ಬೆಂಗಳೂರು: ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಆಸ್ಟ್ರೇಲಿಯಾದ ಅಗ್ರಗಣ್ಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ನ್ಯೂಸೌತ್ ವೇಲ್ಸ್ ವಿವಿ ತನ್ನ ಕ್ಯಾಂಪಸ್ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಆರಂಭಿಸಲಿದೆ. ಈ ಸಂಬಂಧದ ಒಪ್ಪಂದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರ ಸಮ್ಮುಖದಲ್ಲಿ ಸಹಿ ಮಾಡಲಾಯಿತು.
ಈ ವಿಶ್ವವಿದ್ಯಾಲಯವು ಸದ್ಯಕ್ಕೆ ವಾಣಿಜ್ಯ, ಮಾಧ್ಯಮ, ಕಂಪ್ಯೂಟರ್ ಮತ್ತು ಡೇಟಾ ವಿಜ್ಞಾನ ಕೋರ್ಸುಗಳಲ್ಲಿ ಪದವಿ ಹಾಗೂ ಸೈಬರ್ ಸೆಕ್ಯುರಿಟಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ನೀಡಲಿದೆ ಎಂದು ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಸುಧಾಕರ ಅವರು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ನ್ಯೂಸೌತ್ ವೇಲ್ಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಟಿಲಾ ಬ್ರಂಗ್ಸ್ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರು ಒಪ್ಪಂದ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಇದನ್ನೂ ಓದಿ : ಮೈಸೂರು | ರಾಜ್ಯ ಸರ್ಕಾರವೇ ಮಿನಿ ಚಿತ್ರಮಂದಿರಗಳನ್ನು ನಿರ್ಮಿಸಲಿ – ಸಾಹಿತಿ ಬರಗೂರು ಸಲಹೆ
ನಿಯೋಗದೊಂದಿಗೆ ವಿಚಾರ ವಿನಿಮಯ ನಡೆಸಿದ ನಂತರ ಮಾತನಾಡಿದ ಎಂ.ಬಿ.ಪಾಟೀಲ್, ನ್ಯೂಸೌತ್ ವೇಲ್ಸ್ ವಿ.ವಿ.ದ ಶೈಕ್ಷಣಿಕ ಮಂಡಲಿಯೇ ಬೆಂಗಳೂರು ಕ್ಯಾಂಪಸ್ನಲ್ಲಿ ಓದುವ ವಿದ್ಯಾರ್ಥಿಗಳ ಮೇಲೆ ನಿಗಾ ಇಡಲಿದೆ. ಅಲ್ಲಿ ತಾನು ಹೊಂದಿರುವ ಪಠ್ಯಕ್ರಮವನ್ನೇ ಇಲ್ಲೂ ಬೋಧಿಸಲಿದೆ. ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಹಲವು ಅಗ್ರಮಾನ್ಯ ಕಂಪನಿಗಳೂ ಇರುವುದರಿಂದ ವಿದ್ಯಾರ್ಥಿಗಳ ಕಲಿಕೆ, ಕೌಶಲ್ಯಾಭ್ಯಾಸಕ್ಕೆ ನೆರವು ಸುಗಮವಾಗಿ ಸಿಗಲಿದೆ. ಮುಂಬರುವ ದಿನಗಳಲ್ಲಿ ಕ್ವಿನ್ ಸಿಟಿಯಲ್ಲಿ ಇವರ ಕ್ಯಾಂಪಸ್ ಅಸ್ತಿತ್ವಕ್ಕೆ ಬರಲಿದೆ ಎಂದಿದ್ದಾರೆ.
