ಆಕಾಂಕ್ಷಿಗಳು 2 ಲಕ್ಷ ಹಣ ನೀಡಿರುವುದು ಬಿಲ್ಡಿಂಗ್ ಫಂಡ್‌ಗೆ ಮಾತ್ರ : ಡಿಕೆಶಿ ಸ್ಪಷ್ಟನೆ

ಬೆಂಗಳೂರು : ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಯಾರ ಬಳಿಯೂ ನಾವು ಹಣ ಪಡೆದಿಲ್ಲ. ಆಕಾಂಕ್ಷಿಗಳು ಎರಡು ಲಕ್ಷ ಹಣ ನೀಡಿರುವುದು ಪಕ್ಷದ ಕಟ್ಟಡ ಕಟ್ಟಲು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು ಹಿಂದೆ ಒಂದುವರೆ ಸಾವಿರಕ್ಕೂ ಹೆಚ್ಚು ಜನ ಸಾಮಾನ್ಯ ಕ್ಷೇತ್ರಕ್ಕೆ ಎರಡು ಲಕ್ಷ, ಮೀಸಲು ಕ್ಷೇತ್ರಕ್ಕೆ ಒಂದು ಲಕ್ಷ ರೂಪಾಯಿ ಠೇವಣಿ ನೀಡಿದ್ದಾರೆ. ಈಗ ಅವರಿಗೆ ಮೋಸ ಆಗಲಿದೆ ಎಂಬ ವಾದ ಸರಿಯಲ್ಲ. ಅವರೆಲ್ಲಾ ನೀಡಿರುವುದು ಬಿಲ್ಡಿಂಗ್ ಫಂಡ್ ಮಾತ್ರ. ಅರ್ಜಿಗೆ ಹಣ ಪಡೆದಿಲ್ಲ. ಅರ್ಜಿ ಶುಲ್ಕ ಐದು ಸಾವಿರ ಮಾತ್ರ ಇತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನೆ ನಡೆದಾಗಲೇ ಬಿಜೆಪಿಗೆ ಬಿಸಿ ಮುಟ್ಟುವುದು :
ಟಿಕೆಟ್‍ಗಾಗಿ ಪ್ರತಿಭಟನೆ ನಡೆಸುವುದು ತಪ್ಪಲ್ಲ, ಪ್ರತಿಭಟನೆ ನಡೆದಾಗಲೇ ಬಿಜೆಪಿಗೆ ಬಿಸಿ ಮುಟ್ಟುವುದು. ಕಾಂಗ್ರೆಸ್ ಪಕ್ಷ ಹೋರಾಟದಿಂದಲೇ ಬೆಳೆದು ಬಂದಿದೆ. ನಮ್ಮ ಕಾರ್ಯಕರ್ತರು ಇಲ್ಲಿ ಟಿಕೆಟ್‍ಗಾಗಿ ಹೋರಾಟ ನಡೆಸಲಿದ್ದಾರೆ, ನಂತರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ವಿರುದ್ಧ ಹೋರಾಟ ನಡೆಸಲಿದ್ದಾರೆ ಎಂದು ಹೇಳಿದರು. ಬಾಕಿ ಇರುವ 100 ಕ್ಷೇತ್ರಗಳಿಗಳ ಅಭ್ಯರ್ಥಿಗಳ ಆಯ್ಕೆಗೆ ಸಾಕಷ್ಟು ತಯಾರಿಗಳು ನಡೆದಿವೆ. ನಿರಂತರವಾಗಿ ಸಮಾಲೋಚನೆ ನಡೆಸಲಾಗುತ್ತಿದೆ. ಬಹುತೇಕ ಏಪ್ರಿಲ್ 9 ಅಥವಾ 10ರೊಳಗೆ ಎರಡನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿ ಕೊಲೆ:
ನನ್ನ ಕ್ಷೇತ್ರ ಸಾತನೂರಿನಲ್ಲಿ ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಒಂದು ಕೊಲೆಯಾಗಿದೆ. ದೂರು ದಾಖಲಾಗುವವರೆಗೂ ಏನು ಮಾತನಾಡಬಾರದು ಎಂದು ನಾನು ಈವರೆಗೂ ಸುಮ್ಮನಿದ್ದೆ. ಘಟನೆ ನಡೆದಾಗ ನಮ್ಮ ಪಕ್ಷದ ಕಾರ್ಯಕರ್ತರು ಸ್ಥಳಕ್ಕೆ ಹೋಗಿ ಎಲ್ಲವನ್ನೂ ನೋಡಿದ್ದಾರೆ. ಅಧಿಕಾರಿಗಳ ಜೊತೆ ನಾನು ಮಾತನಾಡಿದ್ದೇನೆ. ಈ ನೈತಿಕ ಪೊಲೀಸ್‍ ಗಿರಿಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರೇ ನೇರ ಹೊಣೆ ಎಂದರು.

ಮೃತಪಟ್ಟ ವ್ಯಕ್ತಿ ರಶೀದಿ ಇಟ್ಟುಕೊಂಡು ಜಾನುವಾರುಗಳನ್ನು ಸಾಗಾಣಿಕೆ ಮಾಡುತ್ತಿದ್ದ, ರೈತರಿಗೆ ಸರಬರಾಜು ಮಾಡುತ್ತಿದ್ದ ಎಂದು ಹೇಳುತ್ತಾರೆ. ಆತ ಯಾವ ಉದ್ದೇಶಕ್ಕೆ ಜಾನುವಾರುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಕಾನೂನು ಇತ್ತು. ನೈತಿಕ ಪೊಲೀಸ್‍ಗಿರಿ ಏಕೆ ಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಆರೋಪಿಗಳು ಜಾನುವಾರು ಸಾಗಾಣಿಕೆದಾರನ ಬಳಿ ಎರಡು, ಮೂರು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು ಬೆದರಿಸಿದ್ದಾರೆ. ಕೊನೆಗೆ ಕೊಲೆ ಮಾಡಿದ್ದಾರೆ. ಈ ಘಟನೆಗೆ ಮುಖ್ಯಮಂತ್ರಿಯೇ ಹೊಣೆ. ಚುನಾವಣೆ ವೇಳೆಯಲ್ಲಿ ಶಾಂತಿ ಕದಡಲು ಯತ್ನಿಸಲಾಗಿದೆ ಎಂದು ಆರೋಪಿಸಿದರು. ಸರ್ಕಾರ ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನಿಡಬೇಕು. ಘಟನೆಗೆ ಕಾರಣವಾದ ಮತ್ತು ಪ್ರಚೋದನೆ ನೀಡಿದವರನ್ನು ಬಂಧಿಸಬೇಕು. ಕೊಲೆ ಪ್ರಕರಣದಲ್ಲಿ ಭಾಗಿಯಾದವನು ಯಾರ ಜೊತೆಯಲ್ಲಿ ಸಂಪರ್ಕದಲ್ಲಿದ್ದಾನೆ ಎಂದು ನಮ್ಮ ಬಳಿ ಫೋಟೋ ಸಹಿತ ದಾಖಲೆಗಳಿವೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೈತಿಕ ಪೊಲೀಸ್‍ ಗಿರಿಗೆ ಕುಮ್ಮಕ್ಕು ನೀಡಿದರು. ಗೃಹ ಸಚಿವರು ಬೆಂಬಲ ನೀಡಿದ್ದರು. ಆ ಇಬ್ಬರನ್ನು ಈ ಘಟನೆಗೆ ಹೊಣೆ ಮಾಡಬೇಕು. ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಆರೋಪಿಗಳನ್ನು ಮೊದಲು ಬಂಧಿಸಬೇಕು, ನಂತರ ವಿಚಾರಣೆ ನಡೆಯಬೇಕು ಎಂದರು.

ಇದನ್ನೂ ಓದಿ : ಬಿಜೆಪಿಯವರು ಮಾಡಿರುವ ತಪ್ಪನ್ನು ನಾವು ಅಧಿಕಾರಕ್ಕೆ ಬಂದಾಗ ಸರಿ ಪಡಿಸುತ್ತೇವೆ : ಡಿಕೆಶಿ

ಮೀಸಲಾತಿ ಪರಿಷ್ಕರಣೆಯಲ್ಲಿ ಸರ್ಕಾರ ಗೊಂದಲ ಸೃಷ್ಟಿಸಿದೆ :
ಮೀಸಲಾತಿ ಪರಿಷ್ಕರಣೆ ವಿಷಯದಲ್ಲಿ ಸರ್ಕಾರ ಗೊಂದಲ ಸೃಷ್ಟಿಸುವ ಮೂಲಕ ಸ್ವಯಂಕೃತ ಅಪರಾಧ ಮಾಡಿದೆ. ಒಕ್ಕಲಿಗರು, ಲಿಂಗಾಯಿತರು ಬೇರೆಯವರ ಮೀಸಲಾತಿ ಕಿತ್ತು ನಮಗೆ ಕೊಡಿ ಎಂದು ಕೇಳಿರಲಿಲ್ಲ. ಜೈನರು, ಕ್ರಿಶ್ಚಿಯನ್ನರು, ಮುಸ್ಲಿಂರನ್ನು ಅಲ್ಪಸಂಖ್ಯಾತರ ಸ್ಥಾನ ಮಾನದಿಂದ ತೆಗೆದು ಹಾಕಲು ಸಾಧ್ಯವೇ ? ಅವರನ್ನು ದೇಶದಿಂದ ಓಡಿಸಲು ಸಾಧ್ಯವೇ ? ಸಾಮಾನ್ಯ ವರ್ಗದವರ ಇಡಬ್ಲ್ಯೂಎಸ್ ಜೊತೆ ಅಲ್ಪಸಂಖ್ಯಾರು ಯಾಕೆ ಸ್ಪರ್ಧಿಸಬೇಕು. ಇಡಬ್ಲ್ಯೂಎಸ್‍ಗೆ ಮುಸ್ಲಿಂರನ್ನು ಸೇರಿಸುವ ಮುಲಕ ಈ ಸರ್ಕಾರ ಬ್ರಾಹ್ಮಣರಿಗೂ ತೊಂದರೆ ಕೊಡುತಿದೆ ಎಂದು ಆರೋಪಿಸಿದರು.

Donate Janashakthi Media

Leave a Reply

Your email address will not be published. Required fields are marked *