ಆಟೋರಿಕ್ಷಾ ಚಾಲಕರ ದೂಷಣೆ ಸಲ್ಲದು

ನಿತ್ಯಾನಂದಸ್ವಾಮಿ

ಬೆಂಗಳೂರು ಮಹಾನಗರದಲ್ಲಿ ಆಟೋರಿಕ್ಷಾ ಪ್ರಯಾಣ ದರ ಮತ್ತು ಲಗೇಜ್ ಸಾಗಾಟ ದರಗಳನ್ನು ಪರಿಷ್ಕರಿಸಿ ಬೆಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹೊಸ ಆದೇಶವನ್ನು ಹೊರಡಿಸಿದ್ದು ಹೊಸ ದರಗಳು 2021ರ ಡಿಸೆಂಬರ್ 1 ರಿಂದ ಜಾರಿಗೆ ಬರಲಿವೆ. ನೂತನ ಕನಿಷ್ಠ ದರವನ್ನು ರೂ. 25 ರಿಂದ ರೂ. 30 ಕ್ಕೆ ಏರಿಕೆ ಮಾಡಲಾಗಿದೆ. ನಂತರದ ಪ್ರತಿ ಕಿಲೋ ಮೀಟರ್‌ಗೆ 12 ರೂ. ಗಳಿದ್ದ ಕನಿಷ್ಠ ದರವನ್ನು 15 ರೂ. ಗಳಿಗೆ ಹೆಚ್ಚಿಸಲಾಗಿದೆ. ಕಾಯುವಿಕೆಯ ದರವನ್ನು ಮೊದಲ 5 ನಿಮಿಷದ ನಂತರ ಪ್ರತಿ ಹದಿನೈದು ನಿಮಿಷಕ್ಕೆ 5 ರೂ.ಯಂತೆ ಪರಿಷ್ಕೃತಗೊಳ್ಳಲಿದೆ. ಲಗೇಜ್ ದರ 20 ಕೆ.ಜಿ. ನಂತರದ ಪ್ರತಿ 20 ಕೆ.ಜಿ.ಗೆ 5 ರೂ. ನೀಡಬೇಕಾಗುವುದು. ರಾತ್ರಿ 10 ಗಂಟೆಯಿಂದ ನಸುಕಿನ 5 ಗಂಟೆ ವರೆಗೆ ಸಾಮಾನ್ಯ ದರ ಮತ್ತು ಸಾಮಾನ್ಯ ದರದ ಅರ್ಧ ಪಟ್ಟು ನೀಡಬೇಕಾಗುವುದು.

ಆಟೋರಿಕ್ಷಾ ಪ್ರಯಾಣ ದರದ ಈ ಪರಿಷ್ಕರಣೆಯಿಂದಾಗಿ ಜನಸಮಾನ್ಯರಿಗೆ, ವಿಶೇಷವಾಗಿ ನಗರದಲ್ಲಿ ತಮ್ಮ ಒಡಾಟಕ್ಕೆ ಆಟೋರಿಕ್ಷಾವನ್ನೇ ಅವಲಂಭಿಸಿರುವ ಕೆಳ ಮಧ್ಯಮ ವರ್ಗದವರಿಗೆ ಆಘಾತವಾಗದೆ ಇರಲಾರದು. ಪೆಟ್ರೋಲ್, ಡೀಸೆಲ್, ಅನಿಲ ಅಲ್ಲದೆ ಎಲ್ಲಾ ಅಗತ್ಯ ವಸ್ತಗಳ ಬೆಲೆಗಳು ಗಗನಕ್ಕೇರಿರುವಾಗ ಆಟೋ ರಿಕ್ಷಾ ಪ್ರಯಾಣ ದರಗಳನ್ನೂ ಹೆಚ್ಚಿಸಲಾಗಿದೆ. ರಿಕ್ಷಾ ಪ್ರಯಾಣ ದರಗಳ ಹೆಚ್ಚಳವಾದಾಗೆಲ್ಲ ಆಟೋರಿಕ್ಷಾ ಚಾಲಕರು ಸಾರ್ವಜನಿಕರಿಂದ ಸಹಜವಾಗಿ ದೂಷಣೆಗೆ ಒಳಗಾಗುತ್ತಾರೆ.

ಆದರೆ ಆಟೋರಿಕ್ಷಾ ಚಾಲಕರು ಸಹ ನಮ್ಮ ಹಾಗೆಯೇ ಮನುಷ್ಯರು, ನಮ್ಮ ಹಾಗೆಯೇ ಕುಟುಂಬಸ್ಥರು ನಮ್ಮ ಹಾಗೆಯೇ ಬೆಲೆ ಏರಿಕೆಯ ಬಿಸಿಗೆ ಬಲಿಯಾಗಿ ನರಳುವವರು ಎಂಬುದನ್ನು ನಾವು ಸುಲಭವಾಗಿ ಮರೆತು ಬಿಡುತ್ತೇವೆ. ಅವರೆಲ್ಲರೂ ಬೆಂಗಳೂರು ಸುತ್ತಲಿನ ಹಳ್ಳಿಗಳಿಂದ ಅಥವ ದೂರದ ಜಿಲ್ಲೆಗಳಿಂದ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದವರು. ಸಾಲಸೋಲ ಮಾಡಿ ಒಂದು ಆಟೋರಿಕ್ಷಾ ಪಡೆದು ಬಾಡಿಗೆಗೆ ಓಡಿಸುವವರು. ಇವರಿಗೆ ಬಹುತೇಕವಾಗಿ ಸ್ವಂತ ಮನೆಗಳಿರುವುದಿಲ್ಲ. ಬಾಡಿಗೆ ಮನೆಗಳಲ್ಲಿ ದಿನದೂಡುತ್ತಿರುತ್ತಾರೆ. ಸಂಪಾದನೆ ಮಾಡಿದ ಹಣದಲ್ಲಿ ದೊಡ್ಡ ಭಾಗ ಮನೆಬಾಡಿಗೆಗಾಗಿ ವಿನಿಯೋಗಿಸುವವರು. ಮಕ್ಕಳ ವಿದ್ಯಾಭ್ಯಾಸ, ವೃದ್ಧರ ಆರೈಕೆ, ಕಾಯಿಲೆ ಬಿದ್ದ ಕುಟುಂಬದ ಸದಸ್ಯರಿಗೆ ಚಿಕಿತ್ಸೆ, ಆಟೋರಿಕ್ಷಾದ ರಿಪೇರಿ, ದುಬಾರಿ ಎಲ್‌ಪಿಜಿ ಗ್ಯಾಸ್ ಹಾಗೂ ಬಿಡಿಭಾಗಗಳನ್ನು ಇವರು ಕೊಳ್ಳಬೇಕಾಗುವುದು. ಒಬ್ಬ ಆಟೋ ರಿಕ್ಷಾ ಚಾಲಕನ ಜೀವನ ನಿರ್ವಹಣೆ ಚಿಂತಾಜನಕಗೊಳಿಸುತ್ತದೆ.

ಒಬ್ಬ ಆಟೋರಿಕ್ಷಾ ಚಾಲಕ ನಮ್ಮ ಹಿತಚಿಂತಕ. ಬೆಳಿಗ್ಗೆ ಅದೆಷ್ಟೊ ಬೇಗ ಹೊಟ್ಟೆಗೆ ಏನನ್ನೂ ತಿನ್ನದೆ ಆತ ಮೂರು ಚಕ್ರಗಳ ಮೇಲೆ ಒಡುತ್ತಾನೆ. ಬಸ್ ನಿಲ್ದಾಣದಲ್ಲಿ, ರೈಲು ನಿಲ್ದಾಣದಲ್ಲಿ ಮತ್ತು ಕೆಲವೊಮ್ಮೆ ವಿಮಾನ ನಿಲ್ದಾಣದಲ್ಲಿ ನಮ್ಮ ಬರುವಿಕೆಯನ್ನು ಎದುರು ನೋಡುತ್ತಾನೆ. ಕೆಲವೊಮ್ಮೆ ಯಾವ ಪ್ರಯಣಿಕನೂ ಸಿಗದೆ ನಿರಾಶನಾಗುತ್ತಾನೆ. ಮನೆಯಲ್ಲಿ ಇನ್ನೂ ಎದ್ದಿರದ ತನ್ನ ಮಕ್ಕಳನ್ನು ನೆನೆಸುತ್ತಾನೆ. ಇಡೀ ದಿನ ಆಟೋರಿಕ್ಷಾವನ್ನು ಇಲ್ಲಿಂದತ್ತ ಅಲ್ಲಿಂದಿತ್ತ ಓಡಿಸಿ ಸುಸ್ತಾಗುತ್ತಾನೆ. ಮರಳಿ ಮನೆಗೆ ಬಂದಾಗ ರಾತ್ರಿಯಾಗಿರುತ್ತದೆ. ಅಪ್ಪನಿಗಾಗಿ ಕಾದು ಕಾದು ಮಕ್ಕಳು ನಿದ್ದೆಗೆ ಜಾರಿರುತ್ತಾರೆ. ಈತ ಸಮಾಜಕ್ಕೆ ಸಲ್ಲಿಸುವ ಸೇವೆಯನ್ನು ಗಮನಿಸುವವರಿಲ್ಲ, ಮೆಚ್ಚುಗೆ ವ್ಯಕ್ತಪಡಿಸುವವರಿಲ್ಲ. ಅವನು ತನ್ನ ಶ್ರಮಕ್ಕೆ ಸಲ್ಲಬೇಕಾದ ಪ್ರತಿಫಲ ಕೇಳುವಾಗ ದೂಷಣೆಗೆ ಒಳಗಾಗುತ್ತಾನೆ.

ಆಟೋರಿಕ್ಷಾ ಚಾಲಕರು ಸಾಮೂಹಿಕ ಚೌಕಾಸಿಯ ಶಕ್ತಿ ಇಲ್ಲದವರು. ಸಂಘಟಿತರಾಗಿ ತನ್ನ ಹಕ್ಕನ್ನು ಕೇಳಲು ಆತನಿಗೆ ಸಮಯವಿಲ್ಲ. ಹಾಗೇನಾದರೂ ಮಾಡಲು ಆತ ಮುಂದಾದರೆ “ನಿನಗೇಕೆ ಬೇಕು ರಾಜಕೀಯ” ಎಂದು ಮೂದಲಿಸುತ್ತಾರೆ. ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಆಟೋರಿಕ್ಷಾ ಪ್ರಯಾಣ ದರಗಳ ಪರಿಷ್ಕರಣೆ ಆಗಿರಲಿಲ್ಲ. ಈ ಅವಧಿಯಲ್ಲಿ ಹೊಸ ವಾಹನದ ಮುಖ ಬೆಲೆ, ಸಾರಿಗೆ ಇಲಾಖೆಯ ಶುಲ್ಕಗಳು, ಇಂಧನ ಹಾಗೂ ಎಲ್‌ಪಿಜಿ ಗ್ಯಾಸ್ ದರ ಮೊದಲಾದವುಗಳು ಏರಿಕೆ ಕಂಡಿವೆ. ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಆಟೋರಿಕ್ಷಾ ಚಾಲಕರು ಲಾಕ್‌ಡೌನ್ ಕಾರಣದಿಂದ ಜೀವನ ನಿರ್ವಹಣೆಗೆ ಬಹಳ ತೊಂದರೆ ಅನುಭವಿಸಿದ್ದಾರೆ. ಮಂಗಳೂರು ಹಾಗೂ ಉಡುಪಿ ನಗರಗಳಲ್ಲಿ ಈಗಾಗಲೇ ದರ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಗಳು ಮನವಿ ಸಲ್ಲಿಸಿ ಅಧಿಕಾರಿಗಳೊಂದಿಗೆ ಚರ್ಚೆಮಾಡಿ ಕೊನೆಗೂ ದರಗಳನ್ನು ಪರಿಷ್ಕರಿಸಿಕೊಂಡಿದ್ದಾರೆ. ಚಾಲಕರಿಗೆ ಈ ಹೆಚ್ಚಳ ತೃಪ್ತಿ ತಂದಿಲ್ಲ. ಅವರು ಕೇಳಿದ್ದು ರೂ. 18 ಈಗ ನಿಗಧಿಯಾಗಿರುವುದು ಕೇವಲ ರೂ. 15.

ಆಟೋ ಚಾಲಕರಲ್ಲಿ ಬಹುತೇಕ ಮಂದಿ ದರಗಳ ಏರಿಕೆಯನ್ನು ಬಯಸುವುದಿಲ್ಲ. ಅದರಿಂದ ಜನ ಸಾಮಾನ್ಯರಿಗೆ ಹೊರೆಯಾಗುತ್ತದೆ ಎಂದೂ ಜನರು ಆಟೋರಿಕ್ಷಾ ಪ್ರಯಾಣವನ್ನು ಕಡಿಮೆ ಮಾಡಿಕೊಳ್ಳುತ್ತಾರೆ ಎಂಬ ಆತಂಕ ಅವರಿಗಿದೆ. ಅದರ ಬದಲಾಗಿ ಎಲ್‌ಪಿಜಿ ಗ್ಯಾಸ್ ದರಗಳನ್ನು ಸರ್ಕಾರ ಇಳಿಸಬೇಕೆಂದು ಅವರು ಒತ್ತಾಯಿಸುತ್ತಾರೆ. ಇತ್ತೀಚೆಗೆ ಅವರು ಆಟೋರಿಕ್ಷಾಗಳಿಗೆ ಬಳಸುವ ಎಲ್‌ಪಿಜಿ ದರ ಏರಿಕೆಯನ್ನು ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷ ಎಲ್‌ಪಿಜಿ ಪ್ರತಿ ಕೆ.ಜಿ.ಗೆ ರೂ. 38 ಆಗಿತ್ತು. ಇದೀಗ ದರವನ್ನು ರೂ. 66 ಕ್ಕೆ ಏರಿಸಲಾಗಿದೆ. ದಿನದಿಂದ ದಿನಕ್ಕೆ ದರ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಬಡ ಆಟೋರಿಕ್ಷಾ ಚಾಲಕರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಪ್ರಧಾನಿ ಮೋದಿಯವರು ಜನವಿರೋಧಿ ಸರ್ಕಾರ ನಡೆಸುತ್ತಿದ್ದಾರೆ. ಬಡವರು ಮತ್ತು ಬಡ ಆಟೋರಿಕ್ಷಾ ಚಾಲಕರ ಬಗ್ಗೆ ಅವರಿಗೆ ಕನಿಷ್ಠ ಕನಿಕರ ಇದ್ದರೆ ಕೂಡಲೇ ಎಲ್‌ಪಿಜಿ ದರವನ್ನು ಇಳಿಸಲಿ ಎಂದು ಅವರು ಸವಾಲು ಹಾಕಿದರು.

ಕೆಲವು ಚಾಲಕರು ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿಗೆ ದರ ವಸೂಲಿ ಮಾಡಿ ತೊಂದರೆ ಕೊಡುತ್ತಿದ್ದಾರೆ. ಅವರು ಹಾಗೆ ಯಾಕೆ ಮಾಡುತ್ತಾರೆ? ಯಾಕೆಂದರೆ ಅವರ ಗಳಿಕೆ ಅವರ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಆದಾಯಕ್ಕಿಂತ ಖರ್ಚೆ ಹೆಚ್ಚು. ಸರ್ಕಾರದಿಂದ ಯಾವುದೇ ಪ್ರೋತ್ಸಾಹವಿಲ್ಲ. ಅವರಿಗೆ ವಾಸಕ್ಕೆ ಮನೆಗಳನ್ನು ಒದಗಿಸುವ ಕಾರ್ಯಕ್ರಮವಿಲ್ಲ. ಚಾಲಕರ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಲು ಸರ್ಕಾರದ ಯೋಜನೆ ಇಲ್ಲ. ವಾಹನದ ಬಿಡಿ ಭಾಗಗಳನ್ನು ರಿಯಾಯ್ತಿ ದರಗಳಲ್ಲಿ ಒದಗಿಸಲು ಸರ್ಕಾರಕ್ಕೆ ಯಾವುದೇ ಆಸಕ್ತಿ ಇಲ್ಲ. ಕೇಂದ್ರ ಸರ್ಕಾರ ಹೇಗೋ ಹಾಗೆ ರಾಜ್ಯ ಸರ್ಕಾರ. ಸಾರಿಗೆ ನಿಯಮಗಳನ್ನು ಆಕಸ್ಮಿಕವಾಗಿ ಉಲ್ಲಂಘಿಸಿದರೆ ಪೊಲೀಸರ ಕಿರುಕುಳ ಮಾತ್ರ ತಪ್ಪಿದಲ್ಲ.

Donate Janashakthi Media

Leave a Reply

Your email address will not be published. Required fields are marked *