ಕಲಬುರಗಿ: ಮೈಕ್ರೋ ಫೈನಾನ್ಸ್‌ಗಳ ಮೇಲೆ ಕಡಿವಾಣ ಹಾಕಲು ಸರ್ಕಾರವು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದರೂ, ಮೀಟರ್ ಬಡ್ಡಿ ದಂಧೆ ಮಾತ್ರ ಹಾಗೆಯೇ ಮುಂದುವರೆದಿದೆ. ಈ ಅಮಾನುಷ ದಂಧೆಯ ಪರಿಣಾಮವಾಗಿ ಕಲಬುರಗಿಯಲ್ಲಿ ಓರ್ವ ಆಟೋ ಚಾಲಕ ಬಲಿಯಾಗಿದ್ದಾರೆ. ಮೀಟರ್ ಬಡ್ಡಿ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಂದ್ರಕಾಂತ ಪೂಜಾರಿ (35) ಆತ್ಮಹತ್ಯೆಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ. ಕಲಬುರಗಿ ನಗರದ ಸಿದ್ದಾರೂಢ ಕಾಲೋನಿ ನಿವಾಸಿಯಾಗಿದ್ದ ಚಂದ್ರಕಾಂತ, ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಚಂದ್ರಕಾಂತ ಪೂಜಾರಿ, ಹೋಟೆಲ್ ಉದ್ಯಮಿ ಮಂದಾಕಿನಿ ಮತ್ತು ಅವರ ಮಗ ಶರಣು ಪಾಟೀಲ್ ಅವರಿಂದ 40,000 ರೂ. ಸಾಲ ಪಡೆದಿದ್ದರು. ಸಾಲ ತೀರಿಸಲು 50,000 ರೂ. ನೀಡಿದ್ದರೂ ಹೆಚ್ಚಿನ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಕೃಷಿ ಪಂಪ್ ಸೆಟ್ ಗಳಿಗೆ 3 ಫೇಸ್ ವಿದ್ಯುತ್ ಪೂರೈಕೆ ಹೆಚ್ಚಳ: ಕೆ.ಜೆ. ಜಾರ್ಜ್
ಆತ್ಮಹತ್ಯೆಗೂ ಮುನ್ನ ಚಂದ್ರಕಾಂತ ತಮ್ಮ ಸ್ನೇಹಿತರಿಗೆ ಆಡಿಯೋ ಸಂದೇಶವೊಂದನ್ನು ರೆಕಾರ್ಡ್ ಮಾಡಿದ್ದಾರೆ. “ನಾನು ರೊಕ್ಕಕ್ಕಾಗಿ ಸಾಯುತ್ತಿಲ್ಲ, ಮಂದಾಕಿನಿ ಪಾಟೀಲ್ ಮತ್ತು ಅವರ ಮಗನ ಟಾರ್ಚರ್ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಆಡಿಯೋದಲ್ಲಿ ಹೇಳಿಕೊಂಡಿದ್ದಾರೆ.
“ಭೀಮಾ ಮತ್ತು ನೀಲು ಎಂಬುವವರು ಕಳ್ಳತನ ಮಾಡಿದ ಆಟೋವನ್ನು ನನಗೆ ಮಾರಿದ್ದರು. ಎರಡು ವರ್ಷಗಳ ಹಿಂದೆ ನಾನು ಆ ಆಟೋವನ್ನು ಬೇರೆಯವರಿಗೆ ಮಾರಾಟ ಮಾಡಿದ್ದೆ. ನಂತರ ಈ ನಾಲ್ವರು ಸೇರಿ ಆಟೋ ಕಳ್ಳತನದ ಆರೋಪದಲ್ಲಿ ನನ್ನ ಮೇಲೆ ಕೇಸ್ ಹಾಕಿದರು. ನನ್ನ ಸಾವಿಗೆ ಈ ನಾಲ್ವರೇ ಕಾರಣ, ಇವರಿಗೆ ಶಿಕ್ಷೆಯಾಗಬೇಕು” ಎಂದು ಆಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಚಂದ್ರಕಾಂತ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಮೈಕ್ರೋ ಫೈನಾನ್ಸ್‌ಗೆ ಬ್ರೇಕ್ ಹಾಕು ಉದ್ದೇಶದಿಂದ ಸರ್ಕಾರ ಕಠಿಣ ಕ್ರಮ ಜರುಗಿಸಲು ಮುಂದಾಗಿದೆ. ಅನಧಿಕೃತ ಹಣಕಾಸು ಸಂಸ್ಥೆಗಳಿಗೆ 10 ವರ್ಷ ಕಠಿಣ ಜೈಲು, 5 ಲಕ್ಷ ರು. ದಂಡ, ಕಪ್ಪುಹಣಕ್ಕೆ ಕಡಿವಾಣ, ಬಲವಂತದ ಸಾಲ ವಸೂಲಿ ಹಾಗೂ ಕಿರುಕುಳಕ್ಕೆ ಕಡಿವಾಣ ಹಾಕುವ ‘ಕರ್ನಾಟಕ ಕಿರು ಸಾಲ (ಮೈಕ್ರೋ) ಮತ್ತು ಸಣ್ಣ ಸಾಲ ವಸೂಲಾತಿ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ-2025’ ಮತ್ತು ಇದಕ್ಕೆ ಪೂರಕವಾಗಿರುವ ಮೂರು ವಿಧೇಯಕಗಳನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಈ ಬಗ್ಗೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಕಿರು ಸಾಲ, ಸಣ್ಣ ಸಾಲ, ಖಾಸಗಿ ಹಣಕಾಸುದಾರರಿಂದ ಸಾಲ ಪಡೆದವರಿಗೆ ಉಂಟಾಗುವ ಕಿರುಕುಳ ತಪ್ಪಿಸಿ ರಕ್ಷಣೆ ನೀಡುವ ಉದ್ದೇಶದಿಂದ ಈ ವಿಧೇಯಕ ತರಲಾಗಿದೆ. ಅಲ್ಲದೆ, ಕೋ-ಆಪರೇಟಿವ್ ಸೊಸೈಟಿ, ಸೌಹಾರ್ದ ಬ್ಯಾಂಕ್ ಗಳನ್ನು ಸಹ ವಿಧೇಯಕಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದರು. ಬಳಿಕ, ‘ಕರ್ನಾಟಕ ಕಿರು ಸಾಲ (ಮೈಕ್ರೋ) ಮತ್ತು ಸಣ್ಣ ಸಾಲ ವಸೂಲಾತಿ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ-2025ಕ್ಕೆ ಅನುಮೋದನೆ ನೀಡಲಾಯಿತು.
ಮೈಕ್ರೋ ಫೈನಾನ್ಸ್ ವಿಧೇಯಕಕ್ಕೆ ಪೂರಕವಾಗಿರುವ ಕರ್ನಾಟಕ ಗಿರವಿದಾರರ (ತಿದ್ದುಪಡಿ) ವಿಧೇಯಕ, ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ (ತಿದ್ದುಪಡಿ) ವಿಧೇಯಕ, ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕವನ್ನು ಕೂಡ ಅಂಗೀಕರಿಸಲಾಯಿತು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿಧೇಯಕಗಳ ಕುರಿತು ವಿವರಿಸಿ ಸದನದ ಅನುಮೋದನೆ ಪಡೆದರು. ಗಿರವಿದಾರರ ಪರವಾನಗಿಯನ್ನು ಐದು ವರ್ಷದಿಂದ ಎರಡು ವರ್ಷಗಳಿಗೆ ಇಳಿಕೆ ಮಾಡುವ, 500 ರು. ದಂಡದ ಬದಲು ಐದು ಲಕ್ಷ ರು. ದಂಡ ವಿಧಿಸಲು ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಈ ವೇಳೆ, ಕಾಂಗ್ರೆಸ್ ಸದಸ್ಯ ಲಕ್ಷ್ಮಣ್ ಸವದಿ ಮಾತನಾಡಿ, ಪರವಾನಗಿಯನ್ನು ಎರಡು ವರ್ಷದ ಬದಲು ಮೂರು ವರ್ಷ ಮಾಡಬೇಕೆಂದು ಸಲಹೆ ನೀಡಿದರು. ಇದನ್ನು ಒಪ್ಪಿದ ಸಚಿವರು ಮೂರು ವರ್ಷವೆಂದು ಬದಲಿಸುವುದಾಗಿ ತಿಳಿಸಿದರು.
ಇದನ್ನೂ ನೋಡಿ: ಕೆಲಸದ ಅವಧಿ ಹೆಚ್ಳಳದ ವಿರುದ್ಧ ಐಟಿ ನೌಕರರ ಪ್ರತಿಭಟನೆ | ಉತ್ತಮ ಉದ್ಯೋಗ ಸಮತೋಲನ ಆರೋಗ್ಯಕ್ಕೆ ಆಗ್ರಹ Janashakthi