ಅವಧಿ ಮೀರಿದ ಆಹಾರ ಸಾಮಗ್ರಿ ವಿತರಣೆ: ಸಿಐಟಿಯು ಆರೋಪ

  • ಅಂಗನವಾಡಿ ಕೇಂದ್ರಗಳಿಗೆ ಸಮಯಕ್ಕೆ ಸರಿಯಾಗಿ ಆಹಾರ ಸಾಮಗ್ರಿಗಳನ್ನುವಿತರಣೆ ಮಾಡುವಲ್ಲಿ ಇಲಾಖೆಯ ಆಡಳಿತ ವರ್ಗ ವಿಫಲ
  • ಅವಧಿ ಮೀರಿದ ಆಹಾರ ಸಾಮಗ್ರಿ ಬಳಕೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಅದಕ್ಕೆ ಸರ್ಕಾರವೇ ಹೊಣೆ

ಹಾಸನ: ತಾಲೂಕು ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ಅವಧಿ ಮೀರಿದ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಸಿಐಟಿಯು ನೇತೃತ್ವದ ಕರ್ನಾಟಕ ಅಂಗನವಾಡಿ ನೌಕರರ ಸಂಘದ ಹಾಸನ ತಾಲೂಕು ಸಮಿತಿ ಆರೋಪಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ತಾಲೂಕು ಅಧ್ಯಕ್ಷೆ ಎಂ.ಬಿ.ಪುಷ್ಪ, ಅವಧಿ ಮೀರಿದ ಆಹಾರ ಸಾಮಗ್ರಿಗಳನ್ನು ಪ್ರದರ್ಶಿಸಿ ,ಹಾಸನ ತಾಲೂಕಿನ 406 ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ 16 ಸಾವಿರ ಫಲಾನುಭವಿಗಳಿದ್ದಾರೆ. ಅವಧಿ ಮೀರಿದ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಲ್ಲಿ ಹಲವು ಸಲ ಮನವಿ ಮಾಡಿಕೊಂಡಿದ್ದರೂ ಸಮಸ್ಯೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಅವಧಿ ಮೀರಿದ ಆಹಾರ ಸಾಮಗ್ರಿ ಬಳಕೆಯಿಂದ ಆರೋಗ್ಯದ ಮೇಲೆ ಹೆಚ್ಚು ಕಡಿಮೆ ಆದರೆ ಯಾರು ಹೊಣೆ. ತಕ್ಷಣಕ್ಕೆ ಸಿಗುವ ಅದರ ಪರಿಣಾಮವನ್ನು ನಾವೇ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಜನವರಿ ತಿಂಗಳಲ್ಲಿ ವಿತರಿಸಬೇಕಾದ ಆಹಾರ ಸಾಮಗ್ರಿಗಳನ್ನು ಏಪ್ರಿಲ್ ತಿಂಗಳಲ್ಲಿ ವಿತರಿಸಲಾಗುತ್ತಿದೆ. ಅಂಗನವಾಡಿಗೆ ವಿತರಣೆ ಮಾಡುವಷ್ಟರಲ್ಲಿ ಅವುಗಳ ಅವಧಿ ಮುಗಿಯುವ ಹಂತಕ್ಕೆ ಬಂದಿರುತ್ತದೆ. ಸಮಯಕ್ಕೆ ಸರಿಯಾಗಿ ಹಾಗೂ ಅಗತ್ಯಕ್ಕನುಗುಣವಾಗಿ ಆಹಾರ ಸಾಮಗ್ರಿಗಳನ್ನು ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಮಾಡುವಲ್ಲಿ ಇಲಾಖೆಯ ಆಡಳಿತ ವರ್ಗ ವಿಫಲವಾಗಿದೆ. ಇದರಿಂದಾಗಿ ಫಲಾನುಭವಿಗಳಿಗೆ ಸಕಾಲದಲ್ಲಿ ಸಮರ್ಪಕವಾದ ಆಹಾರ ದೊರೆಯದೆ ವಂಚನೆಯಾಗುತ್ತಿದೆ. ಈ ಕುರಿತು ಅಧಿಕಾರಿಗಳಲ್ಲಿ ಕೇಳಿದರೆ ನೀವು ಅಂಗನವಾಡಿ ಕೇಂದ್ರಗಳಿಗೆ ಸಾಮಗ್ರಿ ವಿತರಣೆಯ ಲಾರಿ ಬಂದಾಗ ವಾಪಸ್ ಕಳುಹಿಸುವಂತೆ ನಮಗೇ ಹೇಳುತ್ತಾರೆ. ಜೊತೆಗೆ ಅವಧಿ ಮೀರುವ ಮುನ್ನ ಫಲಾನುಭವಿಗಳಿಗೆ ಕೊಟ್ಟು ಬಿಡಿ ಎಂದು ಸಲಹೆ ನೀಡುತ್ತಾರೆ. ಫಲಾನುಭವಿಗಳು ಕೆಲವೇ ದಿನಗಳಲ್ಲಿ ಅವಧಿ ಮೀರುವ ಆಹಾರ ಸಾಮಗ್ರಿಗಳನ್ನು ಇಟ್ಟುಕೊಂಡರೆ ಏನು ಪ್ರಯೋಜನ ಎನ್ನುವುದನ್ನು ಅಧಿಕಾರಿಗಳೇ ಉತ್ತರಿಸಬೇಕು ಎಂದು ಪುಷ್ಪ ಹೇಳಿದರು.

ಅಂಗನವಾಡಿ ನೌಕರರಿಗೆ ಕಳೆದ 3 ತಿಂಗಳಿಂದ ವೇತನವನ್ನೇ ನೀಡಿಲ್ಲ. ನಾವು ನಮ್ಮ ಕೈಯಿಂದ ಖರ್ಚು ಮಾಡಿ ಮೊಟ್ಟೆ ತಂದು ವಿತರಣೆ ಮಾಡಿರುವ ಹಣವನ್ನು ಇಲಾಖೆಯು ನಮಗೆ ಇದುವರೆಗೂ ಪಾವತಿಸಿಲ್ಲ. ಹೀಗಾಗಿ ನಾವು ಏಪ್ರಿಲ್ 11 ರಿಂದ ಫಲಾನುಭವಿಗಳಿಗೆ ಮೊಟ್ಟೆ ವಿತರಣೆ ನಿಲ್ಲಿಸಿದ್ದೇವೆ. ಇಲಾಖೆಯಲ್ಲಿ ಹಣವಿದ್ದರೂ ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿದರು.

ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ತೀವ್ರ ಕೊರತೆಯಿದ್ದು, ಈ ಬಗ್ಗೆ ಇಲಾಖೆಯ ಮುಂದೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಲಾಖೆಯು ಈ ಸಮಸ್ಯೆಗಳ ಕಡೆಗೆ ತುರ್ತು ಗಮನ ನೀಡಿ ಸಮಸ್ಯೆಗಳನ್ನು ಇತ್ಯರ್ಥ ಮಾಡದಿದ್ದರೆ ಅಂಗನವಾಡಿ ನೌಕರರು ಸಿಐಟಿಯು ನೇತೃತ್ವದಲ್ಲಿ ಇಲಾಖೆಯ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಲಿದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಜಯಂತಿ, ಖಜಾಂಚಿ ಎಚ್.ಟಿ.ಮೀನಾಕ್ಷಿ, ಮುಖಂಡರಾದ ರಿಹಾನಾಬಾನು, ಲಲಿತ, ಗಾಯಿತ್ರಿ ಇತರರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *