ಬೆಂಗಳೂರು : ಬೇಬಿ ಕೇರ್ ಸೆಂಟರ್‌ನಲ್ಲಿ ಮೂರು ವರ್ಷದ ಬಾಲಕ 2 ವರ್ಷದ ಬಾಲಕಿ ಮೇಲೆ ಮನಸೋ ಇಚ್ಛೆ ಹಲ್ಲೆನಡೆಸಿರುವ ದಾರುಣ ಘಟನೆ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಚಿಕ್ಕಲ್ಲಸಂದ್ರದಲ್ಲಿ ನಡೆದಿದೆ.
ಕೇರ್ ಸೆಂಟರ್‌ನ ಕೊಠಡಿಯಲ್ಲಿ ಇತರೆ ಮಕ್ಕಳ ಸಮ್ಮುಖದಲ್ಲಿಯೇ ಬಾಲಕ, ಬಾಲಕಿ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇರ್ ಸೆಂಟರ್ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬೆನ್ನಲ್ಲೇ ಕೇರ್ ಸೆಂಟರ್ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ವಿಡಿಯೋ ವೈರಲ್ ಬೆನ್ನಲ್ಲೇ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಜತೆಗೆ, ಕೇರ್ ಸೆಂಟರ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಹಲ್ಲೆಗೆ ಒಳಗಾದ ಬಾಲಕಿಯ ಪೋಷಕರ ಬಳಿಯೂ ಮಾಹಿತಿ ಪಡೆದಿದ್ದಾರೆ.
ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಬೇಬಿ ಸೆಂಟರ್ ತೆರೆಯಲು ಅವಕಾಶ ಇಲ್ಲ, ಆದರೆ ಕೆಲ ಖಾಸಗಿ ವ್ಯಕ್ತಿಗಳು ಬೇಬಿ ಕೇರ್, ಸೆಂಟರ್, ಸಿಟ್ಟಿಂಗ್ ಹೆಸರಲ್ಲಿ ಹಣ ವಸೂಲಿ ಮಾಡುತ್ತಿವೆ. ಇದು ಕಾನೂನಿಗೆ ವಿರುದ್ಧ, ಆದರೆ ಯಾರೂ ದೂರು ನೀಡಿದ ಕಾರಣ ಬೆಳಕಿಗೆ ಬರುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಈ ರೀತಿ ಘಟನೆ ನಡೆದಾಗ ಮಾತ್ರ ಚರ್ಚೆಗೆ ಬರುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸಾವಿರಾರು ಅನಧಿಕೃತ ಬೇಬಿ ಸೆಂಟರ್ಗಳಿವೆ, ಅವುಗಳನ್ನು ಪತ್ತೆ ಹಚ್ಚಬೇಕಾದ್ದು ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಕೆಲಸ, ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಅದು ಜಾರಿಯಾಗಿಲ್ಲ, ಅಧಿಕಾರಿಗಳು ಮತ್ತು ಆ ಸೆಂಟರ್‌ನ ಆಡಳಿತ ಮಂಡಳಿಜೊತೆ ಹಣಕಾಸಿನ ವ್ಯವಹಾರ ನಡೆಯುತ್ತಿದೆ. ಆ ಕಾರಣಕ್ಕಾಗಿ ಶಿಕ್ಷಣ ಇಲಾಖೆ ಬಾಯಿಗೆ ಬೀಗ ಹಾಕಿ ಕೊಂಡಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಆರೋಪಿಸಿದೆ.
ಇನ್ನಾದರೂ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಬೇಬಿ ಸೆಂಟರ್‌ಗಳನ್ನು ತೆರೆಯದಂತೆ ನೋಡಿಕೊಳ್ಲಬೇಕಿದೆ. ಈಗಾಗಲೇ ಆರಂಭಿಸುವ ಸೆಂಟರ್‌ಗಳನ್ನು ಮುಚ್ಚಿಸಿ ಅವರ ಮೇಲೆ ಕಾನೂನು ಕ್ರಮವನ್ನು ಜರುಗಿಸಲು ಮುಂದೆ ಬರಬೇಕಿದೆ.