ಸಿಯೋಲ್: ದಕ್ಷಿಣ ಕೊರಿಯಾ ದೇಶದ ರಾಜಧಾನಿ ಸಿಯೋಲ್ನಲ್ಲಿ ನೆನ್ನೆ(ಅಕ್ಟೋಬರ್ 29) ರಾತ್ರಿ ಹಾಲೋವಿನ್ ಹಬ್ಬದ ಆಚರಣೆ ವೇಳೆ ಭಾರೀ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಿಂದ 151 ಮಂದಿ ದುರ್ಮರಣಕ್ಕೆ ಈಡಾಗಿದ್ದಾರೆ.
ಘಟನೆಯಲ್ಲಿ 82ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು 19 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಪರಿಹಾರ ಕಾರ್ಯಾಚರಣೆ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದು ರಾಷ್ಟ್ರದಾದ್ಯಂತ ಶೋಕಾಚರಣೆ ಘೋಷಿಸಲಾಗಿದೆ.
ಹಾಲೋವಿನ್ ಹಬ್ಬ ಸಂದರ್ಭದಲ್ಲಿ ಅತ್ಯಂತ ಕಿರಿದಾದ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಜನರು ಭಾಗವಹಿಸಿದ್ದರು. ಕೋವಿಡ್ ನಂತರ ಮೂರು ವರ್ಷಗಳ ತರುವಾಯ ಸಿಯೊಲ್ನಲ್ಲಿ ಆಚರಿಸಲಾಗುತ್ತಿದ್ದ ಹಾಲೋವಿನ್ ಆಚರಣೆ ಇದಾಗಿತ್ತು. ಮೃತರಲ್ಲಿ 22 ಜನ ವಿದೇಶಿಗರು ಎಂದು ತಿಳಿದು ಬಂದಿದೆ.
ನೈಟ್ ಲೈಫ್ಗೆ ಹೆಸರಾದ ಇಟಾವನ್ ಪ್ರದೇಶದಲ್ಲಿ ಹಾಲೋವಿನ್ ಆಚರಣೆಗಾಗಿ ಲಕ್ಷಾಂತರ ಜನ ಸೇರಿದ್ದರು. ಇಟಾವನ್ ಪ್ರದೇಶದ ಕೇವಲ 4 ಮೀಟರ್ ಅಗಲವಾದ ರಸ್ತೆಗಳಲ್ಲಿ ಲಕ್ಷಾಂತರ ಮಂದಿ ಸೇರಿದ್ದಾರೆ. ಈ ವೇಳೆ ಕೆಲವರು ತಳ್ಳಾಟ ನಡೆಸಿದ ಪರಿಣಾಮ ನೂಕು ನುಗ್ಗಲು ಉಂಟಾಗಿದೆ. ದಣಿವರಿದ ಮಂದಿ ಸೇರಿದಂತೆ ಯುವಕ ಯುವತಿಯರು ಕಾಲ್ತುಳಿಕ್ಕೆ ಸಿಲುಕಿದ್ದಾರೆ. ಕಾಲ್ತುಳಿತ ಸಂಭವಿಸಿದಾಗ ಉಸಿರುಗಟ್ಟಿ ಬಹುತೇಕರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಸಿಯೋಲ್ನಲ್ಲಿ ಲಭ್ಯವಿರುವ ಎಲ್ಲಾ ಸಿಬ್ಬಂದಿ ಸೇರಿದಂತೆ ರಾಷ್ಟ್ರದಾದ್ಯಂತದ 800ಕ್ಕೂ ಹೆಚ್ಚು ತುರ್ತು ಕಾರ್ಯಕರ್ತರು ಮತ್ತು ಪೊಲೀಸ್ ಅಧಿಕಾರಿ ಮುಂದಾಗಿದ್ದಾರೆ. ತುರ್ತು ರೋಗಿಗಳ ನಿಖರ ಸಂಖ್ಯೆಯನ್ನು ನಿರ್ಧರಿಸಲು ಅಧಿಕಾರಿಗಳು ಇನ್ನೂ ಪ್ರಯತ್ನಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಸಂಸ್ಥೆ ತಿಳಿಸಿದೆ ಎಂದು ವರದಿಯಾಗಿದೆ. ಭಾರೀ ಪೊಲೀಸರ ಉಪಸ್ಥಿತಿ ಮತ್ತು ತುರ್ತು ಕೆಲಸಗಾರರು ಗಾಯಗೊಂಡವರನ್ನು ಸ್ಟ್ರೆಚರ್ಗಳಲ್ಲಿ ಸ್ಥಳಾಂತರಿಸುವ ಮಧ್ಯೆ ಆಂಬ್ಯುಲೆನ್ಸ್ ವಾಹನಗಳು ಬೀದಿಗಳಲ್ಲಿ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು.
ಘಟನೆ ಬಗ್ಗೆ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೊಲ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಇಂತಹ ದುರಂತ ಸಂಭವಿಸಬಾರದಿತ್ತು ಎಂದು ಸಂತಾಪ ಸೂಚಿಸಿದ್ದಾರೆ. ಮೃತರಿಗೆ ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಸೇರಿದಂತೆ ಅನೇಕ ಜಾಗತಿಕ ನಾಯಕರು ಸಂತಾಪ ಸೂಚಿಸಿದ್ದಾರೆ.