ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಒಬ್ಬ ವ್ಯಕ್ತಿಯ ಸಾವಿಗೆ ಪರಿಚಯಸ್ಥ ಮಹಿಳೆಯೇ ಕಾರಣವೆಂದು ಆರೋಪಿಸಿ ಆಕೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ.
ಜಾಲಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ರಕ್ಷಿಸಿ, ಹಲ್ಲೆ ಆರೋಪದಡಿ ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಬಸವರಾಜ ನಾಯಕ, ಯಂಕಮ್ಮ, ದುರ್ಗಮ್ಮ, ರೇಣುಕಾರಿಂದ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದೆ. ರಾಯಚೂರು
ಇದನ್ನೂ ಓದಿ: ಕೋಟೆಪುರ ಫಿಶ್ಮೀಲ್ ಕಂಪೆನಿಯಲ್ಲಿ ಹಾನಿಕಾರಕ ಕಲ್ಲಿದ್ದಲು ಬಳಸದಂತೆ ಡಿವೈಎಫ್ಐಯಿಂದ ಜಿಲ್ಲಾಧಿಕಾರಿಗೆ ಮನವಿ
ಬಸವರಾಜನ ಅಣ್ಣ ರಂಗಪ್ಪ ಸಾವಿಗೆ ಆ ಮಹಿಳೆಯೇ ಕಾರಣವೆಂದು ಆರೋಪಿಸಿದ್ದಾರೆ. 20 ದಿನಗಳ ಹಿಂದೆ ಮೂರ್ಛೆ ರೋಗದಿಂದ ರಂಗಪ್ಪ ಮೃತಪಟ್ಟಿದ್ದರು.
ರಂಗಪ್ಪಗೆ ಪರಿಚಯವಿದ್ದ ಮಹಿಳೆ ಜೊತೆ ತೆರಳಿದ್ದಾಗ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಅನುಮಾನದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿ ನಿಂದಿಸಲಾಗಿದೆ. ನೂರಾರು ಜನರ ಎದುರು ಮನಬಂದಂತೆ ಬೈದು, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಪೊಲೀಸರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ. ರಂಗಪ್ಪ ಸಾವಿನ ತನಿಖೆ ನಡೆಸುವಂತೆ ಹಲವು ಸಂಘಟನೆಗಳು ಹಾಗೂ ಗ್ರಾಮಸ್ಥರು ಕಳೆದೊಂದು ವಾರದಿಂದ ಒತ್ತಾಯಿಸುತ್ತಾ ಬಂದಿದ್ದರು. ಆದರೆ ಪೊಲೀಸರು ನಿಧಾನಗತಿಯಲ್ಲಿ ತನಿಖೆ ಆರಂಭಿಸಿದ್ದರಿಂದ ಈ ದುರ್ಘಟನೆ ನಡೆದಿದೆ. ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದು ಸರಿಯಲ್ಲ ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಜನಶಕ್ತಿ ಮೀಡಿಯಾಗೆ ತಿಳಿಸಿದ್ದಾರೆ.
ಇದನ್ನೂ ನೋಡಿ: ಜೀವ ನುಂಗುತ್ತಿರುವ ಮೈಕ್ರೋ ಫೈನಾನ್ಸ್ : ಕಡಿವಾಣ ಹಾಕುವುದೆ ಕರ್ನಾಟಕ ಸರ್ಕಾರ?! #microfinance |janashakthi