ಅಸ್ಸಾಂ ಚುನಾವಣೆ: “ಬಿಜೆಪಿಗೆ ಕುರ್ಚಿ- ಕಾಂಗ್ರೆಸ್ ಗೆ ಅಸ್ತಿತ್ವದ ಚಿಂತೆ”

ಮತದಾರರನ್ನು ಸೆಳೆಯಲು ಕಾಂಗ್ರೆಸ್‌ ಮತ್ತು ಬಿಜೆಪಿ ಎನ್‌ಆರ್‌ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ತಂತ್ರವನ್ನು ಹೆಣೆಯುತ್ತಿವೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಸ್ಸಾಂ ಭೇಟಿ ವೇಳೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ಕೊಟ್ಟರೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾಗದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದರು. ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಎನ್. ಆರ್.‌ ಸಿ. ಜಾರಿಗೊಳಿಸುತ್ತೇವೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನೂ ಜಾರಿ ತರುತ್ತೇವೆ ಎಂದು ಹೇಳಿದ್ದಾರೆ.

 – ಗುರುರಾಜ ದೇಸಾಯಿ 

ಅಸ್ಸಾಂ ನಲ್ಲಿ ಬಿಜೆಪಿಗೆ ಕುರ್ಚಿಯ ಚಿಂತೆಯಾದ್ರೆ, ಕಾಂಗ್ರೆಸ್‌ ಅಸ್ತಿತ್ವದ ಚಿಂತೆಯಾಗಿದೆ. ನೆಲೆ ಇದ್ದ ಪ್ರದೇಶದಲ್ಲಿ ಮತ್ತೆ ನೆಲೆಯನ್ನು ಕಂಡುಕೊಳ್ಳಲು ಬಿಜೆಪಿಯನ್ನು ಓಡಿಸುವ ತಂತ್ರಗಳನ್ನು ಕಾಂಗ್ರೆಸ್‌ ಹೆಣೆಯುತ್ತಿದೆ. ಹಾಗಾದ್ರೆ ಅಸ್ಸಾಂ ಚುನಾವಣೆ ವಾತಾವರಣ ಹೇಗಿದೆ?  ಸಿಎಎ ಅಸ್ತ್ರ ಯಾರಿಗೆ ವರವಾಗುತ್ತೆ?

ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆರಂಭವಾಗಿದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಮೊದಲ ಹಂತದಲ್ಲಿ 30 ಕ್ಷೇತ್ರಗಳಿಗೆ  ಮತದಾನ ನಡೆದಿದೆ. 30 ಕ್ಷೇತ್ರಗಳಲ್ಲಿ73 ಲಕ್ಷಕ್ಕೂ ಅಧಿಕ ಮತದಾರರು ಇದ್ದಾರೆ. ಚುನಾವಣಾ  ಕಣದಲ್ಲಿ 191 ಅಭ್ಯರ್ಥಿಗಳ ಇದ್ದಾರೆ. ಟಿಎಂಸಿ ಮತ್ತು ಬಿಜೆಪಿಯ 29 ಅಭ್ಯರ್ಥಿಗಳು ಅಖಾಡದಲ್ಲಿದ್ದರೆ, ಎಡಪಕ್ಷ- ಕಾಂಗ್ರೆಸ್‌- ಐಎಸ್‌ಎಫ್ ಮೈತ್ರಿಯ 30 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದಾರೆ. ಅಸ್ಸಾಂನಲ್ಲಿ ಮೂರು ಹಂತದಲ್ಲಿ ಮತದಾನ ನಡೆಯುತ್ತಿದೆ. ಮೊದಲ ಹಂತದಲ್ಲಿ 47 ಸ್ಥಾನಳಿಗೆ ಮತದಾನ ನಡೆಯುತ್ತಿದೆ.

ಇನ್ನಾ ಅಸ್ಸಾಂ ಚುನಾವಣೆ ಹೇಗಿದೆ ಅನ್ನೋದನ್ನ ನೋಡೋದಾದ್ರೆ, ಅಸ್ಸಾಂ ನಲ್ಲಿ ಇರುವಂಥದ್ದು 126 ವಿಧಾನ ಸಭಾ ಕ್ಷೇತ್ರಗಳು. ಅಧಿಕಾರದ ಚುಕ್ಕಾಣಿ ಹಿಡಿಯಲು 64 ಸ್ಥಾನಗಳು ಬೇಕೇಬೇಕು.  ಅದಕ್ಕಾಗಿ ಮೂರು ರಂಗಗಳು ಪ್ರಯತ್ನವನ್ನು ನಡೆಸುತ್ತಿವೆ. ಆ ರಂಗಗಳು ಯಾವವು ಅಂದ್ರೆ, ಬಿಜೆಪಿ ತನ್ನ ಅಂಗಪಕ್ಷಗಳಾದ ಎಜಿಪಿ ಹಾಗೂ ಯುಪಿಪಿಎಲ್‌ ನ್ನೂ ಒಳಗೊಂಡಿರುವ ಮೈತ್ರಿಕೂಟವನ್ನು ರಚಿಸಿದೆ. 126 ಸ್ಥಾನಗಳಲ್ಲಿ 92 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಯನ್ನು ಮಾಡುತ್ತಿದ್ದರೆ,  ಎಜಿಪಿ 26 ಸ್ಥಾನಗಳಲ್ಲಿ, ಯುಪಿಪಿಎಲ್ ಎಂಟು ಸ್ಥಾನಗಳಲ್ಲಿ ಸ್ಪರ್ಧೆಯನ್ನು ಮಾಡುತ್ತಿದೆ.

ಕಾಂಗ್ರೆಸ್‌  ಎಐಯುಡಿಎಫ್, ಎಡಪಕ್ಷಗಳು, ಬಿಪಿಎಫ್, ಎಜಿಎಂ ನ್ನೂ ಒಳಗೊಂಡಂತೆ ಮೈತ್ರಿಯನ್ನು ರಚಿಸಿಕೊಂಡಿದೆ. ಆ ರಂಗಕ್ಕೆ ಮಹಾಜೋತ್‌ ಎಂದು ಹೆಸರಿಡಲಾಗಿದೆ. ಕಾಂಗ್ರೆಸ್‌ 90 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು, ಮಿತ್ರಪಕ್ಷಗಳಿಗೆ 36 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಇನ್ನೂ ಸ್ಥಳೀಯ ಪ್ರಾದೇಶಿಕ ಪಕ್ಷಗಳು ಸೇರಿ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ನ್ನು ರಚಿಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆಯನ್ನು ಮಾಡುತ್ತಿವೆ. ‌

ಮತದಾರರನ್ನು ಸೆಳೆಯಲು ಕಾಂಗ್ರೆಸ್‌ ಮತ್ತು ಬಿಜೆಪಿ ಎನ್‌ಆರ್‌ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ತಂತ್ರವನ್ನು ಹೆಣೆಯುತ್ತಿವೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಸ್ಸಾಂ ಭೇಟಿ ವೇಳೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ಕೊಟ್ಟರೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾಗದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದರು. ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಎನ್. ಆರ್.‌ ಸಿ. ಜಾರಿಗೊಳಿಸುತ್ತೇವೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನೂ ಜಾರಿ ತರುತ್ತೇವೆ ಎಂದು ಹೇಳಿದ್ದಾರೆ. ಎನ್, ಆರ್‌,ಸಿ, ಸಿಎಎ ವಿಚಾರವಾಗಿ ಚುನಾವಣಾ ಅಖಾಡ ರಂಗೇರಿದ್ದು, ಕಾಂಗ್ರೆಸ್‌ ಗೆ ಇದು ವರದಾನವಾಗಲಿದೆ. ಬಿಜೆಪಿಗೆ ಹಿನ್ನಡೆ ಆಗಲಿದೆ ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರವಾಗಿದೆ. ಇನ್ನೂ ಎರಡು ಪಕ್ಷಗಳ ಪ್ರಣಾಳಿಕೆ ಹೇಗಿದೆ ಎಂಬುದನ್ನು ನೋಡೋಣ.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅಸ್ಸಾಂನಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ  ಪ್ರಣಾಳಿಕೆಯಲ್ಲಿ 10 ಭರವಸೆಗಳ ನೀಡಲಾಗಿದೆ. ಈಗಾಗಲೇ ಪೌರತ್ವ ಕಾಯ್ದೆಯನ್ನು ಸಂಸತ್‌ನಲ್ಲಿ ಅಂಗೀಕರಿಸಲಾಗಿದೆ. ಅದನ್ನು ಸಂಪೂರ್ಣ ಶ್ರದ್ದೆ ಮತ್ತು ಉತ್ಸಾಹದಿಂದ ಜಾರಿಗೊಳಿಸುತ್ತೇವೆ, ʼಸರಿಪಡಿಸಲಾದ NRC ಜಾರಿಗೊಳಿಸುತ್ತೇವೆ ಮತ್ತು ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಜೆಪಿ ನಡ್ಡಾ ಹೇಳಿದ್ದಾರೆ. ಮಿಷನ್‌ ಬ್ರಹ್ಮಪುತ್ರ ಯೋಜನೆ ಅಡಿ ರಾಜ್ಯದ ಜನರನ್ನು ಪ್ರವಾಹದಿಂದ ರಕ್ಷಣೆ ಮಾಡುವ ಗುರಿ. ಅರುಣೋದಯ ಕಾರ್ಯಕ್ರಮ ವ್ಯಾಪ್ತಿ ವಿಸ್ತರಣೆ. 30 ಲಕ್ಷ ಜನರಿಗೆ ಮಾಸಿಕ ಮೂರು ಸಾವಿರ ಸಹಾಯಧನ. ರಾಜ್ಯದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸರ್ಕಾರಿ ಸಂಸ್ಥೆಗಳಲ್ಲಿ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ. 8 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್‌ ವಿತರಣೆ. ಅಸ್ಸಾಂ ಅನ್ನು ಸ್ವಾವಲಂಬಿಯನ್ನಾಗಿ ಮಾಡಲು ಸಣ್ಣ ಮತ್ತು ಅತೀ ಸಣ್ಣ ಮಟ್ಟದಲ್ಲಿ ಯೋಜನೆಗಳನ್ನು ಜಾರಿ ಮಾಡುವುದು. ಅಸ್ಸಾಂ ಸಮುದಾಯದ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ 2 ಲಕ್ಷ ಹಣಕಾಸಿನ ನೆರವು ನೀಡುವುದು ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿವೆ.

ಇನ್ನೂ ಕಾಂಗ್ರೆಸ್‌ ಪ್ರಣಾಳಿಕೆಯನ್ನು ನೋಡುವುದಾರೆ, ಕಳೆದ ವರ್ಷ ಅಸ್ಸಾಂ ಸೇರಿದಂತೆ ದೇಶದಾದ್ಯಂತ ಭಾರಿ ಪ್ರತಿಭಟನೆಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ರದ್ದುಗೊಳಿಸುವುದಾಗಿ ಹೇಳುತ್ತಿದೆ. ರಾಜ್ಯದ ಪ್ರತಿ ಗೃಹಿಣಿಗೆ ತಿಂಗಳಿಗೆ ₹ 2,000 ನೀಡುವುದು, ಐದು ಲಕ್ಷ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಭರವಸೆಯನ್ನು ನೀಡಿದೆ.

ಅಸ್ಸಾಂ ನಲ್ಲಿ ಚುನಾವಣಾ ಸಮಾಚಾರ ಹೇಗಿದೆ?  ಎಂದು ಕೇಳಿದರೆ ಬಿಜೆಪಿಯವರು “ಪರವಾಗಿಲ್ಲ’ಎಂದು ಹೇಳ್ತಾ ಇದ್ದಾರೆ,  ಕಾಂಗ್ರೆಸ್‌ ನವರೂ ಅದನ್ನೇ ಹೇಳುತ್ತಾರೆ. ಆದರೆ 3 ತಿಂಗಳಲ್ಲಿ ನಡೆದ 3 ಸಮೀಕ್ಷೆಗಳು ಈ ಬಾರಿ ಅಸ್ಸಾಂ ನಲ್ಲಿ ಬದಲಾವಣೆಯನ್ನು ಹೇಳುತ್ತಿವೆ. ಜನವರಿಯಲ್ಲಿ ನಡೆದ ಒಂದು ಸಮೀಕ್ಷೆ ಪ್ರಕಾರ (ಎಬಿಪಿ-ಸಿ ವೋಟರ್‌) ಬಿಜೆಪಿಗೆ ಗೆಲುವು ಖಚಿತ ಎಂದು ಹೇಳಿತ್ತು. ಬಿಜೆಪಿ- 73 ರಿಂದ 81, ಕಾಂಗ್ರೆಸ್‌ 41 ರಿಂದ 49. ಸ್ಥಾನ ಗೆಲ್ಲಬಹುದು ಎಂದು ಹೇಳಿತ್ತು. ಫೆಬ್ರವರಿಯಲ್ಲಿ ನಡೆದ ಮತ್ತೂಂದು ಸಮೀಕ್ಷೆ ಪ್ರಕಾರ ಬಿಜೆಪಿ ಗೆಲ್ಲುವುದು ಖಚಿತ, ಆದರೆ ಸ್ವಲ್ಪ ಕಷ್ಟ ಪಡಬೇಕು ಎಂದಿತು. ಆಗ ಕೊಟ್ಟ ಸ್ಥಾನಗಳ ಲೆಕ್ಕಾಚಾರ ಬಿಜೆಪಿ-68-76, ಕಾಂಗ್ರೆಸ್‌ 47- 55 ಎಂದಿತು. ಎರಡು ದಿನಗಳ ಹಿಂದಷ್ಟೇ ಪ್ರಕಟಗೊಂಡ ಸಮೀಕ್ಷೆ (ಟೈಮ್ಸ್‌ ನೌ-ಸಿ ವೋಟರ್‌) ಪ್ರಕಾರ ಬಿಜೆಪಿ ಹಾಗೂ ಕಾಂಗ್ರೆಸ್‌ ಅಧಿಕಾರಕ್ಕಾಗಿ ಗುದ್ದಾಡಲಿದೆ.  ಅಸ್ಸಾಂ ಬಿಜೆಪಿಗೆ ಸುಲಭ ತುತ್ತಲ್ಲ ಎಂದಿತು. ಅದರ ಪ್ರಕಾರ ಬಿಜೆಪಿಗೆ 67, ಕಾಂಗ್ರೆಸ್‌ ಗೆ 57 ಸ್ಥಾನಗಳು ಬರಬಹುದು ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಇತಿಹಾಸದ ದಾಖಲೆಗಳನ್ನು ಕೆದಕಿದಾಗ ಸಿಕ್ಕಂತಹ ಅಂಕಿ ಅಂಶಗಳ ಮೇಲೆ ಒಂದು ಬಾರಿ ಕಣ್ಣು ಹಾಯಿಸೋಣ.  2001 ರಿಂದ 2011ರ ವರೆಗೆ ಅಸ್ಸಾಂನಲ್ಲಿ ಕಾಂಗ್ರೆಸ್ಸೇ ದಾದಾ ಆಗಿತ್ತು. ಯಾರೂ ತುಟಿಕ್‌ ಪಿಟಿಕ್‌ ಎನ್ನುವಂತಿರಲಿಲ್ಲ. ಕೆಲವೇ ತಿಂಗಳುಗಳ ಹಿಂದೆ ನಿಧನ ಹೊಂದಿದ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್‌ ಗೊಗೊಯ್‌ ರಾಜ್ಯವನ್ನು ಹೊಸ ದಿಸೆಯತ್ತ ಕೊಂಡೊಯ್ದ ಕೀರ್ತಿಗೆ ಭಾಜನರಾಗಿದ್ದವರು.  ಅಸ್ಸಾಂ ಮೊದಲಿ ನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಆದರೆ ಹಿಂದಿನ ಸಂದರ್ಭಕ್ಕೂ ಕಾಂಗ್ರೆಸ್‌ನ ತರುಣ್‌ ಗೊಗೊಯ್‌ ಮುಖ್ಯಮಂತ್ರಿಯಾಗುವ 2001 ರ ಸಂದರ್ಭಕ್ಕೂ ವ್ಯತ್ಯಾಸವಿತ್ತು. ಉಗ್ರರ ಉಪಟಳವಿತ್ತು, ಸರಕಾರದ ಖಜಾನೆ ಖಾಲಿ ಹೊಡೆಯುತ್ತಿತ್ತು. ಸರಕಾರಿ ನೌಕರರು ಸಂಬಳಕ್ಕೆ ಪರದಾಡಬೇಕಿತ್ತು. ಆ ಹೊತ್ತಿನಲ್ಲಿ ತರುಣ್‌ ಗೊಗೊಯ್‌ ಉಗ್ರ ಸಂಘಟನೆಗಳನ್ನು ಮಾತುಕತೆಗೆ ಕರೆಸಿ ದಾರಿ ಸರಿ ಮಾಡಿದರು. ಆರ್ಥಿಕ ಪುನಶ್ಚೇತನಕ್ಕೂ ಮುಂದಡಿಯಿಟ್ಟರು. ಎಲ್ಲದರ ಫ‌ಲವಾಗಿ 2011ರ ಅವಧಿವರೆಗೂ ಮೂರು ಬಾರಿ ಸತತವಾಗಿ ಅವರು ಮುಖ್ಯಮಂತ್ರಿಯಾದರು.

2016ರಲ್ಲಿ ಲೆಕ್ಕಾಚಾರ ಬದಲಾಯಿತು. ಭಾರತೀಯ ಜನತಾ ಪಾರ್ಟಿ  ಗ್ರೌಂಡ್‌  ಲೇವಲ್‌ ಗೆ ಇಳಿದು ಕಾರ್ಯ ನೀತಿ ರೂಪಿಸಿತು. ಕಾಂಗ್ರೆಸ್‌ನ ದೊಡ್ಡ ದೊಡ್ಡ ಕಂಬಗಳೆಲ್ಲ ಬಿಜೆಪಿ ಅಂಗಳಕ್ಕೆ ಸ್ಥಳಾಂತರಗೊಂಡವು. ಪರಿಣಾಮ ಕಾಂಗ್ರೆಸ್‌ ಮನೆ ಕುಸಿತಾ ಹೋಯ್ತು,  ಮೊದಲ ಬಾರಿಗೆ ಬಿಜೆಪಿ ಅಧಿಕಾರ ಸ್ಥಾಪಿಸಿತು. 2016 ರಲ್ಲಿ ಗೆದ್ದ ಸ್ಥಾನಗಳು 60. ಅವರ ಅಂಗಪಕ್ಷಗಳು 16 ಸ್ಥಾನ ಗಳಿಸಿದವು. ಆಗ ಕಾಂಗ್ರೆಸ್‌ಗೆ ಸಿಕ್ಕಿದ್ದು 26. ಅದರ ಅಂಗಪಕ್ಷಕ್ಕೆ ಸಿಕ್ಕಿದ್ದು 14 ಸೀಟುಗಳು ಮಾತ್ರ.

ಈಗ ಚುನಾವಣಾ ಕಣದಲ್ಲಿ ಸಾಕಷ್ಟು ಕುತೂಹಲವಿದೆ. ಸಂಸದ ಗೌರವ್‌ ಗೊಗೊಯ್‌ ಚುನಾವಣ ಪ್ರಚಾರದಲ್ಲಿದ್ದಾರೆ. ತಮ್ಮ ತಂದೆಯ ನಿಧನದಿಂದ ಸೃಷ್ಟಿಯಾಗಿರುವ ಅನುಕಂಪ ಮತಗಳಾಗಿ ಪರಿವರ್ತನೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.  ಬಿಜೆಪಿಯು ಹಲವಾರು ನೆಲೆಗಳಿಂದ  ಅಂದ್ರೆ, ಸಿಎಎ, ಎನ್‌,ಆರ್‌,ಸಿ, ಧಾರ್ಮಿಕ ಕೇಂದ್ರಗಳ ಮೂಲಕ  ಮತ ಕ್ರೋಡೀಕರಣಕ್ಕೆ ಮುಂದಾಗಿದೆ. ಕಾಂಗ್ರೆಸ್‌ನ ಒಳಜಗಳವನ್ನು ಲಾಭವಾಗಿಸಿಕೊಳ್ಳುವ ಪ್ರತಿತಂತ್ರವನ್ನು ಹೆಣೆಯುತ್ತಿದೆ. ಬಿಜೆಪಿಯಲ್ಲೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಈಗಿನ ಸರ್ಬಾನಂದಾ ಸೋನೊವಾಲರನ್ನು ಬಿಂಬಿಸಬೇಕೋ ಅಥವಾ ಹಿಮಂತ ಬಿಸ್ವ ಸರ್ಮರನ್ನು ಬಿಂಬಿಸಬೇಕೋ ಎಂಬ ಸಂದಿಗ್ಧದಲ್ಲಿ ಬಿಜೆಪಿ ಇದೆ. ಅದಕ್ಕೇ ಚುನಾವಣೆ ಮುಗಿಯಲಿ, ಅದನ್ನು ಆಮೇಲೆ ನೋಡೋಣ ಅಂತಾ ಹೈಕಮಾಂಡ್‌ ಹೇಳಿಯಾಗಿದೆ.

ಎನ್‌ಆರ್‌ ಸಿ ಸಂಗತಿ ಮತ ಧ್ರುವೀಕರಣಕ್ಕೆ ಕಾರಣವಾದರೆ ಇಬ್ಬರಿಗೂ ಲಾಭವಾಗ ಬಹುದು. ಬಿಜೆಪಿಗೆ ನೇರ ಲಾಭವಾದರೆ ಕಾಂಗ್ರೆಸ್‌ಗೆ ಪರೋಕ್ಷ ಲಾಭ. ಮುಸ್ಲಿಂ ಸಮುದಾಯದ ಮತಗಳನ್ನು ಈ ಲೆಕ್ಕದಲ್ಲಿ ಸೆಳೆಯುವಲ್ಲಿ ಎಐಯುಡಿಎಫ್ ಯಶಸ್ವಿಯಾಗಬಹುದು. ಈ ಪಕ್ಷ ಸದ್ಯಕ್ಕೆ ಕಾಂಗ್ರೆಸ್‌ನ ದೋಸ್ತಿ ಪಕ್ಷವಾಗಿದೆ. ಹಾಗಾಗಿ ಈಗ ಅಸ್ಸಾಂನಲ್ಲಿ ಅಧಿಕಾರ ಹಿಡಿಯುವುದಕ್ಕಾಗಿ ಎರಡು ಮೈತ್ರಿಕೂಟಗಳು ತಂತ್ರ ಪ್ರತಿತಂತ್ರಗಳನ್ನು ಹೆಣೆಯುತ್ತಿವೆ. ಬಿಜೆಪಿಗೆ ಕುರ್ಚಿಯ ಚಿಂತೆಯಾದ್ರೆ, ಕಾಂಗ್ರೆಸ್‌ ಗೆ ಅಸ್ತ್ವಿತ್ವದ ಚಿಂತೆ ಕಾಡುತ್ತಿದೆ. ಆದರೆ ಮತದಾರ ಯಾರಿಗೆ ಅಸ್ತು ಎನ್ನುಬಹುದು ಮೇ 2 ರ ಫಲಿತಾಂಶದ ವರೆಗೆ ಕಾಯಬೇಕಿದೆ.

Donate Janashakthi Media

Leave a Reply

Your email address will not be published. Required fields are marked *