ಬೆಂಗಳೂರು: ಮಂಗಳೂರಿನ ಮಳಲಿ ಮಸೀದಿ ವಿಚಾರವಾಗಿ ತಾಂಬೂಲ ಪ್ರಶ್ನೆ ಕೇಳುವ ವಿಚಾರ ಸಂಬಂಧ ಸರ್ಕಾರ, ಪೊಲೀಸ್ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಬೇಕು. ಇದೊಂದು ಭಾವನಾತ್ಮಕ ವಿಚಾರ ಬಿಜೆಪಿಯವರು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲಿ. ಭವಿಷ್ಯ ಹೇಳುವವರನ್ನು ಬಂಧಿಸಬೇಕೆಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರಿಗೆ ಏನೇನ್ ನಂಬಿಕೆ ಇದೆಯೋ? ಏನ್ ಬೇಕಾದ್ರೂ ಮಾಡಿಕೊಳ್ಳಲಿ. ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಬಿಜೆಪಿ ನಾಯಕರು ಅವರ ಸ್ವಂತಕ್ಕೆ, ಮನೆಗೆ ಏನೂ ಬೇಕಾದರೂ ಮಾಡಿಕೊಳ್ಳಲಿ. ಆದರೆ ಇಲ್ಲಿ ಸರ್ಕಾರ ಇದೆ, ಅಲ್ಪಸಂಖ್ಯಾತ ಇಲಾಖೆ ಇದೆ, ಮುಜರಾಯಿ ಇಲಾಖೆಯೂ ಇದೆ, ಸರ್ಕಾರಿ ಅಧಿಕಾರಿಗಳು ಇದ್ದಾರೆ. ಆದರೆ ಖಾಸಗಿಯಾಗಿ ಹೀಗೆ ಮಾಡಬಾರದು. ಅವರ ವಿರುದ್ಧ ಕೇಸ್ ಹಾಕಬೇಕು. ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಗುಡುಗಿದ್ದಾರೆ.
ನನಗೂ ಈ ಬಗ್ಗೆ ಮಾಹಿತಿ ಬಂದಿತ್ತು. ನಮ್ಮ ಪಕ್ಷಕ್ಕೂ ಅದಕ್ಕೂ ಸಂಬಂಧ ಇಲ್ಲ, ಮರ್ಯಾದೆಯಾಗಿ ಸುಮ್ಮನೆ ಇರಿ ಅಂದೆ. ಭವಿಷ್ಯ ಕೇಳೋರು, ಶಕುನ ಕೇಳೋರಿಗೆ ನಾವು ಅಡ್ಡಿ ಮಾಡಲ್ಲ. ಅವರು ಏನೂ ಬೇಕಾದರೂ ಮಾಡಿಕೊಳ್ಳಲಿ, ಆದರೆ, ಮಂಗಳೂರಿನ ವಿಚಾರವಾಗಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಆ ಭವಿಷ್ಯ ಹೇಳಿಕೆ ಹೊರಗೆ ಬರಬಾರದು, ಇದರಿಂದ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಟ್ಟರೆ ಆ ಭವಿಷ್ಯ ಹೇಳೋರನ್ನು ಬಂಧಿಸಬೇಕು ಎಂದು ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಪಠ್ಯಕ್ರಮ ಪರಿಷ್ಕರಣೆ ಗೊಂದಲ ಕುರಿತ ಪ್ರಶ್ನೆಗೆ ,’ಸರ್ಕಾರ ರಾಜಕೀಯ ಅಜೆಂಡಾವನ್ನು ಪಠ್ಯಕ್ರಮದಲ್ಲಿ ತರಲು ಪ್ರಯತ್ನಿಸುತ್ತಿದೆ. ಇತಿಹಾಸ ತಿರುಚಿ, ಮುಂದಿನ ಪೀಳಿಗೆಗೆ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಇತಿಹಾಸವನ್ನು ಯಾರು ಬದಲಿಸಲು ಸಾಧ್ಯವಿಲ್ಲ. ಎಲ್ಲ ಪ್ರಯತ್ನಗಳು ಕೆಲಕಾಲ ಮಾತ್ರ. ದೇಶದ ಯಾವುದೇ ರಾಜ್ಯಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಲು ಸಾಧ್ಯವಾಗಿಲ್ಲ. ಆದರೆ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ತನ್ನ ಪಕ್ಷ ಹಾಗೂ ಸಂಘಟನೆಯ ನಾಯಕರ ವಿಚಾರಗಳನ್ನು ಮಕ್ಕಳ ತಲೆಗೆ ತುಂಬಲು ಪ್ರಯತ್ನ ಮಾಡುತ್ತಿದೆ ಎಂದರು.
ಬಿಬಿಎಂಪಿ ಚುನಾವಣೆ ಕುರಿತಾಗಿ ಮಾತನಾಡಿದ ಡಿ ಕೆ ಶಿವಕುಮಾರ್, ಮೀಸಲಾತಿ ಕೊಟ್ಟು ಬಿಬಿಎಂಪಿ ಚುನಾವಣೆ ಮಾಡಿ. ಇದು ಸರ್ಕಾರದ ಜವಾಬ್ದಾರಿ. ನಮ್ಮ ಜೊತೆ ಸಭೆ ಮಾಡಿದಾಗ ಸಾಮಾಜಿಕ ನ್ಯಾಯಕ್ಕೆ ಅವಕಾಶ ಕೊಟ್ಟು ಚುನಾವಣೆ ಮಾಡಿ ಎಂದು ಹೇಳಿದ್ದೇವೆ. ಕೋರ್ಟ್ ಮೀಸಲಾತಿ ಮಾಡದೇ ಚುನಾವಣೆ ಮಾಡಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮಯಕ್ಕೆ ಸರಿಯಾಗಿ ಮಾಡಬೇಕು. ಅಧಿಕಾರ ಹಂಚಿಕೆ ಆಗಬೇಕು. ನಾವು ಅಧಿಕಾರ ಹಂಚಿಕೆ ಮಾಡಬೇಕು ಎನ್ನುತ್ತೇವೆ. ಈಗ ಕೋರ್ಟ್ ಸಹ ಹೇಳಿದೆ ಎಂದರು.