ಸುಭಾಷಿಣಿ ಅಲಿ
ಸುಪ್ರೀಂ ಕೋರ್ಟಿನ ತೀರ್ಪಿನ ಪ್ರಕಾರ ಸ್ಥಾಪಿತವಾದ ಟ್ರಸ್ಟ್ ನ ನಿರ್ವಹಣೆಯನ್ನು ಮಾಡಲು ಸರಕಾರದಿಂದ ವಿಶೇಷವಾಗಿ ಆರಿಸಿದ ಮತ್ತು ರಾಮಮಂದಿರವನ್ನು ಕಟ್ಟುವ ಜವಾಬ್ದಾರಿ ಕೊಡಲಾದ ಟ್ರಸ್ಟಿಗಳು, ಮಂದಿರಕ್ಕಾಗಿ ಖರೀದಿಸುತ್ತಿರುವ ಜಮೀನಿನ ಬಗೆಗಿನ ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದಿರುವುದು ಮತ್ತು ಮಾರುಕಟ್ಟೆ ಬೆಲೆಗಿಂತ ಭಾರಿ ಹೆಚ್ಚಿನ ದರದಲ್ಲಿ ಖರೀದಿಸುವುದು ತೀರಾ ಅಸಾಧ್ಯ. ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಜನರಿಂದ ಸಂಗ್ರಹಿಸಿದ ಹಣವನ್ನು ನಾಚಿಕೆಗೇಡು ರೀತಿಯಲ್ಲಿ ದುರುಪಯೋಗ ಮಾಡಲು ಹಲವು ಹಂತಗಳಲ್ಲಿ ಹಲವು ಪ್ರಭಾವಶಾಲಿಗಳು ಶಾಮೀಲಾಗಿರದೆ ಇದು ಅಸಾಧ್ಯವಾದ ಸಂಗತಿ.
ಉತ್ತರ ಪ್ರದೇಶದ ಯೋಗಿ ರಾಜ್ಯದಲ್ಲಿ ಅನೇಕ ಅಸಾಮಾನ್ಯ ಸಂಗತಿಗಳು ನಡೆಯುತ್ತಿವೆ: ಪ್ರತಿಪಕ್ಷಗಳ ಅಭ್ಯರ್ಥಿಗಳು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದಂತೆ ತಡೆಯಲಾಗುತ್ತದೆ. ಹಳ್ಳಿಗಳಲ್ಲಿ ಕೊರೊನಾ ರೋಗಿಗಳಿಗೆ ಸರಿಯಾದ ವೈದ್ಯಕೀಯ ಸೌಲಭ್ಯದ ಕೊರತೆ ಇರುವ ಕಾರಣ ಬೇವಿನ ಮರದ ಕೆಳಗೆ ಕುಳಿತು ಆಮ್ಲಜನಕದ ಕೊರತೆ ನೀಗಿಸಲು ಹೇಳಲಾಗುತ್ತದೆ. ಅತ್ಯಂತ ಅಸಾಧಾರಣ ಸಂಗತಿ ಎಂದರೆ ರಾಮಮಂದಿರ ನಿರ್ಮಾಣದ ಹೊಣೆಯನ್ನು ವಹಿಸಿಕೊಂಡಿರುವ ಮತ್ತು ಇದಕ್ಕಾಗಿ ಸಾವಿರಾರು ಕೋಟಿ ಹಣವನ್ನು ಭಕ್ತರಿಂದ ಸಂಗ್ರಹಿಸಿರುವ ಟ್ರಸ್ಟಿನ ಸದಸ್ಯರು ಅಯೋಧ್ಯೆಯ ಭೂಖರೀದಿಗಳಲ್ಲಿ ಹಗರಣಗಳು ನಡೆದಿವೆ ಎಂಬುದು.
15 ನಿಮಿಷದಲ್ಲಿ ಭೂಮಿ ಬೆಲೆ 2 ಕೋಟಿ 18.5 ಕೋಟಿ!
ಜೂನ್ 13ರಂದು ಸಮಾಜವಾದಿ ಪಕ್ಷದ ಪವನ್ ಪಾಂಡೆ ಮತ್ತು ಆಪ್ ಪಕ್ಷದ ಸಂಜಯ್ ಸಿಂಗ್ ಅವರು ಪ್ರತ್ಯೇಕವಾದ ಪತ್ರಿಕಾಗೋಷ್ಠಿಗಳನ್ನು ನಡೆಸಿದರು. ಪತ್ರಿಕಾಗೋಷ್ಠಿಗಳಲ್ಲಿ ಅವರು ಅಯೋಧ್ಯೆಯಲ್ಲಿನ ಭೂಮಿಯನ್ನು ಎರಡು ಕೋಟಿಗೆ ಖರೀದಿ ಮಾಡಿದ 15 ನಿಮಿಷಗಳಲ್ಲಿ 18.5 ಕೋಟಿ ರೂಪಾಯಿಗೆ ರಾಮಜನ್ಮಭೂಮಿ ಟ್ರಸ್ಟ್ ಗೆ ಮಾರಾಟ ಮಾಡಿರುವ ದಾಖಲೆಗಳನ್ನು ತೋರಿಸಿದ್ದಾರೆ. ಸುಲ್ತಾನ್ ಅನ್ಸಾರಿ ಮತ್ತು ರವಿ ಮೋಹನ್ ತಿವಾರಿ ಮೊದಲು ಆ ಭೂಮಿಯನ್ನು ಹರೀಶ್ ಮತ್ತು ಕುಸುಮ್ ಪಾಠಕ್ ಎಂಬವರಿಂದ ಖರೀದಿ ಮಾಡಿ, ಮತ್ತೆ ಅದನ್ನು ರಾಮಜನ್ಮಭೂಮಿ ಟ್ರಸ್ಟ್ ಗೆ ಮಾರಾಟ ಮಾಡಿದರು. ಟ್ರಸ್ಟ್ ಗೆ ಮಾರಾಟ ಮಾಡುವಾಗ ಭೂಮಿಯ ಒಂದು ಚದರ ಅಡಿಗೆ 4,123 ರೂಪಾಯಿಯಂತೆ ಮಾರಾಟ ಮಾಡಲಾಯಿತು. ಆ ವಲಯದ ಅಧಿಕೃತ ದರ ಒಂದು ಚದರ ಅಡಿಗೆ 763 ರೂಪಾಯಿ ಮಾತ್ರ ಎಂದು ಗಮನಿಸಬೇಕು. ಅಯೋಧ್ಯೆಯ ಬಿಜೆಪಿ ಮೇಯರ್ ರಿಷಿಕೇಶ್ ಉಪಾಧ್ಯಾಯ್ ಮತ್ತು ರಾಮಜನ್ಮಭೂಮಿ ಟ್ರಸ್ಟ್ ನ ಟ್ರಸ್ಟಿಯಾಗಿರುವ ಅನಿಲ್ ಮಿಶ್ರ ಇವರಿಬ್ಬರು ಈ ಎರಡೂ ಒಪ್ಪಂದಗಳಿಗೆ ಸಾಕ್ಷಿಯಾಗಿದ್ದರು. ಮೋಹನ್ ತಿವಾರಿಯವರು ರಿಷಿಕೇಶ್ ಉಪಾಧ್ಯಾಯರ ನಿಕಟವರ್ತಿಗಳು.
ಟ್ರಸ್ಟ್ ನ ಕಾರ್ಯದರ್ಶಿಗಳಾದ ಚಂಪಕ ರಾಯ್ ಅವರು ಹಗರಣದ ಆರೋಪಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಿದರು. ಅನ್ಸಾರಿ ಮತ್ತು ತಿವಾರಿ ಅವರು 10 ವರ್ಷಗಳ ಹಿಂದೆ ಪಾಠಕ್ ಅವರೊಂದಿಗೆ ಮಾರಾಟ ಒಪ್ಪಂದ ಮಾಡಿಕೊಂಡಿದ್ದರು. ಇದರ ಮಧ್ಯೆ ಭೂಮಿಯ ಬೆಲೆ ಆಗಸಕ್ಕೆ ಏರಿದ್ದರಿಂದ ಅವರು ಇದರ ಲಾಭ ಪಡೆದರು ಅಷ್ಟೆ.
ಇದನ್ನು ಓದಿ: ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ವಿರುದ್ಧ ಭೂ ಅವ್ಯವಹಾರದ ಆರೋಪ
ಹರೀಶ್ ಮತ್ತು ಕುಸುಮ್ ಪಾಠಕ್ ಅವರ ‘ಸಾಕೆತ್ ಗೋಟ್’ ಕೃಷಿ-ಕಂಪನಿ ಒಂದು ಚಿಟ್ ಫಂಡ್‌ನಂತಹ ಯೋಜನೆಯನ್ನು ರೂಪಿಸಿದ್ದು, ಅದು ಮೇಕೆ ಅಥವಾ ಹಣದ ರೂಪದಲ್ಲಿನ ಹೂಡಿಕೆಗಳ ಮೇಲೆ ಭಾರಿ ಆದಾಯವನ್ನು ನೀಡುವುದಾಗಿ ಹೇಳಿ ಸಾವಿರಾರು ಜನರನ್ನು ವಂಚಿಸಿತ್ತು. ಉತ್ತರಪ್ರದೇಶದ ಫೈಜಾಬಾದ್, ಅಯೋಧ್ಯ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಇವರ ಮೇಲೆ ಕೇಸುಗಳನ್ನು ಹಾಕಲಾಗಿದೆ. ಕಳೆದ ವರ್ಷ ಜನವರಿ ತಿಂಗಳಲ್ಲಿ ಅವರ ಮಗನನ್ನು ಬಂಧಿಸಲಾಗಿದೆ ಕೂಡ.
ಹಲವು ಕೇಸುಗಳಲ್ಲಿ ಪೋಲಿಸರಿಗೆ ಬೇಕಾಗಿರುವ ಈ ಅಪರಾಧ-ಆರೋಪಿ ಪಾಠಕ್ ದಂಪತಿ, ಎಲ್ಲಿ ಹುಡುಕಿದರೂ ಸಿಗುತ್ತಿಲ್ಲ ಎಂದು ಉತ್ತರ ಪ್ರದೇಶದ ಪೊಲೀಸರು ಹೇಳುತ್ತಿದ್ದರು. ಆದರೆ ಅವರು ಅಯೋಧ್ಯೆಯ ಕೋರ್ಟಿನಲ್ಲಿ ನಿಯಮಿತವಾಗಿ ಹಾಜರಾಗಿ ಹಲವು ಆಸ್ತಿ ವ್ಯವಹಾರಗಳನ್ನು ಪೂರ್ತಿಗೊಳಿಸಿದ್ದಾರೆ ಎಂಬುದನ್ನು ನಂಬುವುದು ಕಷ್ಟ, ಅದರೆ ನಿಜ.
ಮಾರ್ಚ್ 18ರ ಪೂರ್ತಿ ದಿನ ಪಾಠಕ್ ದಂಪತಿ ಕೋರ್ಟಿನಲ್ಲಿದ್ದು ಒಟ್ಟು ಐದು ಖಾಲಿ ನಿವೇಶನಗಳನ್ನು ಮಾರಾಟ ಮಾಡಿದರು. ಮೂರು ಖಾಲಿ ನಿವೇಶನಗಳನ್ನು ಅನ್ಸಾರಿ ಮತ್ತು ತಿವಾರಿಗೆ ಎರಡು ಕೋಟಿ ರೂಪಾಯಿಗೆ ಮಾರಾಟ ಮಾಡಿ, ನಂತರ ಅವರು ಅದನ್ನು ಟ್ರಸ್ಟ್ ಗೆ 18.5 ಕೋಟಿ ರೂಪಾಯಿಗೆ ಮಾರಾಟ ಮಾಡಿದರು, ಇನ್ನುಳಿದ ಎರಡು ಖಾಲಿ ನಿವೇಶನಗಳ ಅಧಿಕೃತ ದರವು 4.97 ಕೋಟಿ ಇದ್ದು ಅವನ್ನು ಟ್ರಸ್ಟಗೆ ನೇರವಾಗಿ ಎಂಟು ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದರು.
ಈಗ ಪಾಠಕ್ ದಂಪತಿಗಳ ಈ ಐದು ಹಾಲಿ ನಿವೇಶನಗಳ ಖರೀದಿಯ ಬಗ್ಗೆಯೇ ಅನೇಕ ಪ್ರಶ್ನೆಗಳು ಉದ್ಭವವಾಗುತ್ತಿವೆ. ಅವರು 2017ರಲ್ಲಿ ಖರೀದಿ ಮಾಡಿದ ಜಾಗಗಳನ್ನು ನಾಲ್ಕು ಜನ ಅಣ್ಣ ತಮ್ಮಂದಿರಾದ ಜಾವೇದ್, ಫಿರೋಜ್, ಮೆಹಫೂಜ್ ಮತು ನೂರ್ ಅವರಿಂದ ಎರಡು ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದ್ದರು. ಈ ಜಾಗದ ಮಾರಾಟದ ಬಗ್ಗೆ ತಿವಾರಿ ಮತ್ತು ಅನ್ಸಾರಿ ಅವರೊಂದಿಗೆ ಹತ್ತು ವರ್ಷಗಳ ಹಿಂದೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ರಾಯ್ ಹೇಳಿಕೆ ಸುಳ್ಳು ಎಂದು ಸ್ಪಷ್ಟವಾಗುತ್ತದೆ. ಇದು ವಕ್ಫ್ ಜಾಗ ಆಗಿರುವುದರಿಂದ ಈ ಮಾರಾಟದಲ್ಲಿ ಮೋಸ ಆಗಿದೆ ಎಂದು ಆರೋಪಿಸಲಾಗಿದೆ. ವಕ್ಫ್ ಟ್ರಸ್ಟ್ ನ ವ್ಯವಸ್ಥಾಪಕರು (ಮುತಾವಲ್ಲಿ) ಈ ಮಾರಾಟವನ್ನು ಪ್ರಶ್ನಿಸಿದ್ದರಿಂದ, ಜಿಲ್ಲಾ ಆಡಳಿತ ಅದರ ಬಗೆಗಿನ ಕ್ರಮಗಳನ್ನು ತಡೆಹಿಡಿದಿದೆ. ಮೇ 2021 ರವರೆಗೆ ಮುತಾವಲ್ಲಿಯ ಪ್ರಕಾರ ಈ ಜಾಗದಲ್ಲಿ “ವಿವಾದಾತ್ಮಕ ಆಸ್ತಿ” ಎಂಬ ನೋಟಿಸನ್ನು ಹಾಕಲಾಗಿತ್ತು. ಆದರೆ ಈ ನೋಟಿಸನ್ನು ಪಾಠಕ್ ಅವರು ತೆಗೆದು ಹಾಕಿದ್ದಾರೆ.
ಭೂಖರೀದಿ ಹಗರಣಗಳ ಸರಮಾಲೆ
ಇದರ ಮಧ್ಯೆ ಈಗ ಮತ್ತೊಂದು ಪ್ರಶ್ನೆಗಳ ಸುಳಿಯಲ್ಲಿರುವ ಭೂವ್ಯವಹಾರ ಬೆಳಕಿಗೆ ಬಂದಿದೆ. ಅಯೋಧ್ಯೆಯ ಬಿಜೆಪಿ ಪಕ್ಷದ ಮೇಯರ್ ರಿಷಿಕೇಶ್ ಉಪಾಧ್ಯಾಯ ಅವರ ಸೋದರಳಿಯ ಮತ್ತು ಬಿಜೆಪಿ ಪಕ್ಷದ ಸಕ್ರಿಯ ಸದಸ್ಯರಾದ ದೀಪ್ ನಾರಾಯಣ್ ಅವರು, ಮಹಾಂತ್ ಮತ್ತು ದೇವೇಂದ್ರ ಪ್ರಸಾದಾಚಾರ್ಯ ಅವರಿಂದ 890 ಚದರ ಮೀಟರ್ ನಷ್ಟು ನಿವೇಶನವನ್ನು 20 ಲಕ್ಷ ರೂಪಾಯಿಗಳಿಗೆ ಫೆಬ್ರುವರಿ 20ರಂದು ಖರೀದಿ ಮಾಡಿದರು. ಈ ನಿವೇಶನವು ಪ್ರಸ್ತಾವಿತ ಹೊಸ ದೇವಸ್ಥಾನದ ಸ್ಥಳದ ಪಕ್ಕದಲ್ಲಿಯೇ ಇದೆ. ಇದೇ ನಿವೇಶನವನ್ನು ಮೇ 11ರಂದು ದೀಪ ನಾರಾಯಣ ಅವರು, ರಾಮ ಜನ್ಮಭೂಮಿ ಟ್ರಸ್ಟ್ ಗೆ 2.5 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದರು. ನಿವೇಶನದ ವಲಯ ಬೆಲೆಯು 35.6 ಲಕ್ಷ ರೂಪಾಯಿ ಇದೆ. ಈ ಮಾರಾಟದ ಪತ್ರಕ್ಕೆ ಸಹ ಅನಿಲ್ ಮಿಶ್ರ ಸಾಕ್ಷಿಯಾಗಿದ್ದರು. ಈ ದಾಖಲೆಗಳ ಬಗ್ಗೆ ವಿಚಾರಣೆ ನಡೆಸುವಾಗ ಮತ್ತೊಂದು ಮಾರಾಟ ಪತ್ರವು ಹೊರಬಂದಿತು. ಫೆಬ್ರವರಿ 20ರಂದು ದೀಪ ನಾರಾಯಣ ಅವರು ದೇವೇಂದ್ರ ಪ್ರಸಾದಾಚಾರ್ಯ ಅವರಿಂದ ಖರೀದಿ ಮಾಡಿದ ನಿವೇಶನವನ್ನು ರಾಮಜನ್ಮಭೂಮಿ ಟ್ರಸ್ಟ್ ಗೆ ಒಂದು ಕೋಟಿ ರೂಪಾಯಿಗೆ ಮಾರಾಟ ಮಾಡಿದರು. ಈ ನಿವೇಶನದ ವಲಯ ದರವು 4000 ರೂ. ಪ್ರತಿ ಚದರ ಮೀಟರ್ ಇದ್ದು, ಅದರ ಬೆಲೆ 27.08 ಲಕ್ಷ ಆಗುತ್ತದೆ. ಆದರೆ ಅದನ್ನು ಒಂದು ಕೋಟಿಗೆ ಮಾರಾಟ ಮಾಡಿದರು. ಮತ್ತೊಮ್ಮೆ ಇದಕ್ಕೆ ಅನಿಲ್ ಮಿಶ್ರ ಅವರೇ ಸಾಕ್ಷಿಯಾಗಿದ್ದರು.
ಇದನ್ನು ಓದಿ: ಅಯೋಧ್ಯೆಯಲ್ಲಿ ಪ್ರಭುತ್ವ, ರಾಜಕೀಯ ಮತ್ತು ಧರ್ಮದ ಕಲಸುಮೇಲೋಗರ
ದೇವೇಂದ್ರ ಪ್ರಸಾದ ಆಚಾರ್ಯರಿಂದ ಖರೀದಿ ಮಾಡಿ ಟಸ್ಟ್ ಗೆ ಮಾರಿದ ಜಮೀನು ವಾಸ್ತವವಾಗಿ ನಝಲ್ ಭೂಮಿ ಅಥವಾ ಸರಕಾರದಿಂದ ಗುತ್ತಿಗೆ ಪಡೆದ ಸರಕಾರಿ ಜಮೀನು ಆಗಿದ್ದರಿಂದ ಅದನ್ನು ಮಾರಾಟ ಮಾಡಲು ಬರುವುದಿಲ್ಲ. ಆದ್ದರಿಂದ ಮಾರಾಟಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳು ಉದ್ಭವಿಸಿವೆ. ಪ್ರಶ್ನೆಗಳ ಸುಳಿಯಲ್ಲಿರುವ ಈ ಜಮೀನು ಸರಕಾರದ್ದು ಎಂದು ಹೇಳುವ ದಾಖಲೆಗಳು ಸ್ಪಷ್ಟವಾಗಿವೆ. ಮಾರಾಟದ ಸಿಂಧುತ್ವದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದಾಗ, ಇದರ ಬಗ್ಗೆ ಯಾರಾದರೂ ದೂರು ದಾಖಲಿಸಿದರೆ ಮಾತ್ರ ನಾವು ಅದರ ಬಗ್ಗೆ ವಿಚಾರಣೆ ನಡೆಸಬಹುದು. ಆದರೆ ಇಲ್ಲಿಯವರೆಗೆ ಯಾರು ಈ ಸಂಬಂಧಿತ ಯಾರೂ ದೂರು ನೀಡಿಲ್ಲ ಎಂದು ಹೇಳಿದರು.
ಸುಪ್ರೀಂ ಕೋರ್ಟಿನ ತೀರ್ಪಿನ ಪ್ರಕಾರ ಸ್ಥಾಪಿತವಾದ ಟ್ರಸ್ಟ್ ನ ನಿರ್ವಹಣೆಯನ್ನು ಮಾಡಲು ಸರಕಾರದಿಂದ ವಿಶೇಷವಾಗಿ ಆರಿಸಿದ ಮತ್ತು ರಾಮಮಂದಿರವನ್ನು ಕಟ್ಟುವ ಜವಾಬ್ದಾರಿ ಕೊಡಲಾದ ಟ್ರಸ್ಟಿಗಳು, ಮಂದಿರಕ್ಕಾಗಿ ಖರೀದಿಸುತ್ತಿರುವ ಜಮೀನಿನ ಬಗೆಗಿನ ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದಿರುವುದು ಮತ್ತು ಮಾರುಕಟ್ಟೆ ಬೆಲೆಗಿಂತ ಭಾರಿ ಹೆಚ್ಚಿನ ದರದಲ್ಲಿ ಖರೀದಿಸುವುದು ತೀರಾ ಅಸಾಧ್ಯ. ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಜನರಿಂದ ಸಂಗ್ರಹಿಸಿದ ಹಣವನ್ನು ನಾಚಿಕೆಗೇಡು ರೀತಿಯಲ್ಲಿ ದುರುಪಯೋಗ ಮಾಡಲು ಹಲವು ಹಂತಗಳಲ್ಲಿ ಹಲವು ಪ್ರಭಾವಶಾಲಿಗಳು ಶಾಮೀಲಾಗಿರದೆ ಇದು ಅಸಾಧ್ಯವಾದ ಸಂಗತಿ.
ಹಗರಣಕೋರರಿಗೆ ರಕ್ಷಣೆ, ಹಗರಣ ಬಯಲು ಮಾಡಿದವರ ಮೇಲೆ ಕೇಸು
ರಾಮಜನ್ಮಭೂಮಿ ಟ್ರಸ್ಟ್ ವತಿಯಿಂದ ಮಾಡಲ್ಪಟ್ಟ ಅನೇಕ ವಿವಾದಿತ ಜಮೀನುಗಳ ಒಪ್ಪಂದದ ಬಗೆಗಿನ ಅನೇಕ ಅನುಮಾನಗಳು ಸಾರ್ವಜನಿಕವಾಗಿ ಬಯಲಾಗಿ ಬಹಳ ಸಮಯವಾಗಿದೆ. ಟ್ರಸ್ಟಿನ ಸ್ಥಾಪನೆ ಮತ್ತು ಕಾರ್ಯಗಳಲ್ಲಿ ಆಳವಾಗಿ ತೊಡಗಿಕೊಂಡಿರುವ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಈ ಹಗರಣಗಳ ಕುರಿತು ಚಕಾರವೆತ್ತಿಲ್ಲ. ಮಾತ್ರವಲ್ಲ, ಈ ಎಲ್ಲಾ ದುಷ್ಕೃತ್ಯಗಳ ಮಾಡಿರುವ ಟ್ರಸ್ಟ್ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೆ ಇಲ್ಲಿ ಮುಖ್ಯ ಆಪಾದಿತನಾಗಿರುವ ಚಂಪತ್ ರಾಯ್ ಮತ್ತು ಅವರ ಸಹೋದರರ ವಿರುದ್ಧ ಅವರದೇ ಜಿಲ್ಲೆಯಾದ ಬಿಜ್ನೋರ್ ನಲ್ಲಿ ಭೂಗಳ್ಳತನದ ದುಷ್ಕೃತ್ಯಗಳನ್ನು ಬಯಲು ಮಾಡಿದ ಹಿರಿಯ ಪತ್ರಕರ್ತ ನ ಮೇಲೆ ಸರಕಾರ ಮಿಂಚಿನ ವೇಗದಿಂದ ವರ್ತಿಸಿದೆ.
ಇತ್ತೀಚಿನ ಫೇಸ್‌ಬುಕ್ ನ ಒಂದು ಪೋಸ್ಟಲ್ಲಿ ಹಿರಿಯ ತನಿಖಾ ಪತ್ರಕರ್ತ ವಿನೀತ ನರೇನ್ ಅವರು, ಚಂಪತ್ ರಾಯ್ ತನ್ನ ಸಹೋದರರಿಗೆ, ಅನಿವಾಸಿ ಭಾರತೀಯರಾದ ಅಲ್ಕಾ ಲಾಹೋಟಿ ಒಡೆತನದ ಗೋಶಾಲೆಯ ಸಾವಿರ ಚದರ ಮೀಟರ್ ಭೂಮಿಯನ್ನು ಕಸಿದುಕೊಳ್ಳಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಕಾ ಅವರು ಸಹ ಬಿಜೆಪಿಯ ಬಹುದೊಡ್ಡ ಬೆಂಬಲಿಗರು. ಅತಿಕ್ರಮಣ ಮಾಡಿದ ಜಾಗವನ್ನು ಖಾಲಿ ಮಾಡಿಸಲು ಲಹೋಟಿ ಯವರು 2018 ರಿಂದ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರಲ್ಲಿ ಸಹಾಯಕ್ಕಾಗಿ ಮನವಿ ಕೂಡ ಮಾಡಿದ್ದಾರೆ.
ಇದನ್ನು ಓದಿ: 1991ರ ಪೂಜಾಸ್ಥಳಗಳ ಕಾಯ್ದೆ ಹಾಗೆಯೇ ಉಳಿಯಬೇಕು- ಸಿಪಿಐ(ಎಂ) ಪೊಲಿಟ್ ಬ್ಯುರೊ
ಆರೋಪದ ಬಗ್ಗೆ ತಿಳಿದ ತಕ್ಷಣ ಚಂಪತ್ ರಾಯ್ ಅವರ ಸಹೋದರರಲ್ಲಿ ಒಬ್ಬರಾದ ಸಂಜಯ ಬನ್ಸಲ್ ಅವರು ವಿನೀತ್ ನರೇನ್, ಲಾಹೋಟಿ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಪೊಲೀಸರಲ್ಲಿ ಕೇಸು ದಾಖಲಿಸಿದರು. ದೂರು ನೀಡಿದ ಅರ್ಧ ದಿನದಲ್ಲಿ ಪೊಲೀಸರು ಈ ಮೂವರ ಮೇಲೆ ಒಟ್ಟು 18 ಆರೋಪಗಳ ಪಟ್ಟಿ ಮಾಡಿ “ಧರ್ಮದ ಹೆಸರಲ್ಲಿ ದ್ವೇಷವನ್ನು ಹೆಚ್ಚಿಸುತ್ತಿದ್ದಾರೆ” ಎಂದು ಹೇಳಿ ಎಫ್.ಐ.ಆರ್ ದಾಖಲಿಸಿದ್ದಾರೆ. ಬಿಜೆಪಿ ಬೆಂಬಲಿಗರಿಗೆ ದುಷ್ಕೃತ್ಯ ಮಾಡಲು ಯಾವುದೇ ಹೆದರಿಕೆಯಿಲ್ಲ. ಸರಕಾರ ಯಾವುದೇ ಸಂದರ್ಭದಲ್ಲಿ ತಮ್ಮ ಬೆನ್ನಿಗಿದೆ ಎಂಬ ಸಂಪೂರ್ಣ ಭರವಸೆ ಅವರಿಗೆ ಇದೆ. ಆದರೆ ಸರಕಾರದ ಟೀಕಾಕಾರರು ವಿರೋಧಿಗಳ ವಿರುದ್ಧ ತಕ್ಷಣದ ಪ್ರತೀಕಾರ ಕೈಗೊಳ್ಳಲಾಗುತ್ತದೆ. ಇದು ಬಿಜೆಪಿ ಸರಕಾರ ಸಾಮಾನ್ಯವಾಗಿ ಮಾಡುವ ಕೆಲಸದ ವಿಧಾನ.
ಟ್ರಸ್ಟ್ ನಲ್ಲೇ ಅನುಮಾನಗಳು
ಅಯೋಧ್ಯೆಯಿಂದ ಹೊಡೆಯುತ್ತಿರುವ ಭೂಹಗರಣಗಳ ಭ್ರಷ್ಟಾಚಾರದ ಘಾಟಿನಿಂದಾಗಿ ಅನೇಕರು ಟ್ರಸ್ಟ್ ನ ಕಾರ್ಯವಿಧಾನದ ವಿರುದ್ಧ ಮಾತಾಡಲು ಶುರು ಮಾಡಿದ್ದಾರೆ. ಪತ್ರಿಕೆಗಳಲ್ಲಿ ಬಂದ ವರದಿಗಳ ಪ್ರಕಾರ ಟ್ರಸ್ಟ್ ನ ಅಧ್ಯಕ್ಷರಾದ ಮಹಾಂತ್ ನೃತ್ಯ ಗೋಪಾಲ ದಾಸ್ ಅವರ ಪ್ರತಿನಿಧಿ ಮಹಾಂತ ಕಮಲ ನಯನ ದಾಸ್ ಅವರು, ಕಳೆದ ಒಂದು ವರ್ಷದಿಂದ ಟ್ರಸ್ಟ್ ನ ಎಲ್ಲಾ ಚಟುವಟಿಕೆಗಳ ಬಗ್ಗೆ ಟ್ರಸ್ ನ ಅಧ್ಯಕ್ಷರನ್ನು ಕತ್ತಲಲ್ಲಿ ಇಟ್ಟಿದ್ದಾರೆ. ಲಿಖಿತವಾಗಿ ಅಥವಾ ಮೌಖಿಕವಾಗಿ ಅವರಿಗೆ ಯಾವುದೇ ವರದಿಗಳನ್ನು ನೀಡಿಲ್ಲ, ಎಂದು ಹೇಳಿದ್ದಾರೆ. ವ್ಯವಹಾರಗಳ ಬಗ್ಗೆ ಮಾಹಿತಿ ಪಡೆಯಲು ಚಂಪತ ರಾಯ್ ಅವರನ್ನು ಕರೆ ಮಾಡಿದಾಗ ಅವರು ತಮ್ಮ ಯಾವುದೇ ಕರೆಗಳಿಗೆ ಉತ್ತರಿಸಿಲ್ಲ ಎಂದು ಹೇಳಿದ್ದಾರೆ. ಟ್ರಸ್ಟ್ ನ ಇನ್ನಿಬ್ಬರು ಸದಸ್ಯರಾದ ನಿರ್ಮೋಹಿ ಅಖಾಡದ ದಿನೇಂದ್ರ ದಾಸ್ ಮತ್ತು ಕಾಮೇಶ್ವರ್ ಚೌಪಾಲ್ ಕೂಡ ಟ್ರಸ್ಟ್ ಗೆ ಖರೀದಿಸಲಾದ ಜಮೀನಿನ ವ್ಯವಹಾರದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಮಹಾಂತ ಧರಂದಾಸ್, ಮಹಾಂತ ಸುರೇಶ್ ದಾಸ್ ಮತ್ತು ಮಹಾಂತ ಸೀತಾರಾಮ್ ದಾಸ ರಂತಹ ಅಯೋಧ್ಯೆಯ ಅನೇಕ ಮಹಾಂತರು ಸೇರಿ ಅಯೋಧ್ಯೆಯಲ್ಲಿ ಒಂದು ಪತ್ರಿಕಾಗೋಷ್ಠಿ ನಡೆಸಿದರು. ಟ್ರಸ್ಟ್ ನ ವಿರುದ್ಧದ ವಂಚನೆಯ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಇವರೆಲ್ಲ ರಾಮಜನ್ಮಭೂಮಿ ಭೂವಿವಾದದ ಪ್ರಕರಣದಲ್ಲಿ ಭಾಗಿಯಾಗಿದ್ದವರು ಎಂದು ಗಮನಿಸಬೇಕು.
ಟ್ರಸ್ಟ್ ನ ಈ ಭೂಹಗರಣಗಳ ವರದಿಗಳು ಪತ್ರಿಕೆಯ ಮುಖಪುಟ ಅಥವಾ ಸುದ್ದಿವಾಹಿನಿಯ ಅಗ್ರ ಚರ್ಚೆಗಳಲ್ಲಿ ಬರದಂತೆ, ಉತ್ತರ ಪ್ರದೇಶದ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳ ‘ಮಾಧ್ಯಮ ನಿರ್ವಹಣೆ’ಯು ಖಚಿತಪಡಿಸಿದೆ. ಮಾಧ್ಯಮಗಳು ಟ್ರಸ್ಟ್ ನ ಭೂಹಗರಣಗಳಿಂದ ಗಮನ ಬೇರಡೆಗೆ ಸೆಳೆಯಲು. ಎಲ್ಲಾ ಸುದ್ದಿವಾಹಿನಿಗಳು ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ, ಮುಸ್ಲಿಮರಿಂದ ಕುಟುಂಬ ಯೋಜನೆಯ ನಿರಾಕರಣೆಯ. ಬಲವಂತ ಅಥವಾ ಸ್ವಿಚ್ಛೆಯ ಅಂತರ್ಧರ್ಮೀಯ ಮದುವೆಗಳು, ಇವುಗಳ ಸುತ್ತಲೇ ಗಿರಕಿ ಹೊಡೆಯುತ್ತಿವೆ. ಮುಂಬರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳಿಗಾಗಿ ಕೋಮುವಾದ ಮತ್ತು ಅಯೋಧ್ಯೆಯಲ್ಲಿ ಎಲ್ಲಾ ವಂಚನೆಗಳ ಅಂಶಗಳಿಂದ ಜನಸಾಮಾನ್ಯರ ಗಮನವನ್ನು ಸರಿಸಲು ಬಿಜೆಪಿ ತನ್ನೆಲ್ಲಾ ಕುತಂತ್ರಗಳನ್ನು ಬಳಸುತ್ತಿರುವುದು ಇದರಿಂದ ಗೊತ್ತಾಗುತ್ತದೆ. ಅಯೋಧ್ಯೆಯಲ್ಲಿನ ಸಂಘಪರಿವಾರದ ಅನುಯಾಯಿಗಳಿಂದ ನಡೆಯುತ್ತಿರುವ ನಾಚಿಕೆಗೇಡಿನ ಗೋಲ್‌ಮಾಲ್‌ಗಳ ಬಗ್ಗೆ ಏಳುತ್ತಿರುವ ಪ್ರಶ್ನೆಗಳನ್ನು ಮತ್ತು ಮಾತಾಡುತ್ತಿರುವ ಧ್ವನಿಗಳನ್ನು ಅಡಗಿಸಲು ಬಿಜೆಪಿಯಿಂದ ಸಾಧ್ಯವಾಗುವುದೇ, ಎಂಬುದು ಮುಂಬರುವ ದಿನಗಳಲ್ಲಿ ರಾಜಕೀಯ ಬೆಳವಣಿಗೆಗೆ ನಿರ್ಣಾಯಕವಾಗಿದೆ.
ಅನು: ಲವಿತ್ರ ವಸ್ತ್ರದ