ಆಯುರ್ವೇದಿಕ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ, ಆರೋಪಿಗಳ ಬಂಧನ

ಬೆಂಗಳೂರು,ಫೆ.18: ಹಿರಿಯ ನಾಗರಿಕರನ್ನು ಮನವೊಲಿಸಿ ನಕಲಿ ಆಯುರ್ವೇದಿಕ್ ಔಷಧಿಗಳನ್ನು ಮಾರಾಟ ಮಾಡಿ ಲಕ್ಷಾಂತರ ಹಣ ಪಡೆದಿದ್ದ ಆರು ಮಂದಿಯನ್ನು ತಿಲಕ್‍ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಶವಂತಪುರದ ಸಂಜಿತ್ (30), ಮಂಜುನಾಥ್ (40), ಶಿವಲಿಂಗ (42), ರಮಾಕಾಂತ್ (37) ಮತ್ತು ಕಿಶನ್ (23) ಮತ್ತು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಕಲ್ಲೋಳಪ್ಪ ಗುರಪ್ಪ ಬಾಗಲಕೋಟೆ (63) ಬಂಧಿತ ಆರೋಪಿಗಳು. ಹಿರಿಯ ನಾಗರಿಕರ ವಯೋಸಹಜ ಕಾಯಿಲೆಗಳನ್ನು ಗುರಿಯಾಗಿಸಿಕೊಂಡು ಅವರನ್ನು ವಂಚಿಸುತ್ತಿದ್ದ ಜಾಲವೊಂದು ರವಿ ಎಂಬುವವರು ನೀಡಿರುವ ದೂರಿನ ಮೂಲಕ ಬಯಲಾಗಿದೆ.

ಆರೋಪಿಗಳು ತಂಡವೊಂದನ್ನು ಕಟ್ಟಿಕೊಂಡು ಹಿರಿಯ ನಾಗರಿಕರ ಕಾಯಿಲೆ ಗುಣಪಡಿಸುವುದಾಗಿ ನಂಬಿಸಿ ನಕಲಿ ಆಯುರ್ವೇದಿಕ್ ಔಷಧಿಗಳನ್ನು ಕೊಟ್ಟು ಹಣ ಪಡೆಯುತ್ತಿದ್ದರು. ಅದನ್ನು ನಂಬಿಸುವುದಕ್ಕಾಗಿ ಆಸ್ಪತ್ರೆಯನ್ನು ತೆರೆಯಲಾಗಿತ್ತು. ಇವರ ನಂಬಿಕೆಯನ್ನು ಹೆಚ್ಚಿಸುವುದಕ್ಕಾಗಿ ಔಷಧಿಗಳ ಸ್ಯಾಂಪಲ್, ಹಲವು ಚಿತ್ರಗಳನ್ನು ಅವರು ತೋರಿಸುತ್ತಿದ್ದರು. ಕಳೆದ ಸೆಪ್ಟೆಂಬರ್ 27 ರಂದು ರವಿ ವಿ.ಆರ್.ಅನುಕರ್ ಎಂಬುವವರು ಕಾಲು, ಸೊಂಟದ ನೋವು ತೋರಿಸಿಕೊಳ್ಳುವ ಸಲುವಾಗಿ ಜಯನಗರ 3ನೆ ಬ್ಲಾಕ್‍ನ ಆರ್ಥೊಪೆಡಿಕ್ ಸೆಂಟರ್‍ಗೆ ಹೋಗಿದ್ದಾಗ ಆಸ್ಪತ್ರೆ ಒಳಗೆ ನಿಂತಿದ್ದ ವ್ಯಕ್ತಿಯೊಬ್ಬ ತನ್ನ ಹೆಸರು ರಮೇಶ್ ಎಂದು ಪರಿಚಯಿಸಿಕೊಂಡಿದ್ದಾನೆ.

ತನ್ನ ಅಣ್ಣ ಸೀತಾರಾಮ್ ರಾಜಾಜಿನಗರದ ಧನ್ವಂತರಿ ಆಯುರ್ವೇದಿಕ್ ಸೆಂಟರ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ನಿಮ್ಮ ನೋವಿಗೆ ಔಷಧ ಕೊಡುತ್ತಾರೆ ಎಂದು ನಂಬಿಸಿ ಅವರನ್ನು ಧನ್ವಂತರಿ ಆಯುರ್ವೇದಿಕ್ ಸೆಂಟರ್‍ಗೆ ಕರೆದುಕೊಂಡು ಹೋಗಿದ್ದಾನೆ. ಆಸ್ಪತ್ರೆ ಬಳಿ ಇದ್ದ ಆರೋಪಿಗಳನ್ನು ತೋರಿಸಿ ಇವರೆಲ್ಲ ವೈದ್ಯರು ಮತ್ತು ಕೆಲಸದವರೆಂದು ರವಿ ಅವರನ್ನು ನಂಬಿಸಿ ನಿಮಗೆ ಇರುವ ಕಾಯಿಲೆಯನ್ನು ಗುಣಪಡಿಸುವುದಾಗಿ, ಅದಕ್ಕೆ 2,59,860ರೂ.ಆಗುತ್ತದೆ ಎಂದು ಹೇಳಿದ್ದಾನೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

 

ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲ ಎಂದು ರವಿ ಅವರು ತಿಳಿಸಿದಾಗ ನಿಮ್ಮ ಕಾಯಿಲೆ ಗುಣವಾಗದಿದ್ದರೆ ಹಣ ಹಿಂದಿರುಗಿಸುವುದಾಗಿ ನಂಬಿಸಿದ್ದರಿಂದ ಅವರ ಮಾತನ್ನು ನಂಬಿ ಚೆಕ್ ಮುಖಾಂತರ 2.50 ಲಕ್ಷ ಹಣವನ್ನು ಹಾಗೂ 9850ರೂ. ನಗದು ರೂಪದಲ್ಲಿ ಕೊಟ್ಟಿದ್ದಾರೆ. ನಂತರ ಇವರು ನೀಡಿದ ಔಷಧಿಯನ್ನು ರವಿ ಅವರು ತೆಗೆದುಕೊಂಡು ಹೋಗಿದ್ದಾರೆ.

ಆಯುರ್ವೇದಿಕ್ ಔಷಧಿ ಪಡೆದರೂ ಕಾಯಿಲೆ ಗುಣವಾಗದೆ ಇದ್ದಾಗ ಮತ್ತೆ ಕ್ಲಿನಿಕ್ ಬಳಿ ಬಂದು ನೋಡಿದ್ದಾರೆ. ಆ ಸಂದರ್ಭದಲ್ಲಿ ಕ್ಲಿನಿಕ್ ಬಾಗಿಲು ಮುಚ್ಚಿರುವುದನ್ನು ಗಮನಿಸಿ ಅಕ್ಕಪಕ್ಕ ವಿಚಾರಿಸಿದಾಗ, ಆರೋಪಿಗಳು ಹಿರಿಯ ನಾಗರಿಕರನ್ನು ಗುರುತಿಸಿ ನಕಲಿ ಔಷಧಿ ಕೊಟ್ಟು ಹಣ ಪಡೆದು ಮೋಸ ಮಾಡಿರುವುದು ಗೊತ್ತಾಗಿದೆ. ತಕ್ಷಣ ಈ ಬಗ್ಗೆ ತಿಲಕ್‍ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀನಾಥ್ ಎಂ.ಜೋಷಿ, ಮೈಕೋ ಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಸುಧೀರ್ ಎಂ.ಹೆಗಡೆ, ಇನ್ಸ್‍ಪೆಕ್ಟರ್ ಅನಿಲ್‍ಕುಮಾರ್ ಅವರನ್ನೊಳಗೊಂಡ ತಂಡ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿ 5 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಹಿರಿಯ ನಾಗರಿಕರಿಗೆ ನಕಲಿ ಔಷಧಿ ಕೊಟ್ಟು ನಂಬಿಸಿ ಹಣ ಪಡೆದು ವಂಚಿಸಿರುವುದನ್ನು ಒಪ್ಪಿಕೊಂಡಿದ್ದಾರೆ.

ಆರೋಪಿಗಳ ಪೈಕಿ ಕಲ್ಲೋಳಪ್ಪ ಗುರಪ್ಪ ಬಾಗಲಕೋಟೆ ಪೊಲೀಸರ ಬಂಧನದಲ್ಲಿದ್ದು, ಉಳಿದ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣ ಭೇದಿಸಿದ ತಂಡವನ್ನು ನಗರ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.

ಈ ರೀತಿ ಬೆಂಗಳೂರಿನಲ್ಲಿ ಆಯುರ್ವೇದದ ಹೆಸರಿನಲ್ಲಿಸಾಕಷ್ಟು ಜನ ಮೋಸ ಮಾಡುತ್ತಿದ್ದು, ಅವುಗಳ ಮೇಲೆ ಪೊಲೀಸ್ ಇಲಾಖೆ ನಿಗಾ ಇಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Donate Janashakthi Media

One thought on “ಆಯುರ್ವೇದಿಕ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ, ಆರೋಪಿಗಳ ಬಂಧನ

  1. ಇದೇ ರೀತಿ “ಸಂಜೀವಿನಿ ನೇತ್ರಾಲಯ” ಎಂಬ ಬೋಗಸ್ ಕಂಪನಿಯೂ ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿ ಮೋಸ ಮಾಡ್ತಿದ್ದಾರೆ.

Leave a Reply

Your email address will not be published. Required fields are marked *