ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೆನ್ನೆ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತವಾಗಿದ್ದು ಕಾರಿನಲ್ಲಿದ್ದ ಏಳು ಮಂದಿ ಸಾವಿಗೀಡಾಗಿದ್ದಾರೆ. ಒಂದೇ ಕಾರಿನಲ್ಲಿ ಏಳು ಮಂದಿ ಪ್ರಯಾಣಿಸುತ್ತಿದ್ದರು.
ನಗರದ ಕೋರಮಂಗಲ ಬಳಿಯ ಮಂಗಳ ಕಲ್ಯಾಣ ಮಂಟಪದ ಬಳಿ ರಸ್ತೆ ಸೋಮವಾರ ಮಧ್ಯರಾತ್ರಿ 1.45ರ ಸುಮಾರಿಗೆ ಅಪಘಾತವಾಗಿದ್ದು, ಮೃತರದಲ್ಲಿ ಮೂವರು ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದ್ದಾರೆ. ಎಲ್ಲರೂ 20 ರಿಂದ 30 ವರ್ಷದೊಳಗಿನ ಯುವಕ-ಯುವತಿಯರಾಗಿದ್ದಾರೆ. ಅತಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದಿದ್ದೇ ದುರ್ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಫುಟ್‌ಪಾತ್ ಮೇಲಿದ್ದ ಬೀದಿದೀಪ ಕಂಬಕ್ಕೆ ಆಡಿ ಕ್ಯೂ 3 ಕಾರು ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಕಂಬಕ್ಕೆ ಅಪ್ಪಳಿಸಿದ ಪರಿಣಾಮವಾಗಿ ಸ್ಥಳದಲ್ಲಿಯೇ ಆರು ಮಂದಿ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ಕರುಣಾಸಾಗರ್ (28), ಭಾವಿ ಪತ್ನಿ ಬಿಂದು (28), ಕೇರಳ ಮೂಲದ ಅಕ್ಷಯ್ ಗೋಯಲ್, ಇಶಿತಾ (21), ಡಾ.ಧನುಶಾ (21) ಮತ್ತು ಹುಬ್ಬಳ್ಳಿಯ ರೋಹಿತ್ (23) ಮತ್ತು ಹರಿಯಾಣದ ಉತ್ಸವ್ ಎಂದು ಗುರುತಿಸಲಾಗಿದೆ. ನಗರದ ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತರಿಗೆ ಮರಣೋತ್ತರ ಪರೀಕ್ಷೆ ಒಳಪಡಿಸಲಾಗಿದೆ.
ಆಡುಗೋಡಿ ಸಂಚಾರಿ ಪೊಲೀಸರು ಅಪಘಾತ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ. ಅತಿಯಾದ ವೇಗವೇ ಈ ಘಟನೆಗೆ ಕಾರಣ ಎಂದು ಅಂದಾಜಿಸಲಾಗಿದೆ.
ಹೊಸೂರು ಕ್ಷೇತ್ರದ ಡಿಎಂಕೆ ಶಾಸಕನ ಪುತ್ರ: ಮೃತಪಟ್ಟವರೆಲ್ಲರು ತಮಿಳು ನಾಡು ಮೂಲದವರಾಗಿದ್ದು ಬೆಂಗಳೂರಿಗೆ ಕೆಲಸ ನಿಮಿತ್ತ ಬಂದಿದ್ದರು ಎನ್ನಲಾಗಿದೆ. ಮೃತಪಟ್ಟವರಲ್ಲಿ ಕರುಣಾಸಾಗರ್ ಎಂಬವರು ಹೊಸೂರಿನ ಡಿಎಂಕೆ ಶಾಸಕ ವೈ.ಪ್ರಕಾಶ್ ಪುತ್ರ ಮತ್ತು ಅವರು ಮದುವೆಯಾಗಬೇಕಿದ್ದ ಯುವತಿ ಬಿಂದು ಎಂದು ಗೊತ್ತಾಗಿದೆ.
ನಗರಕ್ಕೆ ಆಗಮಿಸಿದ ಅವರುಗಳು ಕಟ್ಟಡ ನಿರ್ಮಾಣ ವಸ್ತುಗಳನ್ನು ಖರೀದಿಸಲು ಕರುಣಾಸಾಗರ್ ತಮ್ಮ ಕಾರಿನಲ್ಲಿ ಬಂದಿದ್ದರು. ಅವರು ಬೆಂಗಳೂರಿಗೆ ಆಗಾಗ ಬರುತ್ತಿದ್ದು ನೆನ್ನೆ ಅವರೊಂದಿಗೆ, ತಮ್ಮ ಭಾವಿ ಪತ್ನಿ ಬಿಂದು ಮತ್ತು ಸ್ನೇಹಿತರನ್ನು ಕರೆದುಕೊಂಡು ಬಂದಿದ್ದರು. ಕೆಲಸ ಮುಗಿಸಿಕೊಂಡು ಊರಿಗೆ ವಾಪಸ್ಸು ಪ್ರಯಣಿಸುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು, ಗೋಡೆಗೆ ಗುದ್ದಿದೆ. ಕಾರಿನಲ್ಲಿದ್ದವರು ಯಾರೂ ಸಹ ಸೀಟ್ ಬೆಲ್ಟ್ ಹಾಕಿರಲಿಲ್ಲ ಢಿಕ್ಕಿಯ ರಭಸಕ್ಕೆ ಕಾರು ನುಜ್ಜುಗುಜ್ಜಾಗಿ ಚಕ್ರ ದೂರ ಹೋಗಿ ಬಿದ್ದಿತ್ತು. ಒಳಗಿದ್ದವರಿಗೆ ತೀವ್ರಗಾಯವಾಗಿದ್ದು, ಅಪಘಾತದ ಶಬ್ದ ತೀವ್ರವಾಗಿ ಕೇಳಿಬಂದು ಪಕ್ಕದಲ್ಲಿದ್ದ ನಿವಾಸಿಗಳಿಗೆ ಮಧ್ಯರಾತ್ರಿ ಎಚ್ಚರಗೊಂಡು ಸ್ಥಳಕ್ಕೆ ಆಗಮಿಸಿದರು.
ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ಸೂಕ್ತ ಮಾಹಿತಿ ನೀಡುವುದಾಗಿ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
ತಮಿಳುನಾಡು ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಅಧಿವೇಶನದಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ತೆರಳಿದ್ದ ಶಾಸಕ ವೈ. ಪ್ರಕಾಶ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.