‘ಆಲ್ಟ್ ನ್ಯೂಸ್‍’ ನ ಜುಬೇರ್ ಬಂಧನಕ್ಕೆ ಪತ್ರಕರ್ತರ ಸಂಘಟನೆಗಳ ತೀವ್ರ ಖಂಡನೆ

ಪ್ರಧಾನಿಗಳು ಜರ್ಮನಿಯಲ್ಲಿ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಾತಾಡುತ್ತಿರುವಾಗಲೇ ಭಾರತದಲ್ಲಿ ಹುಸಿ ಕಾರಣಗಳ ಮೇಲೆ ಸತ್ಯ ಮತ್ತು ನ್ಯಾಯಕ್ಕೆ ಹೋರಾಡುತ್ತಿರುವ ಪತ್ರಕರ್ತರ ಬಂಧನ-ಎಡಿಟರ್ಸ್ ಗಿಲ್ಡ್, ಪ್ರೆಸ್‍ ಕ್ಲಬ್‍, ಡಿಯುಜೆ, ಡಿಜಿಪಬ್‍ ಕಳವಳ

ಆಲ್ಟ್ ನ್ಯೂಸ್‍ ಸಹ ಸಂಸ್ಥಾಪಕ ಯುವ ಪತ್ರಕರ್ತ ಮುಹಮ್ಮದ್‍ ಜುಬೇರ್ ಬಂಧನ ಅತ್ಯಂತ ಕಳವಳಕಾರಿ ಎಂದು ಭಾರತದ ಪತ್ರಿಕಾ ಸಂಪಾದಕರ ಸಂಘಟನೆ ‘ಎಡಿಟರ್ಸ್‍ ಗಿಲ್ಡ್ ಆಫ್‍ ಇಂಡಿಯ’ ಖಂಡಿಸಿದೆ. ʻʻಜುಬೇರ್‍ ಮತ್ತು ಅವರ ವೆಬ್‌ಸೈಟ್‍ ಆಲ್ಟ್ ನ್ಯೂಸ್ ಕಳೆದ ಕೆಲವು ವರ್ಷಗಳಿಂದ ಹುಸಿ ಸುದ್ದಿಗಳನ್ನು ಗುರುತಿಸುವಲ್ಲಿ ಮತ್ತು ಸುಳ್ಳು ಮಾಹಿತಿ ಹರಡಿಸುವುದನ್ನು ಎದುರಿಸುವಲ್ಲಿ ವಸ್ತುನಿಷ್ಟವಾಗಿ ಮತ್ತು ಸಕಲ ಸಂಗತಿಗಳೊಡನೆ ಮಾದರಿ ಕೆಲಸವನ್ನು ಮಾಡುತ್ತಿದ್ದು, ಜುಬೇರ್ ರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್‍ 153 ಮತ್ತು 295ರ ಅಡಿಯಲ್ಲಿ(ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದು) ಬಂಧಿಸಿರುವುದು ಅತ್ಯಂತ ಕಳವಳಕಾರಿ” ಎಂದು ಅದು ಹೇಳಿದೆ.

ಬಹುಶಃ ಸಮಾಜವನ್ನು ಧ್ರುವೀಕರಿಸಲು ಮತ್ತು ರಾಷ್ಟ್ರವಾದಿ ಭಾವನೆಗಳನ್ನು ಬಡಿದೆಬ್ಬಿಸಲು ಸುಳ್ಳು ಮಾಹಿತಿಗಳನ್ನು ಬಳಸುತ್ತಿರುವವರಿಗೆ ಆಲ್ಟ್ ನ್ಯೂಸ್‍ನ ಜಾಗರೂಕ ಪಹರೆ ಇಷ್ಟವಾಗುತ್ತಿಲ್ಲ ಎಂದು ಕಾಣುತ್ತದೆ ಎಂದಿರುವ ಗಿಲ್ಡ್ ದಿಲ್ಲಿ ಪೊಲೀಸ್ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದೆ.

ಪ್ರಧಾನ ಮಂತ್ರಿಗಳು ಜರ್ಮನಿಯಲ್ಲಿ ಜಿ-7 ಸಭೆಯಲ್ಲಿ ಆನ್‍ಲೈನ್‍ ಮತ್ತು ಆಫ್‍ ಲೈನ್ ವಿಷಯಗಳನ್ನು ರಕ್ಷಿಸಿ ಒಂದು ಚೈತನ್ಯಶೀಲ ಪ್ರಜಾಪ್ರಭುತ್ವವನ್ನು ಖಚಿತಪಡಿಸಲು ಭಾರತ ಬದ್ಧವಾಗಿದೆ ಎಂದಿರುವ ಹಿನ್ನೆಲೆಯಲ್ಲಿ ಇದು ಅತ್ಯಗತ್ಯ ಎಂದು ಗಿಲ್ಡ್ ಹೇಳಿದೆ.

ಇದಕ್ಕೆ ಮೊದಲು ದೇಶದ ಪತ್ರಕರ್ತರ ಪ್ರಮುಖ ಸಂಘಟನೆ ಪ್ರೆಸ್‍ ಕ್ಲಬ್‍ ಆಫ್‍ ಇಂಡಿಯ (ಪಿಸಿಐ) ಕೂಡ, ವಿಚಾರ, ಅಂತಸ್ಸಾಕ್ಷಿ, ಧರ್ಮ ಅಥವ ನಂಬಿಕೆಯ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ವಿಭಿನ್ನ ನಂಬಿಕೆಗಳ ನಡುವೆ ಸಂವಾದವನ್ನು ಪ್ರೋತ್ಸಾಹಿಸಲು ತಾವು ಬದ್ಧ ಎಂದು ಘೋಷಿಸುವ “2022 ಚೈತನ್ಯಶೀಲ ಪ್ರಜಾಪ್ರಭುತ್ವಗಳ ಹೇಳಿಕೆ”ಗೆ ಜರ್ಮನಿಯಲ್ಲಿ ಜಿ-7 ಮತ್ತು ಇತರ ನಾಲ್ಕು ದೇಶಗಳೊಂದಿಗೆ ಭಾರತವೂ ಸ್ವತಃ ಪ್ರಧಾನ ಮಂತ್ರಿಗಳ ಉಪಸ್ಥಿತಿಯಲ್ಲಿ ಸಹಿ ಹಾಕಿರುವ ದಿನದಂದೇ ದಿಲ್ಲಿ ಪೋಲೀಸ್‍ ಮಹಮ್ಮದ್‍ ಜುಬೇರ್‍ ರನ್ನು ಈ ಸೆಕ್ಷನ್‍ ಗಳ ಅಡಿಯಲ್ಲಿ ಬಂಧಿಸಿರುವುದು ಒಂದು ವಿಡಂಬನೆಯೇ ಆಗಿದೆ ಎಂದು  ಹೇಳಿದೆ. ವಿಚಾರ ಸ್ವಾತಂತ್ರ್ಯದ ವಿಷಯದಲ್ಲಿ ಕೇಂದ್ರ ಗೃಹ ಮಂತ್ರಾಲಯ ಮತ್ತು ದಿಲ್ಲಿ ಪೋಲೀಸ್‍ ಗೂ ಮತ್ತು ಪ್ರಧಾನ ಮಂತ್ರಿಗಳಿಗೂ ಏಕಾಭಿಪ್ರಾಯ ಇಲ್ಲವೇ ಎಂದು ಅದು ಪ್ರಶ್ನಿಸಿದೆ.

ಒಂದು ಚೈತನ್ಯಶೀಲ ವೈವಿಧ್ಯಪೂರ್ಣ ಮತ್ತು ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿರಲು ನಾವು ಸತತ ಜಾಗರೂಕತೆಯ ಬೆಲೆ ತೆರಬೇಕಾಗಿದೆ, ಮತ್ತು ಆಲ್ಟ್ ನ್ಯೂಸ್‍ ಆ ಪಾತ್ರವನ್ನು ವಹಿಸುತ್ತಿದೆ, ಸಮಾಜದಲ್ಲಿ ಬಿರುಕುಗಳನ್ನು ಉಂಟುಮಾಡುವ ಉದ್ದೇಶದಿಂದ ಹರಡಿಸುತ್ತಿರುವ ಸುಳ್ಳು ಮಾಹಿತಿಗಳ ಜಾಲವನ್ನು ಬೇಧಿಸುವ ಸಾಧನವಾಗಿ ಆಲ್ಟ್ ನ್ಯೂಸ್‍ ಕೆಲಸ ಮಾಡುತ್ತಿದೆ. ಇಂತಹ ಜಾಗರೂಕ ಪಹರೆ ನಡೆಸಿರುವುದಕ್ಕೆ ಜುಬೇರ್ 2018ರಲ್ಲಿ ಹಾಕಿರುವ ಒಂದು ಪೋಸ್ಟ್ ಗಾಗಿ ಬಂಧನದ ಬೆಲೆ ತೆರಬೇಕಾಗಿರುವುದು ಕಾನೂನು ಮತ್ತು ಸಾಮಾನ್ಯಪ್ರಜ್ಞೆ ಎರಡನ್ನೂ ಹೀಗಳೆಯುವಂತದ್ದು ಎಂದಿರುವ ಪ್ರೆಸ್‍ ಕ್ಲಬ್‍ ಆಫ್‍ ಇಂಡಿಯ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.

ಡಿಜಿಟಲ್‍ ಸುದ್ದಿ ಮಾಧ್ಯಮಗಳ ಸಂಘಟನೆ ‘ಡಿಜಿಪಬ್’ ಕೂಡ ಜುಬೇರ್‍ ಬಂಧನವನ್ನು ಖಂಡಿಸಿ, ದಿಲ್ಲಿ ಪೋಲೀಸ್ ತಕ್ಷಣವೇ ಅವರ ವಿರುದ್ಧ ಕೇಸನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದೆ.

ಪ್ರಭುತ್ವದ ಸಂಸ್ಥೆಗಳ ದುರುಪಯೋಗ ನಡೆಯದಂತೆ ಕಾಯುವ ಪಾತ್ರ ವಹಿಸಬೇಕಾದ, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು  ಪರಿಗಣಿಸಲಾಗಿರುವ ಪತ್ರಕರ್ತರ ವಿರುದ್ಧ ಕಠಿಣ ಕಾನೂನುಗಳನ್ನು ಒಂದು ಸಾಧನವಾಗಿ ಬಳಸುವುದು ಸಮರ್ಥನೀಯವಲ್ಲ, ಅದನ್ನು ನಿಲ್ಲಿಸಬೇಕು ಎಂದು ಡಿಜಿಪಬ್‍ ಆಗ್ರಹಿಸಿದೆ.

ಇನ್ನೊಂದು ಪ್ರಮುಖ ಸಂಘಟನೆ ಡಿಯುಜೆ(ದಿಲ್ಲಿ ಪತ್ರಕರ್ತರ ಸಂಘ) ಕೂಡ ಜುಬೇರ್‍ ಗೆ ಸೂಕ್ತ ನೋಟೀಸ್‍ ಕೂಡ ಕೊಡದೆ ಬಂಧಿಸಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಅವರಿಗೆ 5,72,700 ಟ್ವೀಟರಿಗರ ಬೃಹತ್‍ ಫಾಲೋವಿಂಗ್‍ ಇರುವುದರಿಂದಲೇ ಅವರ ಮೇಲೆ ಗುರಿಯಿಡಲಾಗಿದೆ ಎಂದಿರುವ ಡಿಯುಜೆ, ಅವರನ್ನು ಬೇರೊಂದು ಕೇಸಿನ ವಿಚಾರಣೆಗೆಂದು ದಿಲ್ಲಿಗೆ ಕರೆಸಿಕೊಳ್ಳಲಾಗಿತ್ತು. ಆದರೆ ಆಕೇಸಿನಲ್ಲಿ ಬಂಧನ ಮಾಡದಂತೆ ಅವರಿಗೆ ನ್ಯಾಯಾಲಯದ ರಕ್ಷಣೆ ಸಿಕ್ಕಿತ್ತು. ಆದ್ದರಿಂದ ಬೇರೊಂದ ಕೇಸು ಹಾಕಿ, ಅದರ ಎಫ್‍ಐಆರ್‍ ನ್ನೂ ಕೊಡದೆ ಅವರನ್ನು ಬಂಧಿಸಲಾಯಿತು ಎಂದು ಅವರ ಸಹಯೋಗಿ ಪ್ರತೀಕ ಸಿನ್ನ ಹೇಳಿರುವುದನ್ನು ಉಲ್ಲೇಖಿಸುತ್ತ ಕಾನೂನು ವಿಧಿ-ವಿಧಾನಗಳ ಈ ಉಲ್ಲಂಘನೆ ಅತ್ಯಂತ ಕಳವಳಕಾರಿ ಎಂದಿದೆ. ಹಲವು ಬಿಜೆಪಿ ಮತ್ತು ಸಮಘಪರಿವಾರ ಮುಖಂಡರ ದ್ವೇಷ ಭಾಷಣಗಳನ್ನು ಬಯಲಿಗೆಳೆದ ಜುಬೇರ್ ಇತ್ತೀಚೆಗೆ ಬಿಜೆಪಿ ವಕ್ತಾರೆ ನೂಪುರ್‍ ಶರ್ಮರವರ ಇಂತಹ ಮಾತುಗಳನ್ನು ಬಯಲಿಗೆ ತಂದುದರಿಂದ ಆಕೆಯನ್ನು ಒಂದು ‘ಫ್ರಿಂಜ್ ಎಲಿಮೆಂಟ್‍’ (ಕ್ಷುದ್ರಜೀವಿ) ಎಂದು  ಹೇಳಬೇಕಾದ ಪೇಚಿಗೆ ಸರಕಾರ ಸಿಲುಕಿಕೊಂಡಿತ್ತು. ಇದರಿಂದಾಗಿ ಪಕ್ಷದಿಂದಲೂ ಅಮಾನತುಗೊಂಡಿರುವ ಆಕೆ ಇನ್ನೂ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ, ಆದರೆ ಜುಬೇರನ್ನು ನಾಲ್ಕು ವರ್ಷಗಳ ಹಿಂದಿನ ಟ್ವೀಟ್‍ ಮೇಲೆ ಬಂಧಿಸಲಾಗಿದೆ ಎಂದಿರುವ ಡಿಯುಜೆ ಸುಪ್ರಿಂ ಕೋರ್ಟ್‍ ಕೂಡ ಟ್ವೀಟ್‍ಗಳು, ಫೇಸ್‍ ಬುಕ್‍ ಮತ್ತಿತರ ಸಾಮಾಜಿಕ ಮಾಧ್ಯಮಗಳ ಪೋಸ್ಟುಗಳು ಮೇಲೆ ಬಂಧಿಸಬಾರದು ಎಂದು ಮತ್ತೆ-ಮತ್ತೆ ಹೇಳಿದೆ ಎಂದು ನೆನಪಿಸುತ್ತ, ಇದರ ಹೊರತಾಗಿಯೂ ಇಂತಹ ಬಂಧನಗಳ ಪಟ್ಟಿ ಬೆಳೆಯುತ್ತಲೇ ಎಂದು ಖೇದದಿಂದ ಗಮನಿಸಿದೆ. ಇದು ಇಡೀ ನಾಗರಿಕ ಸಮಾಜಕ್ಕೂ ಕಳವಳಕಾರೀ , ಮತ್ತು ಪತ್ರಕರ್ತರ ಮಟ್ಟಗಂತೂ ಮತ್ತಷ್ಟು ಕಳವಳಕಾರಿ ಎಂದು ಡಿಯುಜೆ ಹೇಳಿದೆ.

ಇತರ ಹಲವು ಪತ್ರಕರ್ತರ ಸಂಘಟನೆಗಳೂ ಜುಬೇರ್‍ ಬಂಧನವನ್ನು ಖಂಡಿಸಿವೆ.

Donate Janashakthi Media

Leave a Reply

Your email address will not be published. Required fields are marked *