ಬೆಂಗಳೂರು: ನಗರದಲ್ಲಿ ಸುಮಾರು 1.75 ಲಕ್ಷ ಆಟೋರಿಕ್ಷಾಗಳು ಸೇರಿ ಎರಡೂವರೆ ಲಕ್ಷ ಚಾಲಕರು ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಈ ಚಾಲಕ ವರ್ಗಕ್ಕೆ ಇಲ್ಲಿಯವರೆಗೂ ಆಡಳಿತ ನಡೆಸಿದ ಸರ್ಕಾರಗಳು ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ಪ್ರಯಾಣಿಕರು ನೀಡುವ ಮೀಟರ್ ದರದಲ್ಲಿ ಆಟೋರಿಕ್ಷಾಗಳ ರಿಪೇರಿ ಖರ್ಚು, ಕುಟುಂಬದ ನಿರ್ವಹಣೆ ಮಾಡಿಕೊಂಡು ಜೀವನ ನಡೆಸುವ ಪರಿಸ್ಥಿತಿ ಇದೆ ಎಂದು ಎಆರ್‌ಡಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎನ್.ಶ್ರೀನಿವಾಸ್ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಆಟೋರಿಕ್ಷಾಗಳಿಗೆ ಉಪಯೋಗಿಸುವ ಇಂಧನ ಎಲ್‌ಪಿಜಿ ಗ್ಯಾಸ್ ಬೆಲೆ 58 ರೂಪಾಯಿ 18 ಪೈಸೆಯಿಂದ ನವೆಂಬರ್ 1ನೇ ತಾರೀಕಿನಿಂದ ಚಾಲ್ತಿಗೆ ಬರುವಂತೆ 66 ರೂಪಾಯಿಗಳಿಗೆ ಹೆಚ್ಚಳವಾಗಿದೆ. ಇದನ್ನು ಸಿಐಟಿಯು ಸಂಯೋಜಿತ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ (ಎಆರ್‌ಡಿಯು) ಸಂಘವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಧನದಾಹಿ ನೀತಿಯನ್ನು ಉಗ್ರವಾಗಿ ಖಂಡಿಸಿದೆ.
ಇದನ್ನು ಓದಿ: ಆಟೋರಿಕ್ಷಾ ರಹದಾರಿ ವಿತರಣೆಯಲ್ಲಿ ಭ್ರಷ್ಟಾಚಾರ-ದಲ್ಲಾಳಿಗಳ ಹಾವಳಿ: ಎಆರ್‌ಡಿಯು ಪ್ರತಿಭಟನೆ
ಕೊರೊನಾ ಸಾಂಕ್ರಾಮಿಕದ ಪರಿಣಾಮವಾಗಿ ಆರ್ಥಿಕವಾಗಿ ದಿವಾಳಿಯಾಗಿರುವ ಚಾಲಕರು ಕಳೆದ ಎರಡು ವರ್ಷಗಳು ಜೀವನ ನಡೆಸುವುದೇ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪದೇ ಪದೇ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ, ಆಟೋ ಗ್ಯಾಸ್ ದರಗಳನ್ನು ಪ್ರತಿನಿತ್ಯ ಹೆಚ್ಚಳ ಮಾಡುತ್ತಿವೆ. ಇದರ ಫಲವಾಗಿ ಎಲ್ಲಾ ಅಗತ್ಯ ಆಹಾರ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಚಾಲಕರು ಉತ್ತಮ ಬದುಕು ನಡೆಸುವುದೇ ಕಷ್ಟವಾಗಿದೆ ಎಂದು ಸಿ.ಎನ್.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಗಳು ಜನಗಳ ಕಷ್ಟ ಸುಖಗಳನ್ನು ಅರಿಯದೆ ದುಬಾರಿ ತೆರಿಗೆ ವಿಧಿಸಿ ಜನಸಾಮಾನ್ಯರ ನಡುವೆ ಚೆಲ್ಲಾಟವಾಡುತ್ತಿವೆ. ಈಗಾಗಲೇ ಆಟೋರಿಕ್ಷಾಗಳ ಬಿಡಿಭಾಗಗಳು ದುಬಾರಿಯಾಗಿದೆ. ಫೈನಾನ್ಸ್ ಕಂಪನಿಗಳ ಬಡ್ಡಿ ಚಕ್ರಬಡ್ಡಿ, ಆರ್‌ಟಿಓ ಶುಲ್ಕಗಳ ಹೆಚ್ಚಳ, ವಾಹನ ವಿಮಾ ಪ್ರೀಮಿಯಂ ದರ ಹೆಚ್ಚಳ, ಪೊಲೀಸರ ದಂಡ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಅಡುಗೆ ಅನಿಲ, ನೀರಿನ ಶುಲ್ಕ, ವಿದ್ಯುತ್ ಶುಲ್ಕ, ಅಡುಗೆ ಎಣ್ಣೆಗಳ, ಬೆಲೆ ಏರಿಕೆಯಿಂದಾಗಿ ಕಷ್ಟಪಟ್ಟು ಜೀವನ ನಡೆಸುತ್ತಿರುವ ಚಾಲಕರಿಗೆ ಇನ್ನಷ್ಟು ಗ್ಯಾಸ್ ದರ ಹೆಚ್ಚಳ ಮಾಡಿ ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಸಂಘಟನೆಯು ತಿಳಿಸಿದೆ.
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದಂತೆ ವರ್ತನೆ ಮಾಡುತ್ತಿವೆ.
ಎಆರ್‌ಡಿಯು ವತಿಯಿಂದ ಹಲವು ಬಾರಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಸಂಬಂಧಪಟ್ಟ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಇಲ್ಲಿಯವರೆಗೂ ಆಟೋರಿಕ್ಷಾಗಳ ಮೀಟರ್ ದರವನ್ನು ಹೆಚ್ಚಳ ಮಾಡಿಲ್ಲ. ಈಗಾಗಲೇ ಆಟೋರಿಕ್ಷಾ ಮೀಟರ್ ದರ ಹೆಚ್ಚಳ ಮಾಡಿ ಒಂಬತ್ತು ವರ್ಷಗಳು ಕಳೆದಿವೆ. ಇಲ್ಲಿಯವರೆಗೂ ಚಾಲಕರು ನಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಸರ್ಕಾರದ ಸಾರಿಗೆ ಸಚಿವ ಶ್ರೀರಾಮುಲು ಅವರು ಗಮನ ಹರಿಸಿ ನೊಂದ ಆಟೋರಿಕ್ಷಾ ಚಾಲಕರಿಗೆ ನೆರವಿಗೆ ಧಾವಿಸಿ ಆಟೋರಿಕ್ಷಾಗಳ ಮೀಟರ್ ದರವನ್ನು ಹೆಚ್ಚಳ ಮಾಡಬೇಕೆಂದು ಎಆರ್‌ಡಿಯು ಸಂಘ ಒತ್ತಾಯಿಸಿದೆ.
ಈ ಭಾಗವಾಗಿ ಬೇಡಿಕೆ ಈಡೇರಿಸದಿದ್ದರೆ ನವೆಂಬರ್ 09ರಂದು ಬೆಂಗಳೂರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಹೋರಾಟ ನಡೆಸಲು ಸಂಘಟನೆ ನೀರ್ಮಾನಿಸಿದೆ.