ನವದೆಹಲಿ:14 ಕಿ.ಮೀ ಉದ್ದದ ರಾಮಪಥ ನಿರ್ಮಾಣ ಹಾಗೂ ವಾಯುವಿಹಾರದಡಿಯಲ್ಲಿ ಚರಂಡಿ ನಿರ್ಮಿಸುವಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಉತ್ತರ ಪ್ರದೇಶ ಸರಕಾರ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಮತ್ತು ಉತ್ತರ ಪ್ರದೇಶ ಜಲ ನಿಗಮದ ಆರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ಭಾನುವಾರ (ಜೂನ್ 23) ಮತ್ತು ಮಂಗಳವಾರ (ಜೂನ್ 25) ರಾತ್ರಿ ಸುರಿದ ಮಳೆಗೆ ರಾಮ್ ಪಥ್ ಹಾನಿಗೊಳಗಾಗಿದೆ ಎಂದು ವರದಿಯಾಗಿದೆ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ರಾಮ್ ಪಥ್ ಉದ್ದಕ್ಕೂ ಇರುವ ಸುಮಾರು 15 ಬೀದಿಗಳು ಮತ್ತು ರಸ್ತೆಗಳು ಸಹ ಹೆಚ್ಚು ನೀರಿನಿಂದ ತುಂಬಿವೆ ಮತ್ತು ನೀರು ಮನೆಗಳಿಗೆ ಪ್ರವೇಶಿಸಿತು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಅಹಮದಾಬಾದ್ ಮೂಲದ ಗುತ್ತಿಗೆದಾರ ಕಂಪನಿ ಭುವನ್ ಇನ್ಫ್ರಾಕಾಮ್ ಪ್ರೈವೇಟ್ ಲಿಮಿಟೆಡ್ಗೆ ನೊಟೀಸ್ ಜಾರಿ ಮಾಡಿದೆ.
ವಿಶೇಷ ಕಾರ್ಯದರ್ಶಿ ವಿನೋದ್ ಕುಮಾರ್ ಶುಕ್ರವಾರ ಪಿಡಬ್ಲ್ಯುಡಿ ಕಾರ್ಯನಿರ್ವಾಹಕ ಎಂಜಿನಿಯರ್ ಧ್ರುವ ಅಗರ್ವಾಲ್ ಮತ್ತು ಸಹಾಯಕ ಎಂಜಿನಿಯರ್ ಅನುಜ್ ದೇಶ್ವಾಲ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕಿರಿಯ ಎಂಜಿನಿಯರ್ ಪ್ರಭಾತ್ ಕುಮಾರ್ ಪಾಂಡೆ ಅವರನ್ನು ಅಮಾನತುಗೊಳಿಸಿ ಆದೇಶವನ್ನು ಪಿಡಬ್ಲ್ಯುಡಿ ಮುಖ್ಯ ಎಂಜಿನಿಯರ್ (ಅಭಿವೃದ್ಧಿ) ವಿಕೆ ಶ್ರೀವಾಸ್ತವ ಹೊರಡಿಸಿದ್ದಾರೆ.
ಉತ್ತರ ಪ್ರದೇಶ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ಮಿಶ್ರಾ ಅವರು ಅಯೋಧ್ಯೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆನಂದ್ ಕುಮಾರ್ ದುಬೆ, ಸಹಾಯಕ ಎಂಜಿನಿಯರ್ ರಾಜೇಂದ್ರ ಕುಮಾರ್ ಯಾದವ್ ಮತ್ತು ಜೂನಿಯರ್ ಎಂಜಿನಿಯರ್ ಮೊಹಮ್ಮದ್ ಶಾಹಿದ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಕಲ್ಯಾಣ ಮಂಡಳಿಯ ಭ್ರಷ್ಟಾಚಾರ ವಿರೋಧಿಸಿ ಕಟ್ಟಡ ನಿರ್ಮಾಣ ಕಾರ್ಮಿಕರ ರಾಜ್ಯವ್ಯಾಪಿ ಪ್ರತಿಭಟನೆ
ಲೋಕೋಪಯೋಗಿ ಇಲಾಖೆ ಹೊರಡಿಸಿರುವ ಕಚೇರಿ ಆದೇಶದಲ್ಲಿ, ‘ರಾಮಪಥದ ಮೇಲ್ಭಾಗದ ಪದರವು ನಿರ್ಮಾಣವಾದ ಕೂಡಲೇ ಹಾಳಾಗಿದೆ. ಇದು ರಾಜ್ಯ ಸರ್ಕಾರದ ಪ್ರಮುಖ ಆದ್ಯತೆಯಾಗಿ ನಡೆಯುತ್ತಿರುವ ಕೆಲಸಗಳಲ್ಲಿ ಲೋಪವನ್ನು ತೋರಿಸುತ್ತದೆ ಮತ್ತು ಸಾಮಾನ್ಯ ಜನರಲ್ಲಿ ರಾಜ್ಯದ ಇಮೇಜ್ ಅನ್ನು ಹಾಳುಮಾಡುತ್ತದೆ.
ಕಚೇರಿ ಆದೇಶದಲ್ಲಿ, ‘ಇದನ್ನು ಗಂಭೀರ ಅಕ್ರಮವೆಂದು ಪರಿಗಣಿಸಿ, ನಿರ್ಮಾಣ ಬ್ಲಾಕ್-3 ರ ಕಾರ್ಯನಿರ್ವಾಹಕ ಎಂಜಿನಿಯರ್ ಧ್ರುವ ಅಗರ್ವಾಲ್ ಅವರನ್ನು ಉತ್ತರ ಪ್ರದೇಶ ಸರ್ಕಾರಿ ನೌಕರರ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು 1999 ರ ನಿಯಮ 7 ರ ಅಡಿಯಲ್ಲಿ ಅಮಾನತುಗೊಳಿಸಲಾಗಿದೆ. ಅವರನ್ನು ಅಯೋಧ್ಯೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಕಚೇರಿಗೆ ಲಗತ್ತಿಸಲಾಗುವುದು.
ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್ ಚೌಹಾಣ್ ತಿಳಿಸಿದ್ದಾರೆ. ರಾಮಪಥದ ಹಾನಿಗೊಳಗಾದ ಭಾಗದ ಚಿತ್ರಗಳು ಜೂನ್ 25 ರಂದು ವೈರಲ್ ಆಗಿದ್ದು, ಇಡೀ ದೇಶದ ಗಮನವನ್ನು ಸೆಳೆಯಿತು.
ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆಯೂ ಪ್ರಶ್ನೆಗಳು ಎದ್ದಿರುವುದು ಗೊತ್ತೇ ಇದೆ. ರಾಮ್ ಲಲ್ಲಾ ವಿಗ್ರಹವನ್ನು ಸ್ಥಾಪಿಸಿದ ಭಾಗ ಸೇರಿದಂತೆ ದೇವಾಲಯದ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಜೂನ್ 24 ರಂದು ಹೇಳಿದ್ದರು.