ಅಸ್ಸಾಂ ದೋಣಿ ದುರಂತ : 80 ಕ್ಕೂ ಹೆಚ್ಚು ಮಂದಿ ನಾಪತ್ತೆ

ಗುವಾಹಟಿ : ಸುಮಾರು 120 ಪ್ರಯಾಣಿಕರಿದ್ದ ಎರಡು ಬೋಟ್​ಗಳು ಒಂದಕ್ಕೊಂದು ಡಿಕ್ಕಿಯಾದ ಪರಿಣಾಮ ಅನೇಕ ಪ್ರಯಾಣಿಕರು ಕಾಣೆಯಾಗಿರುವ ಘಟನೆ ಅಸ್ಸಾಂನ ಜೊರ್ಹಾತ್​ನಲ್ಲಿರುವ ಬ್ರಹ್ಮಪುತ್ರ ನದಿಯಲ್ಲಿ ಬುಧವಾರ ನಡೆದಿದೆ.

ಅಸ್ಸಾಂ ರಾಜಧಾನಿ ಗುವಾಹಟಿಯಿಂದ 350 ಕಿ.ಮೀ ದೂರದಲ್ಲಿರುವ ಜೊರ್ಹಾತ್​ನ ನಿಮತಿ ಘಾಟ್​ನಲ್ಲಿ ಈ ಅವಘಢ ಸಂಭವಿಸಿದೆ.

120ಕ್ಕೂ ಹೆಚ್ಚು ಪ್ರಯಾಣಿಕರಿದ್ದ ದೋಣಿಯು ನಿಮತಿ ಘಾಟ್‌ನಿಂದ ಮಾಜುಲಿ ದ್ವೀಪದತ್ತ ತೆರಳುತ್ತಿತ್ತು. ಸರ್ಕಾರದ ಒಡೆತನದ ಸ್ಟೀಮ್‌ ದೋಣಿಯು ಮಾಜುಲಿಯಿಂದ ವಾಪಸ್ಸಾಗುತ್ತಿತ್ತು. ಇನ್ನೊಂದು ಬೋಟ್​ ಎದರು ದಿಕ್ಕಿನಿಂದ ಬರುತ್ತಿತ್ತು. ಇವೆರಡೂ ಪರಸ್ಪರ ಡಿಕ್ಕಿಯಾಗಿದ್ದರಿಂದ, ಪ್ರಯಾಣಿಕರ ದೋಣಿ ಮುಳುಗಿದೆ. 41 ಜನರನ್ನು ರಕ್ಷಿಸಲಾಗಿದ್ದು, ಇನ್ನುಳಿದವರಿಗಾಗಿ ಶೋಧ ನಡೆದಿದೆ. ಮೃತದೇಹಗಳ ಹುಡುಕಾಟ ನಡೆದಿದೆ ಎಂದು ಜೊರ್ಹಾತ್‌ ಜಿಲ್ಲಾಧಿಕಾರಿ ಅಶೋಕ ಬರ್ಮನ್‌ ತಿಳಿಸಿದ್ದಾರೆ.

ಒಂದಕ್ಕೊಂದು ಡಿಕ್ಕಿಯಾದ ಬಳಿಕ ದೋಣಿ ಮುಳುಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಡಿಯೋದಲ್ಲಿ ಕೆಲವು ಪ್ರಯಾಣಿಕರು ತಮ್ಮನ್ನು ತಾವು ಕಾಪಾಡಿಕೊಳ್ಳಲು ನದಿ ಜಿಗಿದ ದೃಶ್ಯವನ್ನು ಕಾಣಬಹುದಾಗಿದೆ.

ಬೋಟ್​ನಲ್ಲಿದ್ದ ಪ್ಯಾಸೆಂಜರ್ಸ್​ ಲಗೇಜು, ಮೋಟರ್​ ಬೈಕ್ಸ್​ ಮತ್ತು ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್​ಡಿಆರ್​ಎಫ್​) ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಮಕ್ಕಳು ಸೇರಿದಂತೆ ಅನೇಕ ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಿಸಲಾಗಿದೆ.

ಘಟನೆಯ ನಂತರ, ಅಸ್ಸಾಂ ಮುಖ್ಯಮಂತ್ರಿ ಡಾ.ಹಿಮಂತ ಬಿಸ್ವಾ ಅವರು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಎಸ್‌ಡಿಆರ್‌ಎಫ್ ನೆರವಿನೊಂದಿಗೆ ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳುವಂತೆ ಮಜುಲಿ ಮತ್ತು ಜೋರ್ಹತ್ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಕೇಂದ್ರ ಗೃಹಸಚಿವ ಅಮಿತ್​ ಷಾ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *