ಲೋಕಸಭಾ ಚುನಾವಣೆ ಹಿನ್ನೆಲೆ ವಿಶೇಷ ಚೇತನರಿಂದ ಜಾಗೃತಿ ಜಾಥಾ

ಬೆಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಬಳಿ ವಿಶೇಷ ಚೇತನರ ದ್ವೀಚಕ್ರ/ತ್ರಿಚಕ್ರ ವಾಹನಗಳ ಜಾಥಾ ಕಾರ್ಯಕ್ರಮಕ್ಕೆ ಮುಖ್ಯ ಕಾರ್ಯದರ್ಶಿಯಾದ ರಜನೀಶ್ ಗೋಯಲ್ ರವರು ಚಾಲನೆ ನೀಡಿದರು.

ಚಾಲನೆ ನೀಡಿದ ಬಳಿಕ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ, ಲೋಕಸಭಾ ಚುನಾವಣೆ ಹಿನ್ನೆಲೆ ಮತದಾರರು ತಪ್ಪದೆ ಮತದಾನ ಮಾಡುವ ನಿಟ್ಟಿನಲ್ಲಿ ವಿಶೇಷ ಚೇತನರ ಮೂಲಕ ಜಾಗೃತಿ ಜಾಥ ನಡೆಸಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಸಮಾಜದ ಪ್ರತಿಯೊಂದು ವರ್ಗದವರೂ ತಪ್ಪದೆ ಮತದಾನ ಚಲಾಯಿಸಬೇಕೆಂಬುದು ಚುನಾವಣಾ ಆಯೋಗದ ಗುರಿಯಾಗಿದೆ. ಅದರಂತೆ, ವಿಶೇಷ ಚೇತನರು, 85 ವರ್ಷ ಮೇಲ್ಪಟ್ಟವರು ಹಾಗೂ ತೃತೀಯ ಲಿಂಗಿಗಳು ಎಲ್ಲರನ್ನೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ತಪ್ಪದೆ ಮತದಾನ ಮಾಡಲು ಮನವಿ ಮಾಡಲಾಗುತ್ತಿದೆ ಎಂದರು.ವಿಶೇಷ ಚೇತನ

ವಿಶೇಷ ಚೇತನರು ಮತದಾನ ಮಾಡುವ ವೇಳೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಮತಗಟ್ಟೆಗಳ ಬಳಿ ರ್ಯಾಂಪ್ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಎಲ್ಲಾ ವಿಶೇಷ ಚೇತನರು ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ತಪ್ಪದೆ ಮತಗಟ್ಟೆಗಳಿಗೆ ಬಂದು ಮತದಾನ ಮಾಡಲು ಮನವಿ ಮಾಡಿದರು.

ಜಾಥಾ ಸಾಗಿದ ಹಾದಿ

ವಿಶೇಷ ಚೇತನರ ದ್ವೀಚಕ್ರ/ತ್ರಿಚಕ್ರ ವಾಹನಗಳ ಜಾಥಾ ಕಾರ್ಯಕ್ರಮವು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನಿಂದ ಪ್ರಾರಂಭವಾಗಿ ಕೆ.ಆರ್ ವೃತ್ತ, ನೃಪತುಂಗ ರಸ್ತೆ, ಹಡ್ಸನ್ ವೃತ್ತದ ಮೂಲಕ ಕಂಠೀರವ ಕ್ರೀಡಾಂಗಣದವರೆಗೆ ಸಾಗಿ ಮುಕ್ತಾಯಗೊಳಿಸಲಾಯಿತು.

ಪ್ರತಿಜ್ಞಾ ವಿಧಿ ಸ್ವೀಕಾರ

ಲೋಕಸಭಾ ಚುನಾವಣೆಯ ಹಿನ್ನೆಲೆ ತಪ್ಪದೆ ಮತದಾನ‌ ಮಾಡುವ ನಿಟ್ಟಿನಲ್ಲಿ ಜಾಥಾ ಕಾರ್ಯಕ್ರಮದ ವೇಳೆ ನೆರೆದಿದ್ದ ವಿಶೇಷ ಚೇತನರು ಹಾಗೂ ಅಧಿಕಾರಿಗಳು ಪ್ರತಿಜ್ಞಾನ ವಿಧಿಯನ್ನು ಸ್ವೀಕರಿಸಿದರು‌.

ಈ ವೇಳೆ ಮುಖ್ಯ ಚುನಾವಣಾಧಿಕಾರಿಯಾದ ಮನೋಜ್ ಕುಮಾರ್ ಮೀನಾ, ಅಪರ ಮುಖ್ಯ ಚುನಾವಣಾಧಿಕಾರಿಯಾದ ಕೂರ್ಮ ರಾವ್, ಸ್ವೀಪ್ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾದ ಕಾಂತರಾಜ್, ಬೆಂಗಳೂರು ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಯಾದ ಪ್ರತಿಭಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *