ಯಾದಗಿರಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನೇ ದಿನೇ ಹೆಚ್ಚಾಗುತ್ತಲಿದೆ. ವಿವಿಧ ಪಕ್ಷಗಳ ಹಲವಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದು ಜಿಲ್ಲೆಯ ಸ್ವತಂತ್ರ ಅಭ್ಯರ್ಥಿಯೊಬ್ಬರು ತಮ್ಮ ಠೇವಣಿ ಹಣ 10,000 ರೂ.ಗಳನ್ನು ಸಂಪೂರ್ಣವಾಗಿ ಒಂದು ರೂಪಾಯಿ ನಾಣ್ಯಗಳಲ್ಲಿ ಪಾವತಿಸಿದ್ದಾರೆ, ಈ ಹತ್ತು ಸಾವಿರ ನಾಣ್ಯಗಳನ್ನು ಎಣಿಸುವಲ್ಲಿ ಚುನಾವಣಾ ಸಿಬ್ಬಂದಿಗಳು ಸುಸ್ತಾಗಿದ್ದಾರೆ.
1ರೂ ನಾಣ್ಯಗಳ 10 ಸಾವಿರ ಠೇವಣಿ ಭರಿಸಿದ ಯಂಕಪ್ಪ :
ಒಂದೊಂದು ರೂ. ನಾಣ್ಯಗಳನ್ನು ನೀಡಿ ಹತ್ತು ಸಾವಿರ ಠೇವಣಿ ಭರಿಸಿರುವ ಪಕ್ಷೇತರ ಅಭ್ಯರ್ಥಿ ಹೆಸರು ಯಂಕಪ್ಪ. ಇವರು ಕಳೆದ ಒಂದು ವರ್ಷದಿಂದ ಯಾದಗಿರಿ ವಿಧಾನಸಭಾ ಕ್ಷೇತ್ರದ 10 ಸಾವಿರ ಮನೆಗಳಲ್ಲಿ ಭಿಕ್ಷೆ ಬೇಡಿ, ಪ್ರತೀ ಮನೆಯಲ್ಲಿ ಒಂದು ರೂ.ಗಳಂತೆ ಹತ್ತು ಸಾವಿರ ಸಂಗ್ರಹಿಸಿದ್ದಾರೆ. ಒಂದು ವರ್ಷ ಮನೆಬಿಟ್ಟು ಠೇವಣಿ ಸಂಗ್ರಹಿಸಿರುವ ಇವರು, ಯಾವುದೇ ಗ್ರಾಮದಲ್ಲಿ ವಾಸ್ತವ್ಯ ಹೂಡಬೇಕಿದ್ದರೂ ಅಲ್ಲಿನ ದೇವಸ್ಥಾನಗಳಲ್ಲೇ ಇರುತ್ತಿದ್ದರು. ಅದೇ ಊರಿನ ಮನೆಗಳಲ್ಲಿ ಭಿಕ್ಷೆ ಬೇಡಿ ಊಟವನ್ನೂ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ : ಕರ್ನಾಟಕ ವಿಧಾನಸಭೆ : ಮೇ 10 ಕ್ಕೆ ಚುನಾವಣೆ, 13 ಕ್ಕೆ ಫಲಿತಾಂಶ – ಚುರುಕುಗೊಂಡ ಪ್ರಕ್ರಿಯೆ
ಸಂವಿಧಾನ ಪೀಠಿಕೆ ಜೊತೆಸಾಗಿ ಹಣ ಸಂಗ್ರಹ :
ಯಂಕಪ್ಪ ತಮ್ಮ ಕೊರಳಿಗೆ ಹಾಕಿಕೊಂಡಿದ್ದ ಪೋಸ್ಟರ್‌ನಲ್ಲಿ 12ನೇ ಶತಮಾನದ ಸಮಾಜ ಸುಧಾರಕರಾದ ಜ್ಞಾನಜ್ಯೋತಿ ಬಸವೇಶ್ವರ, ಸಂತ ಕವಿ ಕನಕದಾಸ, ಸ್ವಾಮಿ ವಿವೇಕಾನಂದ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿತ್ರಗಳು ಮತ್ತು ಸಂವಿಧಾನದ ಪೀಠಿಕೆ ಹಾಕಿಕೊಂಡು ಊರೂರು ಸುತ್ತಾಡಿ ಹಣ ಸಂಗ್ರಹಿಸಿದ್ದಾರೆ. ಇದು ಜನರನ್ನು ಆಕರ್ಷಿಸಿದೆ. ಈ ಚಿತ್ರಗಳ ಕೆಳಗೆ ಕನ್ನಡದಲ್ಲಿ ಕೇವಲ ಒಂದು ರೂಪಾಯಿ ಅಲ್ಲ, ನಿಮ್ಮ ಒಂದು ಮತ, ನೀವು ಒಂದು ದಿನ ನನಗೆ ಮತ ನೀಡಿ, ನಾನು ನಿಮಗೆ ಬಡತನದಿಂದ ಮುಕ್ತಿ ನೀಡುತ್ತೇನೆ ಎಂಬ ಘೋಷವಾಕ್ಯದೊಂದಿಗೆ ಚುನಾಣೆಗೆ ಸ್ಪರ್ಧಿಸಿದ್ದಾರೆ.
ಪದವೀಧರ ಯಂಕಪ್ಪ :
ಕಲಬುರಗಿ ಜಿಲ್ಲೆಯ ಗುಲ್ಬರ್ಗ ವಿಶ್ವವಿದ್ಯಾನಿಲಯದಿಂದ ಕಲಾ ಪದವೀಧರರಾಗಿರುವ ಇವರು, 60 ಸಾವಿರ ರೂ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅವರ ತಂದೆ ದೇವಿಂದ್ರಪ್ಪ ಒಂದು ಎಕರೆ 16 ಗುಂಟೆ ಜಮೀನು ಹೊಂದಿರುವುದಾಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಹಲವು ಕುತೂಹಲಕಾರಿ ವಿಷಯಗಳು ಹೊರಬರುತ್ತಿವೆ. ಕೆಲವೆಡೆ ಅಭ್ಯರ್ಥಿಗಳ ಆಸ್ತಿ ಘೋಷಣೆ ಕೇಳಿ ಜನಸಾಮಾನ್ಯರು ತಲೆ ಕೆಡಿಸಿಕೊಂಡರೆ ಮತ್ತೆ ಕೆಲವು ಅಭ್ಯರ್ಥಿಗಳು ಚುನಾವಣಾ ಠೇವಣಿ ಹಣ ಕಟ್ಟುವ ಸಮಯದಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಜನರ ಮನಸ್ಸನ್ನು ಗೆದ್ದಿರುವುದು ಎಲ್ಲರ ಗಮನ ಸೆಳೆಯುವಂತಿದೆ.