ಮಹಾತ್ಮಾ ಅಯ್ಯನ್ ಕಾಳಿ: ಭಾರತದ ಮೊದಲ ಸಾಮಾಜಿಕ ಕ್ರಾಂತಿಕಾರಿ

(ಜನನ: ಅಗಸ್ಟ್ 28 । ಮರಣ: 1941 ರ ಜೂನ್ 8)

ಭಾರತದ ಸಾಮಾಜಿಕ ಚಳವಳಿಗಳ ಇತಿಹಾಸವನ್ನು ಗಮನಿಸಿದಾಗ, 19ನೇ ಶತಮಾನದ ಸಾಮಾಜಿಕ ಚಳವಳಿಗಳು ದೇಶದ ಜನರ ಸಾಮಾಜಿಕ ಮತ್ತು ಧಾರ್ಮಿಕ ಸ್ಥಿತಿಗತಿಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಪ್ರಯತ್ನಿಸಿದವು. ಆದರೆ, ಈ ಸಾಮಾಜಿಕ ಚಳುವಳಿಗಳಲ್ಲಿ ತೊಡಗಿಸಿಗೊಂಡ ಬಹುತೇಕರು ಶ್ರೀಮಂತ ಮೇಲ್ವರ್ಗಕ್ಕೆ ಸೇರಿದವರಾಗಿದ್ದು, ಸಮಾಜದಲ್ಲಿ ಬೇರೂರಿದ್ದ ಪಿಡುಗುಗಳನ್ನು ಆಂಶಿಕವಾಗಿ ಪರಿಹರಿಸುವುದಕ್ಕೆ ಪ್ರಾಮುಖ್ಯ ಕೊಟ್ಟರೇ ವಿನಃ ಮತೀಯ ಹೆಸರಿನಲ್ಲಿ ಶತಮಾನಗಳಿಂದ ನಿರಂತರ ತುಳಿತಕ್ಕೊಳಗಾದ ದಲಿತರ ವಿಮೋಚನೆಯ ಬಗ್ಗೆ ಅಷ್ಟೇನೂ ಪ್ರಖರವಾಗಿ ಯೋಚಿಸಿರಲಿಲ್ಲ. ಈ ರೀತಿಯ ನಿರ್ಲಕ್ಷ್ಯ ದಲಿತ ಸಮುದಾಯದೊಳಗೆ ಮೇಲ್ವರ್ಗದ ವಿರುದ್ಧ ಅಸಮಧಾನ ಹುಟ್ಟಲು ಕಾರಣವಾಯಿತು.

ಬ್ರಿಟಿಷ್ ಆಳ್ವಿಕೆಯ ಉತ್ಪನ್ನವಾದ ಆಧುನಿಕತೆಯು ದಲಿತರ ಮೇಲೆ ಯಾವುದೇ ರೀತಿಯ ಗಣನೀಯ ಪರಿಣಾಮ ಬೀರಲಿಲ್ಲ, ಬದಲಾಗಿ ಆಧುನಿಕತೆಯ ಫಲವನ್ನು ಮೇಲ್ವರ್ಗ ಮತ್ತು ಮಧ್ಯಮ ವರ್ಗದ ಜಾತಿಗಳು ಯಥೇಚ್ಛವಾಗಿ ಅನುಭವಿಸಿ ಸಾಮಾಜಿಕವಾಗಿ ಉನ್ನತ ಸ್ಥಾನಮಾನವನ್ನು ಪಡೆದಿದ್ದವು. ದಕ್ಷಿಣ ಭಾಗದ ರಾಜ್ಯಗಳಲ್ಲಿನ ದಲಿತರ ಪರಿಸ್ಥಿತಿ ಉಳಿದ ರಾಜ್ಯಗಳಿಂತ ಭಿನ್ನವಾಗಿರಲಿಲ್ಲ. ಕೇರಳದ ಆರ್ಥಿಕತೆಯಲ್ಲಿ ಪ್ರಮುಖವಾಗಿದ್ದ ಕೃಷಿಯ ಪ್ರಾಥಮಿಕ ಉತ್ಪಾದಕರು ದಲಿತರೇ ಆಗಿದ್ದರೂ ಅವರಿಗೆ ಭೂಮಿಯ ಮೇಲೆ ಯಾವುದೇ ಒಡೆತನವಿರಲಿಲ್ಲ, ಧಾರ್ಮಿಕ ಮತ್ತು ಸಾಂಸ್ಕೃತಿಕ ಯಜಮಾನಿಕತೆಯ ಕರಿನೆರಳಿನಲ್ಲಿ ದಲಿತ ಸಮುದಾಯದ ಬದುಕು ತೀರಾ ಕರಾಳವಾಗಿತ್ತು.

ಸಾಮಾಜಿಕ ಚಳವಳಿಗಳ ಹೆಸರಿ ನಲ್ಲಿ ಮೇಲ್ವರ್ಗವು ತಮ್ಮ ಸಮುದಾಯದ ಹಿತಾಸಕ್ತಿಗಳನ್ನು ಪೂರೈಸಿ ಕೊಂಡು, ಭೂಮಾಲಕತ್ವದ ಮೂಲಕ ಇತರ ನಿಮ್ನ ವರ್ಗಗಳ ಮೇಲೆ ನಿಯಂತ್ರಣ ಸ್ಥಾಪಿಸಲು ಆರಂಭಿಸಿದವು. ಯಾವುದೇ ಚಳವಳಿಗಳು ಅಥವಾ ಉದಾರವಾದಿ ಚಿಂತನೆಗಳು ದಲಿತರ ಪರವಾಗಿರಲಿಲ್ಲ. ಇಂತಹ ನಿಕೃಷ್ಟ ಬದುಕನ್ನು ನಡೆಸುತ್ತಿದ್ದ ದಲಿತರ ಕ್ರಾಂತಿಕಾರಿ ನಾಯಕನಾಗಿ ಹೊರಹೊಮ್ಮಿದವರು ಮಹಾತ್ಮ ಅಯ್ಯನ್ ಕಾಳಿ.

ಕೇರಳದ ಪುಲಯನ್ ಜಾತಿಗೆ ಸೇರಿದ ಅಯ್ಯನ್ ಮತ್ತು ಮಾಲಾ ದಂಪತಿಗೆ ಮಗನಾಗಿ ಹುಟ್ಟಿದ್ದು 1863ರ ಅಗಸ್ಟ್ 28 ರಂದು, ತಿರುವನಂತಪುರದಿಂದ 13 ಮೈಲು ದೂರದ ವೆಂಗನ್ನೂರು ವೆಂಬ ಪುಟ್ಟ ಹಳ್ಳಿಯಲ್ಲಿ. ಎಂಟು ಜನ ಮಕ್ಕಳಲ್ಲಿ ಹಿರಿಯವರಾದ ಅಯ್ಯನ್ ಕಾಳಿ ದೈಹಿಕವಾಗಿ ಬಲಾಢ್ಯರಾಗಿ, ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿದ್ದರು. ಇವರ ತಂದೆ ಅಯ್ಯನ್ ವೆಂಗನ್ನೂರು ಗ್ರಾಮದ ನಾಯರ್ ಜಾತಿಗೆ ಸೇರಿದ ಜಮಿನ್ದಾರನೊಬ್ಬನ ಮನೆಯಲ್ಲಿ ಜೀತ ಕಾರ್ಮಿಕನಾಗಿದ್ದರು. ಅಯ್ಯನ್‌ನ ಪ್ರಾಮಾಣಿಕ ಕೆಲಸಕ್ಕೆ ಮನಸೋತ ಜಮೀನ್ದಾರನು ಸುಮಾರು ಐದು ಎಕರೆಗಳಷ್ಟು ಫಲವತ್ತಾದ ಜಮೀನನನ್ನು ಇವರ ಕುಟುಂಬ ನಿರ್ವಹಣೆಗೋಸ್ಕರ ಬಿಟ್ಟುಕೊಟ್ಟಿದ್ದರು. ಇದರಿಂದಾಗಿ ಅಯ್ಯನ್ ಕುಟುಂಬವು ಇತರ ಪುಲಯ ಕುಟುಂಬಗಳಿಗಿಂತ ತಕ್ಕಮಟ್ಟಿನ ಉತ್ತಮ ಜೀವನವನ್ನು ನಡೆಸುತ್ತಿದ್ದರೂ, ಅಯ್ಯನ್ ಕಾಳಿ ಬೆಳೆದ ಪರಿಸರದಲ್ಲಿ ಜಾತಿ ತಾರತಮ್ಯ ಮತ್ತು ಶೋಷಣೆ ಎಗ್ಗಿಲ್ಲದೆ ನಡೆಯುತ್ತಿತ್ತು. ಅದರಲ್ಲೂ ಸಾಮಾಜಿಕವಾಗಿ ಉನ್ನತ ಸ್ಥರದಲ್ಲಿದ್ದ ನಾಯರ್ ಸಮುದಾಯವು ದಲಿತ ಹಾಗೂ ಇತರ ಶೂದ್ರ ವರ್ಗದವರನ್ನು ತನ್ನ ಊಳಿಗದವರನ್ನಾಗಿಸಿ ಅವರ ಮೇಲೆ ನಿರಂತರ ಶೋಷಣೆ ನಡೆಸುತ್ತಿದ್ದರು.

ಅಯ್ಯನ್ ಕಾಳಿಗೆ ತನ್ನ ಬಾಲ್ಯದಲ್ಲಿ ಓರಗೆಯ ಬಾಲಕರೊಂದಿಗೆ ಕಾಲ್ಚೆಂಡು ಆಟವಾಡುತ್ತಿದ್ದಾಗ ನಡೆದ ಆಕಸ್ಮಿಕ ಘಟನೆಯೊಂದು ಜಾತಿ ತಾರತಮ್ಯದ ಕ್ರೂರ ದಿಗ್ದರ್ಶನವನ್ನು ಪ್ರದರ್ಶಿಸಿತು. ಈ ಘಟನೆ ಅಯ್ಯನ್ ಕಾಳಿಯ ಸಾಮಾಜಿಕ ಬದುಕುಹೊಸ ತಿರುವು ಪಡೆಯಲು ಹಾಗೂ ಜಾತಿ ಹಾಗೂ ಬಣ್ಣದ ಹೆಸರಿನಲ್ಲಿ ನಿರಂತರ ಶೋಷಣೆ ನಡೆಸುತ್ತಿದ್ದ ನಾಯರ್ ಸಮುದಾಯಕ್ಕೆ ತಕ್ಕ ಶಾಸ್ತಿ ಮಾಡುವಂತೆ ಪ್ರೇರೇಪಿಸಿತು. ಈ ಪ್ರೇರಣೆಗೆ ತನ್ನದೇ ಸಮುದಾಯದ ಗೆಳೆಯರಿಂದಲೂ ಅಭೂತಪೂರ್ವ ನೈತಿಕ ಬೆಂಬಲ ದೊರೆತದ್ದು ಅಯ್ಯನ್ ಕಾಳಿಯ ಹೋರಾಟದ ಕಿಚ್ಚನ್ನು ಇಮ್ಮಡಿಗೊಳಿಸಿತು. ಸ್ಥಳೀಯವಾಗಿ ಸಂಘಟಿತರಾದ ಪುಲಯ ಯುವಕರ ಗುಂಪು ಸಾರ್ವಜನಿಕ ಸ್ಥಳಗಳಲ್ಲಿ ಸಭೆ ನಡೆಸಿ ಹಾಡು, ನಾಟಕಗಳ ಮೂಲಕ ಮೇಲ್ವರ್ಗದ ಮೇಲಿನ ಆಕ್ರೋಶವನ್ನು ಹೊರಗೆಡಹಿ ದಲಿತ ಸಮುದಾಯದಲ್ಲಿ ಶೋಷಣೆ ಕುರಿತಾದ ಜಾಗೃತಿ ಮೂಡಿಸಲಾರಂಭಿಸಿದರು. ಸಾಮಾಜಿಕ ಬದಲಾವಣೆ ಮತ್ತು ಸಮಾನತೆಯ ಆಶಯವನ್ನು ಹೊಂದಿದ ಯುವ ದಲಿತರ ಸಶಕ್ತ ತಂಡವೊಂದು ಮೂರ್ತ ಸ್ವರೂಪಕ್ಕೆ ಬರಲಾರಂಭಿಸಿದ್ದು ಬಹುತೇಕ ನಾಯರ್ ಜನರಿಗೆ ನುಂಗಲಾರದ ಬಿಸಿ ತುಪ್ಪದಂತಾಯಿತು. ಆದರೂ ಅಯ್ಯನ್ ಕಾಳಿ ದಿನದಿಂದ ದಿನಕ್ಕೆ ತನ್ನ ವರ್ಚಸ್ಸನ್ನು ವೃದ್ಧಿಸಿಕೊಂಡು ದಲಿತ ಕ್ರಾಂತಿಕಾರಿಯಾಗಿ ಹೊರಹೊಮ್ಮಿದರು. ಪುಲಯ ಸಮುದಾಯದ ಜನರು ಇವರನ್ನು ಅತೀ ಗೌರವದಿಂದ ಊರಪಿಳ್ಳೈಯೆಂದು ಕರೆಯಲಾರಂಭಿಸಿದರು.

ಅಯ್ಯನ್ ಕಾಳಿಯವರ ಹೋರಾಟದ ಸ್ವರೂಪವು ದೇಶದ ಇತರ ಭಾಗಗಳಲ್ಲಿ ಮೇಲ್ವರ್ಗದ ಜನರ ವಿರುದ್ಧ ಸಿಡಿದೆದ್ದ ದಲಿತರ ಹೋರಾಟದ ಸ್ವರೂಪಕ್ಕಿಂತ ಭಿನ್ನವಾಗಿತ್ತು. ತಿರುವನಂತಪುರದ ನಾಯರ್ ಸಮುದಾಯದ ವಿರುದ್ಧ ಕ್ರಾಂತಿಕಾರಿ ಧೋರಣೆಯನ್ನು ಹೊಂದಿದ್ದ ಅಯ್ಯನ್ ಕಾಳಿ, ತಮ್ಮದೇ ಆದ ಬಲಿಷ್ಠ ಯುವಕರ ತಂಡವೊಂದನ್ನು ವ್ಯವಸ್ಥಿತವಾಗಿ ರಚಿಸಿಕೊಂಡಿದ್ದರು. ಈ ತಂಡವನ್ನು “ಅಯ್ಯನ್ ಕಾಳಿ ಪಡೆ” ಎಂದು ಕರೆಯಲಾಗುತಿತ್ತು. ತಂಡದ ಸದಸ್ಯರಿಗೆ ಅನುಭವಿಗಳಿಂದ ಆಕ್ರಮಣ ಕಲೆ, ಕಳರಿ ಪಯಟ್ಟು ಮುಂತಾದ ದೈಹಿಕ ಕಸರತ್ತುಗಳ ತರಬೇತಿಯನ್ನು ನೀಡಿದರು. ಇವರ ಪ್ರಾರಂಭಿಕ ಹಂತದ ಬಹುತೇಕ ಹೋರಾಟಗಳು ಮೇಲ್ವರ್ಗದ ವಿರುದ್ಧದ ದಂಗೆ, ದೈಹಿಕ ಆಕ್ರಮಣ, ಹಲ್ಲೆಗಳ ರೂಪದಲ್ಲಿ ನಡೆದಿವೆ. ಪುಲಯ ಸಮುದಾಯದ ತೀವ್ರಗಾಮಿ ಧೋರಣೆಗೆ ಅಂದಿನ ಸಮಾಜದಲ್ಲಿ ದೃಢವಾಗಿ ಬೇರೂರಿದ್ದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳೇ ಪ್ರಮುಖ ಕಾರಣವಾಗಿತ್ತು. ಇಂತಹ ಸಂಕೀರ್ಣ ಸಾಮಾಜಿಕ ಪರಿಸ್ಥಿತಿಗೆ ಕ್ರಾಂತಿಕಾರಿಯಾಗಿ ಸ್ಪಂದಿಸುವ ನಾಯಕತ್ವ ಅನಿವಾರ್ಯ ವಾಗಿತ್ತೆಂಬುದಾಗಿ ಇತಿಹಾಸಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಯ್ಯನ್ ಕಾಳಿಯವರ ಕ್ರಾಂತಿಕಾರಿ ಹೋರಾಟಗಳಲ್ಲಿ ಪ್ರಮುಖವಾದವುಗಳು, ದಲಿತರ ನಾಗರಿಕ ಹಕ್ಕುಗಳ ಈಡೇರಿಕೆಗಾಗಿ 1893 ರಿಂದ 1898 ರವರೆಗೆ ನಡೆದ ಸಾಮಾಜಿಕ ದಂಗೆಗಳು. 20ನೇ ಶತಮಾನದ ಅಂತ್ಯದವರೆಗೆ ತಿರುವನಂತಪುರ ಸೇರಿದಂತೆ ಕೇರಳದ ಬಹುತೇಕ ನಗರಗಳ ಸಾರ್ವಜನಿಕ ರಸ್ತೆ ಹಾಗೂ ಮಾರುಕಟ್ಟೆಗಳಿಗೆ ದಲಿತರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಇದನ್ನು ಮೀರಿ ಪ್ರವೇಶಿಸಿದ ದಲಿತರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು. ಇದಕ್ಕೆ ವಿರುದ್ಧವಾಗಿ ಅಯ್ಯನ್ ಕಾಳಿ 1893 ರಲ್ಲಿ ವೆಂಗನ್ನೂರು ಗ್ರಾಮದ ನಿಷೇಧಿತ ಸಾರ್ವಜನಿಕ ರಸ್ತೆಯಲ್ಲಿ ತಾನೂ ಕೂಡ ನಾಯರ್ ಜನರಂತೆ ಧಿರಿಸನ್ನು ಧರಿಸಿ, ತಲೆಗೆ ಪೇಟ ಕಟ್ಟಿ ಎತ್ತಿನ ಬಂಡಿಯಲ್ಲಿ ಉದ್ದೇಶಪೂರ್ವಕವಾಗಿ ಜೊತೆಗಾರನೊಂದಿಗೆ ಪ್ರಯಾಣಿಸಿದರು. ಇದರಿಂದ ಕುಪಿತರಾದ ನಾಯರ್‌ಗಳು ಈತನ ಮೇಲೆ ಆಕ್ರಮಣಕ್ಕೆ ಮುಂದಾದಾಗ, ತನ್ನ ಕೈಯಲ್ಲಿದ್ದ ಆಯುಧದಿಂದ ಅವರನ್ನು ಹೊಡೆದು ಓಡಿಸಿದರು. ಈ ಸೋಲಿನ ಘಟನೆ ನಾಯರ್‌ಗಳಿಗೆ ಸಹಿಸಲ ಸಾಧ್ಯವಾದ ಆಘಾತ ನೀಡಿತು.

1898 ರಲ್ಲಿ ಅಯ್ಯನ್ ಕಾಳಿ ತನ್ನ ಸಂಗಡಿಗರೊಂದಿಗೆ ನಿಷೇಧಿತ ಬ್ರಹ್ಮಲಪುರಂ ಮಾರುಕಟ್ಟೆಗೆ ದಲಿತರ ಪಾದಯಾತ್ರೆಯನ್ನು ಹಮ್ಮಿಕೊಂಡರು. ಇದನ್ನರಿತ ಮೇಲ್ಜಾತಿಯವರು ಆಕ್ರಮಣಕ್ಕೆ ಮುಂದಾದಾಗ ಎರಡು ಗುಂಪುಗಳ ಮಧ್ಯೆ ತೀವ್ರ ಸ್ವರೂಪದ ಹೋರಾಟ ನಡೆದು ನಾಯರ್‌ಗಳನ್ನು ಹಿಮ್ಮೆಟ್ಟಿದ್ದರು. ಈ ಹೋರಾಟದ “ಕಂಪು” ಅಕ್ಕಪಕ್ಕದ ಹಳ್ಳಿಗಳಿಗೂ ಪಸರಿಸಿ ಅಲ್ಲಿನ ದಲಿತರೂ ನಾಯರ್ ಸಮುದಾಯದ ವಿರುದ್ಧ ದಂಗೆಯೆದ್ದರು. ಈ ಐತಿಹಾಸಿಕ ದಲಿತರ ಹೋರಾಟ “ಚೆಳಿಯಾರ್ ದಂಗೆ” ಎಂಬುದಾಗಿ ಇತಿಹಾಸದಲ್ಲಿ ಗುರುತಿಸಿಕೊಂಡಿದೆ.

ಅಯ್ಯನ್ ಕಾಳಿ ಕ್ರಾಂತಿಕಾರಿಯಾಗಿದ್ದರೂ, ಸಾಮಾಜಿಕ ಸೂಕ್ಷ್ಮತೆಯನ್ನು ಗ್ರಹಿಸುವ ಮತ್ತು ಪ್ರತಿಸ್ಪಂದಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಪರಿಣಾಮವಾಗಿ ಅಂದಿನ ಸಮಕಾಲೀನ ಸಮಾಜ ಸುಧಾರಕರ ಚಿಂತನೆಗಳ ನೆಲೆಗಟ್ಟಿನ ಮೇಲೆ ತನ್ನ ಹೋರಾಟದ ರೂಪುರೇಷೆಯನ್ನು ರಚಿಸಿ ಮುಂಚೂಣಿಗೆ ತರಲು ಪ್ರಯತ್ನಿಸಿದರು. ಜಾತಿ ದೌರ್ಜನ್ಯದಿಂದ ಬೇಸತ್ತ ದಲಿತರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವುದನ್ನು ತಡೆಯುತ್ತಿದ್ದ ಶ್ರೀ ಸದಾನಂದ ಸ್ವಾಮಿ ಮತ್ತು ಅವರ ಬ್ರಹ್ಮ ನಿಷ್ಠಮಂಟಪ, ಸಾಮಾಜಿಕ ಸ್ವಾತಂತ್ರ್ಯ ದ ಪರವಾಗಿ ಹೋರಾಟ ನಡೆಸುತ್ತಿದ್ದ ತಾಯಿಕಟ್ಟ್ ಅಯ್ಯವ್ ಮುಂತಾದ ಅನೇಕರು ಅಯ್ಯನ್ ಕಾಳಿಯವರ ಮೇಲೆ ಗಾಢ ಪ್ರಭಾವ ಬೀರಿದರು. ನಾರಾಯಣ ಗುರುಗಳು ಸಮಕಾಲೀನರಾಗಿದ್ದರೂ ಇವರಿಬ್ಬರ ಮಧ್ಯೆ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು. ಆದುದರಿಂದ ಅಯ್ಯನ್ ಕಾಳಿಯವರ ಒಟ್ಟು ಹೋರಾಟದಲ್ಲಿ ಧಾರ್ಮಿಕತೆಯ ಮೂಲಕ ಸ್ವಾತಂತ್ರ್ಯದ ಕಲ್ಪನೆಯನ್ನು ಮೂಡಿಸಿದ ನಾರಾಯಣ ಗುರುಗಳ ತತ್ವಗಳು ಅಷ್ಟಾಗಿ ಪ್ರಕಟಗೊಂಡಿಲ್ಲ ವೆನ್ನಬಹುದು.

ಸ್ವತಃ ಅನಕ್ಷರಸ್ಥರಾಗಿದ್ದ ಅಯ್ಯನ್ ಕಾಳಿಯವರಿಗೆ ದಲಿತರ ಶಿಕ್ಷಣದ ಬಗ್ಗೆ ಅತೀವ ಕಾಳಜಿಯಿತ್ತು. ಕೇರಳದಲ್ಲಿ ಬ್ರಿಟಿಷ್ ವಸಾಹತುಶಾಹಿಯಿಂದ ಪ್ರವರ್ಧಮಾನಕ್ಕೆ ಬಂದ ಅಧುನಿಕತೆಯ ಫಲವನ್ನು ಮೇಲ್ವರ್ಗದ ಮತ್ತು ಮಧ್ಯಮ ವರ್ಗದ ಕೆಲವರು ಮಾತ್ರ ಅನುಭವಿಸುತ್ತಿದ್ದುದರ ಬಗ್ಗೆ ವ್ಯಥೆಯಿತ್ತು. ಇಂತಹ ಅಸಮಾನ ಅನುಭವಿಸುವಿಕೆಗೆ ಶಿಕ್ಷಣವೊಂದೇ ಪರಿಹಾರವೆಂದು ಮನಗಂಡು, 1904 ರಲ್ಲಿ ದಲಿತರಿಗಾಗಿಯೇ ಪ್ರತ್ಯೇಕ ಪ್ರಾಥಮಿಕ ಶಾಲೆಯನ್ನು ವೆಂಗನ್ನೂರಿನ್ನಲ್ಲಿ ಪ್ರಾರಂಭಿಸಿದರು. ಇದರಿಂದ ಅಸಮಾಧಾನಗೊಂಡ ನಾಯರ್‌ಗಳು ತರಗತಿ ಪ್ರಾರಂಭವಾದ ಮೊದಲ ದಿನವೇ ಶಾಲೆಗೆ ಬೆಂಕಿ ಹಚ್ಚಿದರು. ಈ ಘಟನೆಯಿಂದ ಎಳ್ಳಷ್ಟು ವಿಚಲಿತರಾಗದ ಅಯ್ಯನ್ ಕಾಳಿಯವರು 1907 ರಲ್ಲಿ ದಲಿತ ಮತ್ತು ಇನ್ನಿತರ ದಮನಿತ ಜನರ ನ್ನೊಳಗೊಂಡ ಸಾಧು ಜನ ಪರಿಪಾಲನಾ ಸಂಘಂ ಎಂಬ ಸಂಘಟನೆಯನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಯ ಉದ್ದೇಶದಿಂದ ತಿರುವನಂತಪುರದಲ್ಲಿ ಆರಂಭಿಸಿದರು. ವ್ಯವಸ್ಥಿತ ಕಾರ್ಯಸೂಚಿ, ಸಾಮಾಜಿಕ ಬದ್ಧತೆ ಮತ್ತು ನಿಯಮಾ ವಳಿಯನ್ನು ಹೊಂದಿದ್ದ ಈ ಸಂಘಟನೆ ಕೆಲವೇ ವರ್ಷಗಳಲ್ಲಿ ತಿರುವನಂತಪುರದಾದ್ಯಂತ ತನ್ನ ಅನೇಕ ಶಾಖೆಗಳನ್ನು ಪ್ರಾರಂಭಿಸಿತು.

ಸಂಘಟನೆಯು ದಲಿತ ಮಕ್ಕಳಿಗೂ ಶಿಕ್ಷಣದ ಸಮಾನ ಅವಕಾಶ ನೀಡುವಂತೆ ಕೋರಿ ತಿರುವನಂತಪುರ ಸಂಸ್ಥಾನಕ್ಕೆ ಮಾಡಿದ ಮನವಿಯನ್ನು ಪುರಸ್ಕರಿಸಿ, ಅಂದಿನ ದಿವಾನರಾಗಿದ್ದ ಪಿ.ರಾಜ ಗೋಪಾಲಾಚಾರಿಯವರು 1907 ದಲಿತರಿಗೂ ಸರಕಾರದ ಶಾಲೆ ಗಳಲ್ಲಿ ಇತರ ವರ್ಗದ ವಿದ್ಯಾರ್ಥಿಗಳ ಜೊತೆ ಕಲಿಯಲು ಅವಕಾಶ ನೀಡುವಂತೆ ಆದೇಶ ಹೊರಡಿಸಿದರು. ಆದರೆ ಅಸಹಿಷ್ಣು ಮೇಲ್ವರ್ಗದ ಜನರ ಪಿತೂರಿಯಿಂದ ಈ ಆದೇಶ ಜಾರಿಗೆ ಬರಲಿಲ್ಲ. ಮುಂದೆ, 1910 ರಲ್ಲಿ ತಿರುವನಂತಪುರದ ಶಿಕ್ಷಣ ನಿರ್ದೇಶಕರಾಗಿದ್ದ ಬ್ರಿಟಿಷ್ ಅಧಿಕಾರಿ ಮಿಚೆಲ್ ವಿಶೇಷ ಆಸಕ್ತಿಯಿಂದ ಮತ್ತೊಂದು ಆದೇಶವನ್ನು ಹೊರಡಿಸಲಾಯಿತು. ಈ ಆದೇಶದಿಂದ ಪ್ರೇರೇಪಿತರಾದ ಅಯ್ಯನ್ ಕಾಳಿಯಯವರು ಪಂಚಮಿಯೆಂಬ ಪುಲಯ ಜಾತಿಗೆ ಸೇರಿದ ವಿದ್ಯಾರ್ಥಿನಿಯನ್ನು ಬಾಲರಾಮಪ್ಪುರಂ ಗ್ರಾಮದ ಶಾಲೆಯಲ್ಲಿ ಪ್ರವೇಶ ನೀಡುವಂತೆ ಶಾಲಾ ಮುಖಸ್ಥರಲ್ಲಿ ವಿನಂತಿಸಿದರು. ಆದರೆ ಇವರ ಬೇಡಿಕೆಗೆ ಬೆಲೆ ನೀಡದ ಶಾಲಾ ಮುಖಸ್ಥರ ಧೋರಣೆ ಮತ್ತೊಂದು ಗಲಭೆಗೆ ಕಾರಣವಾಯಿತು. ಈ ಗಲಭೆಯಲ್ಲಿ ಬಹಳಷ್ಟು ದಲಿತರ ಮನೆಗಳು ಬೆಂಕಿಗಾಹುತಿಯಾಗಿ, ದಲಿತ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ಹಲ್ಲೆ ನಡೆಯಿತು. ಈ ಗಲಭೆಯಲ್ಲಿ ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಈಳವ ಜಾತಿಯೂ ನಾಯರ್ ಜಾತಿಯವರ ಜೊತೆ ಕೈಜೋಡಿಸಿ ದಲಿತರ ಮೇಲೆ ಹಲ್ಲೆ ನಡೆಸಿದ್ದು ವಿಪರ್ಯಾಸವೇ ಸರಿ. ಅಯ್ಯನ್ ಕಾಳಿಯಯವರ ಬೆಂಬಲಕ್ಕೆ ನಿಂತ ಬ್ರಿಟಿಷ್ ಅಧಿಕಾರಿ ಮಿಚೆಲ್‌ರವರ ವಾಹನವನ್ನೂ ಸುಟ್ಟು ಹಾಕಲಾಯಿತು. ಈ ಗಲಭೆಯು ಹತ್ತಿರದ ಬಹುತೇಕ ಹಳ್ಳಿಗಳಿಗೆ ಪಸರಿಸಿ ಅಲ್ಲಿಯೂ ದಲಿತರು ದಂಗೆಯೇಳುವಂತಾಯಿತು. ದಲಿತರ ಶೈಕ್ಷಣಿಕ ಮತ್ತು ಮಾನವ ಹಕ್ಕುಗಳಿಗಾಗಿ ನಡೆದ ಈ ಹೋರಾಟವು “ಪುಲಯರ ದಂಗೆ” ಯೆಂಬುದಾಗಿ ಇತಿಹಾಸದ ಪುಟ ಸೇರಿತು. ಆದರೂ ಛಲ ಬಿಡದ ಮಿಚೆಲ್ ಮತ್ತು ಅಯ್ಯನ್ ಕಾಳಿಯ ಜೊತೆ ಸೇರಿ ಕೇವಲ ಎಂಟು ಪುಲಯ ಮಕ್ಕಳೊಂದಿಗೆ ಮತ್ತೊಂದು ಶಾಲೆಯನ್ನು ಪ್ರಾರಂಭಿಸಿದರು.

ಅನಿರೀಕ್ಷಿತ ಒತ್ತಡ ಮತ್ತು ಅನನುಕೂಲ ವಾತಾವರಣದ ಮಧ್ಯೆಯೂ ಹಲವಾರು ಪುಲಯ ಸಮುದಾಯದ ಮಕ್ಕಳು ಶಿಕ್ಷಿತರಾದರು, 1913 ರಲ್ಲಿ ಕೇವಲ 2 ಶೇಕಡದಷ್ಟಿದ್ದ ಸಾಕ್ಷರತೆಯ ಪ್ರಮಾಣ 1916ರಲ್ಲಿ 11 ಶೇಕಡಕ್ಕೇರಿತು. ಈ ಹೋರಾಟದಲ್ಲಿ ದಲಿತ ಕೃಷಿ ಕಾರ್ಮಿಕರು ಕೈಗೊಂಡ ಅಸಹಕಾರ ತಂತ್ರ, ಕಾರ್ಮಿಕ ಶಕ್ತಿಯು ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವುದಕ್ಕೆ ಕಾರಣವಾಯಿತು.

ಮಹಿಳೆಯರ ಪರವಾಗಿ ಅಯ್ಯನ್ ಕಾಳಿಯವರು ಕೈಗೊಂಡ ಹೋರಾಟಗಳು ಸಾಮಾಜಿಕ ಅಧ್ಯಯನದಲ್ಲಿ ಮರೆಯಲಾಗದ ಅಧ್ಯಾಯಗಳು. ಕೇರಳದಲ್ಲಿ ದಲಿತರು ಸೇರಿದಂತೆ ಬಹುತೇಕ ಶೂದ್ರ ಸಮುದಾಯದ ಮಹಿಳೆಯರು ತಮ್ಮ ಪೂರ್ತಿ ದೇಹವನ್ನು ಮುಚ್ಚುವಂತೆ ಉಡುಪು ಧರಿಸುವಂತಿರಲಿಲ್ಲ. ಇಂತಹ ಅಮಾನುಷ ಪದ್ಧತಿಯನ್ನು ವಿರೋಧಿಸಿ 1915 ರಲ್ಲಿ “ಪೆರಿನಾಡು ದಂಗೆ” ನಡೆದು ಸಮಸ್ಯೆ ಪರಿಹಾರವಾಯಿತು. ಈ ದಂಗೆಯ ಪರಿಣಾಮವಾಗಿ ಅಯ್ಯನ್ ಕಾಳಿಯವರನ್ನು ಪುಲಯ ಸಮುದಾಯದ ಪ್ರತಿನಿಧಿಯನ್ನಾಗಿ ತಿರುವನಂತಪುರ ಸಂಸ್ಥಾನದ ಶ್ರೀಮೂಲಂ ಪ್ರಜಾ ಸಭೆಗೆ ಸೇರಿಸಲಾಯಿತು. ಇದು ದಲಿತರ ರಾಜಕೀಯ ಪ್ರತಿನಿಧಿಕರಣ ಮತ್ತು ನೀತಿ ನಿರೂಪಣೆಯಲ್ಲಿ ದಲಿತರ ನೇರ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಿತು.
ಕೇರಳದ ಪುಲಯ ಸೇರಿದಂತೆ ಇನ್ನಿತರ ದಲಿತ ವರ್ಗಗಳ ವಿರುದ್ಧ ನಡೆಯುತ್ತಿದ್ದ ಅಮಾನುಷ ಕೃತ್ಯಗಳಿಗೆ ಕ್ರಾಂತಿಕಾರಿ ಹೋರಾಟದ ಮೂಲಕ ಸ್ಪಂದಿಸಿ, ದಲಿತರು ಶತಮಾನ ಗಳಿಂದ ಕಳೆದು ಕೊಂಡಿದ್ದ ಮಾನವ ಹಕ್ಕುಗಳನ್ನು ಮತ್ತು ನಾಗರಿಕ ಹಕ್ಕುಗಳಿಗಾಗಿ ಪಣತೊಟ್ಟು ಹೋರಾಡಿದ ನಿಜಾರ್ಥದ ಮಹಾತ್ಮ, ಕ್ರಾಂತಿಕಾರಿ ಅಯ್ಯಂಕಳಿ 1941 ರ ಜೂನ್ 8 ರಂದು ಹೋರಾಟದ ನಿಜಲೋಕ ತ್ಯಜಿಸಿದರು. ಇಂತಹ ಕ್ರಾಂತಿಕಾರಿಯ ಧೋರಣೆ, ಚಿಂತನೆ ಮತ್ತು ನಿಲುವುಗಳ ಕುರಿತು ಅಕಾಡಮಿಕ್ ವಲಯದಲ್ಲಿ ಗಂಭೀರ ಅಧ್ಯಯನ ನಡೆಯದಿರುವುದು ಒಂದು ಪ್ರಶ್ನೆಯಾಗಿದೆ.

ಬಾನುಗೊಂದಿ ಲಿಂಗರಾಜು

Donate Janashakthi Media

Leave a Reply

Your email address will not be published. Required fields are marked *