ನವದೆಹಲಿ : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಇಡೀ ದೇಶದ ಗಮನಸೆಳೆದಿದೆ. ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯದಲ್ಲಿ 2ನೇ ಹಂತದ ಚುನಾವಣೆ ನಡೆದಿದೆ. ಬಂಗಾಳದ 2ನೇ ಹಂತದ ಚುನಾವಣೆಯಲ್ಲಿ ಶೇಕಡಾ 80.43ರಷ್ಟು ಮತದಾನವಾಗಿದ್ದರೆ, ಅಸ್ಸಾಂನಲ್ಲಿ ಶೇಕಡಾ 74.79ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪಶ್ಚಿಮ ಬಂಗಾಳದ 30 ಕ್ಷೇತ್ರಗಳಿಗೆ 2ನೇ ಹಂತದ ಚುನಾವಣೆ ನಡೆದಿದೆ. ಮೊದಲ ಹಂತದಲ್ಲಿ 30 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಶೇಕಡಾ 79.79 ರಷ್ಟು ಮತದಾನವಾಗಿತ್ತು. ಇನ್ನು ಅಸ್ಸಾಂನಲ್ಲಿ 39 ಕ್ಷೇತ್ರಗಳಿಗೆ 2ನೇ ಹಂತದ ಮತದಾನವಾಗಿದೆ. ಮೊದಲ ಹಂತದಲ್ಲಿ 47 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಈ ವೇಳೆ ಶೇಕಡಾ 72.14 ರಷ್ಟು ಮತದಾನವಾಗಿತ್ತು.
ಬಂಗಾಳದಲ್ಲಿ 2ನೇ ಹಂತದ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಜಿ ಆಪ್ತ, ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ, ಹಾಗೂ ಸಿಪಿಐಎಂ ನಿಂದ ಯುವ ಅಭ್ಯರ್ಥಿ ಮೀನಾಕ್ಷಿ ಮುಖರ್ಜಿಯವರ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿರುವ ನಂದಿಗ್ರಾಮ ಕ್ಷೇತ್ರಕ್ಕೂ 2ನೇ ಹಂತದಲ್ಲಿ ಮತದಾನ ನಡೆದಿದೆ.
ಸ್ವತ ಮಮತಾ ಬ್ಯಾನರ್ಜಿ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲ ಮತದಾನ ಕೇಂದ್ರಗಳಲ್ಲಿ ಹಿಂಸಾಚಾರ ಕೂಡ ನಡೆದಿದೆ. ಈ ಕುರಿತು ರಾಜ್ಯಪಾಲರಿಗೆ ಮಮತಾ ಬ್ಯಾನರ್ಜಿ ದೂರು ನೀಡಿದ್ದಾರೆ. ಇನ್ನು ಮಾಧ್ಯಮದ ಜೊತೆ ಮಾತನಾಡಿರುವ ಮಮತಾ, ಇಷ್ಟು ಕೆಟ್ಟ ಚುನಾವಣೆ ತನ್ನ ಜೀವಮಾನದಲ್ಲಿ ನೋಡಿಲ್ಲ ಎಂದು ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.