ಮಹಾಮಾರಿಯಂತಹ ಸಂದರ್ಭಗಳನ್ನು ಸ್ವಾಧೀನ ಪಡಿಸಿಕೊಂಡು, ಅದರ ಹೆಸರಲ್ಲಿ ತನಗೆ ಬೇಕಾದ ಕ್ರಮಗಳನ್ನು ಕಟ್ಟುವುದು ಸರ್ವಾಧಿಕಾರಶಾಹಿ ಆಳ್ವಿಕೆಗಳ ಸ್ವಭಾವವೇ ಆಗಿದೆ. ಲಕ್ಷ-ಲಕ್ಷ ವಲಸೆ ಕಾರ್ಮಿಕರ ಬದುಕಿನ ಪ್ರಶ್ನೆಯನ್ನು ಅಮಾನವೀಯವಾಗಿ ನಿಭಾಯಿಸಿರುವ ವೈಖರಿ, ಕೆಲವು ರಾಜ್ಯ ಸರಕಾರಗಳು ಕಾರ್ಮಿಕ ಕಾನೂನುಗಳನ್ನು ಕಳಚಿ ಹಾಕಲು ಸುಗ್ರೀವಾಜ್ಞೆಗಳನ್ನು ತರಲು ಪ್ರೋತ್ಸಾಹಿಸಿರುವ ರೀತಿ, ಅಪಾರದರ್ಶಕ, ಜವಾಬುದಾರಿಕೆ ಇಲ್ಲದ ಒಂದು ಗೂಢಚಾರೀ ಆಳ್ವಿಕೆಯ ಸ್ಥಾಪನೆ ಮತ್ತು ಅನಪೇಕ್ಷಿತ ವ್ಯಕ್ತಿಗಳನ್ನು ಬೆನ್ನಟ್ಟುವುದು- ಇವೆಲ್ಲವೂ ಭಾರತೀಯ ಜನತೆಗೆ ಅಪಾಯಕಾರಿ ದಿನಗಳು ಕಾದಿವೆ ಎಂಬದುರ ಮುನ್ಸೂಚನೆಗಳು. ಈ ಹಿಂದುತ್ವ ಸರ್ವಾಧಿಕಾರಶಾಹೀ ರಥ ದೇಶವನ್ನು ಗುಲಾಮಗಿರಿಗೆ ಇಳಿಸುವುದನ್ನು ತಡೆಯ ಬಯಸುವ ಎಲ್ಲರ ಮುಂದೆ ಇರುವ ಕಾರ್ಯಭಾರ ಸ್ಪಷ್ಟವಾಗಿದೆ.
ಕೊವಿಡ್-೧೯ ಮಹಾಮಾರಿ ಮೋದಿ ಸರಕಾರ ತಂದಿರುವ ಸರ್ವಾಧಿಕಾರಶಾಹಿ ವ್ಯವಸ್ಥೆಯನ್ನು ತೀವ್ರಗೊಳಿಸಿದೆ ಮತ್ತು ಗಟ್ಟಿಗೊಳಿಸಿದೆ. ಮೇ ೨೦೧೪ರಲ್ಲಿ ಮೋದಿ ಸರಕಾರ ಅಧಿಕಾರದಲ್ಲಿ ಪ್ರತಿಷ್ಠಾಪನೆಗೊಂಡಂದಿನಿಂದ ಸರ್ವಾದಿಕಾರಶಾಹಿ ಪ್ರವೃತ್ತಿ ಆರಂಭವಾಗಿದೆ. ಮೇ ೨೦೧೯ರಲ್ಲಿ ಅದು ಅಧಿಕಾರಕ್ಕೆ ಮರಳಿದ ನಂತರ ಇದು ಕ್ರೋಡೀಕರಣಗೊಂಡಿದೆ. ಈಗ ಒಂದು ವರ್ಷವಾಗುತ್ತಿರುವಾಗ ಕೊವಿಡ್ ಮಹಾಮಾರಿ ಸೃಷ್ಟಿಸಿರುವ ಅಸಾಮಾನ್ಯ ಸನ್ನಿವೇಶವನ್ನು ಸರ್ವಾಧಿಕಾರಶಾಹಿ ಆಳ್ವಿಕೆಯನ್ನು ಬಲಗೊಳಿಸಲು ಬಳಸಲಾಗುತ್ತಿದೆ.
ಈ ವೈರಸ್ ಭಾರತದ ಮೇಲೆ ತನ್ನೆಲ್ಲ ಬಲದೊಂದಿಗೆ ಎರಗುವ ಮೊದಲು ಕೂಡ ಸರಕಾರ ಸಿಎಎ/ಎನ್‌ಆರ್‌ಸಿ-ವಿರೋಧಿ ಪ್ರತಿಭಟನೆಗಳನ್ನು ದಮನ ಮಾಡುವಲ್ಲಿ ಮಗ್ನವಾಗಿತ್ತು. ಲಾಕ್‌ಡೌನ್ ಹೇರಿದ ಮೇಲೆ ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ದಾಳಿಗಳು, ಕರಾಳ ಕಾಯ್ದೆಗಳ ಬಳಕೆ, ಮತ್ತು ಮುಸ್ಲಿಂ ಸಮುದಾಯ, ಮಾಧ್ಯಮಗಳು ಹಾಗೂ ವಿರೋಧಿ ದನಿಗಳ ಮೇಲೆ ಗುರಿಯಿಡುವ ಕೆಲಸ ಎಷ್ಟೋ ಪಾಲು ಹೆಚ್ಚಿದೆ.
ದಿಲ್ಲಿಯಲ್ಲಿ ಅಮಿತ್ ಷಾ ಗೃಹ ಮಂತ್ರಾಲಯದ ಅಡಿಯಲ್ಲಿ ನಡೆಯುತ್ತಿರುವ ಸಂಗತಿಗಳು ಒಂದು ಬೋಧಕ, ಕರಾಳತೆಯ ಪಾಟ. ಎಲ್ಲಕ್ಕೂ ಮೊದಲು, ದಿಲ್ಲಿ ಪೊಲಿಸ್ ಈಶಾನ್ಯ ದಿಲ್ಲಿಯಲ್ಲಿನ ಕೋಮುವಾದಿ ಹಿಂಸಾಚಾರಕ್ಕೆ ಹಲವು ಮುಸ್ಲಿಂ ಯುವಜನರನ್ನು ಸುತ್ತುವರೆದಿದ್ದಾರೆ, ಅವರು ಯಾವುದೇ ಕಾನೂನು ದಾರಿಯನ್ನು ಹಿಡಿಯಲಾಗದಂತೆ ಜೈಲಿಗೆ ಹಾಕಿದ್ದಾರೆ. ಅದೇ ವೇಳೆಗೆ, ಬಿಜೆಪಿ ಮುಖಂಡ ಕಪಿಲ್ ಮಿಶ್ರರಿಂದ ಆರಂಭಿಸಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದವರೆಂದು ಗುರುತಿಸಲ್ಪಟ್ಟವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೂ ಘಾತಕ ಕೆಲಸ ಎಂದರೆ, ಈ ಹಿಂಸಾಚಾರಕ್ಕೆ ಏನೇನೂ ಸಂಬಂಧವಿರದ ಸಿಎಎ-ವಿರೋಧಿ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಗುರಿಯಿಟ್ಟಿದ್ದಾರೆ.
ಹೀಗೆ ಬಂಧಿತರಾದವರಲ್ಲಿ ಜಾಮಿಯ ವಿಶ್ವವಿದ್ಯಾಲಯದ ಪಿಹೆಚ್‌ಡಿ ವಿದ್ಯಾರ್ಥಿನಿ ೨೭ ವರ್ಷದ ಸಫೂರಾ ಝರ್ಗರ್ ಕೂಡ ಇದ್ದಾರೆ. ಕರಾಳ ಕಾಯ್ದೆ ಯು.ಎ.ಪಿ.ಎ. ಅಡಿಯಲ್ಲಿ, ಆಕೆ ಗರ್ಭಿಣಿಯಾಗಿದ್ದರೂ ಜೈಲಿನಲ್ಲಿ ಇಡಲಾಗಿದೆ. ಬಂಧಿತರಾದ ಇತರರಲ್ಲಿ ಜಾಮಿಯ ಮತ್ತು ಜೆಎನ್‌ಯುನ ಹಿಂದಿನ ವಿದ್ಯಾರ್ಥಿಗಳು ಮತ್ತು ಸಂಶೋಧಕರೂ ಇದ್ದಾರೆ. ಕೊರೊನ ವೈರಸ್ ಸಂಬಂಧಪಟ್ಟಂತೆ ಮುಸ್ಲಿಂ-ವಿರೋಧಿ ಪ್ರಚಾರಕ್ಕೆ ವಿರೋಧವನ್ನು ವ್ಯಕ್ತಪಡಿಸಿದವರನ್ನೂ ಕೂಡ ಕರಾಳ ಕಾಯ್ದೆಗಳ ಅಡಿಯಲ್ಲಿ ಬಂಧಿಸಲಾಗಿದೆ.
ದಿಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಝಫರುಲ್ ಇಸ್ಲಾಮ್ ಖಾನ್ ರವರ ಮೇಲೆ, ಅವರು ಬಿಜೆಪಿಗೆ ಇಷ್ಟವಾಗದ ಒಂದು ಟ್ವಿಟ್ ಮಾಡಿದ್ದಕ್ಕಾಗಿ ರಾಜದ್ರೋಹದ ಆರೋಪವನ್ನು(ಐಪಿಸಿ ಸೆಕ್ಷನ್ ೧೨೪ ಎ ಅಡಿಯಲ್ಲಿ) ಹಾಕಲಾಗಿದೆ. ಯು.ಎ.ಪಿ.ಎ.ಯನ್ನು ಪ್ರತಿಷ್ಠಿತ ಚಿಂತಕರುಗಳಾದ ಆನಂದ್ ತೇಲ್ತುಂಬ್ಡೆ ಮತ್ತು ಗೌತಮ್ ನವ್ಲಖ ರವರ ಮೇಲೆ ಅವರು ಭೀಮ-ಕೊರೆಗಾಂವ್ ಕೇಸಿನಲ್ಲಿ ಹಿಂಸಾಚಾರ ಪ್ರಚೋದಿಸಿದ್ದಾರೆಂಬ ಸುಳ್ಳು ಆರೋಪವನ್ನು ಹೇರಿ ಬಂಧಿಸಲು ಬಳಸಲಾಗಿದೆ. ಜೈಲುಗಳ ದಟ್ಟಣೆಯನ್ನು ಕಡಿಮೆ ಮಾಡಲು ಕೈದಿಗಳನ್ನು ಬಿಡುಗಡೆ ಮಾಡುತ್ತಿರುವಾಗ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತರ ಬಗ್ಗೆ ಇಂತಹ ಯಾವ ಪರಿಗಣನೆಯೂ ಇಲ್ಲದೆ ಜೈಲಿಗಟ್ಟಲಾಗಿದೆ.
ಮಹಾಮಾರಿ ವ್ಯಾಪಕವಾಗಿ ಹಬ್ಬುವ ಮೊದಲೇ ರಾಜದ್ರೋಹದ ಕಲಮು ವ್ಯಾಪಕವಾಗಿತ್ತು. ಅದು ಈಗ ಅತಿರೇಕಕ್ಕೆ ಹೋಗಿದೆ.
ಮಾಧ್ಯಮಗಳನ್ನು ಪಳಗಿಸುವುದು ಸರ್ವಾಧಿಕಾರಶಾಹಿಯ ಆಳ್ವಿಕೆಯ ಗುರಿಗಳಲ್ಲಿ ಒಂದು. ಲಾಕ್‌ಡೌನ್ ಪ್ರಕಟಿಸುವ ಕೆಲವೇ ಗಂಟೆಗಳ ಮೊದಲು ಪ್ರಧಾನ ಮಂತ್ರಿಗಳು ಮಾಧ್ಯಮ ಮಾಲಕರು ಮತ್ತು ಸಂಪಾದಕರುಗಳ ಒಂದು ಸಭೆ ಕರೆದು ಸಕಾರಾತ್ಮಕ ಕಥನಗಳನ್ನೇ ಹಾಕಬೇಕು, ನಕಾರಾತ್ಮಕವಾದುದನ್ನು, ಊಹಾಪೋಹಗಳನ್ನು ಹಾಕಬಾರದು ಎಂದು ಅವರಿಗೆ ಹೇಳಲಾಯಿತು. ಈ ತಾಕೀತನ್ನು ಅನುಸರಿಸಿ ಮಾಧ್ಯಮಗಳ ಬಾಯಿ ಮುಚ್ಚಿಸುವುದನ್ನು ಸಂಪಾದಕರುಗಳ ಮೇಲೆ ಎಫ್‌ಐಆರ್ ಹಾಕುವ ವರೆಗೂ ( ದಿ ವೈರ್‌ನ ಮುಖ್ಯ ಸಂಪಾದಕರ ಮೇಲೆ ಹಾಕಿರುವಂತೆ) ವಿಸ್ತರಿಸಲಾಗಿದೆ. ಒಂದು ಗುಜರಾತಿ ಸುದ್ದಿ ತಾಣದ ಸಂಪಾದಕ ಧವಳ ಪಟೇಲ್ ಮೇಲೆ ರಾಜದ್ರೋಹದ ಆರೋಪವನ್ನೂ ಹಾಕಲಾಗಿದೆ. ಅವರು ಮಾಡಿರುವ ಅಪರಾಧವೆಂದರೆ, ಗುಜರಾತಿನ ಮುಖ್ಯಮಂತ್ರಿ ರೂಪಾನಿಯನ್ನು ರಾಜ್ಯದಲ್ಲಿ ಕೊವಿಡ್ ಮಹಾಮಾರಿಯನ್ನು ಸರಿಯಾಗಿ ನಿಭಾಯಿಸಲಾಗದ್ದಕ್ಕೆ ಬದಲಿಸಬಹುದು ಎನ್ನುವ ಒಂದು ವರದಿಯನ್ನು ಪ್ರಕಟಿಸಿದ್ದು. ಕಳೆದ ತಿಂಗಳು ಕಾಶ್ಮೀರದಲ್ಲಿ ಇಬ್ಬರು ಪತ್ರಕರ್ತರನ್ನು ಯು.ಎ.ಪಿ.ಎ. ಅಡಿಯಲ್ಲಿ ಬಂಧಿಸಲಾಯಿತು.
ಲಾಕ್‌ಡೌನ್ ಜಾರಿಯ ಬಗ್ಗೆ ಯಾವುದೇ ವಿಮರ್ಶೆಯೂ ನಿಷಿದ್ಧ. ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಇಬ್ಬರು ಕಾರ್ಯಕರ್ತರು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಹಗರಣವನ್ನು ಬಯಲಿಗೆಳೆದರೆಂದು ಬಂಧಿಸಲಾಯಿತು. ಎರಡು ವರ್ಷಗಳ ಹಿಂದಿನ ಇದಕ್ಕೇನೂ ಸಂಬಂಧವಿಲ್ಲದ ಕೇಸಿನಲ್ಲಿ ಅವರನ್ನು ಬಂಧಿಸಲಾಗಿದೆ.
ಸರ್ವಾಧಿಕಾರಶಾಹಿಯ ಮೋದಿ ಬ್ರಾಂಡ್ ಎಲ್ಲ ಸ್ವತಂತ್ರ ಸಂಸ್ಥೆಗಳನ್ನು ಮತ್ತು ಆಳ್ವಿಕೆ ಮಿತಿ ದಾಟಿ ಹೋಗದಂತೆ ಇರುವ ವಿಧಿ-ನಿಯಮಗಳನ್ನೆಲ್ಲ ಕಳಚಿ ಹಾಕಲು ಪ್ರಯತ್ನಿಸುತ್ತಿದೆ. ಇದರಲ್ಲಿ ಅದು ಪಡೆದಿರುವ ಅತ್ಯಂತ ಆತಂಕಕಾರಿ ಯಶಸ್ಸು ಎಂದರೆ ಉನ್ನತ ನ್ಯಾಯಾಂಗಕ್ಕೆ ಸಂಬಂಧಪಟ್ಟದ್ದು. ನ್ಯಾಯಾಂಗ ಹೆಚ್ಚೆಚ್ಚಾಗಿ ಎಲುಬಿಲ್ಲದಂತಾಗುತ್ತಿದೆ, ಕಾರ್ಯಾಂಗದ ಆಗ್ರಹಗಳಿಗೆ ಮಣಿಯುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ೪ಜಿ ನಿರಾಕರಣೆ ಕುರಿತ ಪ್ರಕರಣದಲ್ಲಿ ಇತ್ತಿಚಿನ ಸುಪ್ರಿಂ ಕೋರ್ಟ್ ತೀರ್ಪು ಇದಕ್ಕೊಂದು ಉದಾಹರಣೆ. ಸ್ವತಃ ಸುಪ್ರಿಂ ಕೋರ್ಟ್ ನಾಗರಿಕರ ಮೂಲಭೂತ ಹಕ್ಕುಗಳ ಪರವಾಗಿ ಎದ್ದು ನಿಲ್ಲಲು ಹಿಂದೇಟು ಹಾಕುತ್ತಿರುವುದರಿಂದಾಗಿ ಮೋದಿ ಸರಕಾರಕ್ಕೆ ತನ್ನೆಲ್ಲ ಆಕ್ರೋಶಕಾರಿ ಧೋರಣೆಗಳಿಗೆ ಕಾನೂನು ಬದ್ಧತೆಯ ಉಡುಗೆ ತೊಡಿಸುವುದು ಸಾಧ್ಯವಾಗಿದೆ.
ಮಹಾಮಾರಿ ಸರ್ವಾಧಿಕಾರಶಾಹಿಯ ಇನ್ನೊಂದು ದುಷ್ಟ ಅಂಶವನ್ನು ಮುನ್ನೆಲೆಗೆ ತಂದಿದೆ. ಅದೆಂದರೆ, ಸಂವಿಧಾನದಲ್ಲಿ ಅಸ್ತಿತ್ವದಲ್ಲಿರುವ ಒಕ್ಕೂಟ ತತ್ವವನ್ನು ಕಳಚಿ ಹಾಕಿ ವಿಪರೀತ ಕೇಂದ್ರೀಕೃತ ಅಧಿಕಾರಶಾಹೀ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸುವುದು. ಕೇಂದ್ರ ಸರಕಾರ ವ್ಯವಸ್ಥಿತವಾಗಿ ರಾಜ್ಯಗಳ ಅಳಿದುಳಿದ ಅಧಿಕಾರಗಳನ್ನೂ ಉಲ್ಲಂಘಿಸಿ ಆದೇಶಗಳು ಮತ್ತು ಹಣಕಾಸು ದಿವಾಳಿತನದ ಮೂಲಕ ಮೊಣಕಾಲೂರುವಂತೆ ಮಾಡುವ ಕೆಲಸದಲ್ಲಿ ತೊಡಗಿದೆ. ಬಹಳಷ್ಟು ಪ್ರಚಾರ ಕೊಟ್ಟ ಮುಖ್ಯಮಂತ್ರಿಗಳೊಂದಿಗಿನ ಐದು ವಿಡಿಯೋ ಸಮ್ಮೇಳನಗಳ ನಂತರ, ಮುಖ್ಯಮಂತ್ರಿಗಳು ಮತ್ತೆ-ಮತ್ತೆ ಕೇಳಿದ ಒಂದು ಹಣಕಾಸು ಪ್ಯಾಕೇಜಿನ ಬಗ್ಗೆ ಸ್ಪಂದಿಸಲು ಪ್ರಧಾನ ಮಂತ್ರಿಗಳು ನಿರಾಕರಿಸಿದ್ದಾರೆ. ಅವರು ಕೇಳಿರುವುದು ತಮಗೆ ಸಲ್ಲತಕ್ಕ ಬಾಕಿಗಳನ್ನು ಕೊಡಬೇಕು ಮತ್ತು ಸಾಲ ಪಡೆಯುವ ಮಿತಿಯನ್ನು ಸುಲಭ ಷರತ್ತುಗಳ ಮೇಲೆ ಹೆಚ್ಚಿಸಬೇಕು ಎಂಬುದು. ಕೇಂದ್ರ ಸರಕಾರ ರಾಜ್ಯ ಸರಕಾರಗಳು ತನ್ನ ಮರ್ಜಿಗೆ ಒಳಪಟ್ಟಿರಬೇಕು ಎಂದು ಬಯಸುತ್ತಿದೆ. ಮಹಾಮಾರಿಯನ್ನು ಎದುರಿಸುವುದು ಒಂದು ಆರೋಗ್ಯ ಕ್ಷೇತ್ರದ ಪ್ರಶ್ನೆ, ಇದು ಸ್ಪಷ್ಟವಾಗಿಯೂ ರಾಜ್ಯ ಪಟ್ಟಿಯಲ್ಲಿರುವ ವಿಷಯ. ಆದರೂ ಕೇಂದ್ರ ಸರಕಾರ ವಿಪತ್ತು ನಿರ್ವಹಣೆ ಕಾಯ್ದೆಯನ್ನು ಬಳಸಿಕೊಂಡು ರಾಜ್ಯಗಳ ಮೇಲೆ ಅಸಂವೈಧಾನಿಕ ರೀತಿಯಲ್ಲಿ ಸವಾರಿ ಮಾಡುತ್ತಿದೆ.
ಈ ಸರ್ವಾಧಿಕಾರಶಾಹೀ ಆಳ್ವಿಕೆ ಲಕ್ಷ-ಲಕ್ಷ ವಲಸೆ ಕಾರ್ಮಿಕರ ಬದುಕಿನ ಪ್ರಶ್ನೆಯನ್ನು ಅಮಾನವೀಯವಾಗಿ ನಿಭಾಯಿಸಿರುವ ವೈಖರಿ, ಕೆಲವು ರಾಜ್ಯ ಸರಕಾರಗಳು ಕಾರ್ಮಿಕ ಕಾನೂನುಗಳನ್ನು ಕಳಚಿ ಹಾಕಲು ಸುಗ್ರೀವಾಜ್ಞೆಗಳನ್ನು ತರಲು ಪ್ರೋತ್ಸಾಹಿಸಿರುವ ರೀತಿ, ಅಪಾರದರ್ಶಕ, ಜವಾಬುದಾರಿಕೆ ಇಲ್ಲದ ಒಂದು ಗೂಢಚಾರೀ ಆಳ್ವಿಕೆಯ ಸ್ಥಾಪನೆ ಮತ್ತು ಅನಪೇಕ್ಷಿತ ವ್ಯಕ್ತಿಗಳನ್ನು ಬೆನ್ನಟ್ಟುವುದು- ಇವೆಲ್ಲವೂ ಭಾರತೀಯ ಜನತೆಗೆ ಅಪಾಯಕಾರಿ ದಿನಗಳು ಕಾದಿವೆ ಎಂಬದುರ ಮುನ್ಸೂಚನೆಗಳು.
ಹಿಂದಿನ ಅನುಭವಗಳಿಂದ ನಮಗೆ ಗೊತ್ತಿದೆ- ಕೊವಿಡ್ ಮಹಾಮಾರಿ ಅಂತ್ಯಗೊಂಡ ನಂತರ ಈ ಯಾವುದೇ ಪ್ರಜಾಪ್ರಭುತ್ವ-ವಿರೋದಿ, ಜನ-ವಿರೋಧಿ ಕ್ರಮಗಳನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ಇಂತಹ ಸಂದರ್ಭಗಳನ್ನು ಸ್ವಾಧೀನ ಪಡಿಸಿಕೊಂಡು, ಅದರ ಮೇಲೆ ಇಂತಹ ಆನುಷಂಗಿಕ ಕ್ರಮಗಳನ್ನು ಕಟ್ಟುವುದು ಸರ್ವಾಧಿಕಾರಶಾಹಿ ಆಳ್ವಿಕೆಗಳ ಸ್ವಭಾವವೇ ಆಗಿದೆ. ಮೋದಿಯವರ ಇತ್ತೀಚಿನ ಭಾಷಣದಲ್ಲಿ ೨೧ನೇ ಶತಮಾನವನ್ನು ಭಾರತದ ಶತಮಾನವಾಗಿ ಮಾಡಬೇಕು, ಒಂದು ಸ್ವಾವಲಂಬೀ ಭಾರತವನ್ನು ಕಟ್ಟಬೇಕು ಎಂಬ ಜನಮರುಳು ಅಬ್ಬರದ ಮಾತು ಒಂದೆಡೆಯಾದರೆ, ತದ್ವಿರುದ್ಧವಾಗಿ ಇನ್ನೊಂದೆಡೆಯಲ್ಲಿ ದೇಶದ ಪ್ರಮುಖ ಸಾರ್ವಜನಿಕ ವಲಯದ ತೈಲಕಂಪನಿಗಳಲ್ಲಿ ಒಂದಾದ ಬಿಪಿಸಿಎಲ್‌ನ್ನು ಒಂದು ವಿದೇಶಿ ಕಂಪನಿಗೆ ಮಾರುವುದು ಮತ್ತು ಭಾರತವನ್ನು ಅಮೆರಿಕಾದ ಒಂದು ಅಡಿಯಾಳು ಮಿತ್ರನ ಮಟ್ಟಕ್ಕೆ ಇಳಿಸುವುದನ್ನು ಕಾಣುತ್ತಿದ್ದೇವೆ.
ಈ ಹಿಂದುತ್ವ ಸರ್ವಾಧಿಕಾರಶಾಹೀ ರಥ ದೇಶವನ್ನು ಗುಲಾಮಗಿರಿಗೆ ಇಳಿಸುವುದನ್ನು ತಡೆಯ ಬಯಸುವ ಎಲ್ಲರ ಮುಂದೆ ಇರುವ ಕಾರ್ಯಭಾರ ಸ್ಪಷ್ಟವಾಗಿದೆ. ಅವರೆಲ್ಲರೂ ಜನಗಳ ಜೀವನಾಧಾರಗಳು, ಅವರ ಪ್ರಜಾಪ್ರಭುತ್ವ ಹಕ್ಕುಗಳು, ಒಕ್ಕೂಟ ತತ್ವ ಮತ್ತು ಜಾತ್ಯತೀತ-ಪ್ರಜಾಪ್ರಭುತ್ವದ ಮೇಲೆ ಪ್ರಹಾರಗಳ ವಿರುದ್ಧ ಯಾವುದೇ ರಾಜಿಯಿಲ್ಲದ ಹೋರಾಟವನ್ನು ನಡೆಸಬೇಕಾಗಿದೆ. ಕೊವಿಡ್ ಬಿಕ್ಕಟ್ಟಿನ ನಂತರ ಒಂದು “ರಾಜದ್ರೋಹಾತ್ಮಕ” ಬಂಡಾಯಗಳ ಒಂದು ಅಲೆಯೇ ಎದ್ದು ಬರಲಿದೆ ಎಂಬುದನ್ನು ಸೂಚಿಸುತ್ತದೆ.