ವಿಧಾನಸಭಾ ಚುನಾವಣೆಯ ಫಲಿತಾಂಶ; ಅರುಣಾಚಲದಲ್ಲಿ ಬಿಜೆಪಿಗೆ ಬಹುಮತ, ಸಿಕ್ಕಿಂನಲ್ಲಿ ಎಸ್‌ಕೆಎಂಗೆ ಮೆಲುಗೈ

ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆಯ ಬಿಸಿ ಹೆಚ್ಚಾಗಿದ್ದು, ಇಂದು ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ನಡೆಯುತ್ತಿದೆ.

ಅರುಣಾಚಲ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಆರಂಭಿಕ ಟ್ರೆಂಡ್‌ನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (BJP) 19 ಸ್ಥಾನಗಳಲ್ಲಿ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (NPEP) ಆರು ಸ್ಥಾನಗಳಲ್ಲಿ ಮುಂದಿದೆ ಎಂದು ಚುನಾವಣಾ ಆಯೋಗ ಈ ಮಾಹಿತಿ ನೀಡಿದೆ. ಬಿಗಿ ಭದ್ರತೆಯ ನಡುವೆ ಅರುಣಾಚಲ ಪ್ರದೇಶದ 50 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಭಾನುವಾರ ಬೆಳಗ್ಗೆ 6 ಗಂಟೆಯಿಂದ ನಡೆಯುತ್ತಿದೆ.

60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ಈಗಾಗಲೇ 10 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದೆ. ಅರುಣಾಚಲ ಪ್ರದೇಶದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಏಪ್ರಿಲ್ 19 ರಂದು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಏಕಕಾಲದಲ್ಲಿ ಮತದಾನ ನಡೆದಿತ್ತು. ‘ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ’ (PPA) ಎರಡು ಸ್ಥಾನಗಳಲ್ಲಿ, ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ’ (NCP) ಎರಡು ಸ್ಥಾನಗಳಲ್ಲಿ, ಕಾಂಗ್ರೆಸ್ ಒಂದರಲ್ಲಿ ಮತ್ತು ಸ್ವತಂತ್ರ ಅಭ್ಯರ್ಥಿಗಳು ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ರಾಜ್ಯಾದ್ಯಂತ ಮಳೆಯ ನಡುವೆಯೂ ವಿವಿಧ ರಾಜಕೀಯ ಪಕ್ಷಗಳ ನೂರಾರು ಬೆಂಬಲಿಗರು ಮತ ಎಣಿಕೆ ಕೇಂದ್ರದ ಬಳಿ ನಿಂತಿರುವುದು ಕಂಡು ಬಂತು.

ಇದನ್ನು ಓದಿ : ಕೊನೆಯ ಹಂತದಲ್ಲಿ ಸಂಜೆ 5ರವರೆಗೆ ಸುಮಾರು 58.34% ಮತದಾನ

ಇನ್ನು, ಸಿಕ್ಕಿಂ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಆರಂಭಿಕ ಟ್ರೆಂಡ್ ಪ್ರಕಾರ, ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM) 28 ಸ್ಥಾನಗಳಲ್ಲಿ ಮುಂದಿದ್ದರೆ, ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಒಂದು ಕ್ಷೇತ್ರದಲ್ಲಿ ಮುಂದಿದೆ. ಆದರೆ ಬಿಜೆಪಿ ಒಂದೇ ಒಂದು ಸ್ಥಾನದಲ್ಲೂ ಮುನ್ನಡೆ ಪಡೆದಿಲ್ಲ ಎಂದು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆರಂಭಿಕ ಟ್ರೆಂಡ್‌ಗಳಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.

ಅರುಣಾಚಲ ಪ್ರದೇಶ ವಿಧಾನಸಭೆಯ ಎಲ್ಲಾ 60 ಸ್ಥಾನಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ 34 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಸಿಕ್ಕಿಂ ವಿಧಾನಸಭೆಯಲ್ಲಿ 32 ಸ್ಥಾನಗಳಿವೆ ಎಂಬುದು ಗಮನಾರ್ಹ. ಸರ್ಕಾರ ರಚಿಸಲು ಪಕ್ಷ ಅಥವಾ ಮೈತ್ರಿಕೂಟಕ್ಕೆ ಕನಿಷ್ಠ 17 ಸ್ಥಾನಗಳ ಅಗತ್ಯವಿದೆ. ಮುಖ್ಯಮಂತ್ರಿ ಪಿಎಸ್ ತಮಾಂಗ್ ಮತ್ತು ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಪವನ್ ಕುಮಾರ್ ಚಾಮ್ಲಿಂಗ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಮೊದಲ ಹಂತದಲ್ಲಿ ಏಪ್ರಿಲ್ 19 ರಂದು ಅರುಣಾಚಲ ಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆದವು. 82.71 ರಷ್ಟು ಮತದಾರರು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರೆ, ರಾಜ್ಯದ ಎರಡು ಲೋಕಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 77.51 ರಷ್ಟು ಮತದಾನವಾಗಿದೆ. 50 ವಿಧಾನಸಭಾ ಸ್ಥಾನಗಳ ಮತ ಎಣಿಕೆ 24 ಕೇಂದ್ರಗಳಲ್ಲಿ ನಡೆಯಲಿದ್ದು, 2000 ಅಧಿಕಾರಿಗಳು ಇದನ್ನು ನಿರ್ವಹಿಸಲಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಇಂದು ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ರಾಜಕೀಯ ಪರಿಣತರ ಚಿತ್ತ ಆ ಎರಡು ರಾಜ್ಯಗಳತ್ತ ನೆಟ್ಟಿದೆ.

ಇದನ್ನು ನೋಡಿ : ಬಿಜೆಪಿ ನಿದ್ದೆ ಗೆಡಿಸಿದ ಸಟ್ಟಾ ಬಜಾರ್ : INDIA ಮತ್ತು NDA ನಡುವೆ ತೀವ್ರ ಪೈಪೋಟಿ Janashakthi Media

Donate Janashakthi Media

Leave a Reply

Your email address will not be published. Required fields are marked *