ಕುಂದಾಪುರ : ದುಡಿಯುವ ಮಕ್ಕಳ ಸ್ನೇಹಿ ಅಭಿಯಾನ “ಬದಲಾವಣೆಯ ಹರಿಕಾರರು ನಾವು, ನಮಗೆ ಜೊತೆಯಾಗಿ ನೀವು” ಎನ್ನುವುದಕ್ಕೆ ಉಡುಪಿ ಜಿಲ್ಲಾ ಸಭಾಂಗಣ ಸಾಕ್ಷಿಯಾಯಿತು. ಮಕ್ಕಳ ಪರಿಸ್ಥಿತಿಯಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಬದಲಾವಣೆಯಾಗಬೇಕು. ಕಾನೂನಿನ ಜೊತೆಗೆ ದುಡಿಯುವ ಮಕ್ಕಳ ನಿಜವಾದ ಪರಿಸ್ಥಿತಿ ಗಮನಿಸಿ ಅವರ ಜೀವನಮಟ್ಟ ಸುಧಾರಣೆಗೆ ಈ ವೇದಿಕೆ ತಳಹದಿಯಾಗಿದೆ.
ಭೀಮ ಸಂಘದ ಆನಂದ ಮಾತನಾಡಿ, “ಮಕ್ಕಳಿಗೆ ಸಮಸ್ಯೆಗಳಿವೆ, ಇಲಾಖೆಯವರು ಬಾಲಕಾರ್ಮಿಕ ಮಕ್ಕಳನ್ನು ಗುರುತಿಸಿ, ಮಕ್ಕಳ ಸಮಸ್ಯೆಗಳನ್ನು ಪರಿಹರಿಸಿ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಿ” ಎಂದರು. ಬಹುದ್ದೂರ್ ಭೀಮ ಸಂಘದ ಶ್ರುತಿ ಮಾತನಾಡಿ, “ನಮಗೆ ಮೂಲಭೂತ ಸೌಕರ್ಯ ಕೊಡಿ ನಮ್ಮನ್ನು ಶಿಕ್ಷಣದಿಂದ ವಂಚಿಸಬೇಡಿ” ಎಂದರು. ಜ್ಞಾನದೀಪ ಮಕ್ಕಳ ಸಂಘದ ಪ್ರತಿಮಾ “ಸುರಕ್ಷತೆಯ ಉದ್ಯೋಗದಾತರ ಮೇಲೆ ಅವರು ಕೊಟ್ಟಿರುವ ಕೆಲಸ ನೋಡದೆ ಕಾನೂನಿನ ಕ್ರಮ ಕೈಗೊಳ್ಳಬೇಡಿ ಹದಿನಾಲ್ಕು ವರ್ಷ ಮೇಲ್ಪಟ್ಟು ಮಕ್ಕಳು ಸುರಕ್ಷತಾ ಕೆಲಸ ಮಾಡಲು ನಮಗೆ ಕಾನೂನಿನಲ್ಲಿ ಅವಕಾಶಯಿದೆ ದುಡಿಯಲು ಅವಕಾಶ ಮಾಡಿಕೊಡಿ” ಎಂದರು. ಜನತಾ ಕಾಲೋನಿ ಮಕ್ಕಳ ಸಂಘದ ಮನೋಜ್ ಮತ್ತು ಮೂಡ್ಲಕಟ್ಟೆ ಮಕ್ಕಳ ಸಂಘದ ಸೌರವ್ ಮಾತನಾಡಿ, “ನಮ್ಮ ಮನೆಯ ಪರಿಸ್ಥಿತಿ ಕಷ್ಟದಲ್ಲಿದೆ ನಮ್ಮ ತಂದೆ ತಾಯಿಗೆ ಸರಿಯಾದ ಕೆಲಸ ಸಿಗುತ್ತಿಲ್ಲ ಆದರಿಂದ ನಾನು ದುಡಿಯುತ್ತ ಓದುತ್ತಿದ್ದೇನೆ ದುಡಿದ ಹಣವನ್ನು ಮನೆಗೆ ಆಹಾರ ಸಾಮಗ್ರಿ ತರಕಾರಿ ತರಲು ಮತ್ತು ಶಿಕ್ಶಣಕ್ಕೆ ಉಪಯೋಗಿಸುತ್ತೇನೆ ನಮಗೆ ಸಂಪೂರ್ಣವಾಗಿ ಶಿಕ್ಷಣಕ್ಕೆ ಸಹಕರಿಸಿ” ಎಂದರು.
ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, “ಅಧಿಕಾರಿ ಮತ್ತು ಸಂಸ್ಥೆಗಳಿಗೆ ಮಕ್ಕಳ ಬಗ್ಗೆ ಅರ್ಥವಾಗಬೇಕು. ಅಧಿಕಾರಿಗಳಿಗೆ ಮತ್ತು ಮಕ್ಕಳ ನಡುವೆ ಒಂದು ಬಾಂಧವ್ಯ ಬೆಳೆಯಲು ಹಾಗೂ ಮಕ್ಕಳಿಗೂ ಅರಿವು ಮೂಡಲು ಇಂತಹ ಕಾರ್ಯಕಮದ ಅಗತ್ಯವಿದೆ. ದುಡಿಯುವ ಮಕ್ಕಳು, ದುಡಿಯುತ್ತಾ ಶಿಕ್ಷಣ ಮುಂದುವರಿಯುತ್ತಿರುವ ಮಕ್ಕಳ ಬಗ್ಗೆ ನಾವು ತುಂಬಾ ಕಾಳಜಿವಹಿಸ ಬೇಕಾಗುತ್ತದೆ. ನಾನು ಮಕ್ಕಳ ಜೊತೆ ಪರಿಚಯ ಮಾಡಿಕೊಂಡಾಗ ಮಕ್ಕಳಿಗೆ ದುಡಿಮೆಯು ಮುಖ್ಯ, ಶಿಕ್ಷಣ ಕೂಡ ಮುಖ್ಯ ಮಕ್ಕಳಿಗೆ ಅವರದೇ ಆದ ಕನಸಿದೆ, ಅವರ ದುಡಿಮೆಯ ಬಗ್ಗೆ, ಓದಿನ ಬಗ್ಗೆ ಅರಿವಿದೆ ಅವರ ಜೀವನದ ಬಗ್ಗೆ ಸ್ಪಷ್ಟತೆಯಿದೆ ಎಂದರು.
ನಮ್ಮ ಭೂಮಿ ಸಿ.ಡಬ್ಲ್ಯೂ.ಸಿ ಸಂಸ್ಥೆ ಪ್ರಥಮ ಬಾರಿಗೆ ದುಡಿಯುವ ಮಕ್ಕಳ ಸಮೀಕ್ಷೆ ಮಾಡಿ ದುಡಿಯುವ ಮಕ್ಕಳು, ದುಡಿಯುತ್ತಾ ಶಿಕ್ಷಣ ಮುಂದುವರಿಸುವ ಮಕ್ಕಳನ್ನು ಗುರುತು ಹಾಕಿರುವುದರಿಂದ ಅವರಿಗೆ ಯಾವ ರೀತಿ ಸಹಕಾರ ಮಾಡಲು ಸಾಧ್ಯತೆಯನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತದೆ. ಉಡುಪಿಯಲ್ಲಿ ಇಲ್ಲಿಯವರೆಗೂ ಸಮೀಕ್ಷೆ ಮಾಡಿ, ದುಡಿಯುವ ಮಕ್ಕಳು ಶೂನ್ಯ ಅಂತ ಮಾಹಿತಿ ನೀಡುತ್ತಿದ್ದರು. ದುಡಿಯುವ ಮಕ್ಕಳ ಪರಿಸ್ಥಿತಿ ಸುಧಾರಿಸಲು ನಾವೆಲ್ಲರೂ ಸೇರಿ ಏನು ಮಾಡಬೇಕು ಅನ್ನುವುದು ಕಂಡುಕೊಳ್ಳಬೇಕು, ಮಕ್ಕಳು ಅನುಕೂಲವಾದ ವಾತಾವರಣದಲ್ಲಿ ಕೆಲಸ ಮಾಡಲು ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಬಾಲ್ಯವಿವಾಹ ಆಗದಂತೆ ಎಲ್ಲರೂ ಶ್ರಮವಹಿಸಬೇಕು ಎಂದರು.
ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಕುಂದಾಪುರ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ದುಡಿಯುವ ಮಕ್ಕಳ ದಿನವಾದ ಏಪ್ರಿಲ್ 30ರಂದು ದುಡಿಯುವ ಮಕ್ಕಳ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ದುಡಿಯುವ ಮಕ್ಕಳು ಭಾಗವಹಿಸಿದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶರ್ಮಿಳಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀರಾಮ್ ರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ರೀಮತಿ ವೀಣಾ, ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು, ಉದ್ಯೋಗದಾತರು, ಮಕ್ಕಳ ಮಿತ್ರರೆಲ್ಲರೂ ಸೇರಿ ನಾವು ದುಡಿಯುವ ಮಕ್ಕಳಿಗೆ “ಗೋಡೆಗಳಾಗುವುದಿಲ್ಲ, ದಾರಿಗಳಾಗುತ್ತೇವೆ” ಎಂದು ಮಕ್ಕಳ ಸಮಗ್ರ ಅಭಿವೃದ್ಧಿಗೆ ತಮ್ಮ ಬದ್ಧತೆ ತೋರಿದರು.