ತುಮಕೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡ ಬಿಜೆಪಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸುರೇಶ್ ಗೌಡ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರಿಸಿಕೊಂಡವರು. ಇವರ
ರಾಜೀನಾಮೆಯಿಂದ ತುಮಕೂರು ಜಿಲ್ಲಾ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಇವರ ದಿಢೀರ್ ರಾಜೀನಾಮೆ ಸಾಕಷ್ಟು ಕುತೂಹಲದ ಜೊತೆಗೆ ಒಂದಷ್ಟು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.
ಸುರೇಶ್ ಗೌಡ ಅವರು ಕೆಲವು ವರ್ಷಗಳ ಹಿಂದೆ ಆರ್ಎಸ್ಎಸ್ ವಿರುದ್ಧ ಅಪಮಾನಕಾರ ಆಗುವಂಥ ಮಾತುಗಳನ್ನು ಆಡಿದ್ದರು. ಈ ಹಿಂದೆಯೇ ಕೆಲವು ಸಲ ವೈರಲ್ ಆಗಿದ್ದ ಆ ಮಾತುಗಳ ವಿಡಿಯೋ ಇತ್ತೀಚೆಗೆ ಮತ್ತೊಮ್ಮೆ ವೈರಲ್ ಆಗಿತ್ತು.
ತುಮಕೂರು ಬಿಜೆಪಿ ಜಿಲ್ಲಾ ಘಟಕಕ್ಕೆ ಎರಡನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಸುರೇಶ್ ಗೌಡ ಅವರು ಆಯ್ಕೆಯಾಗಿದ್ದರು. ಕಳೆದ ಒಂದೂವರೆ ವರ್ಷದ ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿದ್ದ ಅವರ ಅವಧಿ ಪೂರ್ಣಗೊಳ್ಳಲು ಇನ್ನೂ ಒಂದೂವರೆ ವರ್ಷ ಬಾಕಿ ಇದ್ದು, ಈ ನಡುವೆಯೇ ರಾಜೀನಾಮೆ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ರಾಜೀನಾಮೆಗೆ ಕಾರಣ ಮಾತ್ರ ನಿಗೂಢ : ಸುರೇಶ್ ಗೌಡ ರಾಜೀನಾಮೆ ಹಲವು ಅಚ್ಚರಿಗೆ ಕಾರಣವಾಗಿದ್ದು, ಈ ಕುರಿತು ಫೇಸ್ಬುಕ್ನಲ್ಲಿ ಮಾಹಿತಿ ನೀಡಿರುವ ಅವರು, ಪಕ್ಷದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನು ಇಂದು ರಾಜೀನಾಮೆ ನೀಡಿದ್ದು, ಜಿಲ್ಲೆಯ ಜನರು ತೋರಿಸಿದ ಪ್ರೀತಿ ಬೆಂಬಲಕ್ಕೆ ಅಭಾರಿಯಾಗಿದ್ದೇನೆ. ಆದರೆ ಜಿಲ್ಲಾ ಘಟಕದ ಅಧ್ಯಕ್ಷನಾದ ಮೇಲೆ ಪಕ್ಷದ ಕೆಲಸಗಳ ಕಾರಣ ನನ್ನ ಕ್ಷೇತ್ರದ ಜನರೊಂದಿಗೆ ಹೆಚ್ಚು ಸಮಯ ಕಳೆಯಲಾಗುತ್ತಿಲ್ಲ ಎಂಬ ಕೊರಗು ಸದಾ ನನ್ನನ್ನು ಕಾಡುತ್ತಿತ್ತು, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಲು ಹೆಚ್ಚು ಸಮಯವೇ ಸಿಗುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.
ಸದ್ಯ ಸುರೇಶ್ ಗೌಡ ಅವರ ಫೇಸ್ಬುಕ್ ಪೋಸ್ಟ್ ಗಮನಿಸಿದರೇ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಕ್ರೀಯವಾಗಲು ರಾಜೀನಾಮೆ ನೀಡಿದರಾ..? ಎಂಬ ಅನುಮಾನ ಮೂಡಿದೆ. ಆದೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಮಾತ್ರ ಸುರೇಶ್ ಗೌಡರ ರಾಜೀನಾಮೆಯಿಂದ ಹಲವರು ಅಚ್ಚರಿಗೊಂಡಿದ್ದಾರೆ.