ದಿಸ್ಪುರ (ಅಸ್ಸಾಂ): ಅಸ್ಸಾಂ ಹಾಗೂ ಮಿಜೋರಾಂ ರಾಜ್ಯಗಳ ನಡುವಿನ ಗಡಿ ಪ್ರದೇಶದಲ್ಲಿ ನೆನ್ನೆ ಏಕಾಏಕಿಯಾಗಿ ಹಿಂಸಾಚಾರ ಭುಗಿಲೆದ್ದಿದೆ. ಘಟನೆಯಲ್ಲಿ ಎರಡೂ ಭಾಗದ ಹಳ್ಳಿಗಳ ಜನರ ನಡುವೆ ಹೊಡೆದಾಡ ನಡೆದಿದ್ದು ಭದ್ರತೆ ಕಾರ್ಯದಲ್ಲಿ ನಿಯೋಜಿತರಾಗಿದ್ದ ಅಸ್ಸಾಂನ ಎಂಟು ಮಂದಿ ಪೊಲೀಸರ ಹತ್ಯೆಯಾಗಿದೆ.
ಹಿಂಸಾಚಾರದಲ್ಲಿ ಹಲವಾರು ಪೊಲೀಸರು ಹಾಗೂ ನಾಗರಿಕರು ಗಾಯಗೊಂಡಿದ್ದಾರೆ. ಅಸ್ಸಾಂನ ಕಚಾರ್ ಮತ್ತು ಮಿಜೋರಾಂನ ಕೊಲಾಸಿಬ್ ಜಿಲ್ಲೆಗಳ ಗಡಿಯಲ್ಲಿನ ಎಂಟು ರೈತರ ಗುಡಿಸಲುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದೇ ಗಲಭೆಗೆ ಕಾರಣ ಎಂದು ತಿಳಿದುಬಂದಿದೆ.
ಎರಡು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ್ದರು. ಈ ಸಭೆಯ ಬಳಿಕ ಗಲಾಟೆ ನಡೆದಿದ್ದು, ಗುಂಡಿನ ದಾಳಿ ನಡೆದಿದೆ.
ಹೆಚ್ಚಿನ ಭದ್ರತೆಗಾಗಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರ ಮೇಲೆ ಮಿಜೋರಾಂ ಗುಂಪೊಂದು ದೊಣ್ಣೆ,ಕಬ್ಬಿಣದ ಸರಳುಗಳಿಂದ ದಾಳಿ ನಡೆಸಿದರು ಎಂಬ ಆರೋಪವಿದೆ. ಸ್ಥಳದಲ್ಲಿ ಸಿಆರ್‌ಪಿಎಫ್ ನ ಎರಡು ತುಕಡಿಗಳನ್ನು ನಿಯೋಜಿಸಲಾಗಿದೆ. ಅಸ್ಸಾಂ ಮತ್ತು ಮಿಜೋರಾಂ ಪೊಲೀಸ್ ಪಡೆಗಳನ್ನು ವಿವಾದಿತ ಪ್ರದೇಶದಿಂದ ಹಿಂದೆ ಸರಿಯುವಂತೆ ಧ್ವನಿವರ್ಧಕಗಳ ಮೂಲಕ ಎಚ್ಚರಿಸಲಾಗಿದೆ.
ಸೋಮವಾರ ಬೆಳಿಗ್ಗೆ 11.30 ರ ಸಮಯದಲ್ಲಿ ವೈರೆಂಗ್ಟೆ ಆಟೋರಿಕ್ಷಾ ಸ್ಟ್ಯಾಂಡ್ ಬಳಿ ಮಿಜೋರಾಂ ಪೊಲೀಸರು ಮತ್ತು ಸಿಆರ್‌ಪಿಎಫ್ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಸುಮಾರು 200 ಅಸ್ಸಾಂ ಪೊಲೀಸ್ ಸಿಬ್ಬಂದಿಗಳು ನಿಲ್ದಾಣದಲ್ಲಿದ್ದ ಪೊಲೀಸರನ್ನು ಒತ್ತಾಯ ಪೂರ್ವಕವಾಗಿ ಕಳಿಸಿದ್ದಾರೆ ಅತಿಕ್ರಮಿಸಿದ್ದಾರೆ ಎಂದು ಎಂದು ಮಿಜೋರಾಂ ಮುಖ್ಯಮಂತ್ರಿ ಜೋರಮಾಥಂಗಾ ಹೇಳಿದ್ದಾರೆ.
ವೈರೆಂಗ್ಟೆ ಪಟ್ಟಣದ ಸ್ಥಳೀಯರು ಪರಿಸ್ಥಿತಿಯ ಬಗ್ಗೆ ವಿಚಾರಿಸಿದಾಗ ಲಾಠಿ ಚಾರ್ಜ್ ಮಾಡಲಾಗಿತ್ತು ಎಂದು ಮಿಜೋರಾಂ ಸರಕಾರ ತಿಳಿಸಿದೆ. ಮಿಜೋರಾಂ ಪೊಲೀಸರ ಮೇಲೆ ಅಶ್ರುವಾಯು ಮತ್ತು ಗ್ರೆನೇಡ್‌ಗಳನ್ನು ಸಿಡಿಸಲಾಗಿದೆ, ನಂತರ ಸಂಜೆ 4.50 ರ ಸುಮಾರಿಗೆ ಅಸ್ಸಾಂ ಕಡೆಯಿಂದ ಗುಂಡು ಹಾರಿಸಲಾಯಿತು ಎಂದು ಮಿಜೋರಾಂ ಸರಕಾರ ಹೇಳಿದೆ.
ಈ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾಸ್ ಮಿಜೋರಾಂ ಪೊಲೀಸರು ನಮ್ಮ ಗಡಿ ಪೊಲೀಸ್ ಠಾಣೆಯನ್ನು ಆಕ್ರಮಿಸಿಕೊಂಡಿದ್ದರು. ಅದನ್ನು ಮರಳಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ ಎಂದರು.
ಹಿಂಸಾಚಾರ ನಡೆದ ಕುರಿತು ಎರಡು ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ವಾಗ್ವಾದ ನಡೆಯುತ್ತಿದೆ. ಗಲಭೆಯನ್ನು ತಿಳಿಗೊಳಿಸಿಲು ಅಸ್ಸಾಂ ಸರಕಾರ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ. ಘಟನಾ ಸ್ಥಳಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಸಚಿವ ಪಿಜೂಷ್ ಹಜಾರಿಕಾ ಅವರನ್ನು ಕಳುಹಿಸಿಕೊಟ್ಟಿದ್ದಾರೆ.
ಗಲಭೆಯನ್ನು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅಸ್ಸಾಂ ಸಚಿವ ಪರಿಮಲ್ ಸುಕ್ಲಾಬೈದ್ಯ, ಸುಮಾರು 80 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು. ಅಂತಾರಾಜ್ಯ ಗಡಿಯ ಅಸ್ಸಾಂ ಕಡೆಯಿಂದ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ವಿವಾದಿತ ಗಡಿಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಅಸ್ಸಾಂ ಮತ್ತು ಮಿಜೋರಾಂ 164.6 ಕಿ.ಮೀ. ಉದ್ದದಷ್ಟು ಗಡಿಯನ್ನು ಹಂಚಿಕೊಂಡಿದ್ದು, ಗಡಿ ವಿವಾದ ಬಗೆಹರಿಸಿಕೊಳ್ಳುವ ಸಂಬಂಧ 1995ರಿಂದಲೂ ಮಾತುಕತೆಗಳು ನಡೆಯುತ್ತಿವೆ. ಆದರೆ ವಿವಾದ ಇನ್ನೂ ಬಗೆಹರಿದಿಲ್ಲ.
ದ್ವೇಷ ಬಿತ್ತುವ ಕೆಲಸ: ರಾಹುಲ್ ಗಾಂಧಿ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು ʻಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಗಾಂಧಿ, ಕೇಂದ್ರ ಸರ್ಕಾರ ಜನರಿಗೆ ಬದುಕುವುದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಿಕೊಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿ. ಭಯಾನಕ ಪರಿಸ್ಥಿತಿ ಎದುರಾಗಿದೆ. ಘರ್ಷಣೆ ಹಾಗೂ ಹಿಂಸಾಚಾರದ ಕಾರಣದಿಂದಾಗಿ ಜನರು ಭೀತಿಯಲ್ಲೇ ಬದುಕುವಂತಾಗಿದೆʼ ಎಂದು ಕಿಡಿ ಕಾರಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನರಲ್ಲಿ ದ್ವೇಷ ಬಿತ್ತುವ ಮೂಲಕ ದೇಶವನ್ನು ‘ವಿಫಲ’ಗೊಳಿಸಿದ್ದು ಈಗ ಇದರ ಭಯಾನಕ ಪರಿಣಾಮಗಳನ್ನು ದೇಶ ಎದುರಿಸುತ್ತಿದೆ’ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.