ಕೋಲಾರ: ಕೃಷಿ ಕಾಯ್ದೆಗಳನ್ನು ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟವನ್ನು ನಿರ್ಲಕ್ಷಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಜುಲೈ 25ರಿಂದ ಆಗಸ್ಟ್ 9ರವರೆಗೆ ದೇಶದಾದ್ಯಂತ ನಡೆಯುವ ಪ್ರಚಾರಾಂದೋಲನ ನಡೆಸುವ ಮೂಲಕ ಆಗಸ್ಟ್ 9ರ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ಮನವಿ ಮಾಡಿದರು.
ತಾಲೂಕಿನ ಮದನಹಳ್ಳಿ ಹಾಗೂ ತೊಟ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಗೂ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ (ಎಐಎಡಬ್ಲ್ಯೂಯು) ಜಂಟಿ ಸಂಘಟನೆ ವತಿಯಿಂದ ಕ್ವಿಟ್ ಇಂಡಿಯಾ ಚಳುವಳಿ ದಿನದ ಅಂಗವಾಗಿ ಆಗಸ್ಟ್ 9ರ ರೈತ ಕಾರ್ಮಿಕ ಹಕ್ಕುಗಳಿಗಾಗಿ ನಡೆಯಲಿರುವ ಹೋರಾಟದ ಅಂಗವಾಗಿ ಹಳ್ಳಿಗಳಲ್ಲಿ ಪ್ರಚಾರ ಮಾಡಿ ಕೃಷಿ ಭೂಮಿಯು ಕಾರ್ಪೊರೇಟ್ ಕಂಪನಿಗಳ ಕೈವಶವಾದರೆ ಆಹಾರ ಭದ್ರತೆ ಸಂಪೂರ್ಣ ನಾಶವಾಗಿ ಹಸಿವು, ನಿರುದ್ಯೋಗ ತಾಂಡವವಾಡಲಿದೆ. ಮೋದಿ ಸರ್ಕಾರದ ತಪ್ಪು ನೀತಿಗಳಿಂದ ಕೃಷಿ ಕ್ಷೇತ್ರ ದಿವಾಳಿಯಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನು ಓದಿ: ರೈತ-ಕಾರ್ಮಿಕ ಹೋರಾಟದ ಪ್ರಚಾರಾಂದೋಲನ ಭಾಗವಾಗಿ ಸಿಐಟಿಯು ಪಾದಯಾತ್ರೆ
ಸಿಐಟಿಯು ಜಿಲ್ಲಾ ಪ್ರದಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ ಸುಧಾರಣೆ ಹೆಸರಿನಲ್ಲಿ ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕೇವಲ ನಾಲ್ಕು ಸಂಹಿತೆಗಳನ್ನಾಗಿಸಿದೆ. ಒಂದು ಕಡೆ ಕನಿಷ್ಠ ವೇತನ ಹಾಗೂ ಜೀವನ ಭದ್ರತೆ ಕಿತ್ತುಕೊಂಡು ಇನ್ನೊಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಸಿ ದುಡಿಯುವ ಜನರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕ್ವಿಟ್ ಇಂಡಿಯಾ ಚಳವಳಿ ನೆನಪಿನ ದಿನದಂದು ದೇಶಾದ್ಯಂತ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಸಂಘಟನೆಗಳು ಕರೆ ನೀಡಿವೆ. ಇದರಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಮನವಿ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಪಿಆರ್‌ಎಸ್ ತಾಲೂಕು ಕಾರ್ಯದರ್ಶಿ ವಿ.ನಾರಾಯಣರೆಡ್ಡಿ,ವಿವಿಧ ಸಂಘಟನೆಗಳ ತಾಲೂಕು ಮುಖಂಡರಾದ ರಾಮಾಂಜಿನಪ್ಪ, ಮುನಿರತ್ನಮ್ಮ, ಹಿರೇಗೌಡ, ನಾಗೇಶ್, ವೀರಭದ್ರಪ್ಪ ಮುಂತಾದವರು ಭಾಗವಹಿಸಿದ್ದರು.