ಹುಬ್ಬಳ್ಳಿ: ದಿನಕ್ಕೊಂದು ವಿವಾದ ಎಂಬಂತೆ ಒಂದಲ್ಲಾಒಂದು ಹೇಳಿಕೆ ನೀಡುವ ಮೂಲಕ ಕೋಮುದ್ವೇಷ ಹರಡುತ್ತಿರುವ ಬಲಪಂಥೀಯ ಸಂಘಟನೆಯಾದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕೆ ಇದೀಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿದೆ.
ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರು. ಈ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಮೋದ್ ಮುತಾಲಿಕ್, ಅದನ್ನು ಟಿಪ್ಪು ಪ್ರತಿಮೆಯನ್ನು ಸ್ಥಾಪನೆ ಮಾಡಿದರೆ, ಬಾಬ್ರಿ ಮಸೀದಿಯಂತೆ ಧ್ವಂಸ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈದ್ಗಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಪಾಲ್ಗೊಂಡು ಮಾತನಾಡಿದ ಪ್ರಮೋದ್ ಮುತಾಲಿಕ್, “ಟಿಪ್ಪು ಕರ್ನಾಟಕಕ್ಕೇ ಕಳಂಕ. ಮೈಸೂರು ಮಹಾರಾಜರಿಗೆ ಅವಮಾನ ಆಗುವಂತೆ ಅಲ್ಲಿಯೇ ಆಡಳಿತ ನಡೆಸಿದ್ದ. ಒಂದು ವೇಳೆ ಅವನ ಮೂರ್ತಿ ಪ್ರತಿಷ್ಠಾಪಿಸಿದ್ದೇ ಆದರೆ, ಅದನ್ನು ಒಡೆದು ಹಾಕುತ್ತೇ ವೆ. ಟಿಪ್ಪುವಿನ ಮೂರ್ತಿ ಪ್ರತಿಷ್ಠಾಪಿಸುವಂತಹ ಕೆಟ್ಟ ಕೆಲಸಕ್ಕೆ ಯಾರೂ ಕೈ ಹಾಕಬಾರದು. ಬದಲಾಗಿ ಸಂತ ಶಿಶುನಾಳ ಷರೀಫ್, ಅಬ್ದುಲ್ ಕಲಾಂ ಅಂತಹವರ ಮೂರ್ತಿ ಪ್ರತಿಷ್ಠಾಪಿಸಿ” ಎಂದಿದ್ದಾರೆ.
ಮುತಾಲಿಕ್ ಈ ಹೇಳಿಕೆ ಕೋಮುದ್ವೇಷದ ಹೇಳಿಕೆಯಾಗಿದೆ ಎಂದು ಜನಪರ ಸಂಘಟನೆಗಳ ಆರೋಪಿಸಿವೆ. ಶಾಂತವಾಗಿದ್ದ ಸಮಾಜಕ್ಕೆ ಕಲ್ಲೆಸೆಯುವ ಕೆಲಸ ಮಾಡುತ್ತಿದ್ದಾರೆ. ಇವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿವೆ.