ಲಕ್ನೋ: ರಾಮಮಂದಿರ ಟ್ರಸ್ಟ್ ವಿರುದ್ಧ ಈಗ ಗಂಭೀರ ಭೂಹಗರಣದ ಆರೋಪ ಎದುರಾಗಿದೆ. ಆಸ್ತಿ ಖರೀದಿಯ ಸಂದರ್ಭದಲ್ಲಿ ಟ್ರಸ್ಟ್ ಇಬ್ಬರು ಸದಸ್ಯರು 18.5 ಕೋಟಿ ರೂಪಾಯಿಗೆ ಭೂಮಿಯನ್ನು ಖರೀದಿಸಿದ್ದಾರೆ. ಆದರೆ, ಇದನ್ನು ಮುಂಚಿತವಾಗಿ ಅಂದರೆ, ಕೆಲವೇ ನಿಮಿಷಗಳ ಮುನ್ನ ಈ ಆಸ್ತಿಯನ್ನು ಇವರು 2 ಕೋಟಿ ರೂಪಾಯಿ ನೀಡಿ ಈ ಭೂಮಿಯನ್ನು ಖರೀದಿಸಿದ್ದರು. ಆ ನಂತರ ರಾಮಮಂದಿರ ಟ್ರಸ್ಟ್ ಈ ದೊಡ್ಡ ಮೊತ್ತವನ್ನು ನೀಡಿ ಖರೀದಿಸಿದೆ. ₹ 16.5 ಕೋಟಿಗಳಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿ ಕಂಡು ಬಂದಿದೆ.
ಉತ್ತರಪ್ರದೇಶದ ವಿರೋಧ ಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷ ಈ ಆರೋಪವನ್ನು ಬಯಲಿಗೆಳೆದಿದ್ದಾರೆ. 2021ರ ಮಾರ್ಚ್ ತಿಂಗಳನಲ್ಲಿ ರಾಮಮದಿರ ಟ್ರಸ್ಟ್ ಈ ಅವ್ಯವಹಾರವನ್ನು ಮಾಡಿದೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೇಸರಿ ಸ್ಪರ್ಶ?
ಪ್ರಧಾನಿ ನರೇಂದ್ರ ನೇತೃತ್ವದ ಕೇಂದ್ರ ಸರ್ಕಾರವು ರಾಮಮಂದಿರ ಟ್ರಸ್ಟ್ ಅನ್ನು 2020 ಫೆಬ್ರವರಿಯಲ್ಲಿ ರಚನೆ ಮಾಡಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಮಮಂದಿರ ನಿರ್ಮಾಣದ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಈ ಟ್ರಸ್ಟ್‌ನ ಮೂಲಕ ಮಾಡಲಾಗುತ್ತದೆ. ಇದರಲ್ಲಿ 15 ಮಂದಿ ಸದಸ್ಯರಿದ್ದು ಇದರಲ್ಲಿ 12 ಮಂದಿ ಸದಸ್ಯರನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
ಉತ್ತರ ಪ್ರದೇಶದ ಮಾಜಿ ಸಚಿವ ಪವನ್ ಪಾಂಡೆ ಅಯೋಧ್ಯೆಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಸ್ಥಳೀಯ ಬಿಜೆಪಿ ಮುಖಂಡರ ಹಾಗೂ ಟ್ರಸ್ಟ್‌ನ ಕೆಲ ಸದಸ್ಯರ ಸಹಕಾರದೊಂದಿಗೆ ಈ ಅವ್ಯವಹಾರ ನಡೆದಿದೆ ಎಂದು ಹೇಳಿದರು. ಇದಕ್ಕೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿ, ಈ ವ್ಯವಹಾರಕ್ಕೆ ಸಾಕ್ಷಿಗಳಾಗಿ ಅಯೋಧ್ಯೆಯ ಮೇಯರ್ ಮತ್ತು ಟ್ರಸ್ಟ್‌ನ ಸದಸ್ಯರೊಬ್ಬರು ಸಹಿ ಹಾಕಿದ್ದಾರೆ ಎಂದು ವಿವರಿಸಿದರು.
“ಈ ಜಾಗದ ಆಸ್ತಿಯ ವಿಚಾರವಾಗಿ ಈಗ ₹ 16.5 ಕೋಟಿಗಳಷ್ಟು ಅವ್ಯವಹಾರವಾಗಿದ್ದು, ಅದರ ಅರ್ಥವೇನು? ಅಂಥಾದ್ದು ಅಲ್ಲಿ ಏನಾಯಿತು? ಇದರರ್ಥ ಕೋಟಿಗಟ್ಟಲೆ ಹಣ ಲೂಟಿ ನಡೆದಿದೆ ಎಂಬುದು. ಇದನ್ನು ಸಿಬಿಐ ವಿಚಾರಣೆ ನಡೆಸಬೇಕಿದೆ” ಎಂದು ಪವನ್ ಪಾಂಡೆ ಗಂಭೀರ ಆರೋಪವನ್ನು ಮಾಡಿದ್ದಾರೆ.
ಇದನ್ನು ಓದಿ: ಕೋವಿಡ್ ಕೇಂದ್ರದಲ್ಲಿ ಹೋಮ: ಶಾಸಕ ರೇಣುಕಾಚಾರ್ಯ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಆದೇಶ
ರಾಮ ಮಂದಿರ ನಿರ್ಮಾಣಕ್ಕೆ ಯಾರೋ ಒಬ್ಬರೂ ಹಣ ಹೂಡುತ್ತಿಲ್ಲ ಬದಲಾಗಿ ಜನರು ಕೋಟಿಗಟ್ಟಲೇ ಹಣವನ್ನು ದಾನವಾಗಿ ನೀಡಿದ್ದಾರೆ. ಆದರೆ ಅವರು ನೀಡಿದ ಹಣಕ್ಕೆ ಇದಾ ನೀವು ನೀಡುತ್ತಿರುವ ಗೌರವ? ಇದು ದೇಶದ 120 ಕೋಟಿ ಜನರಿಗೆ ನೀವು ಮಾಡಿದ ಅವಮಾನ” ಎಂದು ಪವನ್ ಪಾಂಡೆ ಹೇಳಿದರು.
ಎಎಪಿ ಪಕ್ಷದ ನಾಯಕ ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್ ಕೂಡ ಪ್ರತ್ಯೇಕವಾದ ಪತ್ರಿಕಾಗೋಷ್ಠಿ ನಡೆಸಿದರು. ಇದೇ ಆರೋಪವನ್ನು ಮಾಡಿದ್ದಾರೆ. “ಶ್ರೀರಾಮ ದೇವರ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತದೆ ಎಂದು ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ. ಆದರೆ ಈ ದಾಖಲೆಗಳು ಕೋಟ್ಯಂತರ ರೂಪಾಯಿಯ ಅವ್ಯವಹಾರ ನಡೆದಿರುವುದನ್ನು ಸ್ಪಷ್ಟಪಡಿಸುತ್ತಿದೆ” ಎಂದಿದ್ದಾರೆ.
ಆದರೆ ಈ ಆರೋಪಗಳನ್ನು ಟ್ರಸ್ಟ್ ನೇರವಾಗಿ ನಿರಾಕರಿಸಿದೆ. “ಈ ರೀತಿಯ ಆರೋಪಗಳನ್ನು ಶತಮಾನಗಳಿಂದಲೂ ನಡೆಸಲಾಗುತ್ತಿದೆ. ಕೆಲವರು ನಮ್ಮನ್ನು ಮಹಾತ್ಮ ಗಾಂಧಿ ಹತ್ಯೆ ವಿಚಾರವಾಗಿಯೂ ಆರೋಪ ಮಾಡಿದ್ದಾರೆ. ಆದರೆ ನಾವು ಈ ಆರೋಪಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ನೀವು ಕೂಡ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ” ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಕಾರ್ಯದರ್ಶಿ ವಿಹೆಚ್‌ಪಿ ನಾಯಕ ಚಂಪತ್ ರಾಯ್ ಪ್ರತಿಕ್ರಿಯಿಸಿದ್ದಾರೆ.