ಬೆಂಗಳೂರು: ರಾಜ್ಯದಲ್ಲಿ “ಆಪರೇಷನ್ ಅನರ್ಹ ಬಿಪಿಎಲ್ ಕಾರ್ಡ್” ಪ್ರಕ್ರಿಯೆ ಅತ್ಯಂತ ಚುರುಕುಗೊಂಡಿದ್ದು, ಕೇಂದ್ರವು ನೀಡಿರುವ ಶಂಕಾಸ್ಪದ ಪಡಿತರ ಕಾರ್ಡ್ ದಾರರ ಪಟ್ಟಿಯ ಜತೆಗೆ ಸ್ಥಳೀಯವಾಗಿ ಪ್ರತೀ ನ್ಯಾಯಬೆಲೆ ಅಂಗಡಿಗಳು ಕನಿಷ್ಠ 10 ಅನರ್ಹ ಕಾರ್ಡ್‌ದಾರರನ್ನು ಗುರುತಿಸಬೇಕೆಂದು ಗುರಿ ನೀಡಲಾಗಿದೆ.
ಎರಡೆರಡು ರಾಜ್ಯಗಳಲ್ಲಿ ಪಡಿತರ ಚೀಟಿ ಹೊಂದಿದವರು, ಆದಾಯ ತೆರಿಗೆ ಮಾಹಿತಿ ಸಲ್ಲಿಕೆ (ಐಟಿ ರಿಟರ್ನ್ಸ್) ಮಾಡುವವರು ಸೇರಿ ವಿವಿಧ ಮಾನದಂಡಗಳಡಿ ಕೇಂದ್ರ ಸರಕಾರ ಈಚೆಗೆ ರಾಜ್ಯಕ್ಕೆ ಶಂಕಾಸ್ಪದ ಕಾರ್ಡ್‌ಗಳ ಪಟ್ಟಿಯನ್ನು ಕಳುಹಿಸಿಕೊಟ್ಟಿದೆ. ಇದೇ ಸಂದರ್ಭವನ್ನು ಬಳಸಿಕೊಂಡು ರಾಜ್ಯ ಸರಕಾರವೂ ಅನರ್ಹ ಬಿಪಿಎಲ್ ಕಾರ್ಡ್‌ದಾರರ ಪಟ್ಟಿ ಮಾಡಿ ರದ್ದುಗೊಳಿಸಲು ಚಿಂತನೆ ನಡೆಸಿದೆ.
ಇದಕ್ಕಾಗಿ ಪ್ರತೀ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಶ್ರೀಮಂತ ಫಲಾನುಭವಿಗಳನ್ನು ಗುರುತಿಸಿ ತಮಗೆ ನೀಡಬೇಕು ಎಂದು ಅಲಿಖಿತ ಫರ್ಮಾನು ಹೊರಡಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು | ಬಿಜೆಪಿ ಸರ್ಕಾರದ ಶೇ. 40 ಲಂಚ ಪ್ರಕರಣ: ನಾಗಮೋಹನ್ ದಾಸ್ ವರದಿ ಅಧ್ಯಯನಕ್ಕೆ ಸಮಿತಿ ರಚನೆ
ಈಚೆಗೆ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ನೀಡಿದ ನಿರ್ದೇಶನದ ಮೇರೆಗೆ ಈ ಗುರಿ ನೀಡಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಉಳ್ಳವರು ಯಾರು ಎಂಬುದರ ಸ್ಪಷ್ಟ ಮಾಹಿತಿ ಸ್ಥಳೀಯ ನ್ಯಾಯಬೆಲೆ ಅಂಗಡಿಗಳಿಗೆ ಗೊತ್ತಿರುತ್ತದೆ. ಅವರಿಂದ ಪ್ರಾಥಮಿಕ ಮಾಹಿತಿ ಪಡೆದು, ಅನಂತರ ಅದರ ಪರಿಶೀಲನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಒಟ್ಟು 20,473 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಪ್ರತೀ ಅಂಗಡಿಯಿಂದ ಅತಿಕಡಿಮೆ ಎಂದರೂ 10 ಶ್ರೀಮಂತರ ಪತ್ತೆ ಹಚ್ಚುವ ಗುರಿ ನೀಡಲಾಗಿದೆ. ಅಂದರೆ ಕನಿಷ್ಠ 2 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ದಾರರನ್ನು ಈ ಮೂಲದಿಂದ ತೆಗೆದುಹಾಕುವ ಲೆಕ್ಕಾಚಾರ ಇಲಾಖೆಯದ್ದಾಗಿದೆ. ಎಲ್ಲವೂ ಅಂದುಕೊಂಡಂತಾದರೆ, ತಿಂಗಳ ಒಳಗೇ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯಾಸಾಧ್ಯತೆಗಳ ಪರಿಶೀಲನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಹೀಗೆ ನ್ಯಾಯಬೆಲೆ ಅಂಗಡಿಗಳು ಗುರುತಿಸುವ ಅನರ್ಹ ಬಿಪಿಎಲ್ ಕಾರ್ಡ್‌ಗಳಿಗೂ ಈಗಿರುವ ಮಾನದಂಡಗಳನ್ನೇ ಅನುಸರಿಸಲಾಗುವುದು. ಇದರ ಬೆನ್ನಲ್ಲೇ ಈಗಾಗಲೇ ಅರ್ಜಿ ಹಾಕಿ ವರ್ಷ ಗಳಿಂದ ಕಾಯುತ್ತಿರುವ ಅರ್ಹರಿಗೆ ಕಾರ್ಡ್ ನೀಡುವ ಆಲೋಚನೆ ಇದೆ. ಬರುವ ಅಕ್ಟೋಬರ್ 2ರ ವೇಳೆಗೆ ಹೊಸದಾಗಿ ಕಾರ್ಡ್ ವಿತರಿಸುವ ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿದೆ.
ಈ ಮಧ್ಯೆ ನ್ಯಾಯಬೆಲೆ ಅಂಗಡಿಗಳಿಗೆ ನೀಡಲಾಗಿರುವ ಪಟ್ಟಿಯಂತೆ ಶ್ರೀಮಂತ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚಿ ಅವರು ಹೊಂದಿರುವ ಆಸ್ತಿ-ಪಾಸ್ತಿಗಳ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.
ಏನಿದು ಗುರಿ?
-ರಾಜ್ಯದಲ್ಲಿ ಸಾಕಷ್ಟು ಅನರ್ಹರು ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವ ಶಂಕೆ
-ಕರ್ನಾಟಕಕ್ಕೆ ಶಂಕಾಸ್ಪದ ಕಾರ್ಡ್‌ಗಳ ಪಟ್ಟಿ ಕಳುಹಿಸಿಕೊಟ್ಟ ಕೇಂದ್ರ ಸರಕಾರ
-ಇದೇ ಸಂದರ್ಭದಲ್ಲಿ ರಾಜ್ಯ ಸರಕಾರ ದಿಂದಲೂ ಬಿಪಿಎಲ್ ಪತ್ತೆಗೆ ಕ್ರಮ
-ಬಿಪಿಎಲ್ ಕಾರ್ಡ್ ಪಟ್ಟಿಯನ್ನು ಸ್ವತ್ಛ ಗೊಳಿಸುವ ನಿಟ್ಟಿನಲ್ಲಿ ಸರಕಾರ ಯೋಜನೆ
-ಪ್ರತೀ ನ್ಯಾಯಬೆಲೆ ಅಂಗಡಿಗಳಿಗೆ ಕನಿಷ್ಠ 10 ಮಂದಿ ಅನರ್ಹ ಕಾರ್ಡ್‌ದಾರರನ್ನು ಗುರುತಿಸುವ ಗುರಿ
-ಶ್ರೀಮಂತರನ್ನು ಗುರುತಿಸಲು ಅಲಿಖೀತ ಫರ್ಮಾನು ಹೊರಡಿಸಿದ ರಾಜ್ಯ ಸರಕಾರ
ಇದನ್ನೂ ನೋಡಿ: ನಾಲ್ಕು ದಶಕಗಳಿಂದ ಧರ್ಮಸ್ಥಳದಲ್ಲಿ ಕೊಲೆ, ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿವೆ – ಡಾ. ಕೆ.ಪ್ರಕಾಶ್ Janashakthi
