯಕ್ಕೆ ಸೇರಿದ ಭುಜಬಲಿ ಕರ್ಜಗಿ (34) ಕೊಲೆಯಾದ ಯುವಕ.
ಕ್ಷತ್ರಿಯ ಸಮಾಜದ ತಮ್ಮನಗೌಡ ಪಾಟೀಲ ಪುತ್ರಿ ಭಾಗ್ಯಶ್ರೀ ಅನ್ನು ಭುಜಬಲಿ ಕರ್ಜಗಿ ಪ್ರೀತಿಸಿ ಕೆಲ ತಿಂಗಳ ಹಿಂದೆ ರಿಜಿಸ್ಟರ್ ಮದುವೆಯಾಗಿದ್ದರು. ಆದರೆ, ಅಂತರ್ಜಾತಿ ಆಗಿದ್ದರಿಂದ ತಮ್ಮ ಮದುವೆಗೆ ಮನೆಯ ಒಪ್ಪಿಗೆ ಸಿಗುವುದಿಲ್ಲ ಎಂದರಿತು ಕೊನೆಗೆ ರೆಜಿಸ್ಟಾರ್ ಮದುವೆಯಾಗಿ ಬಂದು ಊರಲ್ಲಿ ನೆಲೆಸಿದ್ದರು. ಆದರೆ ಮಗಳನ್ನು ಮದುವೆಯಾದ ಎಂಬ ಸಿಟ್ಟಿನಿಂದ ಯುವತಿ ತಂದೆ ತಮ್ಮನಗೌಡ ತನ್ನ ಅಳಿಯನನ್ನೇ ಕೊಲೆ ಮಾಡಿಸಿದ್ದಾನೆ. ಶನಿವಾರ ರಾತ್ರಿ ಹನುಮಾನ ದೇವರ ಪಲ್ಲಕ್ಕಿ ಉತ್ಸವ ಮುಗಿಸಿ ಸಹೋದರನ ಪುತ್ರ ಸುಮೇದ್ ನೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗಲು ಮುಂದಾದಾಗ ಖಾರದ ಪುಡಿ ಎರಚಲಾಗಿದೆ. ಆಗ ಸುಮೇದ್ ಓಡಿ ಹೋಗಿದ್ದು, ಭುಜಬಲಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಸಾವಳಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತಮ್ಮನಗೌಡ ಪಾಟೀಲ ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಇನ್‌ಸ್ಪೆಕ್ಟರ್ ಮನೋಹರ ಕಂಚಗಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಾಡಿನಲ್ಲಿ ಎಷ್ಟೇ ವೈಜ್ಞಾನಿಕ ಬೆಳವಣಿಗೆ ಆಗಿದ್ದರೂ ಸಾಮಾಜಿಕ ಪಿಡುಗು ಆಗಿರುವ ಜಾತಿ ಪದ್ದತಿ ಮತ್ತು ಅಂತರ್ಜಾತಿ ವಿವಾಹಕ್ಕೆ ಮನ್ನಣೆ ಸಿಗುತ್ತಿಲ್ಲ. ಪ್ರತಿ ವರ್ಷ ನಡೆಯುವ ನೂರಾರು ಮರ್ಯಾದಾ ಹತ್ಯೆಯ ಪ್ರಕರಣಕ್ಕೆ ಬಾಗಲಕೋಟೆಯ ಪ್ರಕರಣವೂ ಸೇರ್ಪಡೆಗೊಂಡಿದೆ. ಸಮಾಜವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಸರಕಾರ, ಪೊಲೀಸ್ ಇಲಾಖೆ ಮಹತ್ವದ ಪಾತ್ರವನ್ನು ವಹಿಸಬೇಕು ಎಂದು ಸಾರ್ವಜನಿಕ ಅಭಿಪ್ರಾಯಗಳು ಕೇಳಿ ಬರುತ್ತಿವೆ.