ನವದೆಹಲಿ: ಕಾರುಗಳಲ್ಲಿ ಪ್ರಯಾಣಿಸುವ ಹಿಂಬದಿ ಸವಾರರು ಸಹ ಸೀಟ್ ಬೆಲ್ಟ್ ಹಾಕಿಕೊಂಡು ಪ್ರಯಾಣಿಸಬೇಕೆಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆದೇಶಿಸಲಾಗಿದ್ದು, ನಿಯಮ ಉಲ್ಲಂಘಿಸಿದ್ದಲ್ಲಿ ₹1,000 ದಂಡ ವಿಧಿಸಲಾಗುವುದು ಎಂದು ವರದಿಯಾಗಿದೆ.
ಇತ್ತೀಚಿಗೆ ರಸ್ತೆ ಸುರಕ್ಷತೆ ಬಗ್ಗೆ ಮೂರು ಜಾಹೀರಾತುಗಳನ್ನು ಬಿಡುಗಡೆ ಮಾಡಿರುವ ಸರಕಾರ, ಈಗ ದೆಹಲಿಯಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ “ಕಾರಿನ ಹಿಂಬದಿ ಸವಾರರು ಸೀಟಿನ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ. ಆದರೆ ಜನರು ಅದನ್ನು ಅನುಸರಿಸುತ್ತಿಲ್ಲ. ಹಿಂದಿನ ಸೀಟಿನಲ್ಲಿರುವವರು ಮುಂಭಾಗದ ಸೀಟಿನಲ್ಲಿರುವಂತೆ ಬೆಲ್ಟ್‌ಗಳನ್ನು ಧರಿಸದಿದ್ದರೆ ಶಬ್ದ ಮಾಡುಬರುವಂತೆ ಮಾಡಲಾಗುತ್ತಿದೆ. ಅವರು ಬೆಲ್ಟ್ ಧರಿಸದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
“ಹಿಂಬದಿ ಸೀಟಿನಲ್ಲಿ ಸೀಟ್ ಬೆಲ್ಟ್‌ಗಳನ್ನು ಹಾಕಿಕೊಳ್ಳುವ ಅಭ್ಯಾಸವು ದೊಡ್ಡ ನಗರಗಳು ಮತ್ತು ಮಹಾನಗರಗಳಲ್ಲಿ ತುಂಬಾ ಕಡಿಮೆಯಾಗಿದೆ. ಇನ್ನು ಭಾರತದ ಸಣ್ಣ ನಗರಗಳಲ್ಲಿ ಇದು ಶೂನ್ಯ . ಇನ್ನೂ ಕೆಟ್ಟದೆಂದರೆ, ಸೀಟ್ ಬೆಲ್ಟ್ ಇಲ್ಲದೆ ಏರ್‌ಬ್ಯಾಗ್ ನಿಯೋಜಿಸಿದರೆ, ಅದು ಹಾನಿಕರ ಅಥವಾ ಮಾರಣಾಂತಿಕವಾಗಬಹುದು ಎಂಬ ಅರಿವು ಭಾರತದಲ್ಲಿ ತುಂಬಾ ಕಡಿಮೆಯಾಗಿದೆ” ಎಂದು ಇಂಟರ್ನ್ಯಾಷನಲ್ ರೋಡ್ ಫೆಡರೇಶನ್ ಅಧ್ಯಕ್ಷ ಕೆಕೆ ಕಪಿಲಾ ತಿಳಿಸಿದರು.
ಕೇಂದ್ರ ಮೋಟಾರು ವಾಹನ ನಿಯಮಗಳ 138 (3) ರ ಅಡಿಯಲ್ಲಿ ಕಾರಿನ ಪ್ರಯಾಣಿಕರೆಲ್ಲರೂ ಸೀಟ್ ಬೆಲ್ಟ್ ಧರಿಸಬೇಕು ಇಲ್ಲವಾದಲ್ಲಿ, ರೂ 1,000 ದಂಡ ಎಂಬುದು ಇದೆ. ಆದರೆ, ಹೆಚ್ಚಿನ ಜನರು ಈ ಕಡ್ಡಾಯ ನಿಯಮದ ಬಗ್ಗೆ ತಿಳಿದಿರುವುದಿಲ್ಲ ಅಥವಾ ಅದನ್ನು ನಿರ್ಲಕ್ಷಿಸುತ್ತಾರೆ. ಟ್ರಾಫಿಕ್ ಪೊಲೀಸರು ಸಹ ಹಿಂಭಾಗದಲ್ಲಿ ಸೀಟ್ ಬೆಲ್ಟ್ ಧರಿಸದ ಪ್ರಯಾಣಿಕರಿಗೆ ವಿರಳವಾಗಿ ದಂಡ ವಿಧಿಸುತ್ತಾರೆ.
ಇತ್ತೀಚಿನ ರಸ್ತೆ ಸಚಿವಾಲಯದ ವರದಿಯ ಪ್ರಕಾರ, 2020 ರಲ್ಲಿ ಸೀಟ್ ಬೆಲ್ಟ್ ಧರಿಸದೇ ಸಾವನ್ನಪ್ಪಿದವರ ಸಂಖ್ಯೆ 15,146 ಮತ್ತು ಗಾಯಗೊಂಡವರ ಸಂಖ್ಯೆ 39,102 ಆಗಿದೆ.