ಬೆಂಗಳೂರು: ‘ಬದಲಾದ ಪರಿಸ್ಥಿತಿಯಲ್ಲಿ ಭಯದ ವಾತಾವರಣದಲ್ಲಿ ಬದುಕುತ್ತಿದ್ದು, ಲೇಖಕರಿಗೆ ಮುಕ್ತವಾಗಿ ಬರೆಯಲು ಸಾಧ್ಯವಾಗುತ್ತಿಲ್ಲ’ ಎಂದು, ಅಕಾಡೆಮಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ‘ಲಂಕೇಶ್ ಬಹುತ್ವಗಳ ಶೋಧ’ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಕಳವಳ ವ್ಯಕ್ತಪಡಿಸಿದರು.
‘ಆ ಕಾಲದ ನಮ್ಮಂತಹ ತರುಣ ಬರಹಗಾರರಿಗೆ ನೈತಿಕ ಸ್ಥೈರ್ಯವಾಗಿ ಲಂಕೇಶ್ ನಿಂತಿದ್ದರು. ರಕ್ಷಿಸಲು ನಾನಿದ್ದೇನೆ ಎಂಬ ಸಮಾಧಾನದ ನೆಲೆಯನ್ನು ಒದಗಿಸಿಕೊಟ್ಟಿದ್ದರು. ಆ ವೇಳೆ ಬರವಣಿಗೆಗೆ ಸುರಕ್ಷಿತ ವಾತಾವರಣವಿತ್ತು. ಸಾಹಿತಿಗಳಿಗೂ ಭಯ ಇರಲಿಲ್ಲ. ಆದರೆ, ಈ ಕಾಲದ ಲೇಖಕರಾದ ನಾವು, ಇಂದಿನ ತರುಣರಿಗೆ ಆ ವಿಶ್ವಾಸ ಸೃಷ್ಟಿಸುವಲ್ಲಿ ಸೋತಿದ್ದೇವೆ’ ಎಂದು ಹೇಳಿದರು.
ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ, ‘ನಾಟಕದ ಮೂಲಕವೇ ನಾನು ಲಂಕೇಶ್ ರಿಗೆ ಪರಿಚಿತನಾಗಿದ್ದೆ. ಅವರ ನಾಟಕದ ಗದ್ಯವು ಕಾವ್ಯಾತ್ಮಕ ಶೈಲಿಯಲ್ಲಿದೆ. ತಮ್ಮ ಒಂದು ಮನೆಯನ್ನು ಮಾರಿ ಅವರು ‘ಪಲ್ಲವಿ’ ಸಿನಿಮಾ ಮಾಡಿದ್ದರು. ಹೇಳಬೇಕಾದ್ದನ್ನು ಹೆಚ್ಚು ಜನರಿಗೆ ತಲುಪಿಸಲು ಸಿನಿಮಾ ಮಾಧ್ಯಮವಾಗುತ್ತದೆ ಎಂದು ನಂಬಿದ್ದರು. ಸಿನಿಮಾ, ನಾಟಕ ಏನೇ ಇರಲಿ ಅಸಹಾಯಕರ ಪರವಾಗಿ ಹೋರಾಟ ಮಾಡಬೇಕು ಎಂದು ಅವರು ಹೇಳಿದ್ದರು. ಅವರ ಈ ಮಾತನ್ನು ಇವತ್ತಿಗೂ ನಾನು ನನ್ನ ಧಾರಾವಾಹಿಗಳಲ್ಲಿ ಅನುಸರಿಸುತ್ತಿದ್ದೇನೆ’ ಎಂದು ಹೇಳಿದರು.
ಇದನ್ನೂ ಓದಿ: ಮಗುವನ್ನು ವಿಶ್ವಮಾನವನ್ನಾಗಿ ರೂಪಿಸುವುದು ಶಿಕ್ಷಣದ ಕರ್ತವ್ಯ: ಕಾರ್ಯದರ್ಶಿ ಅಹಮದ್
ಲೇಖಕಿ ಬಾನು ಮುಷ್ತಾಕ್, ‘ಲಂಕೇಶ್ ಚಲನಚಿತ್ರ, ಪತ್ರಿಕೆ, ನಾಟಕ, ಕತೆ, ಕಾದಂಬರಿಗಳಲ್ಲಿ ಸಾಮಾಜಿಕ ಜನಜೀವನ ಹಾಗೂ ಚಿಂತನಾಕ್ರಮವನ್ನು ಕ್ರೊಢೀಕರಿಸುತ್ತಾ ಹೋದರು. ಸ್ವ ಪ್ರಶಂಸೆಯನ್ನು ಅವರು ಎಂದಿಗೂ ಒಪ್ಪಿಕೊಳ್ಳುತ್ತಿರಲಿಲ್ಲ. ಪತ್ರಿಕೆಯ ಭಾಷೆಯನ್ನು ಗ್ರಾಂಥಿಕದಿಂದ ಜನಸಾಮಾನ್ಯರ ಆಡುಭಾಷೆಗೆ ಬದಲಿಸಿದರು. ಕರ್ನಾಟಕದ ರಾಜಕೀಯವನ್ನು ನಿರ್ದೇಶಿಸುವ ಮಟ್ಟಕ್ಕೆ ಅವರ ಪತ್ರಿಕೆ ಬೆಳೆದಿತ್ತು. ಲಂಕೇಶರನ್ನು ನಾವು ಸಮಗ್ರವಾಗಿ ನೋಡಲಾಗದು. ನಮ್ಮ ನಮ್ಮ ಅರಿವಿಗೆ ನಿಲುಕಿದಷ್ಟು ಪಾರ್ಶ್ವ ನೋಟವಷ್ಟೇ ಸಾಧ್ಯ’ ಎಂದರು.
ಶಿಬಿರದ ನಿರ್ದೇಶಕಿಯೂ ಆದ ಲೇಖಕಿ ಎಂ.ಎಸ್. ಆಶಾದೇವಿ, ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್, ಶಿಬಿರದ ಸಹ ನಿರ್ದೇಶಕ ವಿಜಯ್ ಹನಕೆರೆ, ರಿಜಿಸ್ಟ್ರಾರ್ ಎನ್.ಕರಿಯಪ್ಪ, ಸದಸ್ಯ ಸಂಚಾಲಕರಾದ ಎಚ್.ಆರ್. ಸುಜಾತ, ಕಾ.ವೆಂ. ಶ್ರೀನಿವಾಸಮೂರ್ತಿ ಹಾಗೂ ಸುಮಾ ಸತೀಶ್ ಉಪಸ್ಥಿತರಿದ್ದರು.
ಇದನ್ನೂ ನೋಡಿ: ಉಪನ್ಯಾಸ ಸರಣಿ ಉದ್ಘಾಟನೆ | ಡಾ. ಪುರುಷೋತ್ತಮ ಬಿಳಿಮಲೆ, ತೇಜಸ್ವಿನಿ ನಿರಂಜನ ಮಾತುಗಳು