ಕಲಮು 370 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕಳಚಿ ಹಾಕಿ ಆಗಸ್ಟ್ 5, 2023 ಕ್ಕೆ ನಾಲ್ಕು ವರ್ಷಗಳು ಪೂರ್ಣಗೊಂಡಿವೆ. ಸಂವಿಧಾನ ಮತ್ತು ಒಕ್ಕೂಟತತ್ವದ ಮೇಲಿನ ಈ ದಾಳಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಹಕ್ಕುಗಳ ಮೇಲೆ ಸರ್ವಾಂಗೀಣ ದಾಳಿಯ ಮುನ್ಸೂಚನೆಯಾಗಿತ್ತು. ಇದುವರೆಗೂ ಅಲ್ಲಿಯ ವಿಧಾನಸಭೆಗೆ ಚುನಾವಣೆಗಳನ್ನು ನಡೆಸದಿರುವುದರಲ್ಲಿ ಪ್ರಜಾಪ್ರಭುತ್ವದ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಈ ಮೂಲಭೂತ ನಿರಾಕರಣೆ ಎದ್ದು ಕಾಣುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಎಲ್ಲಾ ರೀತಿಯಲ್ಲೂ, ಜಮ್ಮು ಮತ್ತು ಕಾಶ್ಮೀರದ ಜನತೆಯನ್ನು ಎರಡನೇ ದರ್ಜೆಯ ನಾಗರಿಕರ ಮಟ್ಟಕ್ಕೆ ಇಳಿಸಲಾಗಿದೆ. ಆದ್ದರಿಂದ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ತಕ್ಷಣವೇ ಚುನಾವಣೆ ನಡೆಸಬೇಕೆಂದು ಸಿಪಿಐ(ಎಂ) ಕೇಂದ್ರ ಸಮಿತಿಯು ಒತ್ತಾಯಿಸಿದೆ.
ನವದೆಹಲಿಯಲ್ಲಿ ಆಗಸ್ಟ್ 4ರಿಂದ ಸಿಪಿಐ(ಎಂ) ಕೇಂದ್ರ ಸಮಿತಿಯ 3 ದಿನಗಳ ಸಭೆ ಆಗಸ್ಟ್ 5 ರಂದು ಈ ಕುರಿತು ಒಂದು ನಿರ್ಣಯವನ್ನುಅಂಗೀಕರಿಸಿದೆ.
ಕೇಂದ್ರದ ಆಳ್ವಿಕೆಯ ಅಡಿಯಲ್ಲಿ ಕಳೆದ ಐದು ವರ್ಷಗಳಲ್ಲಿ ವಾಸಸ್ಥಳ ಕಾನೂನುಗಳು ಮತ್ತು ಭೂಮಿಯ ಹಕ್ಕುಗಳ ಬದಲಾವಣೆಯೊಂದಿಗೆ ಜಮ್ಮು ಮತ್ತು ಕಾಶ್ಮೀರದ ಅಸ್ಮಿತೆಯನ್ನೇ ಬದಲಾಯಿಸುವ ಕ್ರಮಗಳು ಕಾಣಬಂದಿವೆ. ರಾಜ್ಯದ ಜನಸಂಖ್ಯಾಸ್ವರೂಪವನ್ನು ಬದಲಾಯಿಸಲು ಎಡೆಬಿಡದ ಪ್ರಯತ್ನ ನಡೆದಿದೆ.
ಇದನ್ನೂ ಓದಿ:ಮಣಿಪುರ ಹಿಂಸಾಚಾರ:ತನಿಖೆ ಮೇಲ್ವಿಚಾರಣೆಗೆ ತ್ರಿಸದಸ್ಯ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್
ಸಾರ್ವಜನಿಕ ಸುರಕ್ಷತಾ ಕಾಯಿದೆ ಮತ್ತು ಯುಎಪಿಎಯಂತಹ ಕರಾಳ ಕಾನೂನುಗಳನ್ನು ಬಳಸಿಕೊಂಡು ದೊಡ್ಡ ಪ್ರಮಾಣದಲ್ಲಿ ರಾಜಕೀಯ ನಾಯಕರು ಮತ್ತು ಕಾರ್ಯಕರ್ತರ ದೊಡ್ಡ ಬಂಧನಗಳು ಈ ಅವಧಿಯಲ್ಲಿ ನಡೆದಿವೆ. ನೂರಾರು ರಾಜಕೀಯ ಕೈದಿಗಳು ಇನ್ನೂ ಬಂಧನದಲ್ಲಿದ್ದಾರೆ, ಅವರಲ್ಲಿ ಹಲವರು ಜಮ್ಮು ಮತ್ತು ಕಾಶ್ಮೀರದ ಹೊರಗಿನ ಜೈಲುಗಳಲ್ಲಿದ್ದಾರೆ.
ದೊಡ್ಡ-ದೊಡ್ಡ ದಾವೆಗಳೇನೇ ಇದ್ದರೂ, ಆರ್ಥಿಕ ಪರಿಸ್ಥಿತಿಯು ಹದಗೆಟ್ಟಿದೆ, ನಿರುದ್ಯೋಗ ಹೆಚ್ಚಿದೆ, ಇದು ರಾಷ್ಟ್ರೀಯ ಸರಾಸರಿಯ ಮೂರು ಪಟ್ಟು ಎಂದು ಅಂದಾಜಿಸಲಾಗಿದೆ. ಸೇಬು ಬೆಳೆಗಾರರು ಮತ್ತು ಸಣ್ಣ ವ್ಯಾಪಾರ-ವ್ಯವಹಾರಗಳನ್ನು ನಡೆಸುವವರು ಮುಂತಾದ ವಿವಿಧ ಜನವಿಭಾಗಗಳ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ.
ಮಾಧ್ಯಮಗಳು ಪ್ರಭುತ್ವದ ತೀವ್ರ ದಬ್ಬಾಳಿಕೆಯನ್ನು ಎದುರಿಸುತ್ತಿವೆ. ಸೆನ್ಸಾರ್ ಶಿಪ್ ಹೇರುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಮಾರ್ಗಸೂಚಿಗಳನ್ನು ಹೇರಲಾಗಿದೆ. ವಿವಿಧ ಪತ್ರಕರ್ತರು ಕರಾಳ ಕಾನೂನುಗಳ ಅಡಿಯಲ್ಲಿ ಬಂಧನದಲ್ಲಿದ್ದಾರೆ.
ಪ್ರಜಾಪ್ರಭುತ್ವದ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಮೂಲಭೂತ ನಿರಾಕರಣೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆಗಳನ್ನು ನಡೆಸುವಲ್ಲಿ ವಿಫಲವಾಗಿರುವುದರಲ್ಲಿ ಎದ್ದು ಕಾಣುತ್ತಿದೆ. ಬಿಜೆಪಿಯ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಮತ್ತು ಕಾಶ್ಮೀರ ಕಣಿವೆಯ ಜನರ ಪ್ರಾತಿನಿಧ್ಯವನ್ನು ಕಡಿಮೆ ಮಾಡುವ ಉದ್ದೇಶದ ಕ್ಷೇತ್ರ ಮರುವಿಂಗಡಣೆಯಲ್ಲಿ ಕಾಶ್ನೀರ ಕಣಿವೆಯ ಜನಗಳ ಪ್ರಾತಿನಿಧ್ಯವನ್ನು ಕಡಿಮೆ ಮಾಡಿದ ಮೇಲೂ ಕೇಂದ್ರ ಸರಕಾರ ಚುನಾವಣೆಗಳನ್ನು ನಡೆಸುತ್ತಿಲ್ಲ.
ಪ್ರಜಾಪ್ರಭುತ್ವದ ಮರುಸ್ಥಾಪನೆಯಾಗಬೇಕಾದರೆ ಎಲ್ಲಾ ರಾಜಕೀಯ ಕೈದಿಗಳ ಬಿಡುಗಡೆ ಆಗಬೇಕಾಗಿದೆ ಮತ್ತು ರಾಜಕೀಯ ವಿರೋಧ ಮತ್ತು ಮಾಧ್ಯಮವನ್ನು ನಿಗ್ರಹಿಸುವ ಕರಾಳ ಕಾನೂನುಗಳ ಬಳಕೆಯನ್ನು ಕೊನೆಗೊಳಿಸಬೇಕು; ಕೇಂದ್ರವು ಜಮ್ಮು ಮತ್ತು ಕಾಶ್ಮೀರದ ಶಾಶ್ವತ ನಿವಾಸದ ವಾಸಸ್ಥಳ ಸ್ಥಾನಮಾನವನ್ನು ಸವೆಸಿ ಹಾಕುವ ಎಲ್ಲಾ ಕ್ರಮಗಳನ್ನು ಹಿಂದಕ್ಕೆ ಪಡೆಯಬೇಕು ಮತ್ತು ಅವರ ಭೂಮಿಯ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿರುವ ಸಿಪಿಐ(ಎಂ) ಕೇಂದ್ರ ಸಮಿತಿ ತಮ್ಮ ಹಕ್ಕುಗಳನ್ನು ಮರುಸ್ಥಾಪಿಸುವ ಹೋರಾಟದಲ್ಲಿ
ಪ್ರಜಾಸತ್ತಾತ್ಮಕ ಶಕ್ತಿಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ಕೇಂದ್ರ ಸಮಿತಿಯು ಸೌಹಾರ್ದವನ್ನು ವ್ಯಕ್ತಪಡಿಸಿದೆ.