ಆಯನೂರು ಮಂಜುನಾಥ್‌ ಕಾಂಗ್ರೆಸ್‌ ಸೇರ್ಪಡೆ…?

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್‌ ಸಿಗದ ಕಾರಣಕ್ಕೆ ಮುನಿಸಿಕೊಂಡು ಜೆಡಿಎಸ್‌ ಸೇರಿ ಕಣಕ್ಕಿಳಿದಿದ್ದ ಆಯನೂರು ಮಂಜುನಾಥ್‌ ಅವರು ಕಾಂಗ್ರೆಸ್‌ ಸೇರಲು ನಿರ್ಧರಿಸಿದ್ದಾರೆ.

ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವುದರಿಂದ ಜೆಡಿಎಸ್‌ಗೆ  ಶಾಕ್ ನೀಡಿದ್ದಾರೆ. ಕಾಂಗ್ರೆಸ್​​ನ ಆಪರೇಷನ್ ಹಸ್ತ ಭಾರೀ ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಆಯನೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಆಪರೇಷನ್ ಮಾಡಿತಾ ಎನ್ನುವ ಪ್ರಶ್ನೆ ರಾಜಕೀಯ ವಲಯಗಳಲ್ಲಿ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಡಿಸಿಎಂ ಡಿಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಬಂದಿರುವುದಿಂದ ರಾಜ್ಯರಾಜಕಾರಣದ ರಾಜಕೀಯ ಬೆಳೆವಣಿಗೆಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ:ಆಪರೇಷನ್​ ಹಸ್ತ ಚರ್ಚೆ ಬೆನ್ನಲ್ಲೇ ಸಿಎಂ ಭೇಟಿಯಾದ ಎಸ್. ಟಿ ಸೋಮಶೇಖರ್..!

ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಸೋಮವಾರ ನಡೆಯಲಿದೆ. ಶಿಕಾರಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿಜೆಪಿಯ ಬಿ.ವೈ.ವಿಜಯೇಂದ್ರಗೆ ತೀವ್ರ ಸ್ಪರ್ಧೆ ಒಡ್ಡಿದ್ದ ನಾಗರಾಜ್‌ ಗೌಡ ಮತ್ತು ಯಶವಂತಪುರ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರ ಬೆಂಬಲಿಗರೂ ಕಾಂಗ್ರೆಸ್‌ ಸೇರಲಿದ್ದಾರೆ.

ಆ ಮೂಲಕ, ವಿಧಾನಸಭೆ ಚುನಾವಣೆಯ ನಂತರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಮೊದಲ ಹಂತದ ಆಪರೇಷನ್‌ ಹಸ್ತಕ್ಕೆ ಕಾಂಗ್ರೆಸ್‌ ಚಾಲನೆ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿ ಆಯನೂರು ಮಾತುಕತೆ ನಡೆಸಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯನೂರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಆಯನೂರು, ಬಿಜೆಪಿ ತೊರೆದಾಗಲೇ ಕಾಂಗ್ರೆಸ್‌ ಸೇರಲು ತೀರ್ಮಾನಿಸಿದ್ದೆ. ಆದರೆ, ಆಗ ಸೇರ್ಪಡೆಗೆ ಅವಕಾಶ ಇರಲಿಲ್ಲ. ಆ ಸಂದರ್ಭದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವಕಾಶ ನೀಡಿದ್ದರಿಂದ ಜೆಡಿಎಸ್‌ ಸೇರಿದ್ದೆ ಎಂದು ಹೇಳಿದರು. ಪಕ್ಷ ಸೇರ್ಪಡೆ ಬಗ್ಗೆ ಅಧ್ಯಕ್ಷರ ಜೊತೆ ಒಂದು ಹಂತದ ಮಾತುಕತೆಯಾಗಿದೆ. ನಾನು ವಿಧಾನ ಪರಿಷತ್‌ ಟಿಕೆಟ್‌ ಆಕಾಂಕ್ಷಿ.ಆದರೆ, ಪಕ್ಷ ಸೇರ್ಪಡೆ ಆಗುವಾಗ ಯಾವುದೇ ಷರತ್ತು ಹಾಕುವುದಿಲ್ಲ ಎಂದರು.

ಆಯನೂರು ಮಂಜುನಾಥ ಅವರ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಶಿವಕುಮಾರ್‌, ಅನೇಕ ಜನ ನನ್ನನ್ನು ಭೇಟಿ ಮಾಡುತ್ತಿರುತ್ತಾರೆ. ಯಾರು ಯಾವ ಕಾರಣಕ್ಕಾಗಿ ಭೇಟಿ ಮಾಡುತ್ತಾರೆ ಎಂದು ಹೇಗೆ ಹೇಳಲು ಸಾಧ್ಯ?ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *